Wednesday, April 1, 2009

ಇವರ ಕಣ್ಣಲ್ಲಿ ರಾಜು ಅನಂತಸ್ವಾಮಿ

ಸುಗಮ ಸಂಗೀತ ಕ್ಷೇತ್ರದ ಹಾಡು ಹಕ್ಕಿ ಮೈಸೂರು ಅನಂತಸ್ವಾಮಿಯವರ ಏಕಮಾತ್ರ ಪುತ್ರ ರಾಜು ಅನಂತ ಸ್ವಾಮಿ ಇನ್ನಿಲ್ಲ. ರಾಜು ಎಂದಾಗ ಕಣ್ಮುಂದೆ ಬರು ವುದು ಅವರ ರತ್ನನ್ ಪದಗಳು. ಇನ್ನೊಂದು ಆಂಗಲ್‌ನಿಂದ ನೋಡಿದರೆ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ... ಒಂದು ವಸ್ತು ಇದ್ದಾಗ ಅದರ ಬೆಲೆ ಅಳೆಯಲು ಆಗುವುದಿಲ್ಲ. ದೂರವಾದಾಗ ಅದಕ್ಕಿದ್ದ ಕಿಮ್ಮತ್ತು ಏನು ಎನ್ನುವುದು ಗೊತ್ತಾಗುತ್ತದೆ. ಆದರೆ ಈ ವ್ಯಕ್ತಿ ಹಾಗಲ್ಲ. ಅನಂತ ಸ್ವಾಮಿಯವರಿಗೆ ಹತ್ತಿರದ ಒಡನಾಡಿಯಾಗಿದ್ದ ಈತ ಯಾರು ಗೊತ್ತೆ? ಲಹರಿ ಆಡಿಯೊ ಕಂಪನಿಯ ವೇಲು. ವೇದಿಕೆಯಲ್ಲಿ ಮೈಸೂರು ಅನಂತಸ್ವಾಮಿ ಎದೆ ತುಂಬಿ ಹಾಡುತ್ತಿದ್ದರೆ ಇವರು ತಬಲಾ ಸಾಥ್ ಕೊಡುತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗದಿರದು. ಆ ದಿನಗಳಲ್ಲಿ ಅವರ ೬೦ಕ್ಕೂ ಹೆಚ್ಚು ಹಾಡುಗಳು ಲಹರಿಯಿಂದ ಹರಿದುಬಂದಿದೆ. ದಿನಕ್ಕೊಮ್ಮೆ ಒಬ್ಬರಿಗೊಬ್ಬರು ಭೇಟಿಯಾಗದಿದ್ದರೆ ಎದೆ ಭಾರ ಭಾರ. ವಾರಕ್ಕೆ ಮೂರು ದಿನ ಒಟ್ಟಿಗೇ ಇರುತ್ತಿದ್ದರು. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಆಗ ಇದೇ ರಾಜು ತುಂಟಾಟ, ತರಲೆ ಮಾಡಿಕೊಂಡು, ಉಂಡಾಡಿ ಗುಂಡನ ಹಾಗೆ ಅಂಡಲೆದುಕೊಂಡಿದ್ದ. ವೇಲು-ರಾಜು ನಂಟು ಅಂದಿನಿಂದ ಇಂದಿನವರೆಗೂ ಶಾಶ್ವತವಾಗಿಯೇ ಇದೆ. ಇಂದು ರಾಜು ಇಲ್ಲ. ಆದರೆ ಅದನ್ನು ನಂಬಲು ವೇಲು ತಯಾರಿಲ್ಲ!
ರಾಜು ಎಂಬ ಎರಡು ಅಕ್ಷರ ಅವರ ಹತ್ತಿರ ಸುಳಿದರೆ ಸಾಕು, ಉಸಿರು ಬಿಸಿಯಾಗಿ, ಕಣ್ಣು ಹಸಿಯಾಗುತ್ತದೆ. ನೋಡನೋಡುತ್ತಿದ್ದಂತೆ ಜೀವ ನಾಡಿ ನಿಂತುಹೋದರೆ ಹೇಗಾಗಬೇಹುದು ಹೇಳಿ? ದಿನಕ್ಕೊಂದು ಬಾರಿ ವೇಲು ಜತೆ ಮಾತನಾಡದಿದ್ದರೆ ರಾಜುಗೆ ಏನೋ ಸಂಕಟ. ಅಪ್ಪನ ಆತ್ಮೀಯ ಒಡನಾಡಿ ಎಂಬ ಗೌರವ. ರಾತ್ರೋರಾತ್ರಿ ಫೋನ್ ಮಾಡಿ... ‘ಅಣ್ಣಾ... ಮಲಗಿದ್ದೀರಾ? ಮಾತಾಡ್ಲಾ, ನಿಮ್ಮನ್ನು ನೋಡಿ ತುಂಬಾ ದಿನ ಆಯ್ತು ಎಂದೆಸುತ್ತಿದೆ....’ ಎಂದು ಅಳುತ್ತಿದ್ದರು. ಹೀಗೆ ಹೇಳಿ ವೇಲು ಮತ್ತೊಮ್ಮೆ ನಿಟ್ಟುಸಿರು ಬಿಡುತ್ತಾರೆ. ‘ರಾಜು ಕೊನೆಯವರೆಗೂ ರಾಜು ಆಗಿಯೇ ಉಳಿದ. ಸ್ವಾಭಿಮಾನಿಯಾಗಿ ಬದುಕಿದ. ಆತ್ಮವಂಚನೆಗೆ ಎಲ್ಲಿಯೂ ಅವಕಾಶ ಕೊಡುತ್ತಿರಲಿಲ್ಲ. ಕುಡಿತ ಅವನ ನಾಡಿಮಿಡಿತದಲ್ಲಿ ಟೆಂಟ್ ಹಾಕಿತ್ತು. ಬೆಳಗ್ಗೆ ಸೂರ್ಯನ ಮುಖ ನೋಡುವ ಮುನ್ನ ಇಂತಿ ನಿನ್ನ ಪ್ರೀತಿಯ... ಎಂದು ರಾಗ ಎಳೆಯುತ್ತಿದ್ದ. ರಾಜು ಹಾಗೆ, ರಾಜು ಹೀಗೆ... ಎಂದು ಮೂಗು ಮುರಿಯುತ್ತಿದ್ದವರಿಗೆ ಆತ ಯಾಕೆ ಹಾಗಾದ ಎಂದು ಒಮ್ಮೆ ಅವಲೋಕಿಸುವ ತಾಳ್ಮೆ ಇರಲಿಲ್ಲ. ವಿಶ್ವದ ಗಡಿ ನಾಡಿನಲ್ಲಿ ಕೂಡ ರಾಜು ಹೆಸರು ರಾರಾಜಿಸುತ್ತಿದೆ. ಆದರೆ ‘ನಮ್ಮವರಿಗೆ’ ಮಾತ್ರ ಆತನ ಅಂತರಾತ್ಮದ ಆಳ ತಿಳಿಯಲಿಲ್ಲ.’
ವೇಲು ನೋವಿನ ಓಕುಳಿಯಾದರು. