Saturday, October 9, 2010

ಕವನೇ ಕವನೋತ್ಪತ್ತಿಹಿ ಹಿ ಹಿ ... 8

ಜಗತ್ತು ನಿಂತಿದೆ...
ಸಮಯ ಸತ್ತಿದೆ...
ಗಡಿಯಾರದ ಮುಳ್ಳುಗಳು ಪರಸ್ಪರ ಮುನಿಸಿಕೊಂಡಿವೆ...
ಹಣೆಬರಹದ ಮುಂದೆ ಕಾಲದ ಕೈವಾಡ ಕೈಸುಟ್ಟು ಕೂತಿದೆ...
ಭವಿಷ್ಯದ ಹಾದಿಯಲಿ ಹಸಿವಿನ ಹಿಮ ಆವರಿಸಿದೆ...

Monday, October 4, 2010

ಕವನೇ ಕವನೋತ್ಪತ್ತಿಹಿ ಹಿ ಹಿ ... 7

ಮನಸಿನ ಮೇಲೆ ಬುದ್ಧಿ ವ್ಯಭಿಚಾರ ಎಸಗಿದೆ....
ಚಳಿಯಂತೆ ಬಂದ ಚಿಂತೆ ನಿದಿರೆಗೆ ಚಪ್ಪಲಿ ಏಟು ಕೊಡುತ್ತಿದೆ...
ಮಾಗಿದ ಮನಸ್ಸು ಮ್ಯಾಗಿ ನ್ಯುಡಲ್ ಆಗಿದೆ...
ಕನಸಿನ ಕಲರವ ಕತ್ತಲಲ್ಲಿ ಲೀನವಾಗಿದೆ...
ಬೆತ್ತಲಾದ ಕನಸು ಸಾಧನೆಯ ಸುತ್ತೋಲೆ ಹೊರಡಿಸಿದೆ!!!

Friday, October 1, 2010

ಕವನೇ ಕವನೋತ್ಪತ್ತಿಹಿ ಹಿ ಹಿ ... 6

ಕಾವಲು ಇಲ್ಲದೇ ಹೋದ ಬೇಲಿಯಂತಾಗಿದೆ ಬದುಕು...
ಮುಳ್ಳು ಚುಚ್ಚಿದರೂ ಮುಣಿಸು ಮೂಡದು...
ಗತ್ತು ತುಂಬಿದ ಜಗತ್ತು...
ವಿಸ್ಮಯಕ್ಕೆ ಸವಾಲು ಹಾಕುವ ಕಲ್ಪನೆ...
ಮಾಯಾವತಿಯ ಗೆಳೆತನ ಮಾಡಿ ಮಿಸ್ ಪ್ಲೇಸ್ ಆಗಿದೆ ಮನಸು!

ಕವನೇ ಕವನೋತ್ಪತ್ತಿಹಿ ಹಿ ಹಿ ... 5

ಆ ಹೊತ್ತಿಗೆ ಸಿಕ್ಕ ಹೊತ್ತಿಗೆ....
ಓದುವ ತೆವಲಿಗೆ ತುಪ್ಪ ಸುರಿದಿದೆ....
ಆ ಬೆಚ್ಚನೆಯ ಭಾವನೆಗಳು...
ಹುಚ್ಚು ಮನಸಿಗೆ ಬೇಲಿ ಹಾಕಿದೆ...
ಮೈ ನವಿರೇಳಿಸುವ ಪುಳಕಗಳು ತಿಕ್ಕಲು ತನಕ್ಕೆ ದಿಗ್ಭಂದನ ಹಾಕಿವೆ...
ಚೂರುಚೂರಾದ ಕನ್ನಡಿ ಒಳಗೆ ಚೂರು ಪಾರು ಗರ್ವಕ್ಕೂ ಗರ್ಭಪತವಾಗಿದೆ...
ನಿತ್ಯ ಪಥದಲ್ಲೊಂದು ಜೋಗ ಜಲಪಾತ ತಿರುಗಾಮುರುಗಾಗಿದೆ...
ಕನಸು ಮರುಗಿದೆ...
ಹರಿದ ಕಾಗದದ ದೋಣಿಯ ದಿಕ್ಕು ತಪ್ಪಿದೆ...
ವಿರಹದ ವಿಹಾರ ವಿಕಾರವಾಗಿದೆ!!!

Thursday, September 30, 2010

ಕವನೇ ಕವನೋತ್ಪತ್ತಿಹಿ ಹಿ ಹಿ ... 4

ಕನಸು ಬೀಳೋದೇ ಅಪರೂಪ...

ಅದೂ ಅಸ್ಪಷ್ಟವಾಗಿ ಬೀಳುತ್ತೆ ಬಡ್ಡಿ ಮಗಂದು...

ಇನ್ನೊಂದು ಸಾರಿ ಬೀಳು...

ತಲೇ ಬೋಳಿಸಿ ಕಳಿಸ್ತೀನಿ....

ಕವನೇ ಕವನೋತ್ಪತ್ತಿಹಿ ಹಿ ಹಿ ... 3

ಚಪ್ಪಲಿ ಸವೆದಿದೆ...

ಮನಸು ಮಂಕಾಗಿದೆ..

ಕಣ್ಣು ಮಂಜಾಗಿದೆ..

ಮೈ ಮೈಸೂರ್ ಸ್ಯಾಂಡಲ್ ಸೋಪಿಗೆ ವಿರುದ್ಧಾರ್ಥಕ ಪದವಾಗಿದೆ...

ಕಾಲು ಮುಕ್ಕಲಾ ಮುಕ್ಕಾಬುಲ್ಲಾ ಎನ್ನುತ್ತಿದೆ...

ನಿದಿರೆ ರಜಾ ಹಾಕಿದೆ...

ಪಿತ್ತ ನೆತ್ತಿ ಮೇಲೆ ಟೆಂಟ್ ಹಾಕಿದೆ... !!!

ಕವನೇ ಕವನೋತ್ಪತ್ತಿಹಿ ಹಿ ಹಿ ...2

ಜಿಗಣೆಯಾಕಾರದ ಕನಸು..
ಆಗಾಗ ಕಚ್ಚಿ ಕಚ್ಚಿ ಹೀರುತಿದೆ ರಕ್ತವ...
ನಿರವ ಮೌನಕೆ.. ದೂರ ತೀರ ಯಾನಕೆ...
ರೆಪ್ಪೆ ಮುಚ್ಚಿದಾಗ ಗೋಚರಿಸುವ ರಣಹದ್ದಿನಂಥ ಚಿಂತೆಗಳ ಸಾಲು...
ಪೀಕಲಾಟದ ಪಾಡು...
ಮಾತು ಮೀರಿದ ಹಾಡು....
ಮಾಡದೇ ಹೋದ ತಪ್ಪಿಗೆ ತೆಪ್ಪಗೆ ಅನುಭವಿಸಬೇಕಾದ ವಿರಹಗಳು...

ಕವನೇ ಕವನೋತ್ಪತ್ತಿಹಿ ಹಿ ಹಿ ... 1

ಯಾಕೆ ಹೀಗೆ?
ಪ್ರಶ್ನೆಯೇ ಹಾಗೆ...
ಕಾಗೆ ಕೂಗಿದರೂ ಕವಿತೆ ಕೇಳಿದ ಹಾಗೆ...
ಹಳೇ ಟೈರಿನಲಿ ತುಂಬಿರುವ ಹೊಸಾ ತಂಗಾಳಿಯಂತೆ ಆಗಿದೆ ಮನಸು...
ಕೊಂಚ ಮುನಿಸು...
ಹಳೇ ಧಿರಿಸು...
ಇರುವಷ್ಟು ಹೊತ್ತು ಇರುಸು...
ಕನಸಿನ ಕಾಲು ಮುರಿಸುವ ತವಕ...
ಬೆಂದು ಬೆತ್ತಲಾದ ಬೆಟ್ಟಗಳ ಸಾಲಿನಲ್ಲೊಂದು ಎಂದೂ ಮರೆಯದ ಹಾಡಿನ ಜಾಡು...
ಊದುವ ಪೀಪಿ ಎಂದೂ ಕೋಗಿಲೆ ದನಿಯಾಗದು...
ಅದುವೇ ಜೀವನ...
ಇದುವೇ ಮುದುಕನ ಹೆಗಲೆರಿರುವ ಯವ್ವನ!!

Wednesday, April 1, 2009

ಇವರ ಕಣ್ಣಲ್ಲಿ ರಾಜು ಅನಂತಸ್ವಾಮಿ

ಸುಗಮ ಸಂಗೀತ ಕ್ಷೇತ್ರದ ಹಾಡು ಹಕ್ಕಿ ಮೈಸೂರು ಅನಂತಸ್ವಾಮಿಯವರ ಏಕಮಾತ್ರ ಪುತ್ರ ರಾಜು ಅನಂತ ಸ್ವಾಮಿ ಇನ್ನಿಲ್ಲ. ರಾಜು ಎಂದಾಗ ಕಣ್ಮುಂದೆ ಬರು ವುದು ಅವರ ರತ್ನನ್ ಪದಗಳು. ಇನ್ನೊಂದು ಆಂಗಲ್‌ನಿಂದ ನೋಡಿದರೆ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ... ಒಂದು ವಸ್ತು ಇದ್ದಾಗ ಅದರ ಬೆಲೆ ಅಳೆಯಲು ಆಗುವುದಿಲ್ಲ. ದೂರವಾದಾಗ ಅದಕ್ಕಿದ್ದ ಕಿಮ್ಮತ್ತು ಏನು ಎನ್ನುವುದು ಗೊತ್ತಾಗುತ್ತದೆ. ಆದರೆ ಈ ವ್ಯಕ್ತಿ ಹಾಗಲ್ಲ. ಅನಂತ ಸ್ವಾಮಿಯವರಿಗೆ ಹತ್ತಿರದ ಒಡನಾಡಿಯಾಗಿದ್ದ ಈತ ಯಾರು ಗೊತ್ತೆ? ಲಹರಿ ಆಡಿಯೊ ಕಂಪನಿಯ ವೇಲು. ವೇದಿಕೆಯಲ್ಲಿ ಮೈಸೂರು ಅನಂತಸ್ವಾಮಿ ಎದೆ ತುಂಬಿ ಹಾಡುತ್ತಿದ್ದರೆ ಇವರು ತಬಲಾ ಸಾಥ್ ಕೊಡುತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗದಿರದು. ಆ ದಿನಗಳಲ್ಲಿ ಅವರ ೬೦ಕ್ಕೂ ಹೆಚ್ಚು ಹಾಡುಗಳು ಲಹರಿಯಿಂದ ಹರಿದುಬಂದಿದೆ. ದಿನಕ್ಕೊಮ್ಮೆ ಒಬ್ಬರಿಗೊಬ್ಬರು ಭೇಟಿಯಾಗದಿದ್ದರೆ ಎದೆ ಭಾರ ಭಾರ. ವಾರಕ್ಕೆ ಮೂರು ದಿನ ಒಟ್ಟಿಗೇ ಇರುತ್ತಿದ್ದರು. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಆಗ ಇದೇ ರಾಜು ತುಂಟಾಟ, ತರಲೆ ಮಾಡಿಕೊಂಡು, ಉಂಡಾಡಿ ಗುಂಡನ ಹಾಗೆ ಅಂಡಲೆದುಕೊಂಡಿದ್ದ. ವೇಲು-ರಾಜು ನಂಟು ಅಂದಿನಿಂದ ಇಂದಿನವರೆಗೂ ಶಾಶ್ವತವಾಗಿಯೇ ಇದೆ. ಇಂದು ರಾಜು ಇಲ್ಲ. ಆದರೆ ಅದನ್ನು ನಂಬಲು ವೇಲು ತಯಾರಿಲ್ಲ!
ರಾಜು ಎಂಬ ಎರಡು ಅಕ್ಷರ ಅವರ ಹತ್ತಿರ ಸುಳಿದರೆ ಸಾಕು, ಉಸಿರು ಬಿಸಿಯಾಗಿ, ಕಣ್ಣು ಹಸಿಯಾಗುತ್ತದೆ. ನೋಡನೋಡುತ್ತಿದ್ದಂತೆ ಜೀವ ನಾಡಿ ನಿಂತುಹೋದರೆ ಹೇಗಾಗಬೇಹುದು ಹೇಳಿ? ದಿನಕ್ಕೊಂದು ಬಾರಿ ವೇಲು ಜತೆ ಮಾತನಾಡದಿದ್ದರೆ ರಾಜುಗೆ ಏನೋ ಸಂಕಟ. ಅಪ್ಪನ ಆತ್ಮೀಯ ಒಡನಾಡಿ ಎಂಬ ಗೌರವ. ರಾತ್ರೋರಾತ್ರಿ ಫೋನ್ ಮಾಡಿ... ‘ಅಣ್ಣಾ... ಮಲಗಿದ್ದೀರಾ? ಮಾತಾಡ್ಲಾ, ನಿಮ್ಮನ್ನು ನೋಡಿ ತುಂಬಾ ದಿನ ಆಯ್ತು ಎಂದೆಸುತ್ತಿದೆ....’ ಎಂದು ಅಳುತ್ತಿದ್ದರು. ಹೀಗೆ ಹೇಳಿ ವೇಲು ಮತ್ತೊಮ್ಮೆ ನಿಟ್ಟುಸಿರು ಬಿಡುತ್ತಾರೆ. ‘ರಾಜು ಕೊನೆಯವರೆಗೂ ರಾಜು ಆಗಿಯೇ ಉಳಿದ. ಸ್ವಾಭಿಮಾನಿಯಾಗಿ ಬದುಕಿದ. ಆತ್ಮವಂಚನೆಗೆ ಎಲ್ಲಿಯೂ ಅವಕಾಶ ಕೊಡುತ್ತಿರಲಿಲ್ಲ. ಕುಡಿತ ಅವನ ನಾಡಿಮಿಡಿತದಲ್ಲಿ ಟೆಂಟ್ ಹಾಕಿತ್ತು. ಬೆಳಗ್ಗೆ ಸೂರ್ಯನ ಮುಖ ನೋಡುವ ಮುನ್ನ ಇಂತಿ ನಿನ್ನ ಪ್ರೀತಿಯ... ಎಂದು ರಾಗ ಎಳೆಯುತ್ತಿದ್ದ. ರಾಜು ಹಾಗೆ, ರಾಜು ಹೀಗೆ... ಎಂದು ಮೂಗು ಮುರಿಯುತ್ತಿದ್ದವರಿಗೆ ಆತ ಯಾಕೆ ಹಾಗಾದ ಎಂದು ಒಮ್ಮೆ ಅವಲೋಕಿಸುವ ತಾಳ್ಮೆ ಇರಲಿಲ್ಲ. ವಿಶ್ವದ ಗಡಿ ನಾಡಿನಲ್ಲಿ ಕೂಡ ರಾಜು ಹೆಸರು ರಾರಾಜಿಸುತ್ತಿದೆ. ಆದರೆ ‘ನಮ್ಮವರಿಗೆ’ ಮಾತ್ರ ಆತನ ಅಂತರಾತ್ಮದ ಆಳ ತಿಳಿಯಲಿಲ್ಲ.’
ವೇಲು ನೋವಿನ ಓಕುಳಿಯಾದರು. ಎಡಗೈ ಎರಡೂ ಕಣ್ಣನ್ನು ಒಮ್ಮೆತೀಡಿತು. ಆಗವರಿಗೆ ಒಂದು ಹಾಡು ನೆನಪಿಗೆ ಬಂತು....
ಯಾವ ಮೋಹನ ಮುರಳಿ ಕರೆಯಿತೊ... ದೂರತೀರಕೆ ನಿನ್ನನು....
ಅಮೆರಿಕಾ ಅಮೆರಿಕಾ ಚಿತ್ರದ ಹಾಡು. ರಾಜು ಕೂಡ ಅದೇ ಹಾಡಿನ ಹಿಂದೆ ಹೋಗಿಬಿಟ್ಟ. ಮನೆಯ ಯಾವ ಭಾಗದಲ್ಲಿ ನಿಂತರೂ ಆತ ಕೂಗಿದ ಅನುಭವ. ವೇಲಣ್ಣನನ್ನು ಒಮ್ಮೆ ಊಟಕ್ಕೆ ಕರೆಯಬೇಕು. ಎಲ್ಲ ಒಟ್ಟಿಗೇ ಕುಳಿತು ಕಷ್ಟ ಸುಖ ಹಂಚಿಕೊಳ್ಳೋಣ ಎಂದು ಹಲವು ದಿನಗಳಿಂದ ಹೇಳುತ್ತಿದ್ದ. ಆದರೆ ಇತ್ತೀಚೆಗೆ ಕಣ್ಣಿಗೆ ಬೀಳುವುದೇ ಅಪರೂಪ. ಕೇಳಿದರೆ ಕುಡಿತ ಬಿಟ್ಟಿದ್ದೇನೆ ಎನ್ನುತ್ತಿದ್ದ. ತಿಂಗಳುಗಟ್ಟಲೇ ನಾಪತ್ತೆಯಾಗುತ್ತಿದ್ದ. ಕೆಲವರು ಕಂಡು-ಕೇಳಿದವರು ಮತ್ತೆ ಶುರುಮಾಡಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದರು. ಕೇಳೋಣ ಎಂದರೆ ಕೈಗೆ ಸಿಗುತ್ತಿರಲಿಲ್ಲ. ನನ್ನನ್ನು ಕಂಡರೆ ಭಯ ಪ್ರೀತಿ ಎಲ್ಲ ಇತ್ತು. ರಾಜು ಏಕೆ ಹಾಗಾದ ಎನ್ನುವುದೇ ದುರಂತ. ಅಪ್ಪ ತೀರಿಕೊಂಡ ಮೇಲೆ ಒಂಟಿಯಾದೆ ಎಂಬ ಸಂಕಟ ಕಾಡತೊಡಗಿತು. ಅವರನ್ನು ಸರಕಾರ, ಉದ್ಯಮ ಸರಿಯಾಗಿ ಗುರುತಿಸಲಿಲ್ಲ. ಜೀವಿತಾವಧಿಯ ಸಾಧನೆ ಗುರುತಿಸುವ ಪ್ರೀತಿ ಯಾರಿಗೂ ಇರಲಿಲ್ಲ. ಪ್ರಶಸ್ತಿಯಂತೂ ಮೊದಲೇ ಬರಲಿಲ್ಲ ಎಂಬ ಬೇಸರವಿತ್ತು. ಇನ್ನೊಂದು ಕಡೆ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳಿದ್ದರು. ಮದುವೆಯ ಹೊಣೆ ರಾಜು ಹೆಗಲ ಮೇಲೆ ಬಿತ್ತು. ಜತೆಗೆ ಕೆಲಸದ ಒತ್ತಡ.
ವೇಲು ಮತ್ತೆ ಏದುಸಿರು ಬಿಟ್ಟರು. ಕನ್ನಡಕ ಕೈ ಸೇರಿತ್ತು. ಕಣ್ಣು ಅದನ್ನೇ ನೋಡುತ್ತಿತ್ತು. ಮಾತು ಮತ್ತೆ ತನ್ನ ಹಾದಿಯಲ್ಲಿ ಸಾಗಿತ್ತು...
‘ಒಂದು ಗಾದೆ ಇದೆ... ಅರವತ್ತಕ್ಕೆ ಕಾಯಿಲೆ ಬರಬಾರದು, ಇಪ್ಪತ್ತಕ್ಕೆ ಯಜಮಾನಿಕೆ ಸಿಗಬಾರದು...ಇದು ರಾಜು ಬದುಕಿಗೆ ಸೂಕ್ತವಾಗಿ ಹೋಲುತ್ತದೆ. ತನ್ನದೇ ಆದ ಸಂಗೀತ ಲೋಕ, ಗೆಳೆಯರ ಬಳಗದಲ್ಲಿ ತೇಲಾಡಿಕೊಂಡಿದ್ದ ಆತನ ಮೇಲೆ ಇದ್ದಕ್ಕಿದ್ದಂತೆ ಜವಾಬ್ದಾರಿ ಎಂಬ ನೂರು ಕ್ವಿಂಟಲ್ ಮೂಟೆ ಬಿತ್ತು. ಅಪ್ಪಾಜಿ ಇಹಲೋಕದ ಕೊಂಡಿ ಕಳಚಿಕೊಂಡರು. ಜೀವಕ್ಕೆ ಜೀವವಾಗಿದ್ದ ಜೀವ ಜೋಕಾಲಿ ಕಳಚಿ ಕೆಳಗೆ ಬಿತ್ತು. ಆದರೂ ಸಹನೆಯ ಗುಳಿಗೆ ಅವನ ಕಿಸೆಯಲ್ಲೇ ಕುಳಿತಿತ್ತು. ಆಗಾಗ ಅದನ್ನು ನೀರಿನ ಜತೆ ಸೇವಿಸುತ್ತಿದ್ದ. ನಿಮಗೆ ಆಶ್ಚರ್ಯವಾಗಬಹುದು. ಮೈಸೂರಿನಲ್ಲಿ ರಾಜು ಅಜ್ಜಿ ಇದ್ದಾರೆ. ದೇಹ ಮುಪ್ಪಾಗಿದೆ. ಕಣ್ಣಲ್ಲಿ ಪೊರೆಗಳ ಮಹಾಪೂರ. ಕಿವಿ ಅವರ ಮಾತು ಕೇಳುವುದಿಲ್ಲ. ಜೀವ, ದೇಹಗಳು ಆತ್ಮಕ್ಕೆ ಜೋತುಬಿದ್ದಿವೆ. ದೇವರು ಪಾಲಿಗೆ ಬಂದ ಎರಡು ಪಂಚಾಮೃತವನ್ನೂ ಕಿತ್ತುಕೊಂಡ. ಗುರುಗಳು (ಮೈಸೂರು ಅನಂತಸ್ವಾಮಿ) ತೀರಿಕೊಂಡಾಗ ರಾಜು ನನ್ನ ಬಳಿ ಬಂದು ಅಳುತ್ತಿದ್ದ... ‘ಅಣ್ಣಾ ಅಜ್ಜಿಯನ್ನು ನೋಡುತ್ತಿದ್ದರೆ ಕರುಳು ಕಿತ್ತು ಬರುತ್ತದೆ. ಆ ಭಗವಂತ ಎಷ್ಟು ಕ್ರೂರಿ... ಭೂಮಿಯಲ್ಲಿ ತನಗಿಂತ ಹೆಚ್ಚು ಸಂತೋಷವಾಗಿ ಇರುವವರನ್ನು ಕಂಡರೆ ಅವನಿಗೆ ಹೊಟ್ಟೆಕಿಚ್ಚು. ಅಪ್ಪನ ಮಡಿಲಲ್ಲಿ ಆನಂದವಾಗಿದ್ದೆ. ಒಟ್ಟಿಗೆ ಇರುವವರ ಮೇಲೆ ಇಟ್ಟಿಗೆ ಹಾಕಿದ. ಕನಸಿನ ಕನ್ನಡಿಗೆ ಗುಂಡೇಟು ಹೊಡೆದ...’ ಹೀಗೆ ಹೇಳಿಕೊಂಡು ಭಾವದ ಬುಟ್ಟಿಯಾಗುತ್ತಿದ್ದ.


ಬದುಕು ಜಟಕಾ ಬಂಡಿ... ವಿಧಿಯದರ ಸಾಹೇಬಾ..

ಆಗ ನೆನಪಿನಂಗಳದಲ್ಲಿ ಜಾರಿಹೋಯಿತು ಈ ಡಿವಿಜಿಯವರ ಕಗ್ಗ...
ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬಾ
ಕುದುರೆ ನೀ ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಮಂಕುತಿಮ್ಮಾ...
ರಾಜು ಕೂಡ ಈ ಹಾಡನ್ನು ಎದೆ ತುಂಬಿ ಹಾಡುತ್ತಿದ್ದ. ಅಪ್ಪನ ಆಕೃತಿಯನ್ನು ಕಣ್ಮುಂದೆ ತಂದುಕೊಳ್ಳುತ್ತಿದ್ದ. ಅವ ಇನ್ನೂ ಪ್ರೀತಿಯಿಂದ ಅನುಭವಿಸಿ ಹಾಡುತ್ತಿದ್ದ ಗೀತೆ- ಸ್ನೇಹ ಅತಿಮಧುರ... ಒಮ್ಮೆ ಶಿವಮೊಗ್ಗದ ಸುಗಮ ಸಂಗೀತ ಶಾಸ್ತ್ರೀಯ ಸಮ್ಮೇಳನದಲ್ಲಿ ಈ ಹಾಡು ಹೇಳಿ, ಬೆರಗು ಮೂಡಿಸಿದ್ದ. ನೀವು ನಂಬುವುದಿಲ್ಲ; ಅಲ್ಲಿದ್ದವರು ಅದನ್ನು ಮತ್ತೆ ನಾಲ್ಕು ಬಾರಿ ರಿಪೀಟ್ ಮಾಡಿಸಿದ್ದರು. ಇನ್ನೊಮ್ಮೆ ಮತ್ತೊಮ್ಮೆ ಎಂದು ಚೀಟಿ ಬರೆದುಕೊಡುತ್ತಿದ್ದರು. ಆ ಹಾಡು ಎಷ್ಟು ಅದ್ಭುತವಾಗಿತ್ತೋ ಅದಕ್ಕಿಂತ ಹತ್ತು ಪಟ್ಟು ಅದ್ಭುತವಾಗಿತ್ತು ಅವನ ಕಂಠ ಸಿರಿ.
ಒಮ್ಮೆ ನಾನು ಕೇಳಿದ್ದೆ... ‘ರಾಜು, ನಿನ್ನ ಆ ಕಂಠ ಪೆಟ್ಟಿಗೆಯನ್ನು ನನಗೆ ಬಿಚ್ಚಿಕೊಡು. ಭದ್ರವಾಗಿ ತಿಜೋರಿಯಲ್ಲಿಡುತ್ತೀನಿ. ನೀನು ಬೇಕೆಂದಾಗ ಕೊಡುತ್ತೀನಿ. ನಿನ್ನ ಬಳಿ ಇದ್ದರೆ ಹಾಳುಮಾಡಿಕೊಳ್ಳುತ್ತೀಯಾ’ ಎಂದು ಸದಾ ಹೇಳುತ್ತಿದೆ. ಅದಕ್ಕವ...‘ಅಷ್ಟೇ ತಾನೇ... ಬೇಕಾದ್ರೆ ಈಗಲೇ ಕಳಚಿಕೊಳ್ಳಿ. ಆದರೆ ಒಂದು ಶರತ್ತು, ಮಧ(ದ)ರಾತ್ರಿ ಬಂದು ಕೇಳಿದರೂ ವಾಪಸ್ ಕೊಡಬೇಕು. ನನ್ನ ಮೂಡ್ ಹೇಗಿರುತ್ತೆ ಅಂತ ಗೊತ್ತಿಲ್ಲ’ ಎಂದು ಮಮಾಗೆ ಮಂಗಳಾರತಿ ಎತ್ತುತ್ತಿದ್ದ. ಆಗತಾನೇ ಆತನ ದಾಸನಾಗಲು ರಾಮರಸ ಸ್ಕೆಚ್ ಹಾಕುತ್ತಿತ್ತು. ಆಗಾಗ ಅವರ ಹತ್ತಿರ ಸುಳಿದು, ರುಚಿ ತೋರಿಸಿ ಮಾಯವಾಗುತ್ತಿತ್ತು. ಆದರೂ ಜವಾಬ್ದಾರಿ ಎಂಬ ರಾಮಬಾಣ ಅದನ್ನು ಹೊಡೆದೋಡಿಸಲು ಯತ್ನಿಸುತ್ತಿತ್ತು. ಆದರೆ ಅವನ ಹತ್ತಿರದ ‘ಒಡನಾಡಿ’ಗಳು ಅವನ ಅರಿವಿಗೆ ಬರದಂತೆ ಬತ್ತಳಿಕೆಯಿಂದ ಕಿತ್ತೊಗೆದರು. ನಂತರದ ದಿನಗಳಲ್ಲಿ ಈತನೇ ರಾಮರಸದ ದಾಸನಾಗಿಬಿಟ್ಟ!’
ವೇಲು ಮನಸು ಮತ್ತೊಮ್ಮೆ ಖಿನ್ನಗೊಂಡಿತು. ಒಮ್ಮೆ ಆಕಾಶ ನೋಡಿದರು. ರಾಜು ಕಿನ್ನರಲೋಕದಲ್ಲಿ ಕುಳಿತು ಮತ್ತೆ ಯಾವ ಮೋಹನ ಮುರಳಿ ಕರೆಯಿತು... ಎಂದು ಹಾಡುತ್ತಿದ್ದಾನೆಂದು ಭಾಸವಾಗುತ್ತಿದೆ ಎಂದರು!

ಗಿಣಿಯು ಪಂಜರದೊಳಿಲ್ಲ ರಾಮ.... ರಾಮಾ...
ಬಿ.ವಿ. ಕಾರಂತರ ‘ಸತ್ತವರ ನೆರಳು’ ನಾಟಕದಲ್ಲಿ ಬರುವ ಈ ದಾಸ ಸಾಹಿತ್ಯದ ಸಾಲು ನೆನಪಾಗಿ, ವೇಲು ಮತ್ತೆ ಭಾವ ಲಹರಿಯಾದರು. ತಮ್ಮ ಆತ್ಮದ ಜತೆ ಕುಂಟಾಬಿಲ್ಲೆ ಆಡುತ್ತಾ, ಜೀವಕ್ಕೆ ಹತ್ತಿರವಾಗಿದ್ದ ಆತ ಬೆಳೆಯುವ ಸಿರಿಯಲ್ಲೇ ತೆರೆ ಮರೆಗೆ ಸೇರಿದ್ದ. ಸಂಕಟದ ಸುಳಿ ಅವನ ಬದುಕ ಪಯಣದಲ್ಲಿ ಲಗೋರಿ ಆಡಿತ್ತು. ಅಪ್ಪಯ್ಯ ಅಲ್ಪಾಯುಷ್ಯದಲ್ಲೇ ಇಹಲೋಕಕ್ಕೆ ಇತಿಶ್ರೀ ಹಾಡಿದ್ದರು. ಅಂತೂ ಇಂತು ಬೆನ್ನಿಗೆ ಬಿದ್ದ ಮೂವರು ಹೆಣ್ಣುಮಕ್ಕಳನ್ನು ದಡ ತಲುಪಿಸಿದ ರಾಜು, ಕನಸಿನ ಕಡಲ ತೀರದತ್ತ ಮುಖ ಮಾಡಿದ್ದ. ಸ್ವತಂತ್ರಪಾಳ್ಯದ ಪಾರಿವಾಳವಾಗಲು ಯತ್ನಿಸುತ್ತಿದ್ದ. ಸಂಗೀತ ಗಾರುಡಿಯಿಂದ ಅಭಿಮಾನಿ ವರ್ಗವನ್ನು ತನ್ನತ್ತ ಸೆಳೆಯತೊಡಗಿದ್ದ. ಆಗ ಆ ವರ್ಗದಿಂದ ಹಾರಿ ಬಂತು ಒಂದು ಗಿಣಿ. ಏಕಾಏಕಿ ಅವನ ಎದೆ ಗೂಡಿನಲ್ಲಿ ಬಂದು ರಾಮ ರಾಮಾ ಎನ್ನತೊಡಗಿತ್ತು. ಪ್ರೇಮದ ಕಾಣಿಕೆಯನ್ನು ಹೊತ್ತು ತಂದಿತ್ತು. ಅವರೇ ಡಾ. ವಿನಯಾ. ವೃತ್ತಿಯಲ್ಲಿ ಆಯುರ್ವೇದಿಕ್ ಡಾಕ್ಟರ್. ದಕ್ಷಿಣ ಕನ್ನಡ ದಿಕ್ಕಿನಿಂದ ಬೆಂಗಳೂರು ಸೇರಿದ ಆಕೆ ಹವ್ಯಾಸಿ ಹಾಡುಗಾರ್ತಿ. ಅಂದಮೇಲೆ ಕೇಳಬೇಕೇ? ರಾಜುವಿನ ಮುತ್ತಿನಂಥ ಕಂಠಸಿರಿ ವಿನಯಾ ಎದೆಯಲ್ಲಿ ಅಳಿಸಲಾರದ ನಂಟು ಬೆಸೆದಿತ್ತು. ರಾಜು ನಡೆಸಿಕೊಡುವ ಹೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಳು. ದೂರದಲ್ಲೇ ನಿಂತು ವಿಶ್ ಮಾಡುತ್ತಿದ್ದಳು. ಕೊನೆಗೊಂದು ದಿನ ತನ್ನ ಅಂತರಂಗದ ಕದ ಬಿಚ್ಚಿಟ್ಟು, ಉತ್ತರಕ್ಕಾಗಿ ಕಾದುಕುಳಿತರು.
ಆಗ ರಾಜು ಏನು ಮಾಡಿದ ಗೊತ್ತಾ... ಸೀದಾ ಹೋಗಿ, ಆಕೆಗೆ ತನ್ನಲ್ಲಿರುವ ಗುಣವಿಶೇಷ, ತಪ್ಪು-ಒಪ್ಪು, ‘ಪಾನಕ ಸೇವನೆ’... ಎಲ್ಲವನ್ನೂ ಅರುಹಿದ. ಅದಕ್ಕೆ ಆ ಕಡೆಯಿಂದ ಬಂದ ಉತ್ತರ... ನೀ ಈಗ ಹೇಗೇ ಇರು, ಮುಂದೆ ನಿನ್ನನ್ನು ಹೀಗೆಯೇ ಬದಲಾಯಿಸುತ್ತೀನಿ. ನಿನ್ನ ಜತೆ ಇದ್ದೇ ಎಲ್ಲ ತಿದ್ದುತ್ತೀನಿ...’ ಯಥಾಪ್ರಕಾರ ಮದುವೆ ಆಯಿತು. ಆರು ತಿಂಗಳು ಕಳೆಯಿತು. ರಾಜು ಅದಾಗಲೇ ಅಲ್ಪಸ್ವಲ್ಪ ಸುಧಾರಿಸಿದ್ದ. ಆದರೆ ಏನಾಯಿತೋ ಗೊತ್ತಿಲ್ಲ. ೬೩ರಂತೆ ಒಂದೇ ಕಡೆ ಮುಖ ಮಾಡಿಕೊಂಡಿದ್ದ ಇಬ್ಬರೂ ೩೬ ಆಗಿ ಹೋದರು. ಆಕೆ ಆಕಡೆ, ಈತ ಈಕಡೆ. ಇಲ್ಲಿ ಯಾರ ಕಿವಿ ಹಿತ್ತಾಳೆಯಾಯಿತೋ ಗೊತ್ತಿಲ್ಲ. ದಾಂಪತ್ಯ ಎಂಬ ಕೊಂಡಿಯ ಮೇಲೆ ಆಸಿಡ್ ದಾಳಿಯಾಯಿತು. ರಾಜು ಯಾವಾಗಲೂ ‘ಏಳ್ಕಳಕ್ ಒಂದೂರು, ತಲೆ ಮೇಲೆ ಒಂದ್ಸೂರು, ಮಲ್ಗಾಕೆ ಭೂಮ್‌ತಾಯಿ ಮಂಚ...’ ಎಂಬಂತೆ... ಇಂದು ಬೆಂಗಳೂರು, ನಾಳೆ ಮೈಸೂರು, ನಾಡಿದ್ದು ಮಂಗಳೂರು, ಅಲ್ಲಿಂದ ಇನ್ನೊಂದೂರು, ಮತ್ತೆ ಸಾಗರದಾಚೆಯ ಊರು... ಆತ ಹಾಡು ಹಕ್ಕಿಯಷ್ಟೇ ಅಲ್ಲ, ಹಾರು ಹಕ್ಕಿಯೂ ಆಗಿದ್ದ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ... ಹಾಗಂತ ಹೇಳಿಕೊಂಡು ಎಂದೂ ತಿರುಗುತ್ತಿರಲಿಲ್ಲ. ರಾಜು, ಏಕೆ ಹೀಗೆ... ಎಂದು ಕೇಳಿದರೆ: ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಎಂದು ಗುರುಗಳನ್ನು (ಅನಂತಸ್ವಾಮಿ)ನೆನೆಯುತ್ತಿದ್ದ. ಗರಿ ಗರಿ ಜುಬ್ಬ ಹಸಿ ಹಸಿಯಾಗುತ್ತಿತ್ತು. ಕನ್ನಡಕ ಕೈಗೆ ಹಸ್ತಾಂತರವಾಗುತ್ತಿತ್ತು. ವಿನಯಾ ಬಗ್ಗೆ ಯಾರಾದರೂ ವಿಚಾರಿಸಲು ಮುಂದಾದರೆ, ಅವಳ ಉಭಯ ಕುಶಲೋಪರಿ ಕೇಳಿದರೆ ರಾಜು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ತೀರಾ ಅಸಹಾಯಕ ಪರಿಸ್ಥಿತಿ ಬಂದರೆ ದಯವಿಟ್ಟು ಆ ವಿಷಯ ಬಿಟ್ಟು ಬೇರೆ ಏನಾದ್ರೂ ಮಾತಾಡಿ ಎನ್ನುತ್ತಿದ್ದ. ಬಾಟಲಿಯ ಬಾಯನ್ನು ತನ್ನ ಬಾಯಿಯೊಂದಿಗೆ ಬೆಸೆದುಕೊಳ್ಳುತ್ತಿದ್ದ...
ವೇಲು ಕೊನೆಗೆ ಹೇಳಿದ್ದಿಷ್ಟು: ಇಷ್ಟೆಲ್ಲಾ ಇದ್ದರೂ ರಾಜು ರಾಜುವಾಗಿಯೇ ರಾರಾಜಿಸಿದ. ತನ್ನ ತಂದೆಯ ಮರಣೋತ್ತರ ದಿನಗಳಲ್ಲಿ ಕಷ್ಟದಲ್ಲೇ ಕೈ ತೊಳೆದ. ಹವ್ಯಾಸ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ರಾಜುಗೆ ಅದು ಚಟವಾಗಿ ಬದಲಾಗಿತ್ತು ಅಷ್ಟೇ. ಅದಕ್ಕೆ ಪ್ರಮುಖ ಕಾರಣ ಅಪ್ಪಾಯ್ಯಗೆ ಮರಣೋತ್ತರ ಪ್ರಶಸ್ತಿಯೂ ಲಭಿಸಲಿಲ್ಲ ಎಂಬ ನೋವು. ಈಗಲಾದರೂ ಘನ ಸರಕಾರ ಗುರುಗಳಿಗೆ ಶಿಶು ನಾಳ ಷರೀಫ ಪ್ರಶಸ್ತಿ ನೀಡಿದರೆ, ಅವರ ಹಾಗೂ ರಾಜು ಆತ್ಮಕ್ಕೆ ಶಾಂತಿ, ಇರುವ ಶಾಂತಮ್ಮನ ಮನಸ್ಸಿಗೆ ನೆಮ್ಮದಿಸಿಕ್ಕೀತು; ಹಾಡು ಹಕ್ಕಿಗೆ ಬಿರುದು ಸನ್ಮಾನ ಎರಡೂ ದಕ್ಕೀತು!




ಮುಪ್ಪನ್ನ ಏಮಾರ್‍ಸಿ ಓದ್ಯಲ್ಲೊ ಗೆಳೆಯಾ!


ರತ್ನನ ಪದಗ್ಳನಾ ರಾಜ್‌ರತ್ನ ಬರ್‍ದಿದ್ದು
ಯಾಕಂತ ಗೊತ್ತಾಯ್ತು ರಾಜು
ನೀನದ್ನ ಹಾಡ್ತಿದ್ರೆ ಕಣ್ಮುಂದೆ ರತ್ನಾನೆ
ಬಂದಂಗೆ ನಮ್ಗೆಲ್ಲಾ ಮೋಜು
ಪಕ್ವಾದ್ಯ ಭಾರ್‍ಸೋರು ಭಾರ್‍ಸಿದ್ರೂ ಸುಮ್ಕಿದ್ರು
ಇರ್‍ಲಿಲ್ಲ ನಿಂಗವ್ರ ಗೋಜು
ನೀನೆಲ್ರ ನಗ್ಸೋದ್ನ ಕಾಯ್ತಿದ್ದಾ
ಬಳಗಾನೆ ಇದ್ರಲ್ಲೊ ನಿನ್ನಾಜುಬಾಜು

ನಿನ್‌ತುಂಟು ಕಣ್ಣಲ್ಲೆ ಮಾತಾಡ್ತಾ ಮಾತಾಡ್ತಾ
ನನ್ನನ್ನೇ ಮಾಡ್ತಿದ್ದೆ ಬೆಪ್ಪು
ಸ್ನೇಇತ್ರಾ ಎದ್ಯಾಗೆ ಹಸಿರಾಗ್ಯೆ ಉಳಿಯುತ್ತಾ
ನಗ್‌ನಗ್ತಾ ತಿವಿತಾವೆ ನೆಪ್ಪು
ಇಷ್ಟಾದ್ರೂ ನಾ ಬಲ್ಲೆ ಹುಡುಗಾಟ
ಏನಿದ್ರೂ ನೀನೇನೂ ಮಾಡ್ಲಿಲ್ಲ ತಪ್ಪು
ಹಾಗಾಗೇ ನೀ ನಮ್ಮ ಮನ್ಸಾಗೆ ಜೋರಾಗೇ
ಒತ್‌ತಿದ್ದೆ ಅಳಿವಿಲ್ದ ಛಾಪು

ನಿನ್ನನ್ನ ಹಣ್‌ಮಾಡಕ್ ಕಾಯ್ತಿದ್ದ ಮುಪ್ಪನ್ನ
ಏಮಾರ್‍ಸಿ ಓದ್ಯಲ್ಲೊ ಗೆಳೆಯಾ
ಬ್ರಹ್ಮಂಗೆ ಏನಾಯ್ತೊ ನಿನ್ ಜಾತ್ಕಾ ಬರ್‍ಯೋದ್ನಾ
ಅರ್ಧಕ್ಕೆ ನಿಲ್ಲಿಸ್ದ ಮಡೆಯಾ
ಆಗಾಗ ಸಿಗ್ತಿದ್ದೋನ್ ಇನ್ನೆಂದೂ ಸಿಗ್ದಂಗೆ
ಹೋದ್ಯಲ್ಲೊ ಗಿಲ್‌ಬಿಟ್ಟು ದಿಲ್‌ಗೆ
ಒಂದ್ ಸಾರಿ ನಿನ್ನನ್ನ ನೋಡ್‌ಬೇಕು ಅನ್ಸಿದ್ರೆ
ನಾವೇನೇ ಬರ್‍ಬೇಕಾ ಅಲ್‌ಗೆ
-ಇದು ರಾಜರತ್ನಂ ಬರೆದ ಪದಗಳಲ್ಲ. ರಾಜು ಅನಂತಸ್ವಾಮಿಯ ಹೃದಯ ಗೆದ್ದ ಗೆಳೆಯರಲ್ಲಿ ಒಬ್ಬರಾದ ವಿ. ಮನೋಹರ್ ಎದೆತುಂಬಿ ಹಾಡಿದ ‘ರಾಜು -ರತ್ನನ್ ಪದಗಳು’!
ಮನೋಹರ್ ರಾಜು ಇನ್ನಿಲ್ಲ ಎಂದು ನಂಬಲು ಬಿಲ್ ಕುಲ್ ತಯಾರಿರಲಿಲ್ಲ. ‘ಆ ಭೂಪ ಇಲ್ಲೇ ಇದ್ದಾನೆ. ಅವನ ಅಂತರಾತ್ಮ ಅಸ್ತಂಗತವಾಗಿಲ್ಲ. ಅಂದು ನಾನು ಬರೆದುಕೊಟ್ಟ ಹಾಡಿಗೆ ಪೂರ್ಣ ಸ್ವರ ಸಂಯೋಜನೆ ಮಾಡಲು ಹಾಳಾದ ಬೆನ್ನುನೋವು ಬಿಡಲಿಲ್ಲ ಎಂಬ ನೋವು ಅವನಲ್ಲಿ ಹಚ್ಚಳಿದಿದೆ. ಇಲ್ಲೆಲ್ಲೋ ಹಾರ್ಮೋನಿಯಂ ಹಿಡಿದು... ‘ನೆನಪಿದೆಯಾ ಆ ದಿನಗಳು, ನೆನಪಿದೆಯಾ ಆ ಕ್ಷಣಗಳು’ ಎಂದು ಭಾವ ತಂತಿ ಮೀಟುತ್ತಿದ್ದಾನೆ. ಆತ ಪರಲೋಕ ಪ್ರವೇಶ ಮಾಡುವ ಒಂದು ವಾರದ ಹಿಂದೆ ಹನುಮಂತನಗರದ ಅರವಿಂದ್ ಸ್ಟುಡಿಯೊದಲ್ಲಿ ಜತೆಜತೆಯಾಗಿ ಕಳೆದ ಆ ಕ್ಷಣಗಳು ಇನ್ನೂ ಹಸಿ ಹಸಿಯಾಗಿ ಉಳಿದಿದೆ’ ಎಂದು ಆ ದಿನಗಳತ್ತ ದಾಪುಗಾಲು ಇಡುತ್ತಾರೆ ಮನೋಹರ್...
ಸ್ಟುಡಿಯೊದ ಅ ವಿಭಾಗದಲ್ಲಿ ರಾಜು ಬಳಗವಿತ್ತು. ಕಾರಣಾಂತರದಿಂದ ಆ ಗೆ ಹೋಗಿದ್ದೆ. ರಾಜು ಕಂಠ ಸಿರಿಯಿಂದ ಹೊರಹೊಮ್ಮಿದ ಆ ಸಂಗೀತದ ಆಲಾಪನೆ ನನ್ನ ಕಿವಿಗೆ ಮುತ್ತಿಕ್ಕಿತು. ‘ಹೇ... ಬಹಳ ದಿನವಾಯಿತು ರಾಜು ದರ್ಶನವಾಗಿ. ನೋಡಿಬರೋಣ’ ಎಂದು ಮೆಟ್ಟಿಲೇರಿ, ಒಳ ಪ್ರವೇಶಿಸಿದೆ. ಅಲ್ಲಿ ಮೈಸೂರು ಅನಂತಸ್ವಾಮಿಯವರ ೫೦ ಹಾಡುಗಳ ಸ್ವರ ಸಂಯೋಜನೆ ನಡೆಯುತ್ತಿತ್ತು. ಹಾಗೆ ಮಾಡಲು ಸರಕಾರ ಆರ್ಡರ್ ಮಾಡಿತ್ತು. ಎಲ್.ಎಲ್.ಶಾಸ್ತ್ರಿ, ಮಂಗಳಾರವಿ, ನಗರ ಶ್ರೀನಿವಾಸ ಉಡುಪ ಮೊದಲಾದ ಗಾಯಕರು ರಾಜುವಿನ ರಾಗ ಲೀಲೆಗೆ ತಾಳ ಹಾಕುತ್ತಿದ್ದರು. ಅದು ನೋಡಿ ನಿಜವಾದ ಸ್ವರ ಸಂಯೋಜನೆ. ಅವು ಯಾವುದೇ ರಾಗಾಧಾರಿತವಾಗಿರಲಿಲ್ಲ. ರಾಜು ಎಲ್ಲವನ್ನೂ ಫ್ರೆಶ್‌ಆಗಿ ಕಂಪೋಸ್ ಮಾಡುತ್ತಿದ್ದ. ತಾಯಿ ಶಾಂತಮ್ಮ, ತಂಗಿ ಸುನೀತಾ ಕೂಡ ಇದ್ದರು. ರಾಜು ನನ್ನನ್ನು ಕಂಡವನೇ ಓಡೋಡಿ ಬಂದು, ಬಾಚಿ ತಬ್ಬಿಕೊಂಡ. ‘ಎಷ್ಟು ದಿನ ಆಯ್ತು ಸಾರ್... ಅರ್ಧ ಗಂಟೆಗೆ ಮುನ್ನ ನಿಮ್ಮನ್ನು ನೆನಪಿಸಿಕೊಂಡೆ. ನನಗೆ ಒಂದು ಹಾಡು ಬರೆದುಕೊಡಬೇಕು ನೀವು. ಬೇಕಾದರೆ ನಾಳೆ ಕೊಡಿ ಪರವಾಗಿಲ್ಲ...’ ಎಂದು ನನ್ನ ಉತ್ತರಕ್ಕೂ ಕಾಯದೇ ಎಳೆದುಕೊಂಡು ಹೋಗಿ, ಸೋಫಾ ಮೇಲೆ ಕೂರಿಸಿದ. ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಅಂದು ರಾಜು ಬಲು ಹುಮ್ಮಸ್ಸಿನಲ್ಲಿದ್ದ. ಅವನನ್ನೇ ನೋಡುತ್ತಾ ಬರೆಯಲು ಕುಳಿತೆ...
ನೆನಪಿದೆಯಾ ಆ ದಿನಗಳು... ನೆನಪಿದೆಯಾ ಆ ಕ್ಷಣಗಳು... ರಾಜು ಒಂದೇ ಬಾರಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿಬಿಟ್ಟ. ಥೇಟ್ ಮೈಸೂರು ಅನಂತಸ್ವಾಮಿಯವರ ಹಾಗೆ! ನನಗೆ ಅವನನ್ನು ಒಮ್ಮೆ ತಬ್ಬಿಕೊಳ್ಳಬೇನಿಸಿತು. ‘ರಾಜು ನೀನು ಈಗಲೂ ಪುಟ್ಟ ಮಗು ಥರ ಕಣಯ್ಯಾ...’ ಎಂದೆ. ಅದಕ್ಕೆ ಪ್ರತಿಕ್ರಿಯೆ ಕೊಡುವಷ್ಟು ಸಮಯ ಇರಲಿಲ್ಲ. ಪಲ್ಲವಿಗೆ ಮುದ್ದಾರ ಸ್ವರ ಸಂಯೋಜಿಸಿ, ಇನ್ನೇನು ಚರಣಕ್ಕೆ ಹೊರಳಬೇಕು...; ಒಮ್ಮೆ ಬೆನ್ನು ಹಿಡಿದು ಕೊಂಡು, ‘ಅಮ್ಮಾ... ಎಂದು ಕೂಗಿದ. ಹತ್ತಿರದಲ್ಲೇ ಇದ್ದ ಶಾಂತಮ್ಮ ಓಡೋಡಿ ಬಂದರು.


ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ

ಮನೋಹರ್ ಆ ಸುದ್ದಿ ಕೇಳಿ ಕುಗ್ಗಿ ಹೋದರು. ಬೆನ್ನು ನೋವು ರಾಜುವನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿತ್ತು. ಸ್ನೇಹದ ಬುಗ್ಗೆಯಂತಿದ್ದ ಆ ಜೀವ ಅದಾಗಲೇ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭಿಸಿತ್ತು. ಹಾಡು ಬರೆದುಕೊಟ್ಟು, ‘ರಾಜು ಮತ್ತೆ ಸಿಗುತ್ತೇನೆ, ನೀನು ರಾಗ ಸಂಯೋಜನೆ ಮಾಡಿರು. ನನಗೆ ಅರ್ಜೆಂಟ್ ಕೆಲಸ ಇದೆ ಎಂದು ಹೊರಟ ಮನೋಹರ್‌ಗೆ ಮತ್ತೆ ಆ ಮುಖ ನೋಡುವ ಭಾಗ್ಯವಿರಲಿಲ್ಲ. ಚಿರ ನಿದ್ರೆಗೆ ಜಾರುವ ಶಯ್ಯೆಯಲ್ಲಿ ಮಲಗುವ ಮುಂಚಿನ ದಿನ ಕಾರ್ಯನಿಮಿತ್ತ ಕಾಸರಗೋಡಿಗೆ ಹೋಗಿದ್ದರು. ಬರುವ ಹೊತ್ತಿಗೆ ರಾಜುವನ್ನು ಮರಳಿ ದೂರತೀರಕೆ ಕರೆದೊಯ್ದಿದ್ದ. ರಾಜು ಸಾವಿನ ಸುಳಿಯಲ್ಲಿ ಸಿಲುಕಿ, ವಿಲವಿಲ ಎನ್ನುತ್ತಿರುವ ಸುದ್ದಿ ಇವರ ಎದೆಗೆ ನಾಟಿತು... ಅಯ್ಯೊ ಆ ಹಾಡು...
ನೆನಪಿದೆಯಾ ಆ ದಿನಗಳು
ನೆನಪಿದೆಯಾ ಆ ಕ್ಷಣಗಳು
ಎಂಥ ಹಾಳು ಗಳಿಗೆಯೆಂದು
ಅಂದುಕೊಂಡ ಆ ದಿನ
ಇಂದು ನೆನೆಸಿಕೊಂಡ ಒಡನೆ
ಮೊಗದಿ ನಗೆಯ ಸಿಂಚನ
ಗೆಲುವು ಸಿಕ್ಕ ವೇಳೆ ಆಗುತ್ತಿದ್ದೆ ಮದನ ಮರ್ಕಟ
ಸೋತ ವೇಳೆ ಯಾರದೊ
ಸಂಚಿದೆಂಬ ಸಂಕಟ ಮೌನದಿ ಆರ್ಭಟ
; ಅದು ಅರ್ಧ ಚಂದ್ರವಂತಾಗಿತ್ತು. ಪೂರ್ಣವಾಗಲು ಚರಣಗಳು ಬಾಕಿ ಇದ್ದವು. ಅಷ್ಟೊತ್ತಿಗಾಗಲೇ ಮರಣ ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಕಾಸರಗೋಡಿನಿಂದ ಬರುವ ಹೊತ್ತಿಗೆ ಸಂಸ್ಕಾರವಂತನಾಗಿಬಿಟ್ಟಿದ್ದ!
ಮನೋಹರ್ ಮತ್ತೆ ಮರುಗಿದರು... ‘ರಾಜುಗೆ ಸಿನಿಮಾ ಸಂಗೀತ ನಿರ್ದೇಶಕ ಆಗಬೇಕು ಎಂಬ ಮತ್ತೊಂದು ಮಹದಾಸೆ ಇತ್ತು. ಖುಷಿ ಚಿತ್ರದ ‘ನಾನು ಒತ್ತಾರೆ ಎದ್ಬುಟ್ಟು, ಬೆಡ್‌ಕಾಫಿ ತಂದ್ಕೊಟ್ಟು, ನಿನ್ ಸೇವೆ ಮಾಡ್ತೀನ್ ಕಣೆ...’ ಹಾಡಿಗೆ ಕಂಠದಾನ ಮಾಡುವ ಮುನ್ನ: ಗುರುವೇ... ಒಂದಿಷ್ಟು ಕಾಮಿಡಿ ಹಾಡುಗಳನ್ನು ಬರೆದುಕೊಡಿ, ನಾನು ಅದಕ್ಕೆ ಸಂಗೀತ ಸಂಯೋಜಿಸುತ್ತೇನೆ. ಅದನ್ನು ಸಿನಿಮಾದಲ್ಲಿ ಅಳವಡಿಸೋಣ... ಎಂದು ಹಲ್ಲುಗಿಂಜಿದ್ದ. ಅದಕ್ಕೆ ನಾನು ಅಸ್ತು ಎಂದು ಸುಮಾರು ಎಂಟ್ಹತ್ತು ಹಾಡು ಬರೆದಿದ್ದೆ. ಸಿಕ್ಕಸಿಕ್ಕಲ್ಲೆಲ್ಲಾ: ರಾಜು ಅದು ರೆಡಿ ಇದೆ ಕಣೋ... ಎನ್ನುತ್ತಿದ್ದೆ. ಆದರೆ ಆತ: ಗುರುವೇ ಇನ್ನೊಂದ್ಸಲ ಕೊಡಿ... ಎನ್ನುತ್ತಿದ್ದ...ಇಂದು ಅವು ನನ್ನ ಟೇಬಲ್ ಕೆಳಗೇ ಉಳಿದುಕೊಂಡಿವೆ... ಆಗಾಗ ಕಣ್ಣಿಗೆ ಬಿದ್ದು, ರಾಜು ನೆನಪಾಗುವಂತೆ ಮಾಡುತ್ತಿವೆ... ಎಂದು ನೋವಿನ ಓಕುಳಿಪುರವಾಗುತ್ತಾರೆ ಮನೋಹರ್.
ಕೊನೆಯದಾಗಿ ಅವರು ರಾಜು ಮಾಡುತ್ತಿದ್ದ ಚೇಷ್ಟೆಯನ್ನು ನೆನೆನೆನೆದು ನಗುವಿನ ಜೋಕಾಲಿಯಾದರು...
***
ಒಮ್ಮೆ ವಚನಗಳ ಕಂಪೋಸಿಂಗ್ ನಡೆಯುತ್ತಿತ್ತು. ಎಲ್ಲ ಹೊಸ ಹುಡುಗರು. ದಿನಗಟ್ಟಲೇ ತಿದ್ದಿ, ತೀಡಿದರೂ ಮತ್ತದೇ ಬುದ್ಧಿ. ಮನೋಹರ್ ಮುಲು ಮುಲು ಎನ್ನತೊಡಗಿದರು. ಹಿಂದಿನಿಂದ ಬಂತು ಆ ಧ್ವನಿ... ಮನೋಹರ್ರು ಕಣ್ಣಲ್ಲೇ ಎಣ್ಣೆ ತೆಗೀತಾ ಇದ್ದಾರೆ...; ಥೇಟ್ ಶಿವಮೊಗ್ಗ ಸುಬ್ಬಣ್ಣನ ವಾಯ್ಸ್. ಮನೋಹರ್ ಗಪ್ ಅಂತ ಪೀಚೇ ಮೂಡ್. ಇನ್ನೇನು-ಸುಬ್ಬಣ್ಣ ಅವರೇ... ಎನ್ನಬೇಕು; ಆತ ಗಳಗಳಗಳ ನಗತೊಡಗಿದ್ದ, ನೋಡುತ್ತಾರೆ ರಾಜು!
ಅದೇ ರೀತಿ, ಇದೇ ಹಾಡನ್ನು ಸಿ.ಅಶ್ವತ್ಥ್ ಹಾಡಿದರೆ ಹೇಗಿರುತ್ತೆ ಎಂದು- ರೇ ರೇ ರೇ ರೇ ರಾ.... ಎಂದು ಆಕಾಶಕ್ಕೆ ಕೈ ಎತ್ತುತ್ತಿದ್ದ. ನಗೆಗಡಲಲ್ಲಿ ಕಂಬಳಿ ಹೊದ್ದು ಮಲಗುತ್ತಿದ್ದ!
***
ಅಂದೊಮ್ಮೆ ಹಾಡುಗಳ ರೀರೆಕಾರ್ಡಿಂಗ್ ನಡೆಯುತ್ತಿತ್ತು. ತಬಲಾ ವಾದಕರಾದ ಜರಾರ್ಲ್, ಶಿವಸತ್ಯ ಹಾಗೂ ರಾಜು ಇದ್ದರು. ಮೊದಲು ಮೈಕ್ ಲೆವೆಲ್ ನೋಡೋಣ, ಹಾಗೇ ಸುಮ್ಮನೇ ತಬಲಾ ನುಡಿಸಿ ಎಂದರು ಮನೋಹರ್. ರೂಮಿನ ಒಳಗಡೆ ರಾಜು ಬಳಗ ಇತ್ತು. ಮೊದಲು ಜರಾರ್ಲ್, ನಂತರ ಶಿವಸತ್ಯ ನುಡಿಸಿದರು. ಆದರೆ ಅದು ಕರ್ಕಶವಾಗಿ ಕೇಳಿಸುತಿತ್ತು. ಮನೋಹರ್ ಒಮ್ಮೆಲೇ ಸಾಕು ಸಾಕು ಎಂದು ಸುಮ್ಮನಾದರು. ಕೊನೆಗೆ ರಾಜು ಸರದಿ. ಡುಂ...ಡುಂಂ... ಡುಂಂಂ... ಮನೋಹರ್ ಸೂಪರ್ ಗುರೂ... ಎಂದರು. ಆದರೆ ಒಳಗೆ ಕುಳಿತಿದ್ದವರೆಲ್ಲಾ ಮುಸಿ ಮುಸಿ ನಗುತ್ತಿದ್ದರು. ಮಹೋಹರ್‌ಗೆ ಪರಿಸ್ಥಿತಿ ಅರ್ಥವಾಗಲಿಲ್ಲ. ಎದ್ದು ಹೋಗಿ ನೋಡ್ತಾರೆ; ರಾಜು ಕೈ ಕಟ್ಟಿ ಕುಳಿತಿದ್ದ. ಬರೀ ಬಾಯಲ್ಲಿಯೇ ಡುಂಂಂಂ... ಡುಂಂಂಂಂ ಎನ್ನತೊಡಗಿದ್ದ!
***
ಸಂಗೀತ ಕಲಾವಿದರ ಮದುವೆ ಸಮಾರಂಭ, ಇತರೆ ಕಛೇರಿಗಳಲ್ಲಿ ಹಾಡಲು ಶುರುವಾಡಿದರೆ ಮಧ್ಯ ಮಧ್ಯ ಸ್ನೇಹಿತರ ಹೆಸರು ಸೇರಿಸಿ, ಕಲಸುಮೇಲೋಗರ ಮಾಡುತ್ತಿದ್ದ. ಹಾಗಂತ ರಾಗ, ತಾಳ, ಲಯ ತಪ್ಪುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹೊಂದುಕೊಳ್ಳುವಂತೆ ಬಳಸುತ್ತಿದ್ದ. ಪಕ್ಕ ವಾದ್ಯ ನುಡಿಸಲು ಕುಳಿತವರನ್ನು ಹಾಡುವ ಮಧ್ಯೆ ಮಾತನಾಡಿಸುತ್ತಾ ಮತ್ತೆ ಹಾಡಿನತ್ತ ಮರಳುತ್ತಿದ್ದ. ಇಷ್ಟೆಲ್ಲಾ ತರಲೆ, ತಂಟೆ ಮಾಡಿದರೂ ಕೊನೆಯಲ್ಲಿ ಜನ ಸಿಳ್ಳೆ ಹಾಕುತ್ತಿದ್ದರು. ಎರಡೂ ಕೈ ಜೋಡಿಸಿ ರೊಟ್ಟಿ ತಟ್ಟುತ್ತಿದ್ದರು.
-ಹೀಗೆ ಮನೋಹರ್ ರಾಜು ಜತೆ ಕಳೆದ ಕ್ಷಣಗಳನ್ನು ತಮ್ಮ ನೆನಪಿನಂಗಳದಲ್ಲಿ ಹರವಿಟ್ಟು, ಕಣ್ಣು ಮಿಟುಕಿಸುತ್ತಾರೆ. ರಾಜು ಕಂಡ ಕನಸು ಶಾಶ್ವತ, ಆತ ಹಾಕಿದ ಕಂಠ ಶಾಶ್ವತ ಎಂದು ಅನಿಸಿಕೆಗೆ ಪೂರ್ಣವಿರಾಮ ಇಡುತ್ತಾರೆ...
ಅನಂತ ನಮನ:
ರಾಜು ಬದುಕಿದ್ದಾಗ ತನ್ನ ಇಡೀ ಬದುಕನ್ನು ಮರುಭೂಮಿಯ ರಣ ರಣ ಬಿಸಿಲಲ್ಲಿ ಕಳೆದ. ಆದರೂ ಆಗಾಗ ಓಯಸಿಸ್‌ನ ಚಿಲುಮೆ ಬಂದು ಬಾಯಾರಿಕೆ ತಣಿಸುತ್ತಿತ್ತು. ಆದರೆ ಅಲ್ಲಿಯೇ ಇದ್ದು ಸ್ವರ್ಗ ಕಾಣಲು ರಾಜು ತಯಾರಿರಲಿಲ್ಲ. ನಡೆ ಮುಂದೆ ನಡೆ ಮುಂದೆ ಎನ್ನುತ್ತಿತ್ತು ಅನಂತಸ್ವಾಮಿ ಪುತ್ರನ ಅಂತರಾತ್ಮ. ಆದರೆ ಆತ ಹೆಸರಿನ ಹಿಂದೆ ಹೋಗಲಿಲ್ಲ. ಬಾಟಲಿಯ ಸಂಗ ಬಿಡಲಿಲ್ಲ. ಅದು ದುರಂತವೇ ಸರಿ. ಅದು ಕಲಾಸೇವೆ ಮಾಡಲು ಮುಂದಾದ ಹೆಚ್ಚಿನವರ ಸಹಪಾಠಿಯಾಗಿ ಜತೆ ಜತೆ ಹೆಜ್ಜೆ ಹಾಕಲು ಶುರುಮಾಡುತ್ತದೆ. ಅದರಿಂದ ಅನಕೃ, ಕಾಳಿಂಗರಾವ್, ಯೋಗಾನರಸಿಂಹಮೂರ್ತಿ, ಖಳನಟ ದಿನೇಶ್... ಯಾರೊಬ್ಬರೂ ಹೊರತಲ್ಲ. ಈಗ ರಾಜು ಸರದಿ. ಅದೇ ಪರಿಧಿಯಲ್ಲಿ ಆತನ ಜತೆ ಒಡನಾಡಿಯಾಗಿದ್ದ ಕೆಲ ಆತ್ಮೀಯರು ತಮ್ಮ ಒಡಲಾಳದ ನೋವು, ಅವನ ಜತೆ ಕಳೆದ ಕ್ಷಣಗಳನ್ನು ಈ ಮೂಲಕ ಹಂಚಿಕೊಂಡಿದ್ದಾರೆ.

ಪೂರ್ಣ ವಿರಾಮ / ಕಲಗಾರು

ಗೋಲ್ಡನ್ ಸ್ಟಾರ್ ಗಣೇಶ್

ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತ ಕ್ಷಣ ಏನನ್ನಿಸಿತು?ಹೀಗಂತ ಕೇಳಿದಾಗ ಗಣೇಶ್ ಕಣ್ಣಲ್ಲಿ ಕಂಡದ್ದು ರಕ್ತ ! ವಿಷಯ ತಿಳಿಯಲು ಓದಿ...


ಅದು ಯಲಹಂಕದ ಒಂದುರೆಸಾರ್ಟ್. ಬಿ. ಸುರೇಶ್ ಡೈರೆಕ್ಟರ್ ಟೊಪ್ಪಿಯಲ್ಲಿದ್ದರು. ಆಶೋಕ್ ಕಶ್ಯಪ್ ಕ್ಯಾಮೆರಾಮನ್. ಸಂಜೆ ಹೊತ್ತಾದ್ದರಿಂದ ಊರ ತುಂಬಾ ಬೀದಿ ದೀಪಗಳು ದಾರಿಗೆ ಬೆಳಕು ಚೆಲ್ಲತೊಡಗಿದ್ದವು. ನಟ ಅಲಂಕಾರ್ ನಾಯಕನ ಗೆಟಪ್‌ನಲ್ಲಿ ಅಲಂಕಾರಭೂಷಿತರಾಗಿದ್ದರು. ನಟಿ ಪ್ರೇಮಾ ಕೂಡ ಇದ್ದರು. ಸರಿ, ಬಿ.ಸು. ತುಸು ಜೋರಾಗಿಯೇ ಓಕೆ, ಕ್ಯಾಮೆರಾ, ಆಕ್ಷನ್... ಎಂದರು. ಎದುರಿಗೆ ನಿಂತಿದ್ದ ಆ ಹುಡುಗ-ಸಾರ್ ನೋಡ್ತಾ ಇರಿ, ಒಂದೇ ಟೇಕ್‌ನಲ್ಲಿ ಓಕೆ ಎನ್ನುವಂತೆ ಮಾಡುತ್ತೇನೆ. ನೋಡ್ತಾ ಇರಿ... ಎಂದ.
ಸರೀನಪ್ಪಾ ಅದೇನ್ ಮಾಡ್ತೀಯೊ ಮಾಡು... ಎಂದು ಮೂಗು ಸವರಿಕೊಂಡರು ಸುರೇಶ್.
ರೀಲು ...ಗೊರ ಗೊರ ಗೊರ ಗೊರ...
ಕಶ್ಯಪ್ ಕ್ಯಾಮೆರಾ ಕಣ್ಣಲ್ಲಿ ಆ ಹುಡುಗನನ್ನೇ ನೋಡುತ್ತಿದ್ದರು... ಆತ ಒಂದೇ ಉಸಿರಲ್ಲಿ ಹೀರೊ ಮುಖದತ್ತ ಕೈ ತೋರಿಸಿ... ‘ಏನ್ ಮರೀ... ನಿನ್ ಹಕ್ಕೀಗೇ ಲಗೇಜ್ ಹಾಕಿ, ಟಿಕೆಟ್ ಇಲ್ದೇನೇ ಬಸ್ಸಲ್ಲಿ ಕಳಿಸ್ತಿದೀವಿ...’
ಅವನ ಮಾತಿಗೆ ಸಿಟ್ಟಿಗೆದ್ದ ನಾಯಕ ಒಮ್ಮೆ ಬಲಗೈ ಎತ್ತಿ ಝಾಡಿಸಲು ಮುಂದಾದ. ಆದರೆ ಆ ಕೈ ಸುಮ್ಮನಿರಲಿಲ್ಲ. ಸೀದಾ ಆ ಹುಡುಗನ ಮುಖಕ್ಕೇ ಬಂದು ಬಡಿಯಿತು. ಸುರೇಶ್ ಕಟ್ ಕಟ್ ಕಟ್ ಎಂದರು. ಅಷ್ಟೊತ್ತಿಗೆ ಆ ವಿಲನ್ ಮೂಗಿನಲ್ಲಿ ಕೆಂಪು ಬಣ್ಣ ಮನೆಮಾಡಿತು. ರಕ್ತದ ವಾಸನೆ ಎಲ್ಲೆಡೆ ಓಕಳಿಸಿತು... ಬಳ ಬಳ ಬಳ ಬಳ ಬಳ ಬಳ...
ಅಶೋಕ ತಮ್ಮ ಸೀಟು ಬಿಟ್ಟು ಎದ್ದು ಬಂದರು. ಕೂಡಲೇ ಐಸ್‌ಗಳನ್ನು ಮೂಗಿನ ಸುತ್ತ ಮೆತ್ತಲಾಯಿತು. ಆ ಬಡಪಾಯಿ ಹುಡುಗ ಮಾತ್ರ ಅಷ್ಟೆಲ್ಲಾ ಆದರೂ ನಿರ್ದೇಶಕರ ಕಡೆಗೇ ನೋಡುತ್ತಿದ್ದ.
ಸುರೇಶ್ ಕಣ್ಣಲ್ಲೇ ಸನ್ನೆ ಮಾಡಿದರು. ಹೆಬ್ಬೆಟ್ಟನ್ನು ಮೇಲಕ್ಕೆತ್ತಿ ಓಕೆ ಎಂದರು. ಅವನಿಗೆ ಆ ನೋವಿನಲ್ಲೂ ಸಂತಸದ ಪರಮಾವಧಿ. ಮೊದಲ ಚಿತ್ರದ ಮೊದಲ ದೃಶ್ಯದಲ್ಲೇ ನಾನು ಸೈ ಎನಿಸಿಕೊಂಡೆ ಎಂಬ ಹೆಮ್ಮೆ ಇನ್ನೊಂದು ಕಡೆ. ಅಂತೂ ಇಂತೂ ಆತನ ಮೂಗಿಗೆ ದೊಡ್ಡ ಪ್ಲ್ಯಾಸ್ಟರ್ ಬಿತ್ತು. ಆದರೂ ಆ ದೃಶ್ಯ ಓಕೆ ಆಗಿತ್ತು...!
ಇದಕ್ಕೆ ಸುರೇಶ್ ಹೇಳಿದರು : ಎಲ್ಲರೂ ಬೆವರು ಸುರಿಸಿ ಸಿನಿಮಾಕ್ಕೆ ಬರ್‍ತಾರೆ. ನೀನು ರಕ್ತ ಸುರಿಸಿ ಬಂದ್ದಿದ್ದೀಯಾ, ಉಳಿತೀಯಾ ಬಿಡು...
***
ಅಂದು ಅಷ್ಟೆಲ್ಲಾ ಒದ್ದಾಟ ಮಾಡಿ, ರಕ್ತದ ಮಡಿಲಲ್ಲಿ ಮಲಗಿದ ಹುಡುಗ ಯಾರು ಗೊತ್ತೆ? ಇಂದಿನ ಗೋಲ್ಡನ್ ಸ್ಟಾರ್ ಗಣೇಶ್! ಇದೇ ಗಣೇಶ್ ಅಂದು ಬಾಲ್ಯದ ಸಹಪಾಠಿ ಆರೂರು ಜಗದೀಶ್ ನಿರ್ದೇಶನದ ಸಾಧನೆ ಧಾರಾವಾಹಿಯಲ್ಲಿ
ನಟಿಸುತ್ತಿದ್ದರು. ಜಗದೀಶ್ ಸ್ನೇಹಿತ ಬಿ. ಸುರೇಶ್. ಸುರೇಶ್ ಠಪೋರಿ ಸಿನಿಮಾದ ಒಬ್ಬ ವಿಲನ್ ಪಾತ್ರದ ಹುಡುಕಾಟದಲ್ಲಿ ತೊಡಗಿದ್ದರು. ಆಗ ಗಣೇಶನನ್ನು ಜಗದೀಶ್ ಪರಿಚಯಿಸಿ, ಚೆನ್ನಾಗಿ ನಟಿಸುತ್ತಾನೆ. ಒಂದು ಛಾನ್ಸ್ ಕೊಟ್ಟು ನೋಡಿ. ಹಿಡಿಸಿದರೆ ಮುಂದುವರಿಸಿ... ಎಂದು ಶಿಫಾರಸ್ಸು ಮಾಡಿದ್ದರು.
ಆ ದಿನಗಳನ್ನು ಗಣೇಶ್ ಇಂದಿಗೂ ಮರೆತಿಲ್ಲ. ಆ ವಿಷಯ ನೆನಪಾದಾಗ ಈಗಲೂ ಮೂಗನ್ನು ಸವರಿಕೊಂಡು ಫ್ಯಾಷ್‌ಬ್ಯಾಕ್‌ಗೆ ತೆರಳುತ್ತಾರೆ. ರಕ್ತ ಸುರಿಸಿಕೊಂಡ ಗಣೇಶ್ ಇಂದು ಮನೆ ಮಾತಾಗಿದ್ದಾರೆ. ರಕ್ತ ಸುರಿವಂತೆ ಹೊಡೆದ ಹಂಸಲೇಖ ಪುತ್ರ ಅಲಂಕಾರ್ ಮನೆಯಲ್ಲಿ ಅಲಂಕಾರವಾಗಿದ್ದಾರೆ. ಇದೇ ಬಣ್ಣದ ಲೋಕ !


~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ನವರಸ ನಾಯಕ ಜಗ್ಗೇಶ್
ಪೊಲೀಸ್: ಅಯ್ಯೊ ನಿಂಗೇನ್ ಬಂತು ದೊಡ್ಡ್ ರೋಗ...
ಈತ:(ಮುಖ ಮುರಿಯುತಾ) ಅದು ಹಂಗಲ್ಲ ಸ್ವಾಮೀ... ಸುಮ್ನೇ ನನ್ ಪಾಡೀಗ್ ನಾನು ಈಜು ಹೊಡೀತಾ ಇದ್ನಾ...
ಪೊಲೀಸ್: ಮುಚ್ಚ್ ಬಾಯಿ, ದೂಸ್ರಾ ಮಾತಾಡ್‌ಬೇಡ... ಏನಾದ್ರೂ ಹೆಚ್ಚು ಕಡ್ಮೆ ಆಗಿದ್ರೆ ಏನ್ ಗತಿ...
ಈತ: ಅಯ್ಯಯ್ಯೊ ಬಿಟ್‌ಬಿಡಿ ಬುದ್ಧಿ... ಏನೋ ತಪ್ಪಾಗಿದೆ...
-ಹೀಗೆ ಒಂದೇ ಸಮನೆ ತಾರಕ ಸ್ವರದಲ್ಲಿ ಪೊಲೀಸ್ ಬಾಯಿಂದ ಆರತಿ, ಮಂಗಳಾರತಿ, ಮಹಾ ಮಂಗಳಾರತಿ ಮಾಡಿಸಿಕೊಂಡ ಭೂಪ ಯಾರು ಗೊತ್ತೆ? ಇಂದಿನ ನವರಸ ನಾಯಕ ಜಗ್ಗೇಶ್!
ಆಗಷ್ಟೇ ಕಾಲೇಜ್ ಮುಗಿಸಿ, ಬಣ್ಣದ ಲೋಕಕ್ಕೆ ಅಡಿಯಿಡಲು ಅಣಿಯಾಗುತ್ತಿದ್ದ ಜಗ್ಗೇಶ್ ಅಲಿಯಾಸ್ ಜಗದೀಶ್ ಉರೂಫ್ ಜಡೆ ಮಾಯಸಂದ್ರದ ಈಶ್ವರ್. ಹೀಗೆ ಹಿಗ್ಗಾ ಮಗ್ಗಾ ಬೈಸಿಕೊಳ್ಳಲು ಕಾರಣ ಏನು ಗೊತ್ತಾ...
ಅದು ಕನ್ನಡತಿ ಮಾನವತಿ ಸಿನಿಮಾ ಶೂಟಿಂಗು. ಆಗಿನ ಚಾಕಲೇಟ್ ತುಂಡು ರಾಮಕೃಷ್ಣ ನಾಯಕ. ಗುಬ್ಬಿ ಚನ್ನ ಬಸವೇಶ್ವರ ದೇವಸ್ಥಾನ. ಹಾಡೊಂದಕ್ಕೆ ಎಲ್ಲ ಕಾಲು ಕೈ ಆಡಿಸುತ್ತಿದ್ದರು. ಕೊಟ್ಟೂರ್‍ಕರ್ ನಿರ್ದೇಶಕ. ಆಗಷ್ಟೇ ಕಪ್ಪುಕೊಳ ಚಿತ್ರದಿಂದ ಹೆಸರು ಮಾಡಿದ್ದರು. ಅದರಲ್ಲಿ ಈ ಈಶ್ವರ್‌ಗೂ ಒಂದು ಛಾನ್ಸ್ ಕೊಟ್ಟಿದ್ದರು. ಅವರ ಮಗ ಗುಬೇಷನ್ ಶೇಶಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದ. ಇಬ್ಬರೂ ಚೆಡ್ಡಿ ದೋಸ್ತ್‌ಗಳು. ನಾಟಕ, ಮಾಡರ್ನ್ ಹರಿಕತೆ, ಮಿಮಿಕ್ರಿ ಮಾಡಿ, ಕಾಲೇಜಿಗೇ ಫುಲ್ ಫೇಮಸ್ ಆಗಿದ್ದ ಈಶ್ವರ್ ಮೊದಲೇ ‘ಮಾತಿನ ಮಲ್ಲ’. ಗೆಣೆಕಾರನಿಗೆ ಪೂಸಿ ಹೊಡೆದು ಅವಕಾಶ ಪಡೆದಿದ್ದ...
ನಟ ಜಿ.ಕೆ. ಶಂಕರ್ ಹಿಂದೆ ಈಶ್ವರ್ ಫೋಸ್ ಕೊಡುತ್ತಾ ನಿಂತಿದ್ದ. ಜತೆಗೆ ಸಹ ನಟಿ ಸಿಹಿಕಹಿ ಗೀತಾ. ಹಿಂದೆ ಮುಂದೆ ಲಕಲಕ ಎನ್ನುವ ಲೈಟ್. ಹಿನ್ನೆಲೆಯಲ್ಲಿ ಆ ಹಾಡು... ಬಾಸಿಂಗ ಬಲವೇ ಬಲವಯ್ಯಾ... ನೃತ್ಯ ನಿರ್ದೇಶಕ ಸುಬ್ರಹ್ಮಣ್ಯ ಎಲ್ಲರನ್ನೂ ಒಮ್ಮೆ ಗದರಿದರು, ಮತ್ತೆ ತಲೆ ಕೆದರಿದರು...
ನಿರ್ದೇಶಕರು ಕೈ ಎತ್ತಿ ಆಕ್ಷನ್ ಎಂದರು. ಈಶ್ವರ್ ಹರುಕು ಮುರುಕು ಹೆಜ್ಜೆ ಹಾಕಿದ್ದೋ ಹಾಕಿದ್ದು. ಮೊದಲೇ ಗುಂಪಲ್ಲಿ ಗೋವಿಂದಾ ಗೋವಿಂದ... ಈತನ ಆಟ ನೋಡಿ ಅಕ್ಕ ಪಕ್ಕ ಇದ್ದವರು ಇದ್ದವರು ಕಿಲ ಕಿಲ ಕಿಲ ಕಿಲ...
ತಗಳಪ್ಪ... ಬರೋಬ್ಬರಿ ಎರಡು ತಾಸು ಕುಣಿದು, ದಣಿದು ಬೆವರಿನ ಹನಿಯಾಗಿಬಿಟ್ಟ ಈಶ್ವರ್. ಪಕ್ಕದಲ್ಲಿದ್ದ ಇನ್ನೊಬ್ಬ ತರಲೆ: ಇಲ್ಲೇ ಪಕ್ಕದಲ್ ಒಂದ್ ಡೋ...ಡ್ಡ್ ಈಜು ಕೊಳ ಇದೆಯಂತೆ. ೧೫ ಅಡಿ ಎತ್ತರದಿಂದ ಧುಮುಕಬಹುದಂತೆ. ನಡೀಲಾ ಓಗನಾ... ಎಂದ.
ಈ ಪಾರ್ಟಿ ಸುಮ್ಮನಿರಬೇಕಲ್ಲ... ಮಧ್ಯಾಹ್ನ ಊಟದ ಬ್ರೇಕ್ ಐತೆ. ಶೂಟಿಂಗು ಇನ್ನೂ ಅರ್ಧ ಗಂಟೆ ತಡ ಆಯ್ತದೆ. ನಡೀಲಾ ಜಿಗರಿ... ಎಂದು ಕಣ್ಣಲ್ಲೇ ಸಿಗ್ನಲ್ ಕೊಟ್ಟ. ಇಬ್ಬರೂ ಕಾಲುಕಿತ್ತರು.
ಮುಂದಿನ ದೃಶ್ಯ:ಕಲ್ಯಾಣಿ ಈಜುಕೊಳ...
***
ದಡಾರ್ರ್ರ್....
ಮೇಲಿಂದ ಜಿಗಿದೇ ಬಿಟ್ಟ ಜಗ್ಗಿ. ಕೆಳಗೆ ಬಿದ್ದವನೇ... ಆಹಾ... ಓಹೊ... ಐತ ಲಕಡಿ ಪಕಡಿ ಜುಮ್ಮಾ ಎನ್ನತೊಡಗಿದ. ಕೈ ಕಾಲಿನಿಂದ ನೀರಿಗೆ ಛಡಿ ಏಟು ಕೊಡತೊಡಗಿದ... ಬಾಯಲ್ಲಿ: ಯಾರೇ ಕೂಗಾಡಲಿ... ಅರೆ ಹೊಯ್... ಅರೆ ಹೊಯ್...
ಅಲ್ಲೇ ಆಗಿದ್ದು ಯಡವಟ್ಟು... ಮೇಲಿಂದ ಮತ್ತೊಬ್ಬ ದಸಕ್ ಅಂತ ನೀರಿಗೆ ಜಿಗಿದ. ಆ ದೇಹ ಕೆಳಗೆ ಬರುವ ಹೊತ್ತಿಗೆ ಈ ದೇಹ ಸರಿಯಾಗಿ ಅಡ್ಡ ಬಂತು!
ಅಂದಮೇಲೆ ಕೇಳಬೇಕೆ? ಆತ ಬಿದ್ದ ರಭಸಕ್ಕೆ, ಈತ ಹತ್ತು ಅಡಿ ಆಳಕ್ಕೆ ಪಾರ್ಸಲ್ ಆಗಿಬಿಟ್ಟ. ಈಗ ಡಬ ಡಬ ಎನ್ನುವ ಸದ್ದು ಅಡಗಿತು. ಬದಲಾಗಿ ಬುಳುಕ್ ಬುಳುಕ್ ಬುಳಕ್ ಬುಳಕ್...
ಉಸಿರು ಗುಳ್ಳೆಯಾಗಿ ಹೊರಹೊಮ್ಮಿತು. ಆತ ಇನ್ನೇನು ಕ್ಷಣಾರ್ಧ ಕಳೆದಿದ್ದರೆ ಆತ್ಮ ಪರಮಾತ್ಮನ ಪಾದ ಸೇರಿ, ‘ನೀರ ಮೇಲನ ಗುಳ್ಳೆ’ಯಾಗುತ್ತಿದ್ದ. ಅಲ್ಲಿ ಇದ್ದ ಕೆಲವರು ನೀರಿಗೆ ಹಾರಿದರು. ಆತನನ್ನು ಎತ್ತಿ ಮೇಲೆ ತಂದರು...
ಹೊಟ್ಟೆ ೨೫ ಕೆ.ಜಿ. ಅಕ್ಕಿ ಮೂಟೆಯಾಗಿತ್ತು. ಬಾಯಿ ನೀರು ಸರಬರಾಜು ಮಂಡಳಿಯಾಗಿತ್ತು. ಮಾತು ಮೌನದ ಜತೆ ಮುನಿಸಿಕೊಂಡಿತ್ತು. ನಿರ್ದೇಶಕ ಕೊಟ್ಟೂರ್‍ಕರ್ ತಲೆ ಕಾದ ಕಬ್ಣವಾಗಿತ್ತು. ಇಬ್ಬಿಬ್ಬರು ಸೇರಿ ಹೊಟ್ಟೆ ಹಿಡಿದು ಅಮಕಿದರು. ಆದರೂ ನೋ ಕಮಕ್ ಕಿಮಕ್. ಮತ್ತೆ ಬಳಕ್ ಬಳಕ್...
***
ಹತ್ತು ನಿಮಿಷ ಕಳೆಯಿತು. ಈಶ್ವರ್ ಹದಿನೈದು ನಿಮಿಷದ ನಂತರ ತನ್ನ ಎರಡನೇ ಕಣ್ಣು ಬಿಟ್ಟ. ಮೊದಲನೇ ಕಣ್ಣು ಬಿಡಲು ಇನ್ನೂ ಹತ್ತು ನಿಮಿಷ ಬೇಕಾಯ್ತು. ಆದರೆ ನೃತ್ಯ ನಿರ್ದೇಶಕ ಸುಬ್ರಹ್ಮಣ್ಯಂ ತನ್ನ ಮೂರನೇ ಕಣ್ಣಿನಲ್ಲಿ ಕೆಂಡ ಕಾರುತ್ತಿದ್ದರು!
ಅಲ್ಲಿಂದ ಶುರುವಾಯಿತು ಪೊಲೀಸ್ ಪೇದೆಯ ಬೈಗಳಾಯಣ. ಈಶ್ವರ್ ಇಷ್ಟಾದರೂ ಐಸ್ ಥರ ಇದ್ದ. ಅರ್ಧ ಗಂಟೆಯಲ್ಲೇ ಸುಧಾರಿಸಿಕೊಂಡು, ನಾನ್ ರೆಡಿ ಸಾರ್... ಎಂದು ನಿರ್ದೇಶಕರಿಗೆ ಗಾಳಿ ಹಾಕಲು ಹೊರಟ... ಅಷ್ಟೊತ್ತಿಗೆ ಪೊಲೀಸಪ್ಪನ ಬಾಯಿಗೂ ಬೀಗ ಬಿತ್ತು...
-ಈ ಎಲ್ಲಾ ವಿಷಯ ಹೇಳಿಕೊಂಡು ಜಗ್ಗೇಶ್ ಈಗಲೂ ಥ್ರಿಲ್ಲೋ ಥ್ರಿಲ್ಲು. ಅಂದು ಉಸಿರು ಉಳಿದಿದ್ದೇ ಒಂದು ಪವಾಡ. ಮೊದಲ ಚಿತ್ರದಲ್ಲಿ ಆದ ಅನುಭವ ಇಂದಿಗೂ ಕಣ್ಣಿಗೆ ಕಟ್ಟಿದ ಹಾಗಿದೆ ಎಂದು ಆಕಾಶ ನೋಡುತ್ತಾರೆ... ಹಾರುತಿರುವ ಕಾಗೆಗೆ ಟಾಟಾ ಬರ್ಲಾ ಎನ್ನುತ್ತಾರೆ!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ವಾಕಿಂಗ್ ಸ್ಟಾರ್ ಅನಂತನಾಗ್

ಹ್ಹಹ್ಹಹ್ಹ... ಹ್ಹಹ್ಹಹ್ಹ... ಹ್ಹಹ್ಹಹ್ಹ...ಹ್ಹಹ್ಹಹ್ಹ...ಹ್ಹಹ್ಹಹ್ಹ...
***
ಕಟ್ ಕಟ್ ಕಟ್...
ನಿರ್ದೇಶಕ ನಂಜರಾಜ ಅರಸ್ ಪಿತ್ತ ನೆತ್ತಿಗೇರಿತು. ಕಾರಣ ಅದು ೧೯ನೇ ಟೇಕ್. ಎಷ್ಟು ಹೇಳಿದರೂ ಆತ ಹಾಗೇ ನಗುತ್ತಿದ್ದ. ಹಂಗಲ್ಲ ಹಿಂಗೆ, ಹಿಂಗಲ್ಲ ಹಂಗೆ, ಹಿಂಗಾದ್ರೆ ಹೆಂಗೆ? ಆದರೆ ಈತ ಮಾತ್ರ ತನಗೆ ಹೆಂಗ್ ಬೇಕೋ ಹಂಗೆ!
ರೀ ಸ್ವಾಮಿ... ನೀವು ನಗುವಾಗ ಎಡ ತುಟಿ ಮಾತ್ರ ಮೇಲೆ ಸೇರಿಕೊಳ್ಳುತ್ತೆ, ಹಾಗಾಗಬಾರದು. ನಗು ನಿಚ್ಚಳವಾಗಿರಬೇಕು. ಎಷ್ಟು ಸಾರಿ ಹೇಳಬೇಕು, ಇದು ಕೊನೇ ಅವಕಾಶ. ಮತ್ತೆ ಮತ್ತೆ ಮಾಡಿದ್ದನ್ನೇ ಮಾಡಬೇಡ...
ಸಾರಿ ಸಾರ್... ಒಂಥರಾ ಭಯ. ಈ ಕ್ಯಾಮೆರಾ ಮುಖದ ಹತ್ತಿರ ಬಂದ ತಕ್ಷಣ ಎದೆ ಢವಢವ, ಐಸ್ ಇಟ್ಟ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ... (ಕಣ್ಣು ಇಷ್ಟಗಲ, ಮುಖ ಮಾರಗಲ)
ಈಗ ಹಳೇ ಕತೆ ಬೇಡ. ಇಲ್ಲಿ ಏನು, ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಗಮನ ಕೊಡಿ... (ಈಗ ನಂಜು ಕಾರುವ ಸಮಯ)
ಓಕೆ ಸಾರ್... ನಾನ್ ರೆಡಿ...
ಸರಿ; ಕ್ಯಾಮೆರಾ, ಆಕ್ಷನ್...
ಹ್ಹ ಹ್ಹ ಹ್ಹ...
ಕಟ್ ಕಟ್ ಕಟ್...
***
ಹೀಗೆ ಹ್ಹಿಹ್ಹಿಹ್ಹಿ ಎಂದು ಮೊದಲನೇ ಶಾಟ್‌ನಲ್ಲಿ ನಕ್ಕಿದ್ದು, ಒಂದೇ ಒಂದು ನಗುವಿಗಾಗಿ ಬರೋಬ್ಬರಿ ೨೦ ಟೇಕ್ ದಂಡ ಮಾಡಿದ್ದು ಯಾರಪ್ಪಾ ಅಂದ್ರೆ... ಕಣ್ಣಲ್ಲೇ ಕೊಲ್ಲುವ ಶಕ್ತಿ, ಬರೀ ಭಾವ ಲಹರಿಯಿಂದ ಪ್ರೇಕ್ಷಕರನ್ನು ನುಂಗಿ, ನೀರು ಕುಡಿಯುವ ತಾಕತ್ತು, ಅರಳು ಹುರಿದಂಥ ಮಾತುಗಾರಿಕೆ, ಮಾರುದ್ದ ಸಂಭಾಷಣೆಯನ್ನು ಮರು ನಿಮಿಷದಲ್ಲಿ ಟಕಟಕಟಕ ಒಗಾಯಿಸಬಲ್ಲ ಟಾಕಿಂಗ್, ವಾಕಿಂಗ್, ರಾಕಿಂಗ್ ಸ್ಟಾರ್; ಪೋಷಕ ಪಾತ್ರದಿಂದಲೇ ಸಿನಿಮಾ ಗೆಲ್ಲಿಸುವ ಎದೆಗಾರಿಕೆ, ಸಾಮರ್ಥ್ಯ ಇರುವ ಕನ್ನಡದ ಏಕಮಾದ್ವಿತೀಯ, ಅಪರೂಪದ ನಟ ಅನಂತನಾಗ್!
ಆದರೆ ಅಂದು ಮೈಸೂರಿನ ಮನೆಯೊಂದರಲ್ಲಿ ಮೊದಲ ದೃಶ್ಯ ಓಕೆ ಮಾಡಲು ಅವರು ಪಟ್ಟ ಪಾಡು ಎಂದೂ ಮರೆಯದ ಹಾಡು. ಅನಂತ್ ಅಂತರಾತ್ಮದಲ್ಲಿ ಆ ನೆನಪು ಇಂದಿಗೂ ಹಸಿರಾಗಿದೆ. ಉಸಿರಿನ ಕಣದಲ್ಲಿ ಬೆರೆತು, ಬೆಸೆದುಬಿಟ್ಟಿದೆ...
***
ಅದು ಸಂಕಲ್ಪ ಚಿತ್ರದ ಶೂಟಿಂಗ್(೧೯೭೨) ಅನಂತ್ ಮಾನಸಿಕ ರೋಗ ತಜ್ಞ. ‘ನನ್ನ ಕಣ್ಣಲ್ಲೇ ಕಣ್ಣಿಟ್ಟು ನೋಡು...ಈಗ ನೀನು ನಾನು ಹೇಳಿದ ಹಾಗೇ ಕೇಳುತ್ತೀಯಾ... ಏನು ನಿನ್ನ ಸಮಸ್ಯೆ’ ಎಂದು ವಶೀಕರಣ ಮಾಡಿ, ಅಂತಃಕರಣ ಕೆದಕುವ ಡಾಕ್ಟರ್ ಪಾತ್ರ.
ಕನ್ನಡ ಚಿತ್ರರಂಗದ ಭೀಷ್ಮ ಜಿ.ವಿ.ಅಯ್ಯರ್ ಒಟ್ಟೂ ಉಸ್ತುವಾರಿ ಸಚಿವರಾಗಿದ್ದರು. ನಿರ್ದೇಶನದ ಹೊಣೆಯನ್ನು ಅರಸ್ ಹೊತ್ತಿದ್ದರು. ಛಾಯಾಗ್ರಾಹಕ ಎಸ್.ರಾಮಚಂದ್ರ. ಅನಂತ್ ಅದಾಗಲೇ ರಂಗಭೂಮಿ ರಥಕ್ಕೆ ಐದು ವರ್ಷ ಹೆಗಲು ಕೊಟ್ಟಿದ್ದರು. ವೈ.ಎನ್. ಕೃಷ್ಣಮೂರ್ತಿಯವರ ಸಂಪರ್ಕದಿಂದ ಸಂಕಲ್ಪಕ್ಕೆ ಆಯ್ಕೆಯಾಗಿದ್ದರು.
ಮೊದಲ ಶಾಟ್‌ನಲ್ಲಿ ಜೋರಾಗಿ ನಗಬೇಕಮ್ಮ ನಗಬೇಕು ಎಂದು ನಿರ್ದೇಶಕರು ನಿಗದಿ ಮಾಡಿದ್ದರು. ಕ್ಯಾಮೆರಾ ಮುಖದ ಹತ್ತಿರ ಬಂದರೆ ಸಾಕು; ಅನಂತ್ ಬೆವರಿನ ಮಳೆಯಲ್ಲಿ ಹನಿ ಹನಿ. ನಡುರಾತ್ರಿ ನೀರಿನ ಮಧ್ಯೆ ನಿಂತ ನಡುಕ. ಹಾ...ಗೇ ಕ್ಯಾಮೆರಾ ಹಿಂದೆ ಹಿಂದೆ ಸರಿದರೆ ಮತ್ತೆ ಮಾಮೂಲಿ ಸ್ಥಿತಿ. ಅದು ಇನ್ನು ಹತ್ತಿರ ಹತ್ತಿರ ಬಂದಂತೆ ಆತುರ, ಕಾತರ, ಹೇಳಲೊಂಥರಾಥರಾ...
ಇಷ್ಟಾದರೂ ಛಾಯಾಗ್ರಾಹಕ ರಾಮಚಂದ್ರ ಧೈರ್ಯ ತುಂಬಿ, ಹುರಿದುಂಬಿಸುತ್ತಿದ್ದರು. ಆಗಾಗ ಹೆಬ್ಬೆಟ್ಟು ಎತ್ತಿ-ಈ ಬಾರಿ ಓಕೆ ಆಗುತ್ತೆ, ಹೆದರಬೇಡಿ, ನಾನಿದ್ದೀನಿ... ಎಂದು ಭರವಸೆಯ ಟಾನಿಕ್ ಕುಡಿಸಿ, ಸಂತೈಸುತ್ತಿದ್ದರು.
ಅಂತೂ ಇಂತೂ ಟೇಕ್ ಓಕೆ ಆಯಿತು. ಆದರೆ ಅಷ್ಟೊತ್ತಿಗೆ ೨೦:೨೦ ಕ್ರಿಕೆಟ್ ಮ್ಯಾಚ್ ಆಡಿದಷ್ಟು ಸಮಯ ವ್ಯರ್ಥವಾಗಿತ್ತು!
***
ಅನಂತ್ ಈ ಎಲ್ಲಾ ವಿಷಯ ನೆನೆನೆನೆದು ಮತ್ತೆ ಮಂದ ನಗು ಬೀರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನಡೆದು ಬಂದ ಹಾದಿಗೆ ಕನ್ನಡಿ ಹಿಡಿಯುತ್ತಾರೆ...

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ದುನಿಯಾ ರಶ್ಮಿ



ಅದು ಚಿತ್ರದುರ್ಗದ ಕೋಟೆ. ರಣ ರಣ ಬಿಸಿಲು. ಉರಿ ತಾಪಾಸುರ ಇಳೆಗೆ ಮಿಳ ಮಿಳ ಮುತ್ತಿಟ್ಟು, ಆನಂದ ಪಡುತ್ತಿದ್ದ. ಒಟ್ಟಾರೆ ಅದು ಉಸಿರುಗಟ್ಟುವ ವಾತಾವರಣ. ಕೋಟೆಯ ಒಳ ಆವರಣ ಬಣ್ಣದ ಓಕುಳಿ. ಆ ಹದಿನಾರರ ಹುಡುಗಿಗೆ ಒಂಥರಾ ಟೆಂಕ್ಷನ್. ವಿಜಯ ರಾಘವೇಂದ್ರ, ರಾಜೇಂದ್ರಬಾಬು ಪುತ್ರಿ ಉಮಾ, ಎದುರಿಗೆ ನಿಂತವರನ್ನು ನುಂಗಿ, ನೀರು ಕುಡಿಯುವ ಅಂಬರೀಷ್- ಸುಮಲತಾ, ಪಾತ್ರದ ಪರಕಾಯ ಪ್ರವೇಶ ಮಾಡುವ ಅನಂತನಾಗ್... ಒಬ್ಬರಿಗಿಂತ ಒಬ್ಬರು ಭಲೇ ವೀರರು...
ಈ ಹೂ ಹುಡುಗಿ ಒಂದು ಮೂಲೆಯಲ್ಲಿ ನಿಂತು ನಿಷ್ಟಕ್ಷಪಾತವಾಗಿ ಎಲ್ಲರನ್ನೂ ನೋಡುತ್ತಿದ್ದಳು. ಮೊದಲೇ ಕ್ಯಾಮೆರಾ ಎಂದರೆ ಭಯ ಡಾಟ್ ಕಾಮ್. ಮೈ ನಡುಕ. ಆದಷ್ಟು ನಿರ್ದೇಶಕ ನಾಗಾಭರಣ ಕಣ್ಣ ನೋಟಕ್ಕೆ ಸಿಗದಂತೆ ನಿಗಾ ವಹಿಸುತ್ತಿದ್ದಳು. ಅವಳ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯ ಹೆಸರು ರೇಷ್ಮಾ. ಸಿನಿಮಾ ಜಗತ್ತು ಆಕೆಯನ್ನು ಗಾಂಧಿನಗರಕ್ಕೆ ಕರೆಸಿಕೊಂಡಿತ್ತು. ಬಣ್ಣದ ‘ದುನಿಯಾ’ಕ್ಕೆ ಕಾಲಿಟ್ಟ ನಂತರ ರೇಷ್ಮಾ ರಶ್ಮಿ ಆಗಿ ರೂಪಾಂತರಗೊಂಡಳು. ಸ್ನೇಹಿತೆ ತ್ರಿವೇಣಿ ಜತೆ ಶೂಟಿಂಗ್ ನೋಡುವ ಹಂಬಲದಲ್ಲಿ ಅಲ್ಲಿಗೆ ಬಂದ ಆಕೆಯ ಹೆಗಲ ಮೇಲೆ ಆ ಪಾತ್ರ ಬಂದು ಕುಳಿತಿತ್ತು...
ಮತ್ತೆ ಮತ್ತೆ ಸೂರ್ಯದೇವ ತನ್ನ ಬಿಸಿಲಾಸ್ತ್ರ ಬಳಸಿ, ಮಜಾ ತಗಂತಿದ್ದ. ಆಕೆಯದ್ದು ಮುಸ್ಲಿಂ ಹುಡುಗಿಯ ಪಾತ್ರ. ಇಷ್ಟುದ್ದದ ಲಂಗ, ಇಡೀ ತೋಳಿನ ರವಿಕೆ(ಹಸೀನಾ ಚಿತ್ರದಲ್ಲಿ ತಾರಾ ಧರಿಸಿದ ಬಟ್ಟೆಯನ್ನು ನೆನಪಿಸಿಕೊಳ್ಳಿ) ಸುತ್ತಮುತ್ತ ಸುರು ಸುರು ಓಡಾಡುವ ಸಹ ಕಲಾವಿದರು. ನಾಯಕ ವಿಜಯರಾಘವೇಂದ್ರ: ಕಲ್ಲರಳಿ, ಹೂವಾಗಿ, ಹೂವರಳಿ... ಎಂದು ಕಣ್ಣು ಅರಳಿಸುತ್ತಿದ್ದ... ನಾಯಕಿ ಉಮಾ ಅವನ ತಾಳಕ್ಕೆ ತಾನಿತಂದಾನ ಹಾಡುತ್ತಿದ್ದಳು. ನಿರ್ದೇಶಕ ನಾಗಾಭರಣ ರಣ ರಣ ಬಿಸಿಲಿಗೆ ಕನ್ನಡಿ ಹಿಡಿದಿದ್ದರು. ಕೆಲಸಕ್ಕೆ ನಿಂತರೆ ಮುಗೀತು; ಅವರು ಯಾವುದಕ್ಕೂ ರಾಜಿ ಇಲ್ಲ. ಈ ದೃಶ್ಯ ಹಾಗೇ ಬರಬೇಕು, ಬರುತ್ತಿತ್ತು... ಅವರು ಕೆಲಸ ಮಾಡುವ ಸ್ಟೈಲೇ ಹಾಗೆ, ಆ ಮಟ್ಟಿಗೆ ನೋ ಮುಲಾಜು. ಎಲ್ಲರನ್ನೂ ಒಮ್ಮೆ ತೀಕ್ಷ್ಣವಾಗಿ ನೋಡುತ್ತಿದ್ದರು... ಎಲ್ರೂ ರೆಡಿನಾ... ನಾಗ ಮತ್ತೆ ಗುಡುಗಿತು. ಈ ಹುಡುಗಿಗೆ ತಲೆ ಮೇಲೆ ತಣ್ಣೀರು ಸುರಿದ ಅನುಭವ... ಅದೇ ದಿನ ಗ್ರಹಚಾರಕ್ಕೆ ಒಬ್ಬ ಸಹ ನಟಿ ನಿರ್ದೇಶಕರ ಬಾಯಿಗೆ ತುತ್ತಾಗಿದ್ದರು. ಆಕೆ ಹೆಸರು ಅಮೂಲ್ಯಾ (ಈಗ ಆಕೆಯನ್ನು ಹಿಡಿಯುವರಿಲ್ಲ ಬಿಡಿ. ಚೆಲುವಿನ ಚಿತ್ತಾರ ಗೆದ್ದಿದ್ದೇ ತಡ;ಆಕಾಶ ಇಷ್ಟೇ ಯಾಕಿದೆಯೊ ಎಂದು ಚೈತ್ರದ ಚಂದ್ರಮನ ಮೇಲೆ ಕುಳಿತಿದ್ದಾಳೆ!)
ಅದೇ ‘ಅಮ್ಮು’ ಅಂದು ಶೂಟಿಂಗ್ ಸ್ಥಳಕ್ಕೆ ತಡವಾಗಿ, ತಡವರಿಸುತಾ ಬಂದಳು. ಕಾರಣ ಸಿಂಪಲ್. ಆಕೆ ಊರಿಂದ ಊರಿಗೆ ಹಾರಿಬಂದ ದುಂಬಿ. ಅಂದಮೇಲೆ ಕೇಳಬೇಕೇ? ಚಿತ್ರದುರ್ಗದ ಕೋಟೆ ಆಕೆಯನ್ನು ಕಟ್ಟಿಹಾಕಿತ್ತು, ಎದೆಯಲ್ಲಿ ಚೆಲುವಿನ ಚಿತ್ತಾರ ಬರೆದಿತ್ತು. ಎಲ್ಲೆಲ್ಲೂ ಉಲ್ಲಾಸದ ಹೂಮಳೆ...
ನಾಗಾಭರಣ: ಏಕೆ ತಡ?(ನಾಗೇಂದ್ರನ ಅಪರಾವತಾರಿಯಾದರು) ಏನಮ್ಮಾ, ನೀವು ಇಲ್ಲಿಗೆ ಬಂದಿದ್ದು ಸಿನಿಮಾದಲ್ಲಿ ನಟಿಸಲು, ಊರು ಸುತ್ತುವುದಕ್ಕಲ್ಲ. ಇದು ಇನ್ನೊಮ್ಮೆ ರಿಪೀಟ್ ಆದರೆ ತಿರುಗಿ ನೋಡದೇ ಮನೆಗೆ ಹೋಗಬೇಕಾಗುತ್ತದೆ. ಹುಷಾರ್...!
ಅಮ್ಮು: (ಗಡಗಡಗಡಗಡ ನಡುಗತೊಡಗಿದಳು.ಮುಖ ಮೆತ್ತಗಾಯಿತು. ಗಂಟಲು ಒಣಗಿದ ಮರವಾಯಿತು) ಕ್ಷಮಿಸಿ ಸಾರ್...
ಇತ್ತ ರಶ್ಮಿ ಮತ್ತೊಮ್ಮೆ ನಡುಗಿಹೋದಳು. ಬೆವರು ಬಳ ಬಳ ಬಳ ಸುರಿಯತೊಡಗಿತು...!
ಅದಕ್ಕೆ ಸರಿಯಾಗಿ ಅಲ್ಲೊಬ್ಬ ಕಾಸ್ಟ್ಯೂಮ್ ಡಿಸೈನರ್ ಇದ್ದ. ಮುಖ ನೋಡಿ ಮಣೆ ಹಾಕುವ ಮಹಾಶಯ. ಸಹ ಕಲಾವಿದರನ್ನು ಕಂಡರೆ ಮೈ ಮೇಲೆ ಇರುವೆ ಇರುವ ಹಾಗೆ ಆಡುತ್ತಿದ್ದ. ರಶ್ನಿಯನ್ನು ಕಂಡರಂತೂ ಉರಿದು ಬೀಳುತ್ತಿದ್ದ. ಈಕೆ ಇಸ್ತ್ರಿ ಆಗಿರುವ ಬಟ್ಟೆ ಕೊಡಿ, ಜ್ಯೂವೆಲ್ಸ್ ಕೊಡಿ ಎಂದು ಪಿಸುಗುಟ್ಟರೆ ಸಾಕು- ಹೋಗ್ ಹೋಗ್ರೀ.. ನೀವು ಮಾಡುವ ಸೊಬಗಿಗೆ ಇದು ಬೇರೆ ಕೇಡು... ಎಂದು ಕಿಂಡಲ್ ಮಾಡುತ್ತಿದ್ದ.
ಅಂತೂ ಇಂತು ಮೂರು ತಾಸಿನ ನಂತರ ಆ ಟೇಕ್ ಓಕೆ ಆಯಿತು. ರಶ್ಮಿಗೆ ನಿಂತು ನೀರಾಗಿದ್ದ ಉಸಿರು, ಹರಿದಂತೆ ಭಾಸವಾಯಿತು...ಅದೇ ಹೊತ್ತಿಗೆ ಒಬ್ಬ ಅವಳ ಬಳಿ ಬಂದು: ಮೇಡಮ್, ನನ್ ಹೆಸ್ರು ವಿಜಿ ಅಂತ. ನಿಮ್ಮನ್ನು ಆವಾಗ್ಲಿಂದ ನೋಡ್ತಾ ಇದೀನಿ. ನನ್ ಸ್ನೇಹಿತ ಸೂರಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಗುಂಡುಗುಂಡಗೆ ಇರುವ ಮುಖವೇ ಬೇಕಂತೆ. ನೀವೇ ಲಾಯಕ್ಕು ಅನ್ನಿಸುತ್ತಿದೆ. ನಿಮ್ ಫೊಟೊ ಇದ್ರೆ ಕೊಡ್ತೀರಾ... ಎಂದು ರಾಗ ಎಳೆದ!
ರಶ್ಮಿಗೆ ಆ ಫೇಸ್‌ಕಟ್ ನೋಡಿ ಒಮ್ಮೆ ನಗು ಬಂತಂತೆ. ಥೇಟ್ ಬ್ಲ್ಯಾಕ್ ಕೋಬ್ರಾ ಥರ ಇರುವವನೊಬ್ಬ ಏಕಾಏಕಿ ಹೀಗೆ ಕೇಳಿದರೆ ಹೇಗೆ? ಏನಾಗಿದೆ ಇವನಿಗೆ... (ಇದು ಯೋಚಿಸುವ ಸಮಯ)
ರಶ್ಮಿ ಅವನ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ತನ್ನ ಪಾಡಿಗೆ ಶೂಟಿಂಗ್ ಮುಗಿಸಿ, ಮನೆಗೆ ಬಂದುಬಿಟ್ಟಳು... ಕಲ್ಲರಳಿ ಹೂವಾಗಿ ಬಿಡುಗಡೆಯಾಯಿತು. ಸೂರಿ ಆ ಹುಡುಗಿಯ ನಟನೆ ನೋಡಿ ಮೆಚ್ಚಿಕೊಂಡರು. ಮರುದಿನವೇ ಮೈಸೂರಿಗೆ ಹೋಗಿ, ಆಕೆಯ ಪೋಷಕರ ಜತೆ ಮಾತನಾಡಿ ಅಡ್ವಾನ್ಸ್ ಕೊಟ್ಟರು. ಅದೇ ಆರು ತಿಂಗಳಿಗೆ ದುನಿಯಾ ಬಂತು. ಗಲ್ಲಾ ಪೆಟ್ಟಿಗೆಯನ್ನೇ ನುಂಗಿ ನೀರು ಕುಡಿಯಿತು. ಚಿತ್ರರಂಗದ ದಿಕ್ಕನ್ನೇ ಬದಲಿಸಿತು. ಜನರ ಪ್ರೀತಿಗೆ ಪಾತ್ರರಾದರು...
ಇಷ್ಟಾದರೂ ಆ ದಿನಗಳನ್ನು ಅವರು ಮರೆತಿಲ್ಲ.





ಆಕೆ ಏಕಾಏಕಿ ಮೇಕಪ್ ರೂಮಿಂದ ಹೊರಬಂದವಳೇ ಐಸ್ಸಾ... ಎಂದು ಉದ್ದಂಡ ನಮಸ್ಕಾರ ಹಾಕಿದಳು!
ದೂರದಲ್ಲಿ ಲೆನ್ಸ್ ಸರಿ ಮಾಡಿಕೊಳ್ಳುತ್ತಾ ನಿಂತಿದ್ದ ಛಾಯಾಗ್ರಾಹಕ ಕಣ್ಣನ್ ಕಣ್ಣು ಪಿಳ ಪಿಳ ಪಿಳ ಪಿಳ...
ಕಣ್ಣನ್:ಅಯ್ಯೊ ಯಾಕೆ ತಾಯಿ ಹಾಗೆ ಮಾಡುತ್ತಿದ್ದೀಯಾ?
ಈಕೆ :ಅದು, ಹಾಂಗಲ್ಲ ಅಂಕಲ್, ಇದು ಕ್ಯಾಮೆರಾ ತಾನೆ? ಮೇಕಪ್ ಮಾಮಾ ಅಂದ್ರು: ಮೊದಲನೇ ದೃಶ್ಯಕ್ಕೆ ಮುಖ ಕೊಡುವ ಮುನ್ನ ಕ್ಯಾಮೆರಾ, ನಿರ್ದೇಶಕರು, ಮೇಕಪ್‌ಮನ್, ಛಾಯಾಗ್ರಾಹಕರ ಕಾಲಿಗೆ ಬೀಳಬೇಕು. ಆಗ ಎಲ್ಲಾ ಒಳ್ಳೇದಾಗುತ್ತೆ ಅಂತ. ಅದಕ್ಕೇ ಕ್ಯಾಮೆರಾಗೆ ನಮಸ್ಕಾರ ಮಾಡ್ತಾ ಇದೀನಿ... ಹ್ಹಿ ಹ್ಹಿ ಹ್ಹಿ...
ಕಣ್ಣನ್: ಅಯ್ಯೊ ಪುಟ್ಟಾ, ಅದು ಕ್ಯಾಮೆರಾ ಅಲ್ಲಮ್ಮ, ಲೈಟು. ಹೋಗಿ ಹೋಗಿ ಅದಕ್ಕೆ...
ಈಕೆ: ಗೊತ್ತಾಗ್ಲೇ ಇಲ್ಲ ಅಂಕಲ್, ನೀವೇನಾ ಫೊಟೊ ತೆಗೆಯೋರು, ಬನ್ನಿ ಈ ಕಡೆ... (ಅಷ್ಟಂದಿದ್ದೇ ತಡ, ದಡಾರ್ರ್ ಅಂತ ಕಾಲಿಗೆ ಬಿದ್ದಳು)
ಕಣ್ಣನ್:ಅಯ್ಯೊ ಇರ್‍ಲಿ ಬಿಡಮ್ಮ, ದೇವ್ರು ಒಳ್ಳೇದ್ ಮಾಡ್ತಾನೆ. ಆದರೆ ಸಿಕ್ಕಸಿಕ್ಕಿದ್ದಕ್ಕೆಲ್ಲಾ ನಮಸ್ಕಾರ ಮಾಡ್ಬೇಡ. ಗೊತ್ತಾಗದಿದ್ದರೆ ನನ್ ಹತ್ರ ಕೇಳು.
(ಆಗ ಇನ್ನೊಂದು ಪಾತ್ರದ ಎಂಟ್ರಿ)
ಆತ: ಕಣ್ಣನ್ ಅವರೇ ಎಲ್ಲಾ ರೆಡಿನಾ? ಕಲಾವಿದರೆಲ್ಲಾ ಬಂದ್ರಾ?
ಕಣ್ಣನ್: ಹೂಂ... ಎಲ್ಲಾ ಬಂದಿದ್ದಾರೆ. ಶುರುಮಾಡೋಣ ಸಾರ್...
ಈಕೆ: ಅಂಕಲ್ ನೀವೇನಾ ಡೈರೆಕ್ಟರ್ ತಿಪಟೂರು ರಘು. ಸ್ವಲ್ಪ ಈ ಕಡೆ ಬನ್ನಿ(ದಡಾರ್ರ್...)
ಆತ: ಪುಟ್ಟಿ ಹಾಗೆಲ್ಲಾ ಬೀಳಬೇಡ, ಮುಖದ ಮೇಕಪ್ ಹಾಳಾಗುತ್ತೆ...
***
ಹೀಗೆ ಲಂಗ ದಾವಣಿ ತೊಟ್ಟು, ದಡಾರ್ರ್ ನಮಸ್ಕರೋಮಿ ಎನ್ನುತ್ತಿದ್ದವರು ಯಾರು ಗೊತ್ತಾ? ನಟಿ ತಾರಾ ವೇಣು. ತಮ್ಮ ಚೊಚ್ಚಲ ಚಿತ್ರದ ಮೊದಲ ದೃಶ್ಯ ಶುರುವಾಗುವ ಮುನ್ನ ಲೈಟ್ ಕಂಬಕ್ಕೆ ಶರಣು ಶರಣಾರ್ಥಿ ಎಂದಿದ್ದನ್ನು ಅವರು ಇಂದಿಗೂ ಮರೆತಿಲ್ಲ. ಆಗತಾನೇ ಎಂಟನೇ ಕ್ಲಾಸಿಗೆ ಕಾಲಿಟ್ಟಿದ್ದರು. ಬಣ್ಣ ಹಚ್ಚಿದ ಪ್ರಥಮ ಚಿತ್ರ ಧನವಂತ. ಮುಸುರಿ ಕೃಷ್ಣಮೂರ್ತಿ ತಮ್ಮ ಮಕ್ಕಳಾದ ಗುರುದತ್/ಜಯಸಿಂಹರನ್ನು ನಾಯಕನನ್ನಾಗಿಸಲು ಆ ಚಿತ್ರ ನಿರ್ಮಿಸಲು ಮುಂದಾದರು. ಗುರು ಜೋಡಿಯಾಗಿ ಭವ್ಯಾ. ಜಯಸಿಂಹ ಜತೆ ತಾರಾ ಅಲಿಯಾಸ್ ಅನುರಾಧಾ. ಮುಸುರಿಯವರು ಪ್ರೀತಿಯಿಂದ ವಸುಂಧರಾ ಪುಟ್ಟಿ ಎನ್ನುತ್ತಿದ್ದರು. ಬನಶಂಕರಿಯ ಭರಣಿ ಹೌಸ್‌ನಲ್ಲಿ ಚಿತ್ರೀಕರಣ. ಭವ್ಯಗೆ ಅದಾಗಲೇ ಭಾರೀ ಬೇಡಿಕೆ. ಅಂದಮೇಲೆ ಕೇಳಬೇಕೆ? ತಾರಾ ಅಂತಲ್ಲ, ಯಾರನ್ನು ಕಂಡರೂ ತಾತ್ಸಾರ. ಕಂಡರೂ ಕಾಣದಂತೆ ಕಣ್ಣು ಮಿಟುಕಿಸುತ್ತಿದ್ದರು. ತಾರಾ ಮೂಲೆಯಲ್ಲಿ ನಿಂತು... ಹೈಯ್ಯಾ... ಭವ್ಯಾ... ಎಂದು ಬಾಯಿ ಬಿಟ್ಟು ನೋಡುತ್ತಿದ್ದಳು...
ಸರಿ, ಮನೆಯಲ್ಲಿ ದೊಡ್ಡ ಸಮಾರಂಭ. ನೆಂಟರನ್ನು ಆಹ್ವಾನಿಸುವ ದೃಶ್ಯ. ನಿಮಗೆ ಆಶ್ಚರ್ಯವಾಗಬಹುದು, ಒಂದೇ ಟೇಕ್‌ನಲ್ಲಿ ತಾರಾ ಶಾಟ್ ಓಕೆಯಾಗಿತ್ತು. ನಿರ್ಭಯದಿಂದ ಹೇಳಿಕೊಟ್ಟಿದ್ದನ್ನು ಪಟಪಟ ಪಠಿಸಿ, ನಿಚ್ಚಳವಾಗಿ ನಟಿಸಿ, ಕೈ ತೊಳೆದುಕೊಂಡಳು...
ಆರು ತಿಂಗಳು ಚಿತ್ರೀಕರಣ ನಡೆಯಿತು. ಆದರೆ ಆರ್ಥಿಕ ಸಮಸ್ಯೆಯಿಂದ ಸಿನಿಮಾ ಅರ್ಧಕ್ಕೇ ನಿಂತ ನೀರಾಯಿತು. ಅದಕ್ಕೂ ಮುನ್ನ ವೇಮಗಲ್ ಜಗನ್ನಾಥ್ ತಾರಾ ಮನೆ ಬಾಗಿಲಿಗೆ ವಾರಗಟ್ಟಲೇ ಅಲೆದಿದ್ದರಂತೆ. ಮೊದಲೇ ಶ್ರೀಮಂತರ ಕುಟುಂಬ. ತಾತ ನಾರಾಯಣಸ್ವಾಮಿ ಜಿಲ್ಲಾಧಿಕಾರಿಯಾಗಿದ್ದರು. ತಂದೆ ಎಂಜಿನಿಯರ್. ಅಮ್ಮ ಮನೆಯಲ್ಲಿ ಗೃಹ ಸಚಿವೆ. ಅಪ್ಪ ಅಮ್ಮನ ಎದುರು ಮಕ್ಕಳೆಲ್ಲಾ ಗಪ್‌ಚುಪ್. ಪುಟ್ಟ ತಾರಾ ಭರತನಾಟ್ಯದಲ್ಲಿ ಪ್ರವೀಣೆಯಾಗಿದ್ದಳು. ಜಗನ್ನಾಥ್ ಆಕೆಯ ನೃತ್ಯಕ್ಕೆ ಮನಸೋತು, ತಮ್ಮ ತುಳಸಿದಳ ಚಿತ್ರಕ್ಕೆ ಆಯ್ಕೆಮಾಡಲು ಹರಸಾಹಸ ಪಟ್ಟಿದ್ದರು. ಕೊನೆಗೂ ಮನೆ ಮಂದಿ ಒಪ್ಪಿದರು. ಪರಂತು ಕಾರಣಾಂತರಗಳಿಂದ ತುಳಸಿದಳ ಶುರುವಾಗುವುದು ತುಸು ತಡವಾಯಿತು. ತಿಪಟೂರು ರಘು ಧನವಂತ ಚಿತ್ರಕ್ಕೆ ಆಯ್ಕೆಮಾಡಿದರು. ತಾರಾ ನಟಿಸಿದ ಮೊದಲ ಚಿತ್ರ ತುಳಸಿದಳ ಎಂದು ಎಲ್ಲರಿಗೂ ಗೊತ್ತು. ಆದರೆ ಧನವಂತದ ದಂತಕತೆ ಗೊತ್ತಾಗಿದ್ದು ತಾರಾ ತಮ್ಮ ಅಂಂತರಂಗ ಕದ ತೆರೆದಾಗ!
ಅಲ್ಲಿಂದ ತಾರಾಬಲ ದಡಾರ್ರ್ ಅಂತ ತಿರುಗಿತು. ಹತ್ತಾರು ಅವಕಾಶಗಳು ಮನೆ ಮುಂದೆ. ನಾಯಕಿ ಪಟ್ಟ, ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಫಿಲಂ ಫೇರ್... ಆಕಾಶ ಇಷ್ಟೇ ಯಾಕಿದೆಯೋ...

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

doctor ಜಯಮಾಲ

ಕೆಲವರು ಹೆಸರು, ಕೀರ್ತಿ, ಅಂತಸ್ತು ಗಳಿಸಲು ಬಣ್ಣದ ಲೋಕಕ್ಕೆ ಬರುತ್ತಾರೆ. ಆದರೆ ಈ ಹೆಣ್ಣು ಮಗಳು ಹಾಗಲ್ಲ. ಅಂದು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಸಿನಿಮಾ ರಂಗ ಪ್ರವೇಶಿಸಿದ್ದು ಹೊಟ್ಟೆಪಾಡಿಗಾಗಿ. ಕಿತ್ತು ತಿನ್ನುವ ಬಡತನಕ್ಕೆ ಬುದ್ಧಿ ಕಲಿಸುವುದಕ್ಕಾಗಿ!
ಅದು ಮಂಗಳೂರಿನ ಪುಟ್ಟ ಹಳ್ಳಿ-ಪಣಂಬೂರು. ಪೂಜಾರರ ಕುಟುಂಬ. ಓಮಯ್ಯ ಪೂಜಾರರದ್ದೇ ಯಜಮಾನಿಕೆ. ತಕ್ಕ ಮಟ್ಟಿಗೆ ಶ್ರೀಮಂತಿಕೆ ಇತ್ತು. ನಿಜ, ಆದರೆ ಬಂದರು ಯೋಜನೆ ಎಂಬ ಬಕಾಸುರ ಅವನ್ನೆಲ್ಲಾ ನುಂಗಿ, ತೇಗಿಬಿಟ್ಟಿದ್ದ. ಊರಿಂದ ಊರಿಗೆ ವಲಸೆ ಬಂದು ಚಿಕ್ಕಮಗಳೂರಿನಲ್ಲಿ ಚಿಕ್ಕ ಮನೆ ಮಾಡಬೇಕಾಯಿತು. ಪೂಜಾರರಿಗೆ ದಿಕ್ಕು ತೋಚದಂತಾಯಿತು. ಅಂತೂ ಇಂತೂ ಬಿರ್ಲಾ ಕಂಪನಿ ನಡೆಸುತ್ತಿದ್ದ ಗಣಿಗಾರಿಕೆಯಲ್ಲಿ ಸೂಪ್ರವೈಸರ್ ಕೆಲಸ ಸಿಕ್ಕಿತು. ವಿಧಿ ಅಲ್ಲಿಯೂ ತಗಾದೆ ತೆಗೆದ. ಅದೊಂದು ದಿನ ಅವರು ಬರುತ್ತಿದ್ದ ಜೀಪು ಉಲ್ಟಾ ಪಲ್ಟಾ ಮಲಗಿತು. ಪೂಜಾರರ ಕಾಲು ಚಕ್ರದಡಿ ಸಿಲುಕಿತು. ಹಣವೆಲ್ಲಾ ಆಸ್ಪತ್ರೆ ಪಾಲಾಯಿತು. ಮಡದಿ ಕಮಲಮ್ಮ ಕಂಗಾಲು ಕಂಗಾಲು...
ಮನೆಯಲ್ಲಿ ಚಿಣ್ಣರ ಸಾಪ್ತಾಹ. ಏಳು ಮಕ್ಕಳು. ಎಲ್ಲರನ್ನೂ ಸಾಕುವ ಜವಾಬ್ದಾರಿ ಕಮಲಮ್ಮನ ಹೆಗಲೇರಿತು. ಹಿರಿ ಮಗಳು ರತ್ನಮಾಲಾ ರಂಗಭೂಮಿ ಕಲಾವಿದೆ. ಬಣ್ಣ ಹಚ್ಚಿ ನಿಂತರೆ ಸಸ್ಯ ಶ್ಯಾಮಲಾ. ನಾಟಕ ವೃತ್ತಿಯಲ್ಲಿ ಆಕೆಗೆ ೧೫ ರೂ. ಸಿಗುತ್ತಿತ್ತು. ತಾಯಿ ಹೃದಯ ಕಲ್ಲಾಯಿತು. ಅಕ್ಕನ ಜತೆ ತಂಗಿ ಜಯಮಾಲಾಳನ್ನೂ ಕಳುಹಿಸಲು ನಿರ್ಧರಿಸಿದಳು. ಕಾರಣ ೧೫+೧೦=೨೫... ಅಕ್ಕಿ, ಬೇಳೆ, ಕಾಳಿನ ಕೊರತೆ ನೀಗುತ್ತೆ...
ಜಯಮಾಲಾ ಹಗಲು ಹೊತ್ತು ಹಿರಿಯ ಪ್ರಾಥಮಿಕ ಶಾಲೆಗೆ, ಸಂಜೆಗತ್ತಲ ನಂತರ ನಾಟಕ ಶಾಲೆಗೆ... ರಮಾನಂದ ಚೂರ್ಯರ ಗೀತರಹಸ್ಯ, ನಾವಿಲ್ಲದಾಗ ನಾಟಕದಲ್ಲಿ ನಟಿಸಿದಳು. ಇಷ್ಟಕ್ಕೆಲ್ಲಾ ಕಾರಣ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ. ನಾಟಕ ಮುಗಿನ ನಂತರ ಹತ್ತು ರೂ. ಕೈ ಸೇರುತ್ತಿತ್ತು. ಅದನ್ನು ಪ್ರೀತಿಯಿಂದ ಮುದ್ದಾಡಿ, ಕಣ್ಣೀರಿಡುತ್ತಿದ್ದಳು. ಕೊನೆಗೆ ಅಮ್ಮನ ಮಡಿಲಲ್ಲಿಟ್ಟು, ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಳು...
ಅದೊಂದು ದಿನ ನಿರ್ಮಾಪಕ ಆನಂದ್ ಶೇಖರ್ ನಾಟಕ ನೋಡಲು ಬಂದಿದ್ದರು. ಎದುರು ಸಾಲಿನಲ್ಲಿ ಕುಳಿತಿದ್ದ ಪುಟ್ಟ ಜಯಮಾಲಾ ಕಣ್ಣಿಗೆ ಬಿದ್ದಳು. ನಮ್ಮ ಸಿನಿಮಾಗೆ ಈಕೇನೇ ಸರಿಯಾದ ನಾಯಕಿ ಎಂದು ನಿರ್ಧರಿಸಿದರು. ಅಲ್ಲಿಂದ ಕಟ್ ಮಾಡಿದರೆ...
ಮಂಗಳೂರಿನ ವುಡ್‌ಸೈಡ್ ಹೋಟೆಲ್ ಮಾಲೀಕ ನಾಯಕ್ ಅವರ ಮನೆ. ಮದುವೆ ಸಮಾರಂಭ. ನಾಯಕ ನಾಯಕಿಗೆ ತಾಳಿ ಕಟ್ಟುವ ಶುಭ ವೇಳೆ. ಕ್ಯಾಮೆರಾ ಮುಂದೆ ರಂಗನಟ ಸೋಮಶೇಖರ್. ಕುತ್ತಿಗೆ ಖಾಲಿ ಬಿಟ್ಟು, ನೆಟ್ಟಗೆ ಕುಳಿತಿದ್ದಳು ಪುಟ್ಟ ಬಾಲೆ. ಸಿನಿಮಾ ಹೆಸರು ಕಾಸ್ ಧಾಯೇ ಕಂಡನಿ (ಹಾಗೆಂದರೆ ಹಣವಂತ ಗಂಡ ಎಂದರ್ಥ) ತುಳು ಭಾಷೆಯಲ್ಲಿ ತಯಾರಾಗುತ್ತಿತ್ತು. ನಿರ್ದೇಶಕ ಗೀತ ಪ್ರಿಯ ಆಕ್ಷನ್, ಕ್ಯಾಮೆರಾ ಎನ್ನಲು ಹತ್ತು ನಿಮಿಷ ಬಾಕಿ ಇತ್ತು. ಅಷ್ಟು ಹೊತ್ತಿಗೆ ಜಯಮಾಲಾ ಕಣ್ಣು ಹಸಿ ಹಸಿ. ಮನೆಯವರ ಕಷ್ಟ ನಷ್ಟ, ಹೊತ್ತಿನ ಊಟಕ್ಕೆ ಪಡುವ ಪಾಡು ನೆನಪಾಗಿ ಕಣ್ಣು ಮಂಜಿನ ಹನಿ ಹನಿ...
ಗೀತಪ್ರಿಯ: ಕಣ್ಣು ಒರೆಸಿಕೊಳ್ಳಮ್ಮಾ, ಗ್ಲಾಮರ್ ಹೊರಟೋಗುತ್ತೆ. ಈಗ ಅಳಬೇಡ, ಮುಂದಿನ ದೃಶ್ಯದಲ್ಲಿ ಹಾಗೆ ಮಾಡೋವಂತೆ...
ಜಯಮಾಲಾ: ಸಾರಿ ಸಾರ್, ಗೊತ್ತಾಗಲಿಲ್ಲ. ಮತ್ತೆ ಹಾಗೆ ಮಾಡುವುದಿಲ್ಲ. ಓಕೆ ಸಾರ್, ನಾನ್ ರೆಡಿ...
ಅವಳ ಖಾಲಿ ಕುತ್ತಿಗೆಗೆ ಸೋಮಶೇಖರ್ ತಾಳಿ ಕಟ್ಟಿದರು. ಪುರೋಹಿತರು-ಮಾಂಗಲ್ಯ ತಂತುನಾನೇನಾ... ಗೀತ ಪ್ರಿಯ ಕಟ್ ಕಟ್ ಕಟ್ ಎಂದರು. ಮತ್ತೊಮ್ಮೆ ರೆಡೀನಾ... ಅದನ್ನೇ ಹತ್ತು ಬಾರಿ ಶೂಟ್ ಮಾಡಲಾಯಿತು. ಜಯಮಾಲಾ ಆಶ್ಚರ್ಯ ಸೂಚಕ ಚಿಹ್ನೆಯಾದಳು. ಪಕ್ಕದಲ್ಲಿ ನಿಂತಿದ್ದ ಅಕ್ಕನನ್ನು ಕರೆದು: ಏನಕ್ಕಾ ಇದು, ಎಲ್ಲರೂ ಒಂದು ಬಾರಿ ತಾಳಿ ಕಟ್ಟಿದರೆ ಇವರು ಹತ್ತತ್ತು ಬಾರಿ ಕಟ್ಟುತ್ತಾರೆ. ಹಿಂಗ್ಯಾಕೆ ? ಅಕ್ಕ ಮುಸಿ ಮುಸಿ ನಕ್ಕರು. ಇದು ನಾಟಕ ಅಲ್ಲಮ್ಮಾ, ಸಿನಿಮಾ. ಇಲ್ಲಿ ಮಾಡಿದ್ದನ್ನೇ ಮಾಡ್ತಾರೆ. ನಿರ್ದೇಶಕರು ಓಕೆ ಎನ್ನುವ ತನಕ ನಾಯಕ ತಾಳಿ ಕಟ್ತಾನೇ ಇರ್‍ತಾನೆ...
ಜಯಮಾಲಾ ಹೌದಾ... ಎಂದಷ್ಟೇ ಹೇಳಿ, ತಾಳಿಗೆ ಕುತ್ತಿಗೆ ಒಪ್ಪಿಸಿದಳು. ಈ ಘಟನೆ ನಡೆದು ಅರ್ಧ ಘಂಟೆಗೆ ಟೇಕ್ ಓಕೆ ಆಯಿತು. ಪುಟ್ಟ ಜಯಮಾಲಾ ಉಸ್ಸಪ್ಪಾ ಎಂದು ಬಿಸಿ ಉಸಿರು ಬಿಟ್ಟಳು...
***
ಅದೇ ಪುಟ್ಟ ಹುಡುಗಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಆದರೆ ಬಣ್ಣ ಹಚ್ಚಿದ ಆ ದಿನದ ಬಂಗಾರದ ನೆನಪು ಅವರ ಕಣ್ಣಲ್ಲಿ ನಿಚ್ಚಳವಾಗಿ ನೆಲೆನಿಂತಿದೆ. ಲೈಟ್ ಕಂಬವನ್ನು ಕ್ಯಾಮೆರಾ ಎಂದು ಭಾವಿಸಿ ದಡಾರ್ ನಮಸ್ಕಾರ ಹಾಕಿದ್ದು, ಮೇಕಪ್ ಮನ್ ಬ್ರೆಶ್ ನಿಂದ ಮುಖ ಸವರಿದಾಗ ಗಡಗಡ ನಡುಗಿದ್ದು ಎಲ್ಲ ನೆನಪಿನ ದೋಣಿಯಾಗಿಯೇ ಉಳಿದಿದೆ.
ತುತ್ತು ಅನ್ನಕ್ಕಾಗಿ ಮುಖಕ್ಕೆ ಬಣ್ಣ ಮೆತ್ತಿಕೊಳ್ಳುವುದು ಅಂದು ಅನಿವಾರ್ಯವಾಯಿತು. ಅಲ್ಲಿಂದ ಜಯದ ಮಾಲೆ ಮುಡಿಗೇರಿತು. ಅಣ್ಣಾವ್ರ ಏಳು ಚಿತ್ರದಲ್ಲಿ ನಟಿಸುವ ಅವಕಾಶ, ಕನ್ನಡದ ಹೆಚ್ಚಿನ ಸ್ಟಾರ್‌ಗಳ ಜತೆ ನಾಯಕಿಯಾಗಿ ಅಭಿನಯಿಸುವ ಅದೃಷ್ಟ... ಆದರೆ ಡಾಕ್ಟರೇಟ್ ಮಾಡಬೇಕು ಎಂಬ ಕನಸು ಬಹಳ ಕಾಲ ಕನಸಾಗಿಯೇ ಇತ್ತು. ಕೊನೆಗೂ ಅದು ನನಸಾಯಿತು. ಅದಕ್ಕೇ ಅವರೀಗ ಡಾ. ಜಯಮಾಲಾ!

************************************************************

೭ ದೇವರಾಜ್

ಆಗತಾನೇ ಆ ಹುಡುಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ. ಮೈತುಂಬಾ ರಂಗಭೂಮಿಯ ಸೊಗಡು. ರಂಗಸಂಪದ ಮೊದಲಾದ ನಾಟಕ ಕಂಪನಿಯಲ್ಲಿ ನಟಿಸಿದ ಅನುಭವ ಬೆನ್ನ ಹಿಂದಿತ್ತು. ಹಾಗಂತ ಅದು ಅವನ ವೃತ್ತಿಯಾಗಿರಲಿಲ್ಲ. ಹವ್ಯಾಸದ ಹಸಿವು ಆರಿಸಲು ರಂಗನಂಟು ಬೆಳೆಸಿಕೊಂಡಿದ್ದ. ಎಚ್‌ಎಂಟಿ ಕಂಪನಿಯಲ್ಲಿ ನೌಕರಿಯಿತ್ತು. ಕೆಲಸ ಮುಗಿಯುವ ಹೊತ್ತಿಗೆ ರಂಗ ಮಂಚ ಏರುತ್ತಿದ್ದ. ಒಂದು ದಿನ ಮೇಕಪ್ ಹಚ್ಚದಿದ್ದರೆ ಮುಖ ಕಪ್ಪಗಾಗುತ್ತಿತ್ತು. ಕಲಾವಿದನಾಗಬೇಕೆಂಬ ಹಂಬಲ ಬಲವಾಗಿತ್ತು...
ರಂಗಭೂಮಿಯಲ್ಲಿ ಹತ್ತಾರು ವರ್ಷ ನಿರ್ದೇಶನ ಮಾಡಿ, ಪಳಗಿದ್ದ ನರಸಿಂಹನ್ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದರು. ಹೆಸರು ತ್ರಿಶೂಲ. ಮೈಸೂರಿನ ಸುತ್ತಮುತ್ತ ಶೂಟಿಂಗ್. ಇದ್ದಕ್ಕಿದ್ದಂತೆ ಆ ಹುಡುಗನಿಗೆ ಬುಲಾವ್ ಬಂತು-
ಒಳ್ಳೆಯ ಖಳ ಪಾತ್ರವಿದೆ. ನೀನು ಕರೆಕ್ಟ್ ಸ್ಯೂಟ್ ಆಗುತ್ತೀಯಾ. ಅಂಜಿಕೆ ಬೇಡ. ಕೂಡಲೇ ಮೈಸೂರಿಗೆ ಬಂದುಬಿಡು. ನಾಳೆಯಿಂದಲೇ ಶೂಟಿಂಗ್...ಇಂತಿ ನರಸಿಂಹನ್/ನಿರ್ದೇಶಕ. ಹುಡುಗ ಒಮ್ಮೆ ನಡುಗಿ ಹೋದ. ಆದರೆ ಅಂಜಿಕೆಯಿಂದಲ್ಲ, ಆಶ್ಚರ್ಯಕ್ಕೆ, ಬದುಕಿನ ಆಕಸ್ಮಿಕ ತಿರುವಿಗೆ, ಅಂದುಕೊಂಡ ಆಸೆ ಫಲಿಸಿತು ಎಂಬ ನಲಿವಿಗೆ. ಸರಿ ಅಲ್ಲಿಂದ ಓವರ್ ಟು ಮೈಸೂರು... ಚುಕು ಬುಕು ಚುಕು ಬುಕು...
***
ಛಾಯಾಗ್ರಾಹಕರು ಯಾರು?
ಸುಂದರನಾಥ ಸುವರ್ಣ!
ಹುಡುಗ ಮತ್ತೆ ತಬ್ಬಿಬ್ಬಾದ. ಅವರ ಹೆಸರು ಅದಾಗಲೇ ರಾಷ್ಟ್ರಮಟ್ಟದಲ್ಲಿ ಓಡಾಡಿತ್ತು. ರಾಷ್ಟ್ರಪ್ರಶಸ್ತಿ ಅವರ ಮುಡಿಗೇರಿತ್ತು. ಅಂಥವರ ಎದುರು ನಾನು ನಟಿಸುವುದೆ? ದೇವಾ... ಕಾಪಾಡು ಶ್ರೀ ಸತ್ಯ ನಾರಾಯಣ...
ಆದರೆ ಅಲ್ಲಿಗೆ ಹೋದ ಮೇಲೆ ಎಲ್ಲಾ ಉಲ್ಟಾಪಲ್ಟಾ. ಸುವರ್ಣ ಎಷ್ಟು ಸಿಂಪಲ್ ಆಗಿದ್ದರು ಎಂದರೆ ಆ ಹುಡುಗನ ಹೆಗಲ ಮೇಲೆ ಕೈ ಇಟ್ಟು ಹುರಿದುಂಬಿಸಿದರು. ಹುಡುಗ ಫುಲ್ ಖುಷ್. ಸರಿ ಕ್ಲೈಮ್ಯಾಕ್ಸ್ ದೃಶ್ಯ. ಅವಿನಾಶ್ ಮತ್ತು ಸುಂದರರಾಜ್ ನಾಯಕರು. ಗನ್‌ಮ್ಯಾನ್‌ಗಳು ಆ ಹುಡುಗನ ಹತ್ತಿರ ಬಂದರು. ಕಿಬ್ಬೊಟ್ಟೆಯ ಮೇಲ್ಭಾಗಕ್ಕೆ ಕೆಲ ಕೆಮಿಕಲ್ ಪ್ಯಾಕ್ ಮೆತ್ತಿದರು. ಜತೆಗೆ ವಯರ್ ಇತ್ತು. ಅದನ್ನು ಹೊಟ್ಟೆಯ ಹಿಂಬಾಗಕ್ಕೆ ಸುತ್ತಿದರು. ಹುಡುಗನ ಮೈ ಮತ್ತೆ ಮುಲು ಮುಲು. ತಲೆ ಮೇಲೆ ಐಸ್ ಸುರಿದ ಅನುಭವ. ಮೈಸೂರ ಚಾಮುಂಡಮ್ಮ ಮತ್ತೆ ನೆನಪಾದಳು. ಅಷ್ಟಿದ್ದರೂ ಹುಡುಗ ಹೊರನೋಟಕ್ಕೆ ನಗು ಚೆಲ್ಲುತ್ತಿದ್ದ. ಏನೇ ಆಗಲಿ, ಟೇಕ್ ಓಕೆ ಆಗಬೇಕು, ಅಷ್ಟೆ...
ನಿರ್ದೇಶಕರು ಓಕೆ ರೆಡಿನಾ ಎಂದರು. ನಾಯಕ ಪಿಸ್ತೂಲಿಂದ ಶೂಟ್ ಮಾಡಿದ. ಆ ಹುಡುಗ ಅಮ್ಮಾ ಎಂದು ಕೂಗಿದ. ರಕ್ತದ ಜತೆ ಬುಳುಕ್ ಬುಳುಕ್ ಶಬ್ದ ವ್ಯಕ್ತವಾಯಿತು. ಎದೆ ಹಿಡಿದುಕೊಂಡು ಧಡಾರ್ ಅಂತ ಮೊಗಚಿಬಿದ್ದ...
ನರಸಿಂಹನ್ ಖುಷ್ ಹುವಾ. ಸುವರ್ಣ ಮುಖ ವರ್ಣಮಯ. ಎಲ್ಲರೂ ಹೋಗಿ ಹುಡುಗನನ್ನು ಎತ್ತಿ ಹಿಡಿದರು.
ನರಸಿಂಹನ್: ಏನಾಯ್ತು ದೇವು?
ದೇವು: ಏನಿಲ್ಲ ಸರ್, ಶೂಟ್ ಆದಾಗಲೇ ಕಿಬ್ಬೊಟ್ಟೆಯ ಭಾಗ ನೋಯಲು ಶುರುವಾಗಿತ್ತು. ಮತ್ತೆ ಎಲ್ಲಿ ಶಾಟ್ ಕಟ್ ಆಗುತ್ತೊ ಎಂದು ಸುಮ್ಮನಿದ್ದೆ. ಈಗ ಸ್ವಲ್ಪ ಉರಿ ಹೆಚ್ಚಾಗಿದೆ...
ಕೂಡಲೇ ಅಂಗಿ ಕಳಚಿ ನಿಂತ ಆ ಹುಡುಗ, ನೋವಲ್ಲೂ ನಗುತ್ತಿದ್ದ. ಕಣ್ಣಲ್ಲಿ ಗೆದ್ದ ಸಂಭ್ರಮ... ನಿರ್ದೇಶಕರು ಒಮ್ಮೆ ಬಿಗಿದು ಅಪ್ಪಿಕೊಂಡು; ಮೊದಲೇ ಹೇಳಬಾರದಿತ್ತಾ ದೇವು, ಏನಾದರೂ ಹೆಚ್ಚುಕಡಿಮೆ ಆಗಿದ್ದರೆ ಏನು ಗತಿ. ಇದು ಹುಡುಗಾಟಿಕೆಯಲ್ಲ ತಿಳೀತಾ?
ಅಯ್ಯೋ ಅದು ಇರಲಿ, ದೃಶ್ಯ ಹೇಗೆ ಬಂದಿದೆ?
ನಿನಗೆ ಉತ್ತಮ ಭವಿಷ್ಯವಿದೆ ದೇವು, ಗುಡ್‌ಲಕ್ ಎಂದಷ್ಟೇ ಹೇಳಿದ ನಿರ್ದೇಶಕರು ಪ್ರಥಮ ಚಿಕಿತ್ಸೆಗೆ ಮುಂದಾದರು. ಸುವರ್ಣ ಓಡಿ ಬಂದು, ಹುಡುಗನ ಬೆನ್ನು ತಟ್ಟಿದರು...
***
ಅದೇ ಹುಡುಗನೇ ಈ ಡೈನಾಮಿಕ್ ಸ್ಟಾರ್ ದೇವರಾಜ್. ಅಂದು ಅನುಭವಿಸಿದ ಯಾತನೆ ಇಂದು ಹೂವಿನ ಹಾಸಿಗೆಯಾಗಿದೆ. ೬೫ ಚಿತ್ರಗಳಲ್ಲಿ ಖಳನಟ, ೮೫ ಚಿತ್ರಗಳಲ್ಲಿ ನಾಯಕನನ್ನಾಗಿಸಿದೆ. ದೇವಣ್ಣ ಆ ದಿನವನ್ನು ಇಂದೂ ಮರೆತಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಏನಾಗುತ್ತಿತ್ತೊ ಗೊತ್ತಿಲ್ಲ ಎಂದು ಆಕಾಶ ನೋಡುತ್ತಾರೆ ದೇವರಾಜ್!

***************************************************************************


ಮಾಸ್ಟರ್ ಆನಂದ್

ಡ್ಯಾಡಿ ಇಲ್ಲಿ ನೋಡಿ, ಇದು ವಿಷ್ಣುವರ್ಧನ್ ಸ್ಟೈಲು... ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ...(ಎಡಗೈ ಬಳೆಯನ್ನು ಬಲಗೈಯಿಂದ ಹಿಡಿದು ಗರಗರ ತಿರುವಿದ)
ನಿಮಗೆ ಅಂಬರೀಷಣ್ಣ ಹೇಗೆ ಮಾಡ್ತಾರೆ ಅಂತ ಗೊತ್ತಾ ಡ್ಯಾಡಿ... ಯಾಕೆ ಬುಲ್‌ಬುಲ್, ಮಾತಾಡಕಿಲ್ವಾ?(ತಲೆ ಕೂದಲನ್ನು ಹಿಂದಕ್ಕೆ ತಳ್ಳಿ, ತುಂಟ ನಗು ಬೀರಿದ ಆ ಪೋರ)
ರವಿಚಂದ್ರನ್ ಹೇಗೆ ಡ್ಯಾನ್ಸ್ ಮಾಡ್ತಾರೆ ಗೊತ್ತಾ?
ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ... (ಸೊಂಟ ತಿರುಗಿಸಿದ್ದೋ ತಿರುಗಿಸಿದ್ದು)
***
ತಂದೆ ಹರಿಹರನ್ ಮಗನ ಮಿಮಿಕ್ರಿ ನೋಡಿ ಹೆಮ್ಮೆಯ ನಗು ಬೀರಿದರು. ಅದಕ್ಕೆ ಕಾನಿಷ್ಕಾ ಹೋಟೆಲ್ ಸಾಕ್ಷಿಯಾಗಿತ್ತು. ಸುತ್ತಲೂ ತಿಂಡಿ ತಿನ್ನುತ್ತಿದ್ದವರೆಲ್ಲಾ ಹುಡುಗನ ಚೂಟಿತನಕ್ಕೆ ಬೆರಗಾದರು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ನಟಿ ಚಿತ್ರಾ ಶೆಣೈ, ಗುರುದಾಸ್ ಶೆಣೈ ಬಳಗ ಈ ಚೋಟುವನ್ನೇ ನೋಡುತ್ತಿದ್ದರು. ಇಷ್ಟು ಚಿಕ್ಕವಯಸ್ಸಿನಲ್ಲೇ ವಿಷ್ಣು, ಅಂಬಿ, ರವಿಚಂದ್ರನ್, ಪ್ರಭಾಕರ್ ಎನ್ನುತ್ತಾನಲ್ಲಾ, ಅಕಸ್ಮಾತ್ ಮೀಸೆ ಬಂದ ಮೇಲೆ ಇನ್ನೇನೊ...?
ಆಶ್ಚರ್ಯದ ಜತೆಗೆ ಕುತೂಹಲದಿಂದ ಹುಡುಗನ ಬಳಿ ಬಂದು-
ಚಿತ್ರಾ ಶೆಣೈ: ಏನು ಮರಿ ನಿನ್ ಹೆಸರು?
ಪೋರ: ನನ್ ಹೆಸರು ಆನಂದ್, ಇವರು ನಮ್ ಡ್ಯಾಡಿ ಹರಿಹರನ್, ಕಾನಿಷ್ಕ ಹೋಟೆಲ್‌ಗೆ ದೋಸೆ ತಿನ್ನಲು ಬಂದಿದ್ವಿ. ಮಿಮಿಕ್ರಿ ಮಾಡ್ತಾ ಇದೀನಿ, ನಿಮಗೂ ಮಾಡಿ ತೋರಿಸ್ಲಾ?
ಚಿತ್ರಾ ಶೆಣೈ: ಎಲಾ ಹುಡುಗಾ? ಪರವಾಗಿಲ್ಲ ನೀನು. ಜೋರಿದ್ದೀಯಾ ಮರಿ. ಸಿನಿಮಾದಲ್ಲಿ ಇದೇ ಥರ ಮಾಡ್ತೀಯಾ?
ಪೋರ: ಅಂ... ತಡೀರಿ ನಮ್ ಡ್ಯಾಡಿ ಹತ್ರ ಕೇಳಿ ಹೇಳ್ತೀನಿ ಆಂಟಿ...
ಹರಿಹರನ್: ಅಲ್ಲಮ್ಮಾ ನಮಗೆ ಉದ್ಯಮದಲ್ಲಿ ಯಾರ ಪರಿಚಯವೂ ಇಲ್ಲ. ಛಾನ್ಸ್ ಕೇಳುವುದು ಹೇಗೆ ಅಂತ ಗೊತ್ತಿಲ್ಲ. ನಟಿಸಬೇಕೆಂದು ಹುಡುಗನಿಗೆ ತುಂಬಾ ಆಸೆ....
ಹರಿದಾಸ್ ಶೆಣೈ: ಒಂದು ಕೆಲಸ ಮಾಡಿ, ಇಲ್ಲೇ ಮೇಲ್ಗಡೆ ರವಿಚಂದ್ರನ್ ಇದ್ದಾರೆ. ಬನ್ನಿ ಪರಿಚಯ ಮಾಡಿಸುತ್ತೀನಿ. ಅವರು ಒಂದು ಮಕ್ಕಳ ಚಿತ್ರ ಮಾಡುತ್ತಿದ್ದಾರೆ(ಕಿಂದರಿಜೋಗಿ) ಈ ಹುಡುಗನನ್ನು ನೋಡಿದರೆ ಖಂಡಿತ ಒಪ್ಪುತ್ತಾರೆ. ನಡೆಯಿರಿ...
ಕಟ್ ಮಾಡಿದರೆ...
-ದೊಡ್ಡ ಕೊಠಡಿ. ಗಿಟಾರ್, ತಬಲಾ, ಕೀಬೋರ್ಡ್ ಮಧ್ಯೆ ಹಂಸಲೇಖಾ ಕುಳಿತಿದ್ದಾರೆ...
ಆನಂದ್: ಹೈಯ್ಯಾ... ಹಂಸಲೇಖಾ, ಅಂಕಲ್ ನಿಮ್ ಪ್ರೇಮಲೋಕ ಸೂಪರ್ರ್...
ಹಂಸಲೇಖಾ: ಪವರಾಗಿಲ್ಲ, ಚೋಟುದ್ದ ಇಲ್ಲ, ಎಷ್ಟು ಮಾತಾಡ್ತಾನೆ?!
ಚಿತ್ರಾ: ರವಿಚಂದ್ರನ್ ಸಾರ್ ಇಲ್ವಾ?
ಹಂಸ: ಹೊರಗಡೆ ಹೋಗಿದ್ದಾರೆ. ಬರಬಹುದು, ಕುಳಿತುಕೊಳ್ಳಿ.
ಹರಿಹರನ್: ಓಕೆ, ಹಾಗಾದರೆ ಇನ್ನೊಮ್ಮೆ ಬರುತ್ತೇವೆ. ಬಾಯ್ ಸಾರ್...
***
ಇನ್ನೇನು ಲಿಫ್ಟ್ ಕೆಳಗೆ ಬರಬೇಕು; ರವಿಚಂದ್ರನ್ ಅಲ್ಲಿ ಕಾಯುತ್ತಿರುತ್ತಾರೆ. ಲಿಫ್ಟ್ ಎಂಗೇಜ್ ಬಂದ ಕಾರಣ ಪಕ್ಕದಲ್ಲಿದ್ದ ಸರ್ವೀಸ್ ಲಿಫ್ಟ್ ಏರಿ ಮೇಲೆ ಹೋಗಿಬಿಡುತ್ತಾರೆ. ಅಪ್ಪ ಮಗ ಕಾನಿಷ್ಟದಿಂದ ಹೊರಬೀಳಬೇಕು; ಸ್ನೇಹಿತರೊಬ್ಬರು- ಈಗಷ್ಟೇ ರವಿ ಸಾರ್ ಮೇಲೆ ಹೋದರು ಎಂದು ಹೇಳುತ್ತಾರೆ. ಮತ್ತೆ ಲಿಫ್ಟ್ ಬಟನ್ ಒತ್ತುತ್ತಾರೆ. ಅದು ಇಷ್ಟಗಲ ಬಾಯಿ ತೆರೆದುಕೊಳ್ಳುತ್ತದೆ...
***
ರವಿಚಂದ್ರನ್ ಪುಟಾಣಿ ಆನಂದ್‌ನನ್ನು ಹತ್ತಿರ ಕರೆದು: ಏನ್ ಮಾಡ್ತೀಯಪ್ಪಾ ಎಂದು ಕೇಳುತ್ತಾರೆ. ಹುಡುಗ ಸುಮ್ಮನಿರಬೇಕಲ್ಲ, ವಿಷ್ಟು ಸ್ಟೈಲು, ಅಂಬಿ ಡೈಲಾಗು, ಅಷ್ಟೇ ಏಕೆ ಸ್ವತಃ ರವಿಯವರನ್ನೇ ಅನುಕರಿಸಿ, ಅಚ್ಚರಿ ಮೂಡಿಸುತ್ತಾನೆ.
ಆಗ ರವಿ ಏನೆಂದರು ಗೊತ್ತಾ?
ಇಷ್ಟು ವರ್ಷ ಎಲ್ಲಿದ್ದೆ ಪುಟ್ಟಾ ನೀನು? ಹೋಗ್ಲೀ ಬಿಡು, ನೀನು ಕಿಂದರಿಜೋಗಿ ಸಿನಿಮಾದಲ್ಲಿ ಮಾಡಲೇಬೇಕು. ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಒಂದು ಹಾಡು ಮಾತ್ರ ಬಾಕಿ ಇದೆ. ನಾಳೆಯೇ ಮೈಸೂರಿನ ಪ್ರಿಮಿಯರ್ ಸ್ಟುಡಿಯೊಗೆ ಬಾ... ಅಷ್ಟು ಹೇಳಿ ಹಣೆಗೆ ಮುತ್ತಿಟ್ಟು, ಮತ್ತೆ ತಬ್ಬಿಕೊಂಡರು...
***
ಪ್ರಿಮಿಯರ್ ಸ್ಟುಡಿಯೊದಲ್ಲಿ ಡಿಸ್ನಿ ಲೋಕದ ಸೆಟ್ ಹಾಕಲಾಗಿತ್ತು. ಚಿಂಟು ಆನಂದ್ ಅಂದು ಹಣ್ಣು ಹಣ್ಣು ಮುದುಕನ ವೇಷದಲ್ಲಿದ್ದ. ಪಕ್ಕದಲ್ಲಿ ಪುಟ್ಟ ಹುಡುಗಿ ಸಂಗೀತಾ(ಬೆಳೆದು ದೊಡ್ಡವಳಾಗಿ, ಯಾರೆ ನೀನೇ ಚೆಲುವೆ ಚಿತ್ರದಲ್ಲಿ ಸ್ವತಃ ಅದೇ ರವಿಗೆ ನಾಯಕಿಯಾಗಿ, ಗಮನ ಸೆಳೆದ ಅದೇ ಸಂಗೀತಾ!) ತಾತನಿಗೆ ತಕ್ಕ ಅಜ್ಜಿ. ಹಿನ್ನೆಲೆಯಲ್ಲಿ ಆ ಹಾಡು...
ಜನಗಳು ಜನಗಳು ಎಷ್ಟು ಕೆಟ್ಟ ಜನಗಳು
ಉದ್ಧಾರ ಮಾಡ್ತೀನಂತ ಹೋದೋರೆಲ್ಲಾ ಏನಾದ್ರಣ್ಣಾ,
ಎಕ್ಕುಟ್ಟೋದ್ರಣ್ಣಾ...
ಹುಡುಗನಿಗೆ ಹುರುಪೋ ಹುರುಪು. ರವಿಚಂದ್ರನ್ ಓಕೆ ಆಕ್ಷನ್ ಎಂದರು. ಹುಡುಗ ಮೈ ಕೈ ಅಲ್ಲಾಡಿಸುತ್ತಾ ಜನಗಳು ಜನಗಳು... ಎಂದು ಬಾಯಿ ಆಡಿಸತೊಡಗಿದ. ಹತ್ತೇ ಹತ್ತು ನಿಮಿಷದಲ್ಲಿ ಟೇಕ್ ಓಕೆ. ರವಿ ಮತ್ತೊಮ್ಮೆ ಹುಡುಗನ್ನು ಎತ್ತಿ ಮುದ್ದಾಡಿದರು. ಮತ್ತೆ ಆನಂದ್: ಹೆಂಗೆ ಅಂಕಲ್? ಚೆನ್ನಾಗಿ ಮಾಡಿದ್ನಾ...
ರವಿ ಹೇಳಿದ್ದಿಷ್ಟು... ನೀನು ನಿಜವಾಗ್ಲೂ ಲಿಟಲ್ ಚಾಂಪ್ ಕಣೋ ಆನಂದ್!
***
ಅಲ್ಲಿಂದ ಆನಂದ್ ತುಳಿದದ್ದೇ ಹಾದಿಯಾಯಿತು. ಗೌರಿ ಗಣೇಶ, ಮುತ್ತಿನಹಾರ, ಶಿವಶಂಕರ್, ಶಾಂತಿಕ್ರಾಂತಿ, ಹೊಸಜೀವನ, ರಾಣಿ ಮಹಾರಾಣಿ... ಅರವತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟ, ನಂತರ ಚಿತ್ರಾ ಚಿತ್ರದಿಂದ ಮತ್ತೆ ಅಖಾಡಕ್ಕೆ...



*****************************************************


punith raaj kummar

ನಿಮಗಿಲ್ಲೊಂದು ಅಚ್ಚರಿ ಕಾದಿದೆ. ಈ ಹುಡುಗ ಕ್ಯಾಮೆರಾಗೆ ಕ್ಯಾರೆ ಎನ್ನುತ್ತಿರಲಿಲ್ಲ. ಎದುರಿಗೆ ಅದೊಂದು ಜೀವಂತವಾಗಿದೆ ಎಂಬುದನ್ನೇ ಮರೆತುಬಿಡುತ್ತಿದ್ದ. ಪಕ್ಕದಲ್ಲಿ ಡಾ.ರಾಜ್ ಇರುತ್ತಿದ್ದರು. ಕಣ್ಣಲ್ಲೇ ಭೂಮಂಡಲ ತೋರಿಸುವ ಶಕ್ತಿ ಅವರಿಗಿತ್ತು. ಅವರ ಎದುರು ನಿಂತು, ನಿಚ್ಚಳ ನಗು ಬೀರುತ್ತಿದ್ದ ಮುದ್ದು ಕಂದ ಯಾರು ಗೊತ್ತಾ? ಇಂದಿನ ಪವರ್‌ಸ್ಟಾರ್ ಪುನೀತ್!
ಪುನೀತ್ ಬಾಲನಟನಾಗಿ ಬೆಳ್ಳಿತೆರೆಗೆ ಚಿರ ಪರಿಚಿತ. ಜನಿಸಿದ ಮೂರು ತಿಂಗಳಲ್ಲೇ ಆತ ಕ್ಯಾಮೆರಾ ನೋಡಿ, ಪಿಳ ಪಿಳ ಕಣ್ಣು ಬಿಟ್ಟಿದ್ದ. ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುಟಾಣಿ ಅಪ್ಪು ತೊಟ್ಟಿಲಲ್ಲಿ ಮಲಗಿತ್ತು...
ಅಪ್ಪು ಹೆಚ್ಚಾಗಿ ನಟ ಹೊನ್ನವಳ್ಳಿ ಕೃಷ್ಣರ ಜತೆ ಇರುತ್ತಿದ್ದ. ಪ್ರೀತಿಯಿಂದ ಅಪ್ಪಾಜಿ ಅಪ್ಪಾಜಿ... ಎನ್ನುತ್ತಿದ್ದ. ಹೊನ್ನವಳ್ಳಿ ಜತೆಗೆ ಇದ್ದರೆ ಅವನಿಗೆ ಆನೆ ಬಲ. ಪಾತ್ರದ ಒಳ ಅರ್ಥ ತಿಳಿಯದಿದ್ದರೆ-ಅಪ್ಪಾಜೀ ಇದನ್ನು ನೀವೊಮ್ಮೆ ಮಾಡಿ ತೋರಿಸಿ ಎಂದು ನಿಸ್ಸಂಕೋಚವಾಗಿ ಹೇಳುತ್ತಿದ್ದ. ಹೊನ್ನವಳ್ಳಿ ಅದನ್ನು ಭಕ್ತಿಯಿಂದ ಮಾಡುತ್ತಿದ್ದರು. ಪಕ್ಕದಲ್ಲಿ ಅಣ್ಣಾವ್ರು-ಅಭಿನಯ ಅಂದ್ರೆ ಅದು ಕಂದಾ. ನೀನೂ ಹಾಗೆ ಮಾಡಬೇಕು ಎಂದು ಬೆನ್ನುತಟ್ಟುತ್ತಿದ್ದರು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅಪ್ಪು ಹಾವೊಂದನ್ನು ಕುತ್ತಿಗೆಗೆ ಸುತ್ತಿಕೊಳ್ಳಬೇಕಿತ್ತು. ಹೊನ್ನವಳ್ಳಿ ಅದನ್ನು ತಮ್ಮ ಕುತ್ತಿಗೆಗೆ ಮೆತ್ತಿಕೊಂಡು ತೋರಿಸಿದ್ದರು. ಎರಡು ನಕ್ಷತ್ರ ಶೂಟಿಂಗ್ ಸಮಯದಲ್ಲಿ ಸ್ವತಃ ಅವರೇ ಕುದುರೆ ಏರಿದ್ದರು. ಪುಟ್ಟ ಪುನೀತ್ ಅದನ್ನೇ ಅನುಕರಿಸಿ ಸೈ ಎನಿಸಿಕೊಂಡ.
ಅಂದು ಅಪ್ಪು ಜತೆ ಕಳೆದ ಇಂತಹ ಹತ್ತಾರು ರಸ ಕ್ಷಣಗಳು ಹೊನ್ನವಳ್ಳಿ ಎದೆಯಲ್ಲಿ ಬಂಗಾರದ ನೆನಪಾಗಿ ಉಳಿದಿದೆ. ಅವರಿಗೀಗ ಅರವತ್ತರ ಹರೆಯ. ಪುನೀತ್ ಮೊದ ಮೊದಲು ಮಾಡಿದ ಚೇಷ್ಟೆ, ಆ ಬಾಲ್ಯದಲ್ಲಿ ಅವನಿಗಿದ್ದ ಕಾರ್ಯಶ್ರದ್ಧೆ ಬಗ್ಗೆ ಹೀಗೆ ಹೇಳುತ್ತಾರೆ...
ಅಪ್ಪು ಎಂದರೆ ಎಲ್ಲರ ಅಚ್ಚುಮೆಚ್ಚು. ಕೆಲಸದ ಬಗ್ಗೆ ಇದ್ದ ಪ್ರೀತಿ, ಪರಕಾಯ ಪ್ರವೇಶ ಮಾಡುವ ರೀತಿ ಅಚ್ಚರಿ ಮೂಡಿಸುವಂತದ್ದು. ಭಕ್ತ ಪ್ರಹ್ಲಾದ ಚಿತ್ರೀಕರಣದಲ್ಲಿ ರಾಜಣ್ಣ ಇಷ್ಟಗಲ ಕಣ್ಣು ಬಿಟ್ಟು-ಎಲ್ಲಿರುವನು ಆ ನಿನ್ನ ಹರಿ ಎಂದು ಹೇಳುವುದೇ ತಡ; ಈ ಚೋಟಾರಾಜನ್-ಅಪ್ಪಾಜಿ ಹಾಗೆ ನನ್ನನ್ನು ನೋಡಬೇಡಿ, ಭಯವಾಗುತ್ತೆ... ಎನ್ನುತ್ತಿದ್ದ. ಆಗ ಅಣ್ಣಾವ್ರು-ಹಾಗಲ್ಲ ಕಂದಾ, ಅದು ಹೀಗೇ ಬರಬೇಕು, ನಿಮ್ಮ ತಾತನೂ ಹೀಗೇ ಮಾಡುತ್ತಿದ್ದರು. ಅದಕ್ಕೆಲ್ಲಾ ಹೆದರಿದರೆ ಹೇಗೆ? ಎಂದು ತಲೆ ಸವರುತ್ತಿದ್ದರು.
ಹಾಗಂತ ಅದು ಖಂಡಿತ ಪುಕ್ಕಲುತನವಲ್ಲ. ಅದು ಕೇವಲ ಕಲಿಕೆ ಬಗ್ಗೆ ಇದ್ದ ಗೌರವ. ಎಲ್ಲಿ ತಾನು ಮಾಡಿದ್ದು ಚೆನ್ನಾಗಿ ಬರಲಿಲ್ಲವೋ ಎಂಬ ತವಕ. ಮತ್ತೊಮ್ಮೆ ಮಾಡ್ಲಾ? ಇನ್ನೊಮ್ಮೆ ಆ ಡೈಲಾಗ್ ಹೇಳಲಾ? ಎಂದು ಮತ್ತೆ ಮತ್ತೆ ಅಪ್ಪಾಜಿಯನ್ನು ಕೇಳುತ್ತಿದ್ದ... ನೆನಪಿಡಿ, ಪುನೀತ್‌ಗೆ ಆಗಿನ್ನೂ ಆರರ ಹರೆಯ.
ಬೆಟ್ಟದ ಹೂವು ಚಿತ್ರೀಕರಣದಲ್ಲೂ ಅದನ್ನೇ ಮಾಡಿದ. ಅಆಇಈ ಅರಿಯದ ಪೋರನ ಪಾತ್ರವದು. ಇದನ್ನು ಹೀಗೆ ಮಾಡ್ಲಾ? ಹಾಗೆ ಮಾಡಬಹುದಾ ಎಂದು ನಿರ್ದೇಶಕರ ಲಕ್ಷ್ಮಿನಾರಾಯಣ ಅವರನ್ನೇ ಪ್ರಶ್ನಿಸುತ್ತಿದ್ದ. ಅಲ್ಲಿದ್ದ ಎಲ್ಲರೂ ಮೂಕಸ್ಮಿತರಾಗಿ ಅವನನ್ನೇ ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಅವನಿಗೆ ಪಾತ್ರಪ್ರೀತಿಯಿತ್ತು.
ಅಪ್ಪು ಹೆಜ್ಜೆ ಇಡಲಾರಂಭಿಸಿದಾಗ ಅಭಿನಯಿಸಿದ ಮೊದಲ ಚಿತ್ರ ಭಾಗ್ಯವಂತ. ಮೇಲೆ ಕ್ಯಾಮೆರಾ ಇತ್ತು. ಅದೊಂಥರಾ ಭಯಾನಕ ಜಾಗ. ಅಣ್ಣಾವ್ರು ಆಗಾಗ ಎಚ್ಚರಿಸುತ್ತಿದ್ದರು- ಕಂದಾ ಹಾಗೆ ನಡೆಯಬೇಡ, ಹೀಗೆ ಬಾ ಎಂದು ಸ್ವತಃ ನಟಿಸಿ ತೋರಿಸುತ್ತಿದ್ದರು. ಹುಡುಗನಿಗೆ ಅಂಜಿಕೆ ಇರಲಿಲ್ಲ. ಪುನೀತ್ ಹುಟ್ಟಿದ್ದು ಮಯೂರ ಚಿತ್ರೀಕರಣ ಸಮಯದಲ್ಲಿ. ಬಹುಶಃ ಅದಕ್ಕೇ ಅಷ್ಟೊಂದು ಧೈರ್ಯ ಹಾಗೂ ಸಾಹಸ ಪ್ರವೃತ್ತಿ. ಎರಡು ನಕ್ಷತ್ರಗಳು ಚಿತ್ರೀಕರಣದ ಸಮಯದಲ್ಲಿ ಬಹದ್ದೂರ್ ಗಂಡಿನ ಥರ ಕುದುರೆ ಏರಿ, ಹೈಯ್ಯಾ ಎಂದು ಸವಾರಿ ಹೊರಡುತ್ತಿದ್ದ. ಕುದುರೆಯ ವೇಗ ಹೆಚ್ಚಿದರೂ ಆತನ ಮೊಗದಲ್ಲಿ ಕಿಲಕಿಲ ನಗು, ಅಷ್ಟೇ...
ಎಲ್ಲರೂ ಅಪ್ಪುವನ್ನು ಎತ್ತಿ ಮುದ್ದಾಡಬಯಸುತ್ತಿದ್ದರು. ಆದರೆ ಅವನಿಗೆ ಒಂಥರಾ ಮುಜುಗರ. ಹೊಸಬೆಳಕು ಚಿತ್ರೀಕರಣದಲ್ಲಿ ರಾಜಣ್ಣರ ಸ್ನೇಹಿತ ಕುಂದಾನೆ ಸತ್ಯನ್ (ಅಣ್ಣಾವ್ರ ಆಪ್ತಮಿತ್ರ, ಸಹ ನಿರ್ದೇಶಕ) ಅಪ್ಪೂಗೆ ಮುತ್ತು ಕೊಡಲು ಮುಂದಾದರೆ ಆತ ನಿರಾಕರಿಸುತ್ತಿದ್ದ. ಅಪ್ಪಾಜಿ ಬಳಿ ಹೋಗಿ-ಆ ಅಂಕಲ್ ಕಚ್ಚಲು ಬರುತ್ತಾರೆ ಎನ್ನುತ್ತಿದ್ದ. ಅಪ್ಪಾಜಿ - ಹಾಗಲ್ಲ ಕಂದಾ, ಅವರು ನಿನ್ನನ್ನು ಮುದ್ದಾಡಲು ಹಾಗೆ ಮಾಡುತ್ತಾರೆ. ಹೋಗಪ್ಪಾ ಒಂದು ಉಮ್ಮಾ ಕೊಡುತ್ತಾರೆ ಎನ್ನುತ್ತಿದ್ದರು...
ಅಪ್ಪು ಹಾಡಿದ ಭಕ್ತಪ್ರಹ್ಲಾದ ಚಿತ್ರದ ಆ ಹಾಡು...‘
ಪೇಳುವೆ ತಾತಾ ಸುನೇತಾ...’ ಇನ್ನೂ ನೆನಪಿದೆ.
ಅಣ್ಣಾವ್ರು ಅದನ್ನು ಒಮ್ಮೆ ಹೇಳಿ ತೋರಿಸುತ್ತಿದ್ದರು. ಅಪ್ಪು ಅದನ್ನು ಚಾಚೂ ತಪ್ಪದೇ ಹೇಳುತ್ತಿದ್ದ. ಒಂದೇ ಶಾಟ್‌ಗೆ ಟೇಕ್ ಓಕೆ ಆಗುತ್ತಿತ್ತು.
ವಸಂತಗೀತ ಚಿತ್ರದಲ್ಲಿ ಪುನೀತ್‌ಗೆ ಹೆಣ್ಣಿನ ವೇಷ ಹಾಕಲಾಗಿತ್ತು. ಆಗ ಡ್ರೆಸ್ಸಿಂಗ್ ರೂಮಿನಿಂದ ಹೊರ ಬರಲು ಏನೋ ಒಂಥರಾಥರಾ... ಅಪ್ಪಾಜೀ ನಂಗೇ ನಾಚ್ಕೆ ಆಗುತ್ತೆ ಎಂದು ನುಲಿಯುತ್ತಿದ್ದ. ಅದಕ್ಕೆ ಅಪ್ಪಾಜಿ-ಅಪ್ಪೂ ಜನ ಖುಷಿ ಪಡ್ಲಿ ಅಂತ ತಾನೆ ನಾವು ಇಷ್ಟೆಲ್ಲಾ ಮಾಡೋದು, ಬಾ ಕಂದಾ ಎಂದು ಕರೆಯುತ್ತಿದ್ದರು.
ಎರಡು ನಕ್ಷತ್ರಗಳು ಟೈಂನಲ್ಲಿ ಯುವರಾಜ ಹಾಗೂ ಬಡ ಹುಡುಗನ ಪಾತ್ರ ಮಾಡಿದ್ದ. ಎರಡನ್ನೂ ಲೀಲಾಜಾಲವಾಗಿ ನಿಭಾಯಿಸಿದ್ದ. ರಾಜನ ಡ್ರೆಸ್‌ನಲ್ಲಿ ನಿಂತು ಕನ್ನಡಿಗೆ ಮುಖ ಮಾಡುತ್ತಿದ್ದ. ಇಲ್ಲಿ ನಿಲ್ಲಲಾ, ಅಲ್ಲಿ ನಿಲ್ಲಲಾ ಎಂದು ಕ್ಯಾಮೆರಾಮನ್ ಗೌರಿಶಂಕರ್ ಬಳಿ ಕೇಳುತ್ತಿದ್ದ. ಹುಡುಗನ ಎದೆಗಾರಿಕೆ ಕಂಡು ಕ್ಯಾಮೆರಾಮನ್ ಗೌರಿ ಶಂಕರ್ ನಿಬ್ಬೆರಗಾಗಿದ್ದರು...
***
ಹೀಗೆ ಹೊನ್ನವಳ್ಳಿ ಕೃಷ್ಣ ಅಂದಿನ ಅಪ್ಪು ಅಂತರಂಗಕ್ಕೆ ಕನ್ನಡಿ ಹಿಡಿಯುತ್ತಾರೆ. ಆ ದಿನಗಳ ಸವಿ ನೆನಪನ್ನು ಬಿಡಿಬಿಡಿಯಾಗಿ ಹರವಿಡುತ್ತಾರೆ. ಅಂದು ಆತನಿಗಿದ್ದ ಶ್ರದ್ಧೆಗೆ ಇಂದು ಪ್ರತಿಫಲ ಸಿಕ್ಕಿದೆ. ಜನ ಅಪ್ಪುವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ ಎಂದು ಹೇಳಲು ಅವರು ಮರೆಯುವುದಿಲ್ಲ...


*************************************************************************
10
raamakrishna


ಆ ಹುಡುಗ ಥೇಟ್ ಚಾಕಲೇಟ್ ತುಂಡಿನಂತಿದ್ದ. ನಾಟಕ ಅವನ ಉಸಿರಾಗಿತ್ತು. ಗುಬ್ಬಿ ಕಂಪನಿ ಅವನ ಗೂಡಾಗಿತ್ತು. ದೂರದ ಊರಿಂದ ಬಂದಿದ್ದ ಆ ಪೋರನಿಗೆ ಎಲ್ಲೋ ಒಂದು ಕಡೆ ಬಣ್ಣದ ಲೋಕ ಬಾ ಬಾ...ಎಂದು ಕೈ ಬೀಸಿತ್ತು.
ಆದರೆ ಅವಕಾಶ ಆಕಾಶದಷ್ಟು ಎತ್ತರ. ಏನು ಮಾಡುವುದು? ಆಗ ಪಾಲಿಗೆ ಬಂದ ಪಂಚಾಮೃತ-ಪ್ರಜಾಮತ ದಿನಪತ್ರಿಕೆ. ಅಲ್ಲೊಂದು ಜಾಹೀರಾತಿತ್ತು: ನಾವು ಫಲಿತಾಂಶ ಎಂಬ ಚಿತ್ರ ಮಾಡುತ್ತಿದ್ದೇವೆ. ನಾಯಕನ ಪಾತ್ರಕ್ಕೆ ಯೋಗ್ಯವಾದವರು ಬೇಕಾಗಿದ್ದಾರೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ... ಪುಟ್ಟಣ್ಣ ಕಣಗಾಲ್, ಚಲನಚಿತ್ರ ನಿರ್ದೇಶಕ
ಹುಡುಗ ಹಿರಿ ಹಿರಿ ಹಿಗ್ಗಿದ. ಕೂಡಲೇ ಏರ್‌ಲೈನ್ಸ್ ಹೋಟೆಲ್ ಕಡೆ ಗುಳೆ ಹೊರಟ. ಆ ಹೋಟೆಲ್ ಆವರಣ ಅಂದು ಸಿರಸಿ ಮಾರಿಕಾಂಬಾ ಜಾತ್ರೆಯಾಗಿತ್ತು. ಐದು ಸಾವಿರಕ್ಕೂ ಹೆಚ್ಚು ಹುಡುಗರು ಸಾಲು ಮರದಂತೆ ನಿಂತಿದ್ದರು.
ಹುಡುಗ ಅಲ್ಲಿಗೆ ಬಂದು ನಿಂತಾಗ ಬೆಳಗ್ಗೆ ಎಂಟು ಗಂಟೆ. ಕ್ಯೂನಲ್ಲಿ ನಿಂತು ನಿಂತು ನಿತ್ರಾಣಗೊಂಡ. ಆಷ್ಟಾದರೂ ಉಸಿರು ಸಿನಿಮಾ ಸಿನಿಮಾ ಎನ್ನುತ್ತಿತ್ತು. ನೂಕು ನುಗ್ಗಲಲ್ಲೇ ನಳನಳಿಸಿದ. ಅಂತೂ ಇಂತೂ ಹನ್ನೊಂದು ಮುಕ್ಕಾಲರ ಹೊತ್ತಿಗೆ ಸಂದರ್ಶನ ಕೊಠಡಿ ಸಮೀಪ ಬಂದು ನಿಂತ. ಅಲ್ಲಿದ್ದವರು ಒಬ್ಬೊಬ್ಬರನ್ನೇ ಒಳಗೆ ಬಿಡುತ್ತಿದ್ದರು. ಅದರ ಉಸ್ತುವಾರಿಯನ್ನು ನಟಿ ಆರತಿ ಸೋದರ ದತ್ತು ವಹಿಸಿದ್ದರು. ಸಂಯಮ ಅವರ ಮಾತು ಕೇಳುತ್ತಿರಲಿಲ್ಲ. ಮಾತೆತ್ತಿದರೆ ನೆಕ್ಟ್ಸ್ ನೆಕ್ಟ್ಸ್ ಎನ್ನುತ್ತಿದ್ದರು. ಬೆವರು ಮೈಯನ್ನೇ ನುಂಗಿ, ನೀರು ಕುಡಿದಿತ್ತು. ಕೊನೆ ಕೊನೆಗೆ ಐದೈದು ಹುಡುಗರನ್ನು ಒಳಗೆ ಬಿಡತೊಡಗಿದರು.
***
ಎದುರಿಗೆ ಪುಟ್ಟಣ್ಣ ಕುಳಿತಿದ್ದಾರೆ. ಸುತ್ತಮುತ್ತ ಕ್ಯಾಮೆರಾಮನ್, ಅವರು ಇವರು...ಹುಡುಗ ಒಮ್ಮೆ ಇಣುಕಿದ. ಎದೆಯಲ್ಲಿ ರೋಮಾಂಚನ. ನೀರ್‍ನಳ್ಳಿ ಊರಿನ ಪಕ್ಕದ ಶೀಗೇಹಳ್ಳಿಯ ಕೇಶವ ಸ್ವಾಮಿ ನೆನಪಾದ.
ಪುಟ್ಟಣ್ಣ ಬೆಳಗ್ಗೆಯಿಂದ ಬಸವಳಿದು, ಬಿಸಿ ತುಪ್ಪವಾಗಿದ್ದರು. ಅವರ ಬಾಯಲ್ಲೂ ನೆಕ್ಟ್ಸ್ ನೆಕ್ಟ್ಸ್ ...
ಹುಡುಗ : ನಮಸ್ಕಾರ ಸ್ವಾಮಿ, ನನ್ನ ಹೆಸರು ರಾಮಕೃಷ್ಣ ಅಂತ.
ಪುಟ್ಟಣ್ಣ: ಯಾವೂರು? ಏನು ಕೆಲಸ ಮಾಡಿಕೊಂಡಿದ್ದೀಯಾ?
ಹುಡುಗ: ನಮ್ಮೂರು ಸಿರಸಿ ಸಮೀಪದ ನೀರ್‍ನಳ್ಳಿ. ಗುಬ್ಬಿ ಕಂಪನಿಯಲ್ಲಿ ಎರಡೂವರೆ ವರ್ಷದಿಂದ ನಾಟಕ ಮಾಡಿಕೊಂಡಿದ್ದೀನಿ...
ಪುಟ್ಟಣ್ಣ: ಸರಿ ಸರಿ, ಈಗ ಏನು ಮಾಡುತ್ತೀಯಾ ಅದನ್ನು ಮಾಡಿತೋರಿಸು. ಒಂದು ಡೈಲಾಗ್ ಹೇಳು ನೋಡೋಣ... ಲೈಟ್ಸ್ , ಕ್ಯಾಮೆರಾ, ಆಕ್ಷನ್...
ಹುಡುಗ: ಇದು ಲವ ಕುಶ ನಾಟಕದ ಡೈಲಾಗು. ಪುಟ್ಟಸ್ವಾಮಯ್ಯನವರು ಬರೆದದ್ದು. ಲಕ್ಷ್ಮಣ ಹೇಳುವುದು: ವನಕ್ಕೆ ಹೋಗಬೇಕೆಂದು ನೀವೇಕೆ ಬೇಡಿಕೊಂಡಿರಿ ತಾಯಿ?೧೪ ವರ್ಷ ವನವಾಸದಲ್ಲಿ ಕಣ್ಣೆವೆಯಂತೆ ಕಾಯ್ದ ಈ ಅತ್ತಿಗೆಯನ್ನು ಲಕ್ಷ್ಮ ಣ ಕೊಲೆ ಮಾಡಿದ ಎಂಬ ಅಪಕೀರ್ತಿ ನನಗೆ ಜೀವನ ಪರ್ಯಂತ ತಪ್ಪದು ತಾಯಿ...
ಪುಟ್ಟಣ್ಣ ಒಂದೇ ಏಟಿಗೆ ಬೆರಗಾಗಿ ಹೋದರು. ಆದರೂ ಅದನ್ನು ಮೇಲ್ನೊಟಕ್ಕೆ ತೋರ್ಪಡಿಸಲಿಲ್ಲ. ಹುಡುಗನನ್ನು ಹತ್ತಿರ ಕರೆದು, ‘ ಸರಿ ಸರಿ, ನಿನ್ನ ವಿಳಾಸ ಇಲ್ಲಿ ಬರೆ, ಪತ್ರ ಕಳುಹಿಸುತ್ತೇವೆ. ಎಲ್ಲಿ ಈ ಕಡೆ ಆ ಕಡೆ ಒಮ್ಮೆ ಓಡಾಡು. ಒಮ್ಮೆ ನಗಾಡು...’
ಹುಡುಗ ಎಲ್ಲಕ್ಕೂ ಸೈ ಎಂದ. ಹೊರಡುವ ಮುನ್ನ ಮತ್ತೊಮ್ಮೆ ಪುಟ್ಟಣ್ಣನವರ ಕಡೆ ನೋಡಿದ. ಆದರೆ ಅವರ ಕಣ್ಣು ಇನ್ನೇನೋ ಲೆಕ್ಕಾಚಾರ ಹಾಕುತ್ತಿತ್ತು...
***
ನಿಮಗೆ ಆಶ್ಚರ್ಯವಾಗಬಹುದು. ನಾಲ್ಕು ದಿನಕ್ಕೆ ಗಾಂಧಿನಗರದಲ್ಲಿ ವಾಸವಾಗಿದ್ದ ಸ್ವರ್ಣಮ್ಮನವರ (ಗುಬ್ಬಿ ವೀರಣ್ಣನವರ ಮಗಳು) ವಿಳಾಸಕ್ಕೆ ಪತ್ರ ಬಂತು. ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದ ಹುಡುಗ ರಾಮಕೃಷ್ಣ ಅದೇ ವಿಳಾಸ ಕೊಟ್ಟಿದ್ದ. ಅಂದು ಆ ಆರು ಸಾವಿರ ಹುಡುಗರಲ್ಲಿ ಆಯ್ಕೆಯಾದ ಏಕೈಕ ಹುಡುಗ ಎಂದರೆ ನೀರ್‍ನಳ್ಳಿ ರಾಮಕೃಷ್ಣ!
***
ಅದೇ ಸಮಯದಲ್ಲಿ ರಾಮಕೃಷ್ಣ ಅವರಿಗೆ ಬಬ್ರುವಾಹನ ಚಿತ್ರದ ಕೃಷ್ಣನ ಪಾತ್ರಕ್ಕೆ ಬುಲಾವ್ ಬಂದಿತ್ತು. ಫಲಿತಾಂಶ ಚಿತ್ರೀಕರಣ ಮದರಾಸಿನಲ್ಲಿತ್ತು. ಆ ಕಾರಣಕ್ಕೆ ಅದನ್ನು ಕೈ ಬಿಟ್ಟರು. ಆದರೆ ಮುಂದೆ ಮತ್ತೆ ಪುಟ್ಟಣ್ಣ ಪಡುವಾರಹಳ್ಳಿ ಪಾಂಡವರು ಚಿತ್ರಕ್ಕೆ ಚಾಕಲೇಟ್ ಹೀರೊಗೆ ಬುಲಾವ್ ಕೊಟ್ಟರು... ಅಲ್ಲಿಂದ ಆಗಿದ್ದು ಇತಿಹಾಸ. ಈಗಲೂ ರಾಮಕೃಷ್ಣ ಬಿಜಿಯಾಗಿದ್ದಾರೆ. ಲವಲವಿಕೆಯ ಚಿಲುಮೆಯಂತಿದ್ದಾರೆ...

*****************************************************************

೧೧
ತ್ರಿಮೂರ್ತಿಗಳು : ಡುರ್ ಬ್ಯಾ...ಬಾ ಬಾ ಬಾ... ಓಡಿ ಬಾ...
ಹುಡುಗ: ಅಣ್ಣಾ ಬಿಟ್ಬಿಡಿ ಪ್ಲೀಸ್. ಮಧ್ಯಾಹ್ನ ಸರಿಯಾಗಿ ಊಟ ಮಾಡಿಲ್ಲ. ಹೊಟ್ಟೆ ಚುರ್‌ಗುಡುತ್ತಿದೆ.
ತ್ರಿಮೂರ್ತಿಗಳು: ಏನೂ ಆಗಲ್ಲ. ಬೇಗ ಓಡೋಡಿ ಬಾ. ಗಾಡಿ ಹತ್ತಬೇಕು ಅಂತಿದ್ದರೆ ಬಾ...
ಹುಡುಗ: ಯಾಕಣ್ಣಾ ಹೀಗೆ ಸತಾಯಿಸ್ತೀರಿ. ಬಿಡ್ಬಿಡಿ ಅಣ್ಣಾ. ನಾನೇನಣ್ಣಾ ತಪ್ಪು ಮಾಡಿದೆ. ಕೆಟ್ಟ ಬಿಸಿಲು ಬೇರೆ, ಪ್ಲೀಸ್ ಅಣ್ಣಾ...
ತ್ರಿಮೂರ್ತಿಗಳು: ಬಾ ರಾಜಾ ಬಾ, ಏ ಡ್ರೈವರ್ ಸ್ವಲ್ಪ ಜೋರಾಗ್ ಓಡ್ಸು...
ಡ್ರೈವರ್: ಅಯ್ಯೊ ಬಿಟ್ಬಿಡಿ, ಪಾಪ, ಒಳ್ಳೆ ಹುಡುಗ, ಯಾಕ್ ಸುಮ್ನೆ ಸತಾಯಿಸ್ತೀರಾ?
ತ್ರಿಮೂರ್ತಿಗಳು: ಯೋ, ನಿನ್ ಕೆಲ್ಸಾ ಏನಿದ್ಯೊ ಅದನ್ನು ಮಾಡು. ನಮ್ಗೇ ಹೇಳಕ್ ಬಂದ್ಬಿಟ್ಟಾ...
***
ಆ ಗಾಡಿ ಶ್ರೀರಂಗಪಟ್ಟಣದಿಂದ ಹೊರಟಿತ್ತು. ಬೆಂಗಳೂರು ಬರಲು ಇನ್ನೂ ನಾಲ್ಕು ಘಂಟೆ ಬಾಕಿ.ರಣ ರಣ ಬಿಸಿಲಿನ ಬೇಗುದಿ ಭೂಮಂಡಲವನ್ನು ರಣರಂಗವನ್ನಾಗಿಸಿತ್ತು. ಭೂವಾಸಿಗಳಿಗೆ ಛಡಿ ಏಟು ಕೊಡುತ್ತಿತ್ತು. ಆಗತಾನೇ ಆ ಹುಡುಗ ಕನಕಾಂಬರಿ ಚಿತ್ರ ಶೂಟಿಂಗ್ ಮುಗಿಸಿ, ಬಸವಳಿದಿದ್ದ.
ಅದು ಅವನ ಮೊದಲ ಚಿತ್ರ. ದಿನೇಶ್ ಬಾಬು ಚಿತ್ರದಲ್ಲಿ ಮಾಡುತ್ತಿದ್ದೇನೆ. ಅಂಥ ಒಬ್ಬ ಹಿರಿಯ ನಿರ್ದೇಶಕನ ಬಳಿ ಕೆಲಸ ಮಾಡುವುದೇ ಪುಣ್ಯ ಎಂಬ ಹೆಮ್ಮೆ ಇನ್ನೊಂದು ಕಡೆ. ಸಿನಿಮಾ ಛಾನ್ಸ್‌ಗಾಗಿ ಆತ ಅಲೆಯದ ಜಾಗವಿಲ್ಲ. ಗಾಂಧಿನಗರದ ಗಲ್ಲಿಗಲ್ಲಿ ತಿರುಗಿದ್ದ. ಆದರೆ ಅದು ಕೇವಲ ತಿರುಕನ ಕನಸಾಗಿತ್ತು, ಅಷ್ಟೇ. ಮನೆಯಲ್ಲಿ ಮಡದಿ ಮಕ್ಕಳು. ಇಂದು ಊಟ ಇದ್ದರೆ ನಾಳೆ ಹೊಟ್ಟೆ ಹಸಿದ ಹೆಬ್ಬುಲಿಯಾಗುತ್ತಿತ್ತು. ಹಗಲೆಲ್ಲಾ ಯೋಗರಾಜ್ ಭಟ್ಟರ ಗೂಡು. ಅದು ಕತ್ರಿಗುಪ್ಪೆಯಲ್ಲಿತ್ತು. ಆ ಸೂರಿನಡಿ ಸೂರಿ(ದುನಿಯಾ ನಿರ್ದೇಶಕ), ಕಾಮಿಡಿ ಟೈಂ ಗಣೇಶ್(ಈಗಿನ ಗೋಲ್ಡನ್ ಸ್ಟಾರ್) ಶ್ರೀನಗರ ಕಿಟ್ಟಿ(ಸವಾರಿ ಕಿಟ್ಟಿ) ಪ್ರೀತಂ ಗುಬ್ಬಿ(ಹಾಗೆ ಸುಮ್ಮನೆ) ರಂಗ(ರಂಗನಾಥ್-ಸಂಭಾಷಣೆಕಾರ, ನಿರ್ದೇಶಕ)ನಾಗಶೇಖರ್(ಅರಮನೆ) ಹೀಗೆ ಅಲ್ಲಿ ದೊಡ್ಡ ದಂಡೇ ಇತ್ತು. ಎಲ್ಲ ಒಂದೇ ಹೊತ್ತು ತಿಂದರೂ ಹಂಚಿ, ತಿನ್ನುತ್ತಿದ್ದರು. ಕುಳಿತಲ್ಲೇ ಕನಸಿನ ಮಹಲು ಕಟ್ಟುತ್ತಿದ್ದರು. ಮತ್ತೆ ಮರುದಿನ ಕೆಡವುತ್ತಿದ್ದರು. ಆದರೆ ಆಗ ಹೆಸರು, ಕೀರ್ತಿ ಹಾಗೂ ಹಣ ಅವರ ಜತೆ ತಾತ್ಕಾಲಿಕವಾಗಿ ಮುನಿಸಿಕೊಂಡಿತ್ತು...
ಆ ತಂಡದ ಖಾಯಂ ಸದಸ್ಯ ಈ ಹುಡುಗ. ಅವಕಾಶಗಳ ಬೆನ್ನೇರಿ ಹೊರಟಿದ್ದ ಅವನಿಗೆ ಆಸರೆಯಾಗಿ, ವಾತ್ಸಲ್ಯ ತೋರಿದ್ದು ಸಹ ನಿರ್ದೇಶಕಿ ವತ್ಸಲಾ. ಅವರು ದಿನೇಶ್ ಬಾಬು ಅಸಿಸ್ಟೆಂಟ್. ಆಗ ಕನಕಾಂಬರಿ ಚಿತ್ರೀಕರಣ ನಡೆಯುತ್ತಿತ್ತು. ಸಹ ನಟರನ್ನು ಆಯ್ಕೆ ಮಾಡುವುದು ವತ್ಸಲಾ ಕಾಯಕ. ಈ ಹುಡುಗನ ಚಾಕಚಕ್ಯತೆ ಕಂಡು, ಒಂದು ಅವಕಾಶ ಕೊಡಿಸಿದ್ದರು.
ಆ ಹುಡುಗ ಹಿರಿ ಹಿರಿ ಹಿಗ್ಗಿದ. ಕನಸಿನ ಸೌಧದ ಬಾಗಿಲು ತೆರೆದ ಅನುಭವ. ಆಗಲೇ ಸ್ಟಾರ್ ಆಗಿಬಿಟ್ಟಿದ್ದೇನೆ ಎಂಬ ಖುಷಿ. ಭಟ್ಟರ ಬಳಗ ಬೆನ್ನುತಟ್ಟಿ, ಪ್ರೋತ್ಸಾಹಿಸಿತು. ಹುಡುಗ ಶ್ರೀರಂಗಪಟ್ಟಣದ ಬಸ್ಸು ಏರಿದ. ಬಸ್ ಚಾರ್ಜ್ ಕೂಡ ಭಟ್ಟರ ಬಳಗ ಕೊಟ್ಟ ಪ್ರಸಾದ...
ಸರಿ, ಶ್ರೀರಂಗಪಟ್ಟಣ ಬಂತು. ಅಲ್ಲೊಂದು ಲಾಡ್ಜ್. ಆ ಕಡೆ ಹೆದಹೆದರುತ್ತಲೇ ಹೈದ ಹೆಜ್ಜೆ ಹಾಕಿದ. ಎದೆಯಲ್ಲಿ ಸುಂಟರಗಾಳಿ ಬೀಸಿದ ಧಾವಂತ. ಬೇನಾಮಿ ಊರು ಬೇರೆ. ಲಾಡ್ಜ್ ಗೇಟ್ ಕೀಪರ್ ಆ ಕರಿವದನ ನೋಡಿ, ಕಿರಿಕಿರಿ ಮಾಡಿದ. ಹುಡುಗ ಹೆದರಲಿಲ್ಲ. ಸ್ವಾಮಿ, ನಾನು ಬಾಬು ಸಾಹೇಬ್ರ ಸಿನಿಮಾದಲ್ಲಿ ಮಾಡ್ತಿವ್ನಿ. ಇಲ್ಲಿಗೆ ಬರಕೇಳಿದ್ರು ವತ್ಸಲಾ ಮೇಡಮ್ಮು... ಎಂದ.
ಲಾಡ್ಜ್ ಬಾಗಿಲು ತೆರೆದುಕೊಂಡಿತು. ಭಾಗ್ಯದ ಬಾಗಿಲೇ ತೆರೆದಂಥ ಅನುಭವ ಆ ಹುಡುಗನಿಗೆ. ಅಲ್ಲಿದ್ದ ಕೆಲವರು-ಬೆಳಗ್ಗೆ ಬೇಗ ಏಳಬೇಕು. ಅಲ್ಲೇ ಕೋಣೆಯಲ್ಲಿ ಹೋಗಿ ಬಿದ್ಕೊ... ಎಂದರು. ಹುಡುಗ ಅದನ್ನೇ ಮಾಡಿದ.
ಅಷ್ಟರಲ್ಲಿ ಬಂದರು ಆ ತ್ರಿಮೂರ್ತಿಗಳು. ಮಂಚದ ಮೇಲೆ ಮಲಗಿರುವ ಹುಡುಗನನ್ನು ಹಿಡಿದು ಎಳೆದರು. ಹುಡುಗ ಒಮ್ಮೆ ಬೆಚ್ಚಿಬಿದ್ದ.
ತ್ರಿಮೂರ್ತಿಗಳು: ಯಾರೊ ನೀನು. ನಿನಗೆ ಮಲಗೋಕೆ ನಮ್ಮ ಮಂಚಾನೇ ಬೇಕಿತ್ತಾ. ಏಳೊ ಮೇಲೆ ಬಡವನ್ ತಂದು. ಕೆಳಗೆ ಬಿದ್ಕೊಳ್ಳೊ...
ಹುಡುಗ ಆ ಚಳಿಯಲ್ಲೂ ಬೆವರಿನ ಹನಿಯಾದ. ಈ ಮೂವರು ಆರಾಮವಾಗಿ ಮಂಚದ ಮೇಲೆ ಅಂಗಾತ ಮಲಗಿದರು. ಹುಡುಗ ಕೊರೆಯುವ ಛಳಿರಾಯನ ಕಾಟಕ್ಕೆ ತತ್ತರಿಸಿ ಹೋದ...
ಬೆಳಗ್ಗೆ ಐದಕ್ಕೇ ಎದ್ದ. ಮೇಕಪ್ ಮಾಡಿಕೊಂಡು, ಹೊರಗಡೆ ಕಾಯುತ್ತಿದ್ದ ಗಾಡಿ ಹತ್ತಿದ; ಹಿಂದಿನ ಸೀಟಿನಲ್ಲಿ ಕುಳಿತ. ಹತ್ತು ನಿಮಿಷದಲ್ಲಿ ಮತ್ತೊಂದು ಗೆಸ್ಟ್‌ಹೌಸ್ ಬಂತು. ಆ ಮೂವರು ಮುಂದೆ ಮುಂದೆ. ಹುಡುಗ ಹಿಂದೆ ಹಿಂದೆ.
ದಿನೇಶ್‌ಬಾಬು ಬಿಳೀ ಟೊಪ್ಪಿಯಲ್ಲಿದ್ದರು. ಸಾಂಗ್ ರೆಡಿನಾ, ಎಲ್ಲಾ ಓಕೇನಾ.... ಎನ್ನತೊಡಗಿದರು. ಹುಡುಗ ಆ ಮೂವರ ಹಿಂಬದಿಯಲ್ಲಿ ನಿಂತ. ಅಷ್ಟೇ. ಅವರೆಲ್ಲಾ ವಿಲನ್‌ಗಳು. ಈತ ಅವರ ಹಿಂದೆ ನಿಂತು ಆಕಾಶ ನೋಡುವ ಮರಿ ವಿಲನ್. ಅರ್ಧ ಗಂಟೆಯಲ್ಲಿ ಎಲ್ಲಾ ಮುಗಿಯಿತು. ಹುಡುಗ ಮನಸ್ಸಿನಲ್ಲೇ ಮಂಡಿಗೆ ತಿಂದ. ಅಯ್ಯೊ ಬರೀ ಇಷ್ಟಕ್ಕೇ ಬೆಂಗಳೂರಿನಿಂದ ಬರಬೇಕಿತ್ತಾ? ಏನಾದ್ರೂ ಮಾತನಾಡುವ ಪಾತ್ರ ಕೊಡಿ ಎಂದು ಡೈರೆಕ್ಟರ್ ಬಳಿ ಬೇಡಿಕೊಳ್ಳೋಣ ಎಂದುಕೊಂಡು, ಇನ್ನೇನು ಬಾಯಿ ತೆರೆಯಬೇಕು; ಬಾಬು-ಕುಂಬಳಕಾಯಿ ತನ್ರೊ... ಎಂದುಬಿಟ್ಟರು. ಅದು ಚಿತ್ರದ ಕಡೇ ದೃಶ್ಯವಾಗಿತ್ತು. ಹುಡುಗನ ಕಣ್ಣು ಮತ್ತೆ ಹಸಿ ಹಸಿ...
***
ಪ್ರೊಡಕ್ಷನ್ ಮ್ಯಾನೇಜರ್ ಹುಡುಗನನ್ನು ಹತ್ತಿರ ಕರೆದು ಆರುನೂರು ರೂ. ಕೈಗಿಟ್ಟು, ಕೈ ತೊಳೆದುಕೊಂಡ. ಇಷ್ಟೇನಾ ಸ್ವಾಮಿ ಎಂದು ಕೇಳಬೇಕೆನ್ನಿಸಿತು. ಅದು ಅಧಿಕಪ್ರಸಂಗವಾದೀತು ಎಂದು ಸುಮ್ಮನಾದ. ಅದು ಮುಗಿದದ್ದೇ ತಡ, ಒಂದು ಖಾಲಿ ಗಾಡಿ ಬಂದು ನಿಂತಿತು. ಆ ತ್ರಿಮೂರ್ತಿ ವಿಲನ್‌ಗಳು ಅದರಲ್ಲಿ ಬಂದು ಕುಳಿತರು. ಹಿಂಬದಿ ಡೋರ್ ತೆಗೆದು ಆ ಹುಡುಗನೂ ಕುಂತ. ಗಾಡಿ ಬೆಂಗಳೂರಿನತ್ತ ಮುಖ ಮಾಡಿತು.
ಸುಮಾರು ಐವತ್ತು ಕಿ.ಮೀ. ಕ್ರಮಿಸಿತು. ತ್ರಿಮೂರ್ತಿಗಳು ಸಿಗರೇಟಿಗೆ ಬಾಯಿ ಕೊಡುವ ಸಲುವಾಗಿ ಗಾಡಿ ನಿಲ್ಲಿಸಿದರು. ಹುಡುಗನಿಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ.
ತ್ರಿಮೂರ್ತಿಗಳು ಹುಡುಗನನ್ನು ಗಾಡಿಯಿಂದ ಕೆಳಗಿಳಿಸಿದರು. ಅಮಾಯಕ ಸ್ವಾಮಿ ಚಿತ್ತ ಎಂದು ಅದನ್ನೇ ಮಾಡಿದ. ಸ್ವಲ್ಪ ಗಾಡಿ ತಳ್ಳು ಎಂದು ಮುಖ ಮುಖ ನೋಡಿಕೊಂಡು ಮೂವರೂ ನಕ್ಕರು. ಹುಡುಗ ಐಸ್ಸಾ...ಐಸ್ಸಾ... ಎನ್ನತೊಡಗಿದ...
ಗಾಡಿ ಮುಂದೆ ಸಾಗಿತು. ಹುಡುಗ ಮತ್ತೆ ನಿತ್ರಾಣಗೊಂಡ. ಸ್ವಾಮಿ ಕಾರ್ ನಿಲ್ಸಿ ಸ್ವಾಮಿ. ಬಿಸ್ಲಲ್ಲಿ ತಲೆ ಸುಡ್ತಾ ಐತೆ... ಎಂದು ಗೋಗರೆದ...
ಗಾಡಿ ಧೂಳಿನ ಮಧ್ಯೆ ಮಾಯವಾಯಿತು... ಹತ್ತು ಮಾರು ದೂರ ಹೋಗಿ ನಿಂತಿತ್ತು. ಹುಡುಗ ಓಡೋಡಿ ಬಂದ...
ಹೊಟ್ಟೆ ಹಸಿದಿತ್ತು. ಒಂದು ಕಡೆ ಗಾಡಿ ಮತ್ತೆ ನಿಂತಿತು. ಆ ಊರಿನ ಹೆಸರು ಬಾಬುರಾಯನಕೊಪ್ಪಲು. ಅಲ್ಲೊಂದು ಕಡೆ ‘ಬಿರ್ಯಾನಿ ಊಟ ತಯಾರಿದೆ’ ಎಂಬ ಬೋರ್ಡ್ ಕಂಡಿತು. ಕೂಡಲೇ ಹುಡುಗ ಅಲ್ಲಿಗೆ ಶಿಫ್ಟ್ ಆದ. ಹೊಟ್ಟೆ ತುಂಬ ಉಂಡ. ಅಲ್ಲಿ ಇನ್ನೂರು ರೂ. ಬಿಲ್ ಆಗಿತ್ತು. ಕೈಯಲ್ಲಿ ಉಳಿದಿದ್ದು ಕೇವಲ ನಾನೂರು ರೂ.!
ತ್ರಿಮೂರ್ತಿಗಳು- ಬಾರೋಲೋ... ನಿನಗಾಗಿ ನಾವು ಎಷ್ಟು ಹೊತ್ತು ಕಾಯಬೇಕೊ... ಎಂದು ರೇಗಿದರು...
ಹುಡುಗ: ಬಂದೆ ಸ್ವಾಮಿ, ನನ್ನನ್ನು ಬಿಟ್ಟುಹೋಗಬೇಡಿ, ಪ್ಲೀಸ್...
***
ಹೀಗೆ ರಸ್ತೆಯುದ್ದಕ್ಕೂ ಓಡಿ ಓಡಿ, ಹೈರಾಣವಾದ ಹುಡುಗ ಯಾರು ಗೊತ್ತಾ? ಇಂದಿನ ಬ್ಲ್ಯಾಕ್ ಕೋಬ್ರಾ, ಸದ್ಯದ ಕನ್ನಡದ ಆಕ್ಷನ್ ಸ್ಟಾರ್ ದುನಿಯಾ ವಿಜಿ. ಅಂದು ಆ ಹುಡುಗ ಪಟ್ಟ ಪಾಡು ಆ ಭಗವಂತನಿಗೇ ಗೊತ್ತು. ತ್ರಿಮೂರ್ತಿಗಳು ವಿಜಿಗೆ ಕೊಟ್ಟ ಕಾಟ ಅಷ್ಟಿಟ್ಟಲ್ಲ. ವಿಜಿ ಆ ದಿನವನ್ನು ಇಂದಿಗೂ ಮರೆತಿಲ್ಲ. ಅಂದು ಶೂಟಿಂಗ್‌ನಲ್ಲಿ ತೊಟ್ಟ ಟಿ-ಶರ್ಟ್‌ಅನ್ನು ಇನ್ನೂ ಇಟ್ಟುಕೊಂಡಿದ್ದಾರೆ. ಅಂದು ವಿನಾಕಾರಣ ತೊಂದರೆಕೊಟ್ಟ ಆ ಮೂರು ಮುತ್ತುಗಳನ್ನು ಮರೆಯಲು ಸಾಧ್ಯವಾಗಲಿಲ್ಲ. ಅಂದು ಸುಖಾಸುಮ್ಮನೆ ತೊಂದರೆಕೊಟ್ಟ ಆ ಮೂವರು ಇಂದು ಉದ್ಯಮದಲ್ಲೇ ಇದ್ದಾರೆ. ಆದರೆ ಯಾರೊಬ್ಬರೂ ಹೆಸರು ಮಾಡಿಲ್ಲ. ಇತ್ತೀಚೆಗೆ ಅವರಲ್ಲಿ ಒಬ್ಬ ವಿಜಿಗೆ ಸಿಕ್ಕಿದ್ದನಂತೆ. ಆತನನ್ನು ಹತ್ತಿರ ಕರೆದು-ನೋಡಿ, ಅವತ್ತು ನೀವು ನಂಗೆ ಆ ಥರ ಓಡಿಸಿದ್ದಕ್ಕೆ ನನಗೆ ಇಷ್ಟು ‘ತಾಕತ್’ ಬಂತು. ಕಷ್ಟ ಪಟ್ಟು ಮೇಲೆ ಬರಬೇಕು, ನಿಮ್ಮನ್ನೆಲ್ಲಾ ಮಾತನಾಡಿಸಬೇಕು ಎಂಬ ಛಲ ಬಂತು. ಒಂದು ಮಾತು ಹೇಳ್ತೀನಿ ತಿಳ್ಕೊ. ಇವತ್ತು ನಾನು ಮನಸ್ಸು ಮಾಡಿದ್ರೆ ನಿಮ್ಮನ್ನು ಗಾಂಧಿನಗರದಿಂದಲೇ ಓಡಿಸಬಹುದು. ಆದರೆ ಹಾಗೆ ಮಾಡುವುದು ಮನುಷ್ಯತ್ವ ಅಲ್ಲ. ಇನ್ಯಾವತ್ತೂ ನನ್ನ ಮುಂದೆ ನಿಂತು ಹಲ್ಲುಗಿಂಜಬೇಡ. ಗೆಟ್ ಲಾಸ್ಟ್ ಎಂದು ಚುರುಕು ಮುಟ್ಟಿಸಿದರಂತೆ!
ವಿಜಿ ಅಂದು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಬರುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ. ಮೂವರೂ ಸೇರಿ ಕೆಂಗೇರಿ ಮೋರಿ ಬಳಿ ಇಳಿಸಿಬಿಟ್ಟರು. ಅಣ್ಣಾ... ಇಲ್ಲೇ ಕತ್ರಿಗುಪ್ಪೆ ವರೆಗೆ ಬಿಡ್ರಣ್ಣಾ, ರಾತ್ರಿ ಆಗೈತೆ. ಕಳ್ಳರ ಕಾಟ ಬೇರೆ. ನಿಮ್ ದಮ್ಮಯಾ ಅಂತೀನಿ... ಎಂದು ಎಷ್ಟು ಕೇಳಿಕೊಂಡರೂ ಅವರ ಮನಸ್ಸು ಗುಡಿಬಂಡೆಯ ಬಂಡೆಯಂತಾಗಿತ್ತು...
ತ್ರಿಮೂರ್ತಿಗಳು: ದೊಡ್ಡ ಮಿನಿಷ್ಟ್ರು ಈತ. ಇವನನ್ನು ಮನೆ ಬಾಗಿಲಿಗೆ ಬಿಡಬೇಕಂತೆ. ಹೋಗ್‌ಹೋಗು...
ವಿಜಿಗೆ ಅಲ್ಲಿಂದ ಕತ್ರಿಗುಪ್ಪೆ ವರೆಗೆ ಬರಬೇಕು. ಏನು ಮಾಡುತ್ತಾನೆ. ಕಿಸೆಯಲ್ಲಿ ಇರುವುದು ಕೇವಲ ೪೦೦ ರೂ.ಅಷ್ಟೇ. ಕತ್ರಿಗುಪ್ಪೆಗೆ ಅಲ್ಲಿಂದ ಐದಾರು ಕೀ.ಮಿ. ಅಲ್ಲಿಂದ ಆಟೊ ಹಿಡಿದು ಮನೆ ಸೇರುವ ಹೊತ್ತಿಗೆ ಘಂಟೆ ಹನ್ನೆರಡಾಗಿತ್ತು. ಇಡೀ ಬೆಂಗಳೂರೆಂಬ ಬೆಂಗಳೂರು ಗೊರಕೆಯ ಪ್ರತಿರೂಪವಾಗಿತ್ತು. ಆಗಸದಿ ಉದಯಿಸಿದ್ದ ಆ ಚಂದ್ರ ಹುಡುಗನ ಅಸಹಾಯಕತೆ ಕಂಡು ಕಿಲಕಿಲ ನಗುತ್ತಿದ್ದ!

12
amulyaa

ಅಮೂಲ್ಯಾ ಪರ್ವಕಾಲ...
ಅವಳು ಆಗಿನ್ನೂ ಅಮೂಲ್ ಬೇಬಿ. ಹೆಸರು ಮೌಲ್ಯ. ವಯಸ್ಸು ಎಂಟು. ಬಾಲ್ಯದ ಜತೆಗಿನ ನಂಟು ಇನ್ನೂ ಕಗ್ಗಂಟಾಗಿಯೇ ಉಳಿದಿತ್ತು. ಮುಖ ತೇಜಸ್ಸಿನ ತವರೂರಾಗಿತ್ತು. ಅದಾಗಲೇ ಭರತನಾಟ್ಯ ಅವಳಲ್ಲಿ ಪರಕಾಯ ಪ್ರವೇಶ ಮಾಡಿತ್ತು. ಪುಟ್ಟ ಪುಟ್ಟ ಹೆಜ್ಜೆ ಇಟ್ಟರೂ ಅದನ್ನು ಸವಾಲಿನ ರೂಪದಲ್ಲಿ ಇಡುತ್ತಿದ್ದಳು. ಒಮ್ಮೆ ಇಟ್ಟ ಹೆಜ್ಜೆ ಮತ್ತೆ ಕದಲುವ ಪ್ರಶ್ನೆಯಿಲ್ಲ!
ಅಂದು ಆ ಹುಡುಗಿಯ ಹಾವಭಾವ, ನೃತ್ಯದಲ್ಲಿ ತೋರುವ ತಲ್ಲೀನತೆ, ನಟಿಸಬೇಕೆಂಬ ಹಂಬಲ ಕಂಡು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಬೆರಗಾದರು. ಇಷ್ಟು ಚಿಕ್ಕ ವಯಸ್ಸಿಗೆ ಈ ಮಟ್ಟದ ಪಾಂಡಿತ್ಯವಾ? ಹಾಗಾದರೆ ಹುಡುಗಿ ಎಷ್ಟು ವಯಸ್ಸಿನಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ ಎಂಬ ಆಶ್ಚರ್ಯಕ್ಕೆ ರೆಕ್ಕೆ ಪುಕ್ಕ ಬಂದಿತ್ತು...
ಅದು ಚಿಕ್ಕಮಗಳೂರಿನ ಒಂದು ಎಸ್ಟೇಟ್. ಅಲ್ಲಿ ಪರ್ವ ಚಿತ್ರದ ಶೂಟಿಂಗ್. ದೈತ್ಯಾಕಾರದ ಮನೆ. ಚಿಕ್ಕಮಗಳೂರು ಮಲೆನಾಡಿನ ಮೂಲಬೇರಿದ್ದಂತೆ. ಅಲ್ಲಿ ಮನೆಗಳ ಸುತ್ತ ಹಸಿರಿನ ಹೊದಿಕೆಯಿರುತ್ತದೆ. ಕಣ್ಣಳತೆಗೆ ಸಿಗಲಾರದಷ್ಟು ವನಸಿರಿ. ಅವುಗಳ ಮಧ್ಯೆ ಆ ಒಂಟಿ ಮನೆ. ಮನೆಯ ಮುಂದಿತ್ತು ಆ ಬೃಹತ್ ಗಾತ್ರದ ವರಾಂಡ. ವರಾಂಡವೇ ವೇದಿಕೆ. ಕೆರೆಮನೆ ಶಂಭು ಹೆಗಡೆ ಅಲ್ಲಿ ಯಜಮಾನ. ಭರತನಾಟ್ಯದ ಮೇಷ್ಟ್ರು. ಮೌಲ್ಯಾಗೆ ಹೆಗಡೆಯವರ ಮಗಳ ಪಾತ್ರ...
ವಿಷ್ಣುವರ್ಧನ್ ಮೇಕಪ್‌ನಲ್ಲಿದ್ದರು. ಜತೆಗೆ ಪ್ರೇಮಾ. ಪ್ರೇಮಾ, ಶಂಭು ಹೆಗಡೆಯವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕು. ಪಕ್ಕದಲ್ಲಿ ನಿಂತಿದ್ದಳು ಈ ಹುಡುಗಿ. ಪ್ರೇಮಾ ಫೇಮಸ್ ನಟಿ ನಿಜ, ಆದರೆ ಭರತನಾಟ್ಯದಲ್ಲಿ ಸಿಕ್ಕಾಪಟ್ಟೆ ವೀಕು. ಹೆಜ್ಜೆ ಹಾಕುವುದೆಂದರೆ ಕಹಿ ಔಷಧಿಯನ್ನು ಕುಡಿಯುವಾಗ ಮಕ್ಕಳು ಹೇಗೆ ಹಲ್ಲು ಕಡಿಯುತ್ತಾರೊ, ಹಾಗೆ ಮಿಳ ಮಿಳ ಎನ್ನುತ್ತಿದ್ದರು.
ಆದರೆ ಆ ಹುಡುಗಿ ಹೆಗಡೆಯವರ ತಾಳಕ್ಕೆ ತಪ್ಪದೇ ಹೆಜ್ಜೆ ಹಾಕುತ್ತಿದ್ದರು. ಶಂಭು ಸಾಹೇಬರು- ಶಭಾಷ್ ಮಗಳೇ, ಶಭಾಷ್... ಹಾಗಪ್ಪಾ ಹೆಜ್ಜೆ ಹಾಕೋದು ಅಂದ್ರೆ ಎಂದು ಹುರಿದುಂಬಿಸುತ್ತಿದ್ದರು. ನಿಮಗೆ ಆಶ್ಚರ್ಯವಾಗಬಹುದು. ಪ್ರೇಮಾ ಕೆಲ ಹೆಜ್ಜೆಗಳನ್ನು ಮೌಲ್ಯಾಳಿಂದ ಹೇಳಿಸಿಕೊಳ್ಳುತ್ತಿದ್ದರು. ನೆನಪಿರಲಿ ಆಗಿನ್ನೂ ಆ ಹುಡುಗಿಗೆ ಎಂಟು ವರ್ಷ, ಅಷ್ಟೇ!
ವಿಷ್ಣು ದೂರದಲ್ಲೇ ನಿಂತು, ಬಾಲೆಯ ಬೆಡಗು, ಬಿನ್ನಾಣ ಕಂಡು ಅಚ್ಚರಿ ಪಡುತ್ತಿದ್ದರು. ಕೆಲ ಸಲವಂತೂ ಆ ಪುಟ್ಟ ಪುಟ್ಟ ಹೆಜ್ಜೆಗಳು ವರಾಂಡಕ್ಕೆ ಮುತ್ತಿಡುವಾಗ ಭಾವುಕರಾಗುತ್ತಿದ್ದರು. ಮತ್ತೆ ಕೆಲವೊಮ್ಮೆ ಸಿಳ್ಳೆಯ ಮಳೆಗರೆಯುತ್ತಿದ್ದರು. ಹುಡುಗಿಯನ್ನು ತಬ್ಬಿ, ಮುದ್ದಾಡುತ್ತಿದ್ದರು. ಒಂದು ದಿನವಂತೂ ವಿಷ್ಣು ಮಗುವನ್ನು ಹತ್ತಿರ ಕರೆದು, ಹೀಗೆ ಹೇಳಿಬಿಟ್ಟರು: ಕಂದಾ, ನಿನಗೆ ಖಂಡಿತಾ ಮುಂದೆ ಒಳ್ಳೆಯ ಭವಿಷ್ಯವಿದೆ. ನಿನ್ನಲ್ಲಿ ಆ ಶಕ್ತಿ ಇದೆ...
***
ಅಷ್ಟೇ ಅಲ್ಲ, ಯಾರಾದರೂ ಅತಿಥಿಗಳು ಬಂದರೆ ವಿಷ್ಣು - ನೋಡೀಪ್ಪಾ ಇವರು ಮೌಲ್ಯಾ ಅಂತ, ನಮ್ಮೆಲ್ಲರ ಭರತನಾಟ್ಯ ಗುರುಗಳು. ಎಷ್ಟು ಮುದ್ದಾಗಿ ಹೆಜ್ಜೆ ಹಾಕುತ್ತಾಳೆ ಗೊತ್ತಾ... ಚೂಟಿ ಹುಡುಗಿ. ನೀವೂ ಒಮ್ಮೆ ನೋಡಿ ಎಂದು ಅಮೂಲ್ಯಾಗೆ ಕಣ್ ಸನ್ನೆ ಮಾಡಿ, ದಿತ್ತಿತೈದಿತ್ತಿತ್ತೈ ಎಂದು ಕರತಾಡನ ಮಾಡುತ್ತಿದ್ದರು!
***
ಅದೇ ಹುಡುಗಿ ಇಂದಿನ ಅಮೂಲ್ಯಾ ಎಂದರೆ ನೀವು ನಂಬಲೇಬೇಕು, ನಂಬಬಹುದಾದ ಸತ್ಯ. ಪರ್ವ ಚಿತ್ರದಲ್ಲಿ ನಟಿಸಿದ್ದ ಮೌಲ್ಯಾ ನಂತರ ನಿರ್ದೇಶಕ ಎಸ್. ನಾರಾಯಣ್ ಕಣ್ಣಿಗೆ ಬಿದ್ದಳು, ಅಮೂಲ್ಯಾ ಆಗಿ ಬದಲಾದಳು. ಚೆಲುವಿನ ಚಿತ್ತಾರಕ್ಕೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಅಮ್ಮು ಆಗಿನ್ನೂ ಒಂಬತ್ತನೇ ಕ್ಲಾಸು. ಸಾವಿರಾರು ಜನರಲ್ಲಿ ಕೊನೆಗೆ ಸಿಕ್ಕ ಅಮೂಲ್ಯ ರತ್ನ ಮೌಲ್ಯಾ...
ಆದರೆ ಹುಡುಗಿಗೆ ಇನ್ನೂ ಎಳೆ ಪ್ರಾಯ, ನಾಯಕಿಯಾಗುವ ಅರ್ಹತೆ ಬರಲು ಎರಡು ವರ್ಷ ಬೇಕಿತ್ತು. ಮುಂದೆ ನೋಡೋಣ. ಅಗತ್ಯ ಬಿದ್ದರೆ ಹೇಳಿಕಳಿಸುತ್ತೇನೆ ಎಂದು ನಾರಾಯಣ್ ಮನೆಗೆ ಕಳುಹಿಸಿದ್ದರು. ನಂತರ ಲೆಕ್ಕವಿಲ್ಲದಷ್ಟು ನಟಿಯರ ಸ್ಕ್ರೀನ್ ಟೆಸ್ಟ್ ಮಾಡಲಾಯಿತು. ಅಮೂಲ್ಯಾಗೆ ಸರಿಸಾಟಿಯಾಗಬಲ್ಲ ಒಂದೇ ಒಂದು ಮುಖ ಸಿಗಲಿಲ್ಲ. ನಾರಾಯಣ್‌ಗೆ ಹಳೇ ಗಂಡನ ಪಾದವೇ ಗತಿಯಾಯಿತು. ಕೂಡಲೇ ಮೌಲ್ಯಾಗೆ ಫೋನಾಯಿಸಿದರು...
ಅಲ್ಲಿಂದ ಚಿತ್ತಾರ ಶುರು. ಅದು ರಿಮೇಕ್ ಆದರೂ ಹಿಟ್ ಆಯಿತು. ಅಮೂಲ್ಯಾ ಪಡ್ಡೆ ಹುಡುಗರ ಪಾರಿಜಾತವಾದರು. ಹೈಸ್ಕೂಲ್ ಹುಡುಗಿಯರಿಗೆ ‘ಮಾದರಿ’ಯಾದರು...
ಈಗಲೂ ಆಟೊದಲ್ಲಿ, ಬಸ್ಸಲ್ಲಿ, ಕಾರಲ್ಲಿ, ರೋಡಲ್ಲಿ, ಪಾರ್ಕಲ್ಲಿ, ಥೀಯೇಟರ್ ಗೇಟಲ್ಲಿ... ಎಲ್ಲೆಲ್ಲೂ ಅಮೂಲ್ಯಾ...

***********************************************************************

13

komal....
ಕಿಲ ಕಿಲ... ಕೋಮಲ...

ಆತ ನಡೆದಾಡುವ ಪಾದರಸ. ಬಾಯಿಬಿಟ್ಟರೆ ಮಿ.ಗರಗಸ. ಹಾಸ್ಯ ಅವನ ಬೆನ್ನೇರಿ ನಿಂತಿದೆ. ಪರದೆ ಮೇಲೆ ಹಾ...ಗೇ... ಬರುತ್ತಿದ್ದರೆ ಜನ ಪಲ್ಟಿ ಹೊಡೆದು ನಗುತ್ತಾರೆ. ಪಕ್ಕದಲ್ಲಿ ನಾಯಕ ನಿಂತಿದ್ದರೂ ಕಣ್ಣೆಲ್ಲಾ ಅವನ ಮೇಲೆ, ಅವನ ಮಾತಿನ ಧಾಟಿಯ ಮೇಲೆ...
ಹೆಸರು ಕೋಮಲ್. ಅಡ್ಡ ಹೆಸರು ಕಾಮಿಡಿಕಿಂಗ್. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಹಿಮ್ಯಾನ್ ಆಫ್ ಹ್ಯೂಮರ್ ಎನ್ನುತ್ತಾರೆ. ಬಹುಶಃ ಈಗಾಗಲೇ ನಿಮ್ಮ ತುಟಿ ಮೇಲೆ ನಗುವಿನ ಗುಲಾಬಿ ಅರಳಿದ್ದರೂ ಆಶ್ಚರ್ಯವಿಲ್ಲ. ಅದೇ ಕೋಮಲ್ ಮೊದಲ ಚಿತ್ರದಲ್ಲಿ ಹೇಗೆಲ್ಲಾ ಆಟ ಆಡಿದ ಗೊತ್ತಾ? ಇಲ್ಲಿದೆ ಕೋಮಲ್‌ಕಾಂಡ...
***
ಮೈಸೂರು ರಸ್ತೆ ಸಮೀಪದ ಟಿಂಬರ್ ಯಾರ್ಡ್. ಕಟ್ಟಿಗೆ ರಾಶಿ ಒಟ್ಟಿಗೆ ಮಲಗಿತ್ತು. ವಿಲನ್ ಪಾತ್ರಧಾರಿ ಕೀರ್ತಿರಾಜ್ ಮುಖಕ್ಕೆ ಮೇಕಪ್ ಮೆತ್ತಿಕೊಂಡಿತ್ತು. ಅದಾಗಲೇ ತೆರೆ ಮೇಲೆ ದೊಡ್ಡ ರೇಪಿಸ್ಟ್ ಎಂದು ಕೀರ್ತಿ ಕೀರ್ತಿ ಗಳಿಸಿದ್ದರು. ಎದುರಿಗೆ ಈ ಸುಕೋಮಲ ಹುಡುಗ ಕೋಮಲ್‌ಕುಮಾರ್.
ಅದು ಜಗ್ಗೇಶ್ - ಸ್ವಾತಿ ಜೋಡಿಯ ಸೂಪರ್ ನನ್ ಮಗ ಚಿತ್ರದ ಶೂಟಿಂಗ್. ಆ ದೃಶ್ಯದಲ್ಲಿ ಕೋಮಲ್, ತನ್ನ ತಂದೆಯ ಸಾವಿಗೆ ಕಾರಣವಾದ ಕೀರ್ತಿ ಬಳಗಕ್ಕೆ ಧಮಕಿ ಹಾಕಬೇಕು. ನಿರ್ದೇಶಕ ಮುದ್ದುರಾಜ್ ದೂರದಲ್ಲಿ ನಿಂತು ‘ಕೋಮಲ್, ಹೆದರಬೇಡ, ನಾವೆಲ್ಲಾ ಇದ್ದೇವೆ. ಗುಡ್‌ಲಕ್’ ಎಂದು ಆಕ್ಷನ್, ಕ್ಯಾಮೆರಾ...
‘ನನ್ ಮಕ್ಳಾ ಎಲ್ಲರೂ ಸೇರಿ, ನಮ್ ತಂದೇನಾ ಸಾಯಿಸಿಬಿಟ್ರಲ್ಲೊ...’
ಮುದ್ದುರಾಜ್: ಯಾಕಪ್ಪಾ ಏನಾಯ್ತು...
ಕೋಮಲ್: ಏನಿಲ್ಲಾ ಅಂಕಲ್ ಗಂಟ್ಲು ಹಿಡ್ಕೊಂಬುಟ್ಟಿದೆ. ಮಾತಾಡೋಕೆ ಆಗ್ತಾ ಇಲ್ಲಾ...
ಮುದ್ದುರಾಜ್:ಅಯ್ಯೊ ಹಾಗಂದ್ರೆ ಹೇಗೆ ಕೋಮಲ್, ಮಾಡ್ತೀಯಾ ನೀನು... ಮಾಡು ಮಾಡು...
ಕೋಮಲ್:ನನ್ ಮಕ್ಳಾ... ಎಲ್ರೂ ಸೇರಿ...
ಮುದ್ದುರಾಜ್: ಕಟ್, ಕಟ್. ಕಟ್...
ಹುಡುಗ ಮೈಯೆಲ್ಲಾ ಮಂಜಿನ ಹನಿ... ಮುಖ ಸೀದು ಹೋದ ಬೆಂಡೇಕಾಯಂತಾಗಿತ್ತು. ಮೊದಲ ದೃಶ್ಯಬೇರೆ. ಎಲ್ಲೋ ಲಾಯರ್‌ಗಿರಿ ಓದುತ್ತಿದ್ದವನನ್ನು ಕ್ಯಾಮೆರಾ ಮುಂದೆ ತಳ್ಳಿಬಿಟ್ಟರೆ ಏನಾಗಬೇಡ ಹೇಳಿ?
ಕೋಮಲ್: ಅಂಕಲ್, ಯಾಕೋ ಜ್ವರ ಬರೋ ಹಾಗಿದೆ ಅಂಕಲ್... ಭಯ ಆಗ್ತಿದೆ. ಜಗ್ಗಣ್ಣ ಎಲ್ಲಿ ಅಂಕಲ್...
(ಆ ಕಡೆಯಿಂದ ನವರಸ ನಾಯಕನ ಆಗಮನ. ಬಂದವನೇ ತಮ್ಮನನ್ನು ನೋಡಿ, ತಬ್ಬಿಕೊಂಡರು. ಒಮ್ಮೆ ನಿರ್ದೇಶಕರ ಕಡೆ, ಇನ್ನೊಮ್ಮೆ ಕೀರ್ತಿರಾಜ್ ಕಡೆ ನೋಡಿದ್ದೋ ನೋಡಿದ್ದು)
ಯಾಕೆ ಕಂದಾ? ಹೆದರಿಕೆ ಆಯ್ತಾ. ಹಾಗೆಲ್ಲಾ ಹೆದರಬಾರದು. ಎದುರಿಗೆ ಕ್ಯಾಮೆರಾ ಇದೆ ಅನ್ನೋದನ್ನೇ ಮರೆತುಬಿಡು, ಆಗ ಎಲ್ಲಾ ಸರಿಯಾಗುತ್ತೆ... ಎಂದು ಸೂಪರ್ ನನ್ ಮಗ ತಮ್ಮನ ತಲೆ ಸವರಿದ.
ಕೋಮಲ್: ಇಲ್ಲಾ ಅಣ್ಣಯ್ಯಾ, ಈಗ ಸರಿ ಮಾಡ್ತೀನಿ. ಆದರೆ ನೀನು ಇಲ್ಲೇ ಇರು...
ಜಗ್ಗೇಶ್: ನೋಡು ಇದು ಕೊನೇ ಅವಕಾಶ, ಈಗ ಸರಿ ಮಾಡಿಲ್ಲ ಎಂದ್ರೆ ನಾನೇ ಬೈತೀನೀ...
***
ಕೋಮಲ್: ನನ್ ಮಕ್ಳಾ... ಮಂ.. ಮಂ...
ಜಗ್ಗೇಶ್: ಲೇ ದಡ್ಡಾ, ಹಾಗಲ್ಲ ಕಣೋ... ಹೀಗೆ- ‘ನನ್ ಮಕ್ಳಾ ಎಲ್ಲರೂ ಸೇರಿ, ನಮ್ ತಂದೇನಾ ಸಾಯಿಸಿಬಿಟ್ರಲ್ಲೊ... ನಿಮ್ಮನ್ನಾ ಸುಟ್ಟು ಹಾಕ್ತೀನಿ...’
ಮುಖದಲ್ಲಿ ಇನ್ ಸ್ವಲ್ಪ ರೋಷ ಇರಬೇಕು. ಇಲ್ಲಾ ಅಂದ್ರೆ ನಾನೇ ಎರಡು ತದಕತೀನಿ. ನಾಲ್ಕನೇ ಕ್ಲಾಸಿಂದ ನನ್ ಜತೆ ಶೂಟಿಂಗಿಗೆ ಬರ್‍ತಾ ಇದ್ದೀಯಾ. ಈಗ ನೋಡಿದ್ರೆ ಬೆಬ್ಬೆಬ್ಬೆ ಅಂತೀಯಾ. ಡೈಲಾಗ್ ಡೆಲಿವರಿ ಹಾಗೆ ಡಗಾರ್ ಡಗಾರ್ ಅಂತ ಇರಬೇಕು...
ಕೋಮಲ್: ಆಯ್ತಣ್ಣಯ್ಯಾ... ಈಗ ಪಕ್ಕಾ ಮಾಡ್ತೀನಿ...
***
ಹೀಗೆ ಜಗ್ಗಣ್ಣ ತಮ್ಮಯ್ಯಂಗೆ ಬೈದೇ ಬೈದರು, ಬೈದೇ ಬೈದರು. ಕೊನೆಗೂ ಐದು ಟೇಕ್ ಆದಮೇಲೆ ಒಂದು ಹಂತಕ್ಕೆ ಓಕೆ ಆಯಿತು. ಅಷ್ಟೊತ್ತಿಗೆ ಮುದ್ದುರಾಜ್ ಮುದ್ದೆಯಾದರು. ಜಗ್ಗೇಶ್ ಬಗ್ಗೇಶ್ ಆದರು. ಛಾಯಾಗ್ರಾಹಕ ಮನೋಹರ್ ಕ್ಯಾಮೆರಾ ಹಿಡಿದು ಕ್ಯಾಬರೆ ಮಾಡಿದ್ದೋ ಮಾಡಿದ್ದು...
ಆದರೆ ಕೋಮಲ್‌ಗೆ ತಾನು ಎಲ್ಲಿ ತಾಳ ತಪ್ಪುತ್ತಿದ್ದೇನೆ, ಏನು ಮಾಡಬೇಕಿತ್ತು ಎಂಬ ಅರಿವಾಯಿತು. ಅದೇ ಕೋಮಲ್ ಮತ್ತೊಂದು ದೃಶ್ಯದಲ್ಲಿ ತಾಯಿಯನ್ನು ಖಳರಿಂದ ಬಿಡಿಸಿಕೊಳ್ಳಲು,
ಆ...ರಿಬಾಕ್ ಅಂತ ಫೈಟ್ ಮಾಡಲು ಮುಂದಾಗುತ್ತಾನೆ. ಆಗ ವಿಲನ್‌ಗಳು ಅವನ ತಲೆಗೆ ಎರಡೇಟು ಹಾಕಿ, ಎಸ್ಕೇಪ್ ಆಗುತ್ತಾರೆ. ಆ ದೃಶ್ಯ ಒಂದೇ ಟೇಕ್‌ನಲ್ಲಿ ಓಕೆ ಆಯಿತು!
***
ಆದರೆ ಶೂಟಿಂಗ್ ಮುಗಿಸಿ, ಮನೆಗೆ ಬಂದ ಮಧ್ಯರಾತ್ರಿಯೇ ಕೋಮಲ್‌ಗೆ ಮಲೇರಿಯಾ ಅಟ್ಯಾಕ್ ಆದ ಅನುಭವ. ಈ ಸಿನಿಮಾನೂ ಸಾಕು, ಮೇಕಪ್ಪೂ ಸಾಕು ಎನ್ನುವಷ್ಟು ಭಯ ಕಾಡತೊಡಗಿತು. ಅಲ್ಲಿಂದ ಜ್ವರ ಮೈಯಲ್ಲಿ ಮನೆ ಮಾಡಿತು. ಒಂದು ವಾರವಾದರೂ ಕೋಮಲ್ ಹಾಸಿಗೆ ಬಿಟ್ಟು ಏಳಲಿಲ್ಲ. ಜಗ್ಗಣ್ಣ ತಲೆ ಮೇಲೆ ಇಟ್ಟಿದ್ದ ಕೈಯನ್ನು ಕೆಳಗಿಳಿಸಲಿಲ್ಲ!
***
ಅದೇ ಕೋಮಲ್ ಇಂದು ಮಾತಿನಲ್ಲೇ ಚಮ್ಕಾಯಿಸಿ, ಚಿಂದಿ ಉಡಾಯಿಸುತ್ತಾನೆ. ಮಸ್ತ್ ಮಜಾ ನಟಿಸಿ, ಹಾಸ್ಯದ ಹೊಳೆ ಹರಿಸುತ್ತಾನೆ. ಇದೇ ಕೋಮಲ್ ಅಂದು ಹಾಗೆಲ್ಲಾ ಮುಲು ಮುಲು ಎಂದಿದ್ದ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು, ಅದು ಜಡೆ ಮಾಯಸಂದ್ರದ ಆಣೆಗೂ ಸತ್ಯ!


ಪೂರ್ಣ ವಿರಾಮ /ಕಲಗಾರು

Thursday, January 29, 2009

ಆಪ್ತಮಿತ್ರನ ಜತೆ ಆಪ್ತ ಸಂವಾda...



ತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮಾತಿಗೆ ಸಿಕ್ಕಿದ್ದರು. ಕನ್ನಡ ಕುಳ್ಳ ಎಂದೇ ಖ್ಯಾತರಾಗಿರುವ ಅವರು ಜತೆಗೆ ಮಾತಿಗೆ ಕುಳಿತರು. ಅಲ್ಲಿ ಆಯ್ದ ಕೆಲ ಪ್ರಶ್ನೋತ್ತರಗಳ ರೂಪ ನಿಮ್ಮ ಮುಂದಿದೆ...


ಕನ್ನಡದಲ್ಲಿ ರೀಮೇಕ್ ಸಿನಿಮಾ ಅನಿವಾರ್ಯವಾ?

ಸ್ವಾಮಿ, ಈಗ ಕಾಲ ಬದಲಾಗಿದೆ. ರಾಜ್‌ಕಪೂರ್, ಸುನಿಲ್ ದತ್... ಅಷ್ಟೇ ಏಕೆ, ಇತ್ತೀಚೆಗೆ ಅಮೀರ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಘಜನಿ ಎಷ್ಟು ಕೋಟಿ ಕಮಾಯಿಸಿದೆ ಗೊತ್ತಾ? ಪ್ರಚಾರಕ್ಕೆ ರಸ್ತೆಯಲ್ಲಿ ನಿಂತು ಕ್ಷೌರ ಮಾಡಿದ್ದಾರೆ. ಆ ಮೇಕು ಈ ಮೇಕು ಎಂಬುದು ಮುಖ್ಯವಲ್ಲ, ಮನರಂಜನೆ ಬೇಕು. ಅದು ಎಲ್ಲಿ ಸಿಕ್ಕರೆ ಏನಂತೆ? ನಾನಂತೂ ಮುಲಾಜಿಲ್ಲದೇ ಮಾಡುತ್ತೇನೆ. ಹಾಗಂತ ಸ್ವಮೇಕ್ ಮಾಡುವುದಿಲ್ಲ ಎಂದಲ್ಲ.
ನಿಮ್ಮನ್ನು ರೀಮೇಕ್ ಸರದಾರ ಅಂತಾರಂತೆ?
ಅನ್ನಲಿ ಬಿಡಿ, ನಾನು ಮುಳುಗಿ ಹೋಗುವ ಕಾಲದಲ್ಲಿ ಅಂಬಲಿ ಉಣಿಸಿದ್ದು ಆಪ್ತಮಿತ್ರ. ಆದರೆ ಅಷ್ಟಕ್ಕೇ ನಾನು ಸೀಮಿತವಾಗಿಲ್ಲ. ನಿರ್ದೇಶನ, ನಿರ್ಮಾಣ, ನಟನೆ ಎಲ್ಲ ಮಾಡಿದ್ದೇನೆ. ೧೮ ವರ್ಷ ಅನ್ನಕ್ಕೂ ಗತಿ ಇಲ್ಲದೆ ನಕ್ಷತ್ರ ಎಣಿಸಿದ್ದೇನೆ. ನಂತರ ಮತ್ತೆ ಭಲೇ ಕುಳ್ಳ ಎನಿಸಿಕೊಂಡೆ. ಈಗ ಸುಖವಾಗಿದ್ದೇನೆ, ಮತ್ತೆ ಸಿನಿಮಾ ಮಾಡುತ್ತೇನೆ. ಆದರೆ ಇನ್ನೊಂದು ಆಪ್ತಮಿತ್ರ ಅಂತೂ ಅಲ್ಲ. ಎಲ್ಲವನ್ನೂ ಮಾಡಬಹುದು, ಆದರೆ ಸೌಂದರ್ಯಾ!?!

ಆಪ್ತಮಿತ್ರ ಆಗಿ ೫ ವರ್ಷ ಆಯ್ತು, ಗ್ಯಾಪ್ ಏಕೆ?
ಆ ಪ್ರಶ್ನೆಯನ್ನು ಇತ್ತೀಚಿನ ನಾಯಕರಿಗೆ ಕೇಳಿ. ನನಗೆ ಸಿನಿಮಾ ಮಾಡಲು ಇಷ್ಟು ವರ್ಷ ಅಂತರ ಬೇಕಿರಲಿಲ್ಲ. ಐವತ್ತು ವರ್ಷದಿಂದ ಅದೇ ಬದುಕು. ಈಗಿನವರು ಬಹಳ ‘ಬುದ್ದಿವಂತ’ರು. ಎಲ್ಲಿ ಕಾಲ್‌ಶೀಟ್ ಕೇಳಿ, ಕಿರಿಕಿರಿ ಮಾಡುತ್ತಾರೋ ಎಂದು ಫೋನ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಾರೆ. ಕಡೇ ಪಕ್ಷ ವಿಷ್ಣುವರ್ಧನ್ ಆದರೂ ಯೋಚಿಸಬಹುದಿತ್ತು. ಎಲ್ಲಿರಿಗೂ ‘ಸ್ವಾಭಿಮಾನ’. ಅದೇ ಮಲಯಾಳಂ ಚಿತ್ರರಂಗ ನೋಡಿ... ಇತ್ತೀಚೆಗೆ ದಿಲೀಪ್ ಎನ್ನುವ ನಾಯಕ ಸಕ್ಸಸ್ ಇಲ್ಲದೇ ಕಾಲಿ ಕುಳಿತಿದ್ದ. ಅವನನ್ನು ಗೆಲ್ಲಿಸಲು ೧೨ ನಾಯಕರು ಒಟ್ಟಿಗೆ ಸಿನಿಮಾ ಮಾಡಿದರು. ಅದು ಸೂಪರ್‌ಹಿಟ್!
ಕನ್ನಡ ಚಿತ್ರರಂಗಕ್ಕೆ ೭೫ ವರ್ಷ, ಏನನ್ನಿಸುತ್ತಿದೆ?
ಹೆಮ್ಮೆಯಿದೆ. ಆದರೂ ಅಡಿಪಾಯಕ್ಕೆ ಬೆನ್ನಾಗಿ ನಿಂತವರಿಗೆ ಬೆಲೆ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬ ನೋವೂ ಇದೆ. ಈಗಲಾದರೂ ಅಂಥವರ ಬೆವರು ಮುತ್ತಾಗಲಿ. ಹದಿನೈದು ದಿನ ಉದ್ಯಮಕ್ಕೆ ರಜೆ ಇರುತ್ತೆ. ಇರಲಿ, ಸಂಭ್ರಮಿಸೋಣ. ಇದು ನಮ್ಮ ಮನೆ. ನಮ್ಮ ಹೊಟ್ಟೆಗೆ ಹಿಟ್ಟು ಕೊಟ್ಟವರು ಪ್ರೇಕ್ಷಕರು. ಅವರನ್ನು ರಂಜಿಸೋಣ. ನಮ್ಮಿಂದಾದ ಕೈಂಕರ್ಯ ಮಾಡಿ, ಋಣ ತೀರಿಸಿಕೊಳ್ಳೋಣ.

ಸಂಭ್ರಮದ ಖುಷಿ ಹಂಚಿಕೊಳ್ಳಿ...
ಖುಷಿ ಪಡುವ ಮುನ್ನ ವಾಸ್ತವದ ಬಗ್ಗೆ ಒಮ್ಮೆ ಅವಲೋಕಿಸಬೇಕು. ೭೫ನೇ ವರ್ಷದಲ್ಲಿ ೨೫ ಚಿತ್ರವೂ ಗೆಲ್ಲಲಿಲ್ಲ. ನೂರರಲ್ಲಿ ಮೂರು ಮಾತ್ರ ಹಿಟ್. ಕಾರಣ ಕೆದಕಿ, ಕಿತ್ತೊಗೆಯಬೇಕು. ಸಿನಿಮಾವನ್ನು ಮಕ್ಕಳಂತೆ ಪ್ರೀತಿಸಬೇಕು. ಕಥೆಗಾರರಿಗೆ ಬೆಲೆ ಸಿಗಬೇಕು. ಅದ್ಧೂರಿತನದ ಹೆಸರಿನಲ್ಲಿ ದುಂದುವೆಚ್ಚ ನಿಲ್ಲಿಸಬೇಕು. ಸೃಜನ ಶೀಲ ನಿರ್ಮಾಪಕರು ಮಾತ್ರ ಬರಬೇಕು. ಕೊನೇ ಪಕ್ಷ ಇವುಗಳಲ್ಲಿ ಒಂದಾದರೂ ಜಾರಿಯಾಗಬೇಕು!

ಪೂರ್ಣ ವಿ-ರಾಮ ಕಲಗಾರು

ಝಂಡಾ ಊಂಚಾ ರಹೇ ಹಮಾರಾ



ಭಾರತದ ಮೊದಲ ಸ್ವಾತಂತ್ರ್ಯೋತ್ಸವ

ಜನವರಿ ೨೬. ಭಾರತೀಯರು ತಮ್ಮದೇ ಆದ ಸಂವಿಧಾನ ಅಂಗೀಕರಿಸಿ ಸರ್ವ ತಂತ್ರ ಸ್ವತಂತ್ರ್ಯ ಗಣರಾಜ್ಯವಾಗಿ ಘೋಷಿಸಿಕೊಂಡು ವಿಶ್ವ ಮಾನ್ಯತೆ ಪಡೆದ ದಿನ.ರಾಷ್ಟ್ರ ಇತಿಹಾಸದ ಈ ಅವಿಸ್ಮರಣೀಯ ಘಟನೆ ಜನಮಾನಸದಿಂದ ಮರೆಯಾಗದಿರಲು ರಾಷ್ಟ್ರೀಯ ಉತ್ಸವಗಳಲ್ಲಿ ಗಣರಾಜ್ಯೋತ್ಸವ ದಿನಕ್ಕೆ ಮಹತ್ವದ ಸ್ಥಾನ.
ಆದರೆ ಜನವರಿ ೨೬ರ ಹಿರಿಮೆ ಇಷ್ಟೇ ಅಲ್ಲ. ಅದು ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆಗೊಂಡ ದಿನ. ರಾಷ್ಟ್ರದಾದ್ಯಂತ ಜನರು ನಾಡಗುಡಿ ಏರಿಸಿ ಝಂಡಾ ಊಂಚಾ ರಹೇ ಹಮಾರಾ ಎಂದು ಹಾಡಿ ನಲಿದಾಡಿದ ದಿನ.
ಕಾಂಗ್ರೆಸ್‌ನ ಧ್ಯೇಯವು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯವಾಗಿರಬೇಕೆಂದು ತರುಣ ಗುಂಪಿನ ಆತುರ. ಕ್ರಾಂತಿಕಾರ ಮನೋಭಾವದವರಿಗಂತೂ ಮೊದಲಿನಿಂದಲೂ ಪರಕೀಯ ಪ್ರಭುತ್ವವನ್ನು ನಿರ್ಮೂಲನಗೊಳಿಸಬೇಕೆಂಬ ಹಠ. ಬ್ರಿಟಿಷರು ತಾವಾಗಿಯೇ ರಾಷ್ಟ್ರ ಬಿಟ್ಟ ತೆರಳುತ್ತಾರೆ ಎಂಬ ಕಾಂಗ್ರೆಸಿನ ವಿಶ್ವಾಸ ಕರಗಲಾರಂಬಿಸಿತ್ತು. ಸ್ವಾತಂತ್ರ್ಯದ ತಳಮಳ ರಾಷ್ಟ್ರದ ದಶ ದಿಕ್ಕುಗಳಿಂದಲೂ ವ್ಯಕ್ತಗೊಳ್ಳತೊಡಗಿತು..ಶಕ್ಯವಾದರೆ ಸಾಮ್ರಾಜ್ಯದಲ್ಲಿ ಅಗತ್ಯವಾದರೆ ಅದರ ಹೊರೆಗೆ ಎಂಬ ಅನಿಶ್ಚಿತ ಆಕಾಂಕ್ಷೆಗೆ ದೇಶದಲ್ಲಿ ಆಸರೆ ಇಲ್ಲದಂತಾಗಿ ಸರ್ವತಂತ್ರ ಸ್ವತಂತ್ರ್ಯದ ಬೃಹತ್ ವೃಕ್ಷ ಆಳವಾಗಿ ಬೇರೂರಿ ಚಿಗುರಿ ಎಲ್ಲೆಲ್ಲಿಯೂ ಕಾಣಲಾರಂಬಿಸಿತ್ತು. ಹಿರಿಯ ಮುಂದಾಳುಗಳಲ್ಲಿ ಸರಕಾರದ ಹೊಣೆಯಿಲ್ಲದ ಅನ್ಯಾಯದ ಆಳ್ವಿಕೆಯನ್ನು ಸೈರಿಸಲಾಗದೆ ತರುಣರ ಹಂಬಲಕ್ಕೆ ಬೆಂಬಲ ನೀಡುವ ಒಲವು ಒತ್ತರಿಸಿತ್ತು. ನಾಡಿನ ಸ್ವಾತಂತ್ರ್ಯ ಸಮರದ ನಾವೆಯನ್ನು ಜಾಣ್ಮೆಯಿಂದ ನಡೆಸುತ್ತಿರುವ, ಎಲ್ಲಾ ಮನೋಭಾವದವರನ್ನೂ ಒಂದೇ ತೂಕದಲ್ಲಿ ನೆಲೆ ನಿಲ್ಲಿಸಿದ ಮಹಾತ್ಮ ಗಾಂಯವರಿಗೆ ಭಾರತೀಯರ ಈ ಹೊಯ್ದಾಟ ಅರ್ಥವಾಗಿತ್ತು. ಅವರು ಲಾಹೋರಿನ ಕಾಂಗ್ರೆಸ್ಸಿನ ಸಭೆಯಲ್ಲಿ ಪೂರ್ಣ ಸ್ವರಾಜ್ಯದ ಧ್ಯೇಯಕ್ಕೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದರು. ತರುಣರ ಅಪೇಕ್ಷೆಗೆ ಹಿರಿಯರು ಒತ್ತಾಸೆಯಾದರು. ಇವರಲ್ಲರಿಗೂ ಮಹಾತ್ಮರು ಮುಂದಾಳಾಗಿ ಮಹಾತ್ಮ ಗಾಂಜಿಯವರು ಹೆಗಲುಕೊಟ್ಟರು.ಆದರೆ ಗಾಂಜಿಯವರು ಧ್ಯೇಯ ಧೋರಣೆಗಳನ್ನು ನಿರ್ಣಯಿಸಿ ಸುಮ್ಮನೆ ಕೂರುವ ಜಾಯಮಾನದವರಲ್ಲ. ದ್ಯೇಯಕ್ಕೆ ತಕ್ಕ ದುಡಿಮೆ ಇಲ್ಲದಿದ್ದರೆ ಧ್ಯೇಯ ದರ್ಶನವಾಗುವುದಿಲ್ಲ ಎಂಬುದು ಅವರ ಅರಿವು.ಆದ್ದರಿಂದ ದೇಶದಲ್ಲಿ ಸ್ವಾತಂತ್ರ್ಯದ ತಳಮಳ ಎಷ್ಟು ಆಳವಿದೆ,ಎಷ್ಟು ತೀವ್ರವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬಯಸಿದರು.
ಈ ಹಿನ್ನೆಲೆಯಲ್ಲಿ ೧೯೩೦ನೇ ಜನವರಿ ೨೬ನೇ ದಿನವನ್ನು ಸ್ವಾತಂತ್ರದಿನವೆಂದು ಅಖಿಲ ಹಿಂದುಸ್ಥಾನದಲ್ಲಿ ಆಚರಿಸ ಬೇಕೆಂದೂ, ಎಲ್ಲೆಲ್ಲಿಯೂ ರಾಷ್ಟ್ರ ಧ್ವಜ ಹಾರಿಸಿ,ಸಭೆ ಸೇರಿ ಸ್ವಾತಂತ್ರ್ಯದ ನಿರ್ಣಯವನ್ನು ಓದಿ,ಅದಕ್ಕೆ ಸರ್ವರ ಸಮ್ಮತಿಯನ್ನೂ,ಪ್ರತಿಜ್ಞೆಯನ್ನೂ ಪಡೆಯಬೇಕೆಂದೂ ಕಾಂಗ್ರೆಸ್ಸಿನ ಕಾರ್ಯಕಾರಿ ಮಂಡಲಿ ಪ್ರಕಟಿಸಿತು. ಅದರಂತೆ ರಾಷ್ಟ್ರದಾದ್ಯಂತ ೧೯೩೦ನೇ ಜನವರಿ ೨೬ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆಗೊಂಡಿತು. (ಅಂದಿನ ವರದಿಯಂತೆ)
ಅಂದು ಎಲ್ಲೆಲ್ಲಿಯೂ ಸಂತೋಷz ಸುಗ್ಗಿ. ಸಾರಣೆ ಕಾರಣೆಗಳಿಂದ ಅಂಗಳಗಳು ಶೋಭಿಸುತ್ತಿದ್ದವು. ತಳಿರು ತೋರಣಗಳಿಂದ ಗುಡಿ ಗುಂಡಾರಗಳು, ಮನೆ ಮಠಗಳು ಮಂಗಲಮಯವಾಗಿ ಸಿಂಗಾರಗೊಂಡಿದ್ದವು. ಅನೇಕ ಸ್ಥಳಗಳಲ್ಲಿ ಬೆಳಿಗ್ಗೆ ಗೌರವದಿಂದ ಏರಿಸಲ್ಪಟ್ಟ ಸ್ವಾತಂತ್ರ್ಯದ ಗುಡಿಯು ಗುಡಿಗೋಪುರಗಳ ಮೇಲೆ ಪಟಪಟನೆ ಹಾರಾಡಿ ಆಳರಸರ ಎದೆಯನ್ನು ಅಳುಕಿಸಿ ತಲ್ಲಣಗೊಳಿಸಿತು.ಪೇಟೆ ಪಟ್ಟಣಗಳಲ್ಲಿ ನಡೆದ ಪ್ರಚಂಡ ಮೆರವಣಿಗೆಗಳು ಸ್ವತಂತ್ರ್ಯ ಸೇನೆಯ ರಭಸ, ಗೌರವ ಗಾಂಭೀರ್ಯಗಳನ್ನು ಸೂಚಿಸುತ್ತಿದ್ದವು. ಎಲ್ಲಕಡೆಯ ಕಾರ್ಯಕ್ರಮಗಳು ಒಂದೇ ಮಾದರಿಯಲ್ಲಿತ್ತು. ತರುಣರು ಎಲ್ಲೆಲ್ಲಿಯೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಖಾದಿಯನ್ನು ವಿತರಿಸಿದರು.
ಮೈಸೂರು ಸಂಸ್ಥಾನದಲ್ಲಿ ಎಲ್ಲಾಜಿಲ್ಲೆಯ ಮುಖ್ಯಾಕಾರಿಗಳು ಆದಿನ ಪೋಲೀಸ್ ಕಾಯಿದೆಯ ೩೯,೪೫,೪೬,ಮತ್ತು ೧೪೪ನೇ ಕಲಮುಗಳನ್ನು ಕಾರ್ಯರಂಗಕ್ಕಿಳಿಸಿದ್ದರು. ಪೋಲೀಸರು ಬೆತ್ತ, ಬಡಿಗೆ, ರಿವಾಲ್ವರುಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವವನ್ನು ಭಂಗಗೊಳಿಸಲು ಯತ್ನಿಸಿದರು. ಬೀದಿ ಬೈಲುಗಳನ್ನು ಸುತ್ತಾಡಿ ಜನಜಂಗುಳಿಯ ಮೇಲೆ ಬಿದ್ದು ನಾಡಗುಡಿಯನ್ನು ಕಿತ್ತೊಗೆದರು. ಚಿಕ್ಕ ಪುಟ್ಟ ಕಂದಮ್ಮಗಳ ಮೇಲೆ ಕೈ ಮಾಡಿ ರಾಷ್ರದ್ವಜವನ್ನೂ,ಟೊಪ್ಪಿಗೆಗಳನ್ನೂ ಕಸಿದುಕೊಂಡರು. ಆದರೆ ಸರಕಾರದ ಬಿಗಿ ಬಂದೋವಸ್ತ್ ಇದ್ದರೂ ಸ್ವಾತಂತ್ರ್ಯ ದಿನಾಚರಣೆ ನಿಲ್ಲಲಿಲ್ಲ.
ಕರ್ನಾಟಕದ ಎಲ್ಲಾ ಸ್ಥಳಗಳಲ್ಲಿಯೂ ಸ್ವಾತಂತ್ರ ದಿನಾಚರಣೆ ನಡೆಯಿತು. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಕೊಡಗು, ಮಂಗಳೂರು, ಸಿದ್ದಾಪುರ, ಅಂಕೋಲಾ ಸೇರಿದಂತೆ ಮಹತ್ವದ ಪ್ರತಿಯೊಂದು ಊರಿನಲ್ಲಿಯೂ ಸಭೆಗಳಾದವು. ಬೆಂಗಳೂರಿನಲ್ಲಿ ಸಿ.ವಿ.ನರಸಿಂಹ ಅಯ್ಯಂಗಾರರ ಮನೆಯಲ್ಲಿ ಶ್ರೀ ಕೆ.ಟಿ.ಭಾಷ್ಯಂ ಅವರಿಂದ ಧ್ವಜಾರೋಹಣ ನಡೆಯಿತು. ಮೈಸೂರಲ್ಲಿ ಅಗರಂ ರಂಗಯ್ಯ ಮತ್ತು ರಾಜಗೋಪಾಲ, ತುಮಕೂರಿನಲ್ಲಿ ಕೆ ರಂಗಯ್ಯ ಅಯ್ಯಂಗಾರ್, ಟಿ.ಸುಬ್ರಮಣ್ಯಂ ತಮಗೆ ವಿಸಿದ ೩೯ನೇ ಕಲಂ ಅನ್ನು ಧೈರ್ಯದಿಂದ ಕ್ಕರಿಸಿ ನಾಡಗುಡಿಯನ್ನು ಏರಿಸಿ ಸ್ವಾತಂತ್ರ್ಯೋತ್ಸವ ಜರುಗಿಸಿದರು. ಬೆಂಗಳೂರಿನಲ್ಲಿ ಕೆಲವರು ತಗಡೂರು ರಾಮಚಂದ್ರರಾಯರ ಮುಂದಾಳ್ತತನದಲ್ಲಿ ಜನವರಿ ೨೫ರಂದೇ ನಾಡಗುಡಿಯನ್ನು ಏರಿಸಿ ಕಾಯಿದೆಗೆ ಸವಾಲೊಡ್ಡಿದರು.ದೊಡ್ಡ ಬಳ್ಳಾಪುರದಲ್ಲಿ ಜನವರಿ ೨೫ನೇ ತಾರಿಖಿನಂದಲೇ ೧೪೪ನೇ ಕಲಂ ಜಾರಿಗೊಳಿಸಲಾಗಿತ್ತು. ಆದರೂ ಜನರು ೨೬ನೇ ತಾರೀಖಿನಂದು ಗೊತ್ತುಪಡಿಸಿದ ಸ್ಥಳದಲ್ಲಿ ದ್ವಜಾರೋಹಣ ನೆರವೇರಿಸಲು ಯತ್ನಿಸಿದರು. ಪೊಲೀಸರು ರಾಷ್ಟ್ರ ಧ್ವಜ ಹಾಗೂ ಗಾಂಜಿಯ ಭಾವಚಿತ್ರವನ್ನು ಕಸಿದುಕೊಂಡು, ಸಭೆ ನಡೆಯಗೊಡಲಿಲ್ಲ. ಶೃಂಗೇರಿ ಹಾಗೂ ಮೈಸೂರು ಸಂಸ್ಥಾನದ ಅನೇಕ ಕಡೆಗಳಲ್ಲಿ ಅಕಾರಿಗಳಿಂದ ಬಹಿರಂಗ ಕಾರ್ಯಕ್ರಮಕ್ಕೆ ತಡೆಯುಂಟಾದರೂ ಖಾಸಗಿ ರೀತಿಯಲ್ಲಿ ಮನೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾನೂನು ಉಲಂಘಿಸಿದರೆಂದು ಅನೇಕ ಜನರ ಮೇಲೆ ಖಟ್ಲೆ ಹೂಡಲಾಯಿತು. ಅದಾಗಿ ೧೭ ವರ್ಷಗಳ ನಂತರ ರಾಷ್ಟ್ರ ಸ್ವತಂತ್ರ್ಯಗೊಂಡು ೧೯೫೨ನೇ ಜನವರಿ ೨೬ರಂದು ಗಣರಾಜ್ಯವಾಯಿತು.

ನಾವು ಮರೆತ ಧ್ವಜಗೀತೆ

ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ, ಭಾವೈಕ್ಯವನ್ನು ಪ್ರೇರೇಪಿಸುವುದರಲ್ಲಿ ದೇಶ ಭಕ್ತಿಗೀತೆಗಳಿಗೆ ಪ್ರಥಮ ಆದ್ಯತೆ. ಜನಗಣ ಮನ, ವಂದೇ ಮಾತರಂ ಗೀತೆಗಳು ಇಂದಿಗೂ ಕೇಳಿಸುತ್ತಿದ್ದರೆ ಸ್ವಾತಂತ್ರ್ಯ ಸಮರದ ಜನ ಜನರನ್ನು ಬಡಿದೆಬ್ಬಿಸಿದ ಝಂಡಾ ಊಂಚಾ ರಹೇ ಹಮಾರಾ ಗೀತೆಯನ್ನು ನಾವು ಮರೆತು ಬಿಟ್ಟಿದ್ದೇವೆ.
ಮಹಾತ್ಮ ಗಾಂಯವರು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಶೈಲಿಯಲ್ಲಿ,ಧ್ವಜ ಗೀತೆ ಇರಬೇಕೆಂದು ಬಯಸಿದ್ದರು. ಅಪ್ಪಟ ದೇಶಭಕ್ತ,ಸ್ವಾತಂತ್ರ್ಯ ಸೇನಾನಿ, ಖ್ಯಾತ ಹಿಂದೀ ಕವಿ ಶ್ಯಾಮಲಾಲ್ ಗುಪ್ತ’ಪಾರ್ಷದ್ ೧೯೨೪ ರಚಿಸಿದ ವಿಜಯೀ ವಿಶ್ವ ತಿರಂಗಾ ಪ್ಯಾರಾ, ಝಂಡಾ ಊಂಚಾ ರಹೇ ಹಮಾರಾ ಗೀತೆ ಗಾಂಜಿ ಬಯಸಿದಂತೆಯೇ ಇತ್ತು. ಅದು ಧ್ವಜ ಗೀತೆಯಾಗಿ ಸ್ವೀಕಾರಗೊಂಡಿತು. ಐದು ಸಾಲುಗಳಲ್ಲಿ ಆರು ನುಡಿಗಳನ್ನು ಹೊಂದಿರುವ ಈಗೀತೆ ಸುಗಮ, ಸರಳ ಶೈಲಿಯಲ್ಲಿ ಧ್ವಜವನ್ನು ವರ್ಣಿಸುವುದಲ್ಲದೆ ನಮ್ಮ ರಾಷ್ಟ್ರ ಭಕ್ತಿಯನ್ನೂ ಶೌರ್ಯವನ್ನು ಉದಾತ್ತತೆಯನ್ನೂ ಪ್ರತಿಬಿಂಬಿಸುತ್ತದೆ. ಸ್ವಾತಂತ್ರ ಸಂಗ್ರಾಮದ ವೇಳೆ ಈ ಗೀತೆ ಇಲ್ಲದೆ ಸಭೆ, ಮೆರವಣಿಗೆಗಳು ನಡೆಯಲಿಲ್ಲ. ಈ ಗೀತೆಯಿಂದ ಅಸಂಖ್ಯಾತ ರಾಷ್ಟರ ವೀರರು ಸ್ಪೂರ್ತಿ ಪಡೆದರು. ತ್ರಿಪುರಾ ಕಾಂಗ್ರೆಸ್ ಅವೇಶನದಲ್ಲಿ ಸುಭಾಸಚಂದ್ರ ಬೋಸ್ ಒಂದು ಲಕ್ಷ ಜನರೊಂದಿಗೆ ಈ ಗೀತೆಯನ್ನು ಹಾಡಿದರು. ಸ್ವಾತಂತ್ರ್ಯ ಬಂದ ಮೇಲೆ ಕೆಲವರ್ಷ ಶಾಲಾ ಮಕ್ಕಳಿಗೆ ಈ ಗೀತೆಯನ್ನು ಕಲಿಸಿ, ಧ್ವಜಾರೋಹಣ ಕಾಲದಲ್ಲಿ ಹಾಡಿಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಮರೆತು ಹೋಗಿರುವುದು ಖೇದಕರ ಸಂಗತಿ.

ಪೂರ್ಣ ವಿ-ರಾಮ ಕಲಗಾರು

Friday, June 20, 2008



ಎಲ್ಲ ತತ್ತ್ವದೆಲ್ಲೆ ಮೀರಿ...



ಇಲ್ಲಿರುವ ರೇಖಾಚಿತ್ರವನ್ನು ಸುಮ್ಮನೆ ಗಮನಿಸಿ. ಅದನ್ನು ಬರೆಯುವುದು ನೋಡಿದಷ್ಟು ಸುಲಭವಲ್ಲ. ಈ ಬಾಕ್ಸ್‌ಅನ್ನು ಈಗಲೇ ಬರೆದು ಬಿಸಾಡಬಹುದು ಎಂದುಕೊಂಡರೆ ಅದು ಶುದ್ಧ ತಪ್ಪು. ಅದಕ್ಕೆ ಒಂದು ಕಂಡೀಷನ್ ಇದೆ. ಒಮ್ಮೆ ಪೆನ್ನನ್ನು ಪೇಪರ್ ಮೇಲೆ ಒತ್ತಿದರೆ ಬಾಕ್ಸ್ ಮಾಡಿ ಮುಗಿಸುವವರೆಗೂ ಪೆನ್ ಎತ್ತಬಾರದು. ಒಂದು ಗೆರೆ ಮೇಲೆ ಮತ್ತೊಂದು ಬಾರಿ ತಿದ್ದಬಾರದು. ಒಟ್ಟಾರೆ ಒಂದು ಬಾಕ್ಸ್ ಅಂತೂ ಆಗಲೇಬೇಕು. ಅದು ಹಾಗಾಗಬೇಕಾದರೆ ನೀವು ಈ ರೀತಿಯೇ ಗೆರೆ ಎಳೆಯಬೇಕು. ಎ-)ಇ-)ಬಿ-)ಸಿ-)ಡಿ-)ಇ-)ಸಿ-)ಎ ಮೂಲಕ ಹಾದುಹೋಗಿ ‘ಬಿ’ನಲ್ಲಿ ಕೊನೆಗೊಳ್ಳಬೇಕು. ಆದರೆ ಬಾಕ್ಸ್ ಮಾಡಬೇಕು ಎಂದಾಗ ನೀವು ಏನು ಮಾಡುತ್ತೀರಿ? ಬರೀ ‘ಎ-ಬಿ-ಸಿ-ಇ’ನಲ್ಲೇ ಪಝಲ್ ಮುಗಿಸಲು ಪ್ರಯತ್ನಿಸುತ್ತೀರಿ. ಕೊನೆಗೆ ಸೋತು ಸುಣ್ಣವಾಗುತ್ತೀರಿ. ಅಲ್ಲಿಂದ ಹೊರತಾಗಿ ‘ಡಿ’ಗೆ ಹೋಗಿ ವಾಪಾಸ್ ಬರಬಹುದು ಎಂಬುದನ್ನು ಮಾತ್ರ ಯೋಚಿಸುವುದಿಲ್ಲ. ಅದೇರೀತಿ ನಮ್ಮ ಬದುಕು. ನಾವು ಇಲ್ಲಿಯೇ ಇದ್ದು ಎಲ್ಲವನ್ನೂ ಯೋಚಿಸುತ್ತೇವೆ. ಎಷ್ಟೇ ಹೆಣಗಾಡಿದರೂ ಬದುಕಿನ ಬಾಕ್ಸನ್ನು ಕ್ರಮಬದ್ಧವಾಗಿ ಪೂರ್ತಿಮಾಡಲಾಗುವುದಿಲ್ಲ. ಈ ಚೌಕಟ್ಟಿಗಿಂತ ಹೊರತಾದ ಇನ್ನೊಂದು ಪ್ರಪಂಚವಿದೆ ಎಂಬುದನ್ನು ಮರೆತು ಇಲ್ಲಿಯೇ ಇರುತ್ತೇವೆ; ಇಲ್ಲಿಯೇ ಗಿರುಕಿ ಹೊಡೆದು ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗುತ್ತೇವೆ. ‘ಇಲ್ಲಿ’ ಇದ್ದು ಏನು ಸಾಸಲು ಸಾಧ್ಯ? ‘ಇಲ್ಲಿ’ನ ಮಹತ್ವ ಏನು ಎಂಬುದು ಗೊತ್ತಾಗಬೇಕಾದರೆ ‘ಅಲ್ಲಿ’ಗೆ ಹೋಗಬೇಕು. ಅಲ್ಲಿ ನಿಂತು ಇಲ್ಲಿನದನ್ನು ನೋಡಬೇಕು. ಆಗ ಅವೆರಡರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಸ್ವಾಮಿ ವಿವೇಕಾನಂದರು ನಂಬಿದ್ದು ಇದೇ ಸಿದ್ಧಾಂತವನ್ನು. ಅವರು ಭಾರತದ ರಾಯಭಾರಿಯಂತೆ ಶಿಕಾಗೋಗೆ ಹೋದರು. ಅಲ್ಲಿ ನಿಂತು ಭಾರತದ ಭವಿಷ್ಯದ ಬಗ್ಗೆ ಚಿಂತಿಸಿದರು; ಮಂಥಿಸಿದರು. ಕೊನೆಗೆ ಅವರೊಬ್ಬ ವಿಶ್ವಮಾನವರಾದರು !ಅದೇ ವಿಶ್ವಮಾನವ ಸಂದೇಶಕ್ಕೆ ಕಾವ್ಯರೂಪ ಕೊಟ್ಟವರು ಕನ್ನಡದ ಮೇರುಕವಿ ಕುವೆಂಪು. ಅವರ ಓ ನನ್ನ ಚೇತನ / ಆಗು ನೀ ಅನಿಕೇತನ/ ರೂಪ ರೂಪಗಳನು ದಾಟಿ/ ನಾಮಕೋಟಿಗಳನು ಮೀಟಿ/ ಎದೆಯಬಿರಿಯೆ ಭಾವ ದೀಟಿ/ ಓ ನನ್ನ ಚೇತನ ಆಗು ನೀ ಅನಿಕೇತನ... ಎಂಬ ಕವಿತೆ ಅಲ್ಲಲ್ಲ ದೃಶ್ಯಕಾವ್ಯ ಸಾರಿದ್ದೂ ಇದನ್ನೇ. ಜಾತಿ ಧರ್ಮ ಎಂಬ ಗೊಡ್ಡು ಸಿದ್ಧಾಂತಕ್ಕೆ ತಿಲಾಂಜಲಿ ಹಾಡಿ ಎಂದು ಅವರು ಸಾರಿಸಾರಿ ಹೇಳಿದರು. ಎಲ್ಲ ತತ್ತ್ವಗಳ ಗಡಿ ದಾಟಿ ಬನ್ನಿ ಎಂದು ಪ್ರತಿಯೊಬ್ಬ ಭಾರತೀಯರನ್ನು ಬಡಿದೆಚ್ಚರಿಸಿದರು. ಕೊನೆಗೆ ರಾಷ್ಟ್ರಕವಿಯಾದರು! ಕಮಲ್‌ಹಾಸನ್ ಅಭಿನಯದ ‘ದಶಾವತಾರಂ’ ಚಿತ್ರವೂ ಇದೇ ವಿಷಯದ ಮೇಲೆ ಆಧರಿಸಿ ನಿಂತಿದೆ. ಅದೊಂದು ಜಾಗತಿಕ ವಿಷಯ ಪ್ರತಿಪಾದಿಸುವ ಚಿತ್ರ. ಅಲ್ಲಿ ಒಬ್ಬ ವ್ಯಕ್ತಿ, ಕುಟುಂಬ, ಸಮಾಜ, ಜಾತಿ, ಮತ, ವರ್ಗ, ಭಾಷೆ, ಧರ್ಮ... ಈ ಎಲ್ಲ ವಿಷಯಗಳಿಗೂ ಮಿಗಿಲಾದ ಒಂದು ಹೊಸ ಕಾನ್ಸೆಪ್ಟ್ ಇದೆ. ಇದು ಮಾಸ್ ಚಿತ್ರವಂತೂ ಖಂಡಿತ ಅಲ್ಲ. ಒಟ್ಟಾರೆ ಹೇಳುವುದಾದರೆ ಇದು ಕ್ಲಾಸ್ ಚಿತ್ರ. ಅಲ್ಲಿ ಕಮಲ್ ಹೇಳಹೊರಟಿರುವುದು ವಿಶ್ವಮಾನವ ಸಂದೇಶವನ್ನು. ಹತ್ತು ಪಾತ್ರಗಳಲ್ಲಿ ಅವರು ಹತ್ತಾರು ವರ್ಗಗಳನ್ನು, ಹತ್ತಾರು ದೇಶ/ಭಾಷೆಗಳನ್ನು ಪ್ರತಿನಿಸುತ್ತಾರೆ. ಹತ್ತಾರು ಜಾತಿ/ಧರ್ಮಗಳನ್ನು ಪ್ರತಿಜ್ವಲಿಸುತ್ತಾರೆ. ಒಬ್ಬ ನಟ ಒಂದೇ ಚಿತ್ರದಲ್ಲಿ ಹತ್ತು ಪಾತ್ರಗಳನ್ನು ನಿರ್ವಹಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ತಕ್ಕ ಗಟ್ಟಿತನ, ಮ್ಯಾನರಿಸಂ ಬೇಕು. ಆದರೂ ಅವೆಲ್ಲವನ್ನೂ ಒಟ್ಟಿಗೆ, ಒಮ್ಮೆಲೇ ಅಭಿನಯಿಸಲು ಕಮಲ್‌ಹಾಸನ್‌ನಿಂದ ಮಾತ್ರ ಸಾಧ್ಯ.ಮೊದಲನೆಯದ್ದು ಒಬ್ಬ ವಿಷ್ಣು ಭಕ್ತನ ಪಾತ್ರ. ಅಲ್ಲಿ ಆತ ಹೇಳ ಹೊರಟಿದ್ದು ಒಟ್ಟಾರೆ ಜಾತಿ ಸಂಘರ್ಷವನ್ನು. ಆನಂತರದ್ದು ವಿಜ್ಞಾನಿಯ ಪಾತ್ರ. ಈ ಪಾತ್ರ ಇಂದಿನ ತಂತ್ರಜ್ಞಾನ, ಮನುಷ್ಯನ ಬುದ್ಧಿಮತ್ತೆಯನ್ನು ಪ್ರತಿಧ್ವನಿಸುತ್ತದೆ. ಜತೆಗೆ ನಾಸ್ತಿಕತೆಯನ್ನೂ. ಅದಕ್ಕೆ ತದ್ವಿರುದ್ಧವಾದ ನಾಯಕಿ. ಆಕೆ ದೈವಭಕ್ತೆ. ಚಿತ್ರದ ಕೊನೆಯಲ್ಲಿ ಆಕೆ ಕೇಳುತ್ತಾಳೆ, ‘ಅಲ್ಲ ನೀನು ಈಗಲೂ ಏಕೆ ದೇವರು ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತೀಯಾ?’ ಅದಕ್ಕೆ ವಿeನಿ ಕೊಡುವ ಉತ್ತರ- ‘ನಾನು ಎಲ್ಲಿ ಹಾಗೆ ಹೇಳಿದೆ? ನಾನು ಹೇಳಿದ್ದು ದೇವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅಷ್ಟೇ !’ ಈ ಪಾತ್ರದಲ್ಲಿ ದೇಶಭಕ್ತಿಯಿದೆ. ಜತೆಗೆ ವಿದ್ರೋಹಕ ಕೃತ್ಯದ ವಿರುದ್ಧದ ಸಮರವಿದೆ. ಜಾಗತೀಕರಣ ಎಂಬ ಭೂತ ಕೊಡುಗೆಯಾಗಿ ನೀಡುವ ಭವಿಷ್ಯದ ಚಿತ್ರಣವಿದೆ. ನಂತರದ್ದು ವಿಲನ್ ಪಾತ್ರ. ಇದು ಇಂದು ನಡೆಯುತ್ತಿರುವ ಭ್ರಷ್ಟಾಚಾರವನ್ನು ಅಭಿವ್ಯಕ್ತಿಗೊಳಿಸುತ್ತದೆ. ದುಷ್ಟ ಶಕ್ತಿಯೊಂದು ಹಣಕ್ಕಾಗಿ ಯಾವ ದೇಶ, ರಾಜ್ಯಕ್ಕಾದರೂ ನುಗ್ಗಿ ಎಲ್ಲವನ್ನೂ ಸರ್ವನಾಶ ಮಾಡಬಲ್ಲದು ಎಂಬ ಸಂದೇಶವಿದೆ. ಅಷ್ಟೊತ್ತಿಗೆ ಬರುತ್ತಾನೆ ಜಾರ್ಜ್ ಬುಷ್(ಮತ್ತೊಂದು ಪಾತ್ರ). ಈತ ನಾನಾ ರಾಷ್ಟ್ರಗಳ ಹಿರಿಯಣ್ಣ ಅಮೆರಿಕದ ಅನಾಯಕ. ಆ ಪಾತ್ರದಲ್ಲಿ ಕಮಲ್ ಬುಷ್‌ಗೇ ಸೆಡ್ಡು ಹೊಡೆದಿದ್ದಾರೆ. ಅಷ್ಟಾದ ಮೇಲೆ ಬರುವವನು ಪೊಲೀಸ್ ಅಕಾರಿ ರಾಮದಾಸ್ ನಾಯ್ಡು (ಇನ್ನೊಂದು ಪಾತ್ರ). ಆತ ಸಮಾಜದಲ್ಲಿನ ವರ್ಗಗಳನ್ನು ಪ್ರತಿನಿಸುತ್ತಾನೆ. ನಂತರದ್ದು ಖಲೀಫ ಹಾಗೂ ದಲಿತ ನಾಯಕ ವಿನ್ಸೆಂಟ್‌ನ ಪಾತ್ರ. ಈ ಎರಡೂ ಪಾತ್ರಗಳು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಪ್ರತಿಬಿಂಬ. ಅದರಲ್ಲೂ ವಿನ್ಸೆಂಟ್ ಆಗಿ ಕಮಲ್‌ಹಾಸನ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಇನ್ನೊಂದು ಕುಂಗ್ ಫು ಥರದ ಪಾತ್ರ. ಆತ ರಕ್ತ ಸಂಬಂಧಗಳ ಪ್ರತೀಕ. ತನ್ನ ತಂಗಿಯ ಕೊಲೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ದೇಶವನ್ನೇ ಬಿಟ್ಟು ಬರುತ್ತಾನೆ. ಸಂಬಂಧಗಳಿಗೆ ಚೌಕಟ್ಟಿಲ್ಲ ಎನ್ನುವುದು ಆ ಪಾತ್ರದ ತಾತ್ಪರ್ಯ. ಇನ್ನೊಂದು ಅವತಾರ್‌ಸಿಂಗ್ ಪಾತ್ರ. ಆತ ಸಿಖ್ ಸಮುದಾಯದ ಪ್ರತೀಕ. ಉತ್ತಮ ಹಾಡುಗಾರ. ಆದರೆ ಕ್ಯಾನ್ಸರ್ ಭೂತ ಅವನಲ್ಲಿ ಪರಕಾಯ ಪ್ರವೇಶ ಮಾಡಿರುತ್ತೆ. ಆತ ಬದುಕು ಹಾಗೂ ಸಾವಿನ ನಡುವೆ ಇರುವ ಅಂತರಕ್ಕೆ ಹಿಡಿದ ಕೈಗನ್ನಡಿ. ಸಾವಿನ ದವಡೆ ತಲುಪಿದ ಆತ ಕೊನೆಗೂ ಬದುಕಿಬರುತ್ತಾನೆ! ಇನ್ನೊಂದು ಪ್ರಮುಖ ಪಾತ್ರ ಅಜ್ಜಿಯದ್ದು. ಆಕೆ ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಾಯಭಾರಿ... ಹೀಗೆ ಇಡೀ ಕತೆ ನಾನಾ ಆಯಾಮಗಳಲ್ಲಿ ಬಿತ್ತರವಾಗುತ್ತಾ ಹೋಗುತ್ತದೆ. ಒಟ್ಟಾರೆ ಕಮಲ್ ಹೇಳುವ ಕೊನೆಯ ಸಂದೇಶ ಅದು ವಿಶ್ವಮಾನವ ಸಂದೇಶ!
ಪೂರ್ಣ ವಿ-ರಾಮ / ಕಲಗಾರು

Monday, May 12, 2008



ತಾಯಿಗೆ ಸರಿಸಾಟಿ ಯಾರು?

ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಧಿಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.

ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.

ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ?
ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ !

ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.

ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.

ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ !

ಪೂರ್ಣ ವಿ-ರಾಮ / ಕಲಗಾರು

Sunday, April 27, 2008

ಅರಮನೆ ಅಂದ್ರೆ ಸುಮ್ನೇನಾ?


ಅರಮನೆ ಅಂಕಣದಲ್ಲಿ.... !

ಅರಮನೆ ಚಿತ್ರ ಒಟ್ಟಾರೆ ಹೇಗಿದೆ?
ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆ ಅರಮನೆ ಸೃಷ್ಟಿಯ ಹಿಂದೆ ನಿರ್ದೇಶಕ ನಾಗಶೇಖರ್ ಹರಿಸಿದ ಬೆವರಿದೆ. ಅವರ ಬಹುವರ್ಷದ ಕನಸಿನ ಪ್ರತಿಫಲವಿದೆ. ಅದಕ್ಕೆ ತಕ್ಕ, ಎಲ್ಲೆಲ್ಲೂ ಫಳಫಳಿಸುವ ಪಾತ್ರವರ್ಗವಿದೆ. ಇಡೀ ಕತೆಯಲ್ಲಿ ಸ್ವಂತಿಕೆಯಿದೆ. ಎಲ್ಲಿಯೂ ಅಭಾಸವೆಸದ ಅಪರೂಪದ ಸಂಭಾಷಣೆಯಿದೆ. ಒಟ್ಟಾರೆ ಹೇಳುವುದಾದರೆ ಇದು ಕೆಟ್ಟ ಚಿತ್ರವಂತೂ ಅಲ್ಲ.

ಹೀಗೆನ್ನಲು ಕೆಲವು ಕಾರಣಗಳಿವೆ. ಗಣೇಶ್ ಎಂದಾಗ ನೆನಪಾಗುವುದು: ಗಾಳಿಯ ವೇಗ ಮೀರಿಸುವ ಪಟಪಟ ಮಾತುಗಾರಿಕೆ. ಅಲ್ಲಿ ಕಾಮಿಡಿಯ ಲೇಪನ. ಜತೆಗೆ ಅಂತರಾಳದ ನೋವನ್ನು ಅನುಕರಿಸುವ, ಅಭಿವ್ಯಕ್ತಿಸುವ ಚಾಕಚಕ್ಯತೆ. ಅದನ್ನೇ ಬಂಡವಾಳವಾಗಿಸಿ ಪ್ರೇಕ್ಷಕರನ್ನು ಕಟ್ಟಿ ಕೂರಿಸುವ ತಾಕತ್ತು ಗಣೇಶ್‌ಗಿದೆ!

ಹಾಗಂತ ಊಟಕ್ಕೆ ಉಪ್ಪಿನಕಾಯಿಯೇ ಅನ್ನವಾದರೆ? ಊಹೂಂ... ಅದು ಉಣ್ಣಲಲ್ಲ, ಸಹಿಸಲೂ ಅಸಾಧ್ಯ.

ಅದರ ಬದಲು ಗಣೇಶ ಹೊಸ ಆಯಾಮ ಹುಡಕಬೇಕು.ಎಲ್ಲಕ್ಕಿಂತ ಭಿನ್ನವಾದ, ಹಿಂದೆಂದೂ ಮಾಡದ ಪಾತ್ರ ಮಾಡಬೇಕು. ಯೋಗ್ಯ ಕತೆ ಆರಿಸಬೇಕು. ಎಲ್ಲಿಯೂ 'ಗಣೇಷಿಸಂ' ರಿಪೀಟ್ ಆಗದಂತೆ ನೋಡಿ ಕೊಳ್ಳಬೇಕು. ಒಟ್ಟರೆ ಹೇಳುವುದಾದರೆ ಆ ಎಲ್ಲ ಹ್ಯಾಂಗೋವರ್‌ನಿಂದ ಗಣೇಶ್ ಹೊರಬರಬೇಕು. ಆಗ ಮಾತ್ರ ಅಲ್ಲಿ ಏನಾದರೂ ಹೊಸತನ್ನು ಕಾಣಬಹುದು.

ಅರಮನೆ ಚಿತ್ರದಲ್ಲಿ ಈ ಎಲ್ಲ ಬದಲಾವಣೆಗಳು ಅಪ್‌ಡೇಟ್ ಆಗಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಕೊಂಚ ಕತೆಯ ಕಡೆ ಹೊರಳಿಕೊಳ್ಳಬೇಕು.

-ಅರುಣ್, ವೃತ್ತಿಯಲ್ಲಿ ಫೋಟೊಗ್ರಾಫರ್. ಪಾದರಸದಂತ ಮಾತುಗಾರಿಕೆ ಅವನ ಬಂಡವಾಳ. ಕೈನಲ್ಲಿ ಕಾಸಿಲ್ಲ. ಆದರೆ ಪ್ರೀತಿ, ಸ್ನೇಹಕ್ಕೆ ಮೋಸವಿಲ್ಲ. ಯಾರೊಬ್ಬರ ನೋವಿಗೂ ನಲುಗುವ ಜೀವ. ಅದು ಸಾಧ್ಯವಾಗಲು ಅವ ಎಂಥ ತ್ಯಾಗಕ್ಕೂ ಸಿದ್ಧ. ಒಂದು ದಿನ ರಾಜಶೇಖರ್ ಅರಸ್ ಎಂಬಶ್ರೀಮಂತನ ಮನೆಗೆ ಬರುತ್ತಾನೆ. ಆತ ತನ್ನೆಲ್ಲ ಬಂಧುಬಳಗದಿಂದ ದೂರವಿತುತ್ತಾನೆ. ಆ ಕಾರಣಕ್ಕೆಸ್'ಬಾಟಲ್'ನ ಬಾಯಿಯನ್ನು ತನ್ನ ಬಾಯಿಗಿಟ್ಟಿರುತ್ತಾನೆ. ಫೋಟೋ ತೆಗೆಯಲು ಬಂದ ಅರುಣ್ಅವನ ಮನಸ್ಸಿನ ಮೇಲೆ ನಗುವಿನ ಚಿತ್ತಾರ ಬರೆಯುತ್ತಾನೆ. ನೋವಿನ ಕತೆ ಕೇಳುತ್ತಾನೆ. ಕುಟುಂಬವನ್ನು ಮತ್ತೆ ಸೇರಿಸಿ ಫ್ಯಾಮಿಲಿ ಫೋಟೊ ತೆಗೆಯುತ್ತೇನೆ ಎಂದು ಮಾತು ಕೊಡುತ್ತಾನೆ. ಅದಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಅರಸ್ ಮಗಳು ಅಳಿಯನ ವಿವರಕ್ಕಾಗಿ ಒಂದಿಷ್ಟು 'ಕಾಲಹರಣ' ಮಾಡುತ್ತಾನೆ. ಅವರ ಮಕ್ಕಳಾದ ಗೀತಾ, ನೀತಾರನ್ನು ಭೇಟಿಯಾಗುತ್ತಾನೆ. ಗೀತಾಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ, ಆಕೆಗೆ ಇನ್ನೊಂದು ಅಫೇರ್ ಇದೆ ಎಂದು ಗೊತ್ತಾಗಿ ತಲೆ ಮೇಲೆ ಕೈಹೊತ್ತು ಕೂರುತ್ತಾನೆ, ಕುಡಿದು ತೇಲುತ್ತಾನೆ. ಕೊನೆಗೇನು ಮಾಡುತ್ತಾನೆ...?

ಇದು ಕತೆ. ಈ ಕತೆಯಲ್ಲಿ ಇನ್ನೊಂದು ಪಾತ್ರ ಪರಕಾಯ ಪ್ರವೇಶ ಮಾಡಿದೆ. ಅದು ಗಣೇಶ್ ಹಾಗೂ ಅನಂತನಾಗ್ ನಡುವಣ ಭಾವಲಹರಿ. ಏನೂ ಸಂಬಂಧವಿಲ್ಲದ ಇನ್ನೊಂದು ಜೀವಕ್ಕಾಗಿ ತುಡಿಯುವ, ದುಡಿಯುವ ಪಾತ್ರ. ಆ ಎರಡು ಪಾತ್ರಗಳೇ ಇಡೀ ಕತೆಯ ಜೀವಾಳ. ಹೆಚ್ಚು ಮಾತಿಲ್ಲ. ಆದರೂ ಅಲ್ಲಿ ಲವಲವಿಕೆಯಿದೆ. ಪರಸ್ಪರ ಮನುಷ್ಯತ್ವದ ಭಾವನೆಗಳ ಸಂಗ್ರಹವಿದೆ. ಅವು ಕಣ್ಣಿನಲ್ಲೇ ಮಾತನಾಡಿಕೊಳ್ಳುತ್ತವೆ. ಆ ಎರಡು ಪಾತ್ರಗಳೇ ಚಿತ್ರ ಗೆಲ್ಲಿಸಿದರೆ ಆಶ್ಚರ್ಯವೇನಿಲ್ಲ!

ಗಣೇಶ್ ಮಾತುಗಾರಿಕೆಯಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಮನಸ್ಸಿನ ಭಾವನೆಗಳ ಸಂಘರ್ಷಗಳಿಗೆ ಅವರು ಉತ್ತರವಾಗಿದ್ದಾರೆ. ಅವರ ಹಿಂದೆ ನಿಲ್ಲುವವರು ನಾಗಶೇಖರ್. ವಿದೇಶಿಗರಿಬ್ಬರು ಮಗುವಿನ ಕೈಗೆ ಕ್ಯಾಮರಾ ಕೊಟ್ಟು, 'ನೀನೇ ಇಟ್ಟುಕೋ' ಎಂದಾಗ ಆ ಮಗುವಿನ ಹಾವಭಾವದಲ್ಲಿ ನಾಗಶೇಖರ್ ಪ್ರತಿಫಲಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ಗೆದ್ದಿದ್ದಾರೆ. ಜತೆಗೆ ತುಷಾರ್ ರಂಗನಾಥ್ ಸಂಭಾಷಣೆ ನಾಗಶೇಖರ್ ಕತೆಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಹೇಳುವಲ್ಲಿ ನಾಗಶೇಖರ್ ಸೋತಿದ್ದಾರೆ. ಆದರೆ ಪಾತ್ರ, ದೃಶ್ಯ ಮತ್ತು ನಿರೂಪಣೆಯ ಮಜಲಿನಲ್ಲಿ ಖಂಡಿತ ಗೆದ್ದಿದ್ದಾರೆ. ಅವರು ಸುತಾರಾಂ ಸೋತಿದ್ದು ಸಂಕಲನದಲ್ಲಿ. ಮಧ್ಯೆಮಧ್ಯೆ ಕತೆ ಮುಗ್ಗರಿಸುತ್ತೆ. ಗುರುಕಿರಣ್ ಸಂಗೀತ ಅಬ್ಬಬ್ಬಾ ಎನ್ನುವ ಹಾಗಿಲ್ಲ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಬರೆದ ಸಾಹಿತ್ಯವನ್ನು ತಮ್ಮ ಸಂಗೀತದ ನಾಲಿಗೆಯಿಂದ ನುಂಗಿ, ನೀರು ಕುಡಿಸಿದ್ದಾರೆ. ನಟಿ ರೋಮಾ ಅವರನ್ನು ನಾಯಕಿ ಎನ್ನುವುದಕ್ಕಿಂತ ಪೋಷಕ ನಟಿ ಎನ್ನಬಹುದು.

ಈ ಎಲ್ಲಾ ಅಂಶಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಿದರೆ ಸಿಗುವ ಉತ್ತರ-ಇದು ಖಂಡಿತ ಕೆಟ್ಟ ಚಿತ್ರವಲ್ಲ!

ಹಾಗಾದರೆ ಪಕ್ಕಾ ಒಳ್ಳೆಯ ಚಿತ್ರವಾ? ಉತ್ತರವನ್ನು ಪ್ರೇಕ್ಷಕರು ಹೇಳುತ್ತಾರೆ ಕಣ್ರೀ...!

ಪೂರ್ಣ ವಿ-ರಾಮ / ಕಲಗಾರು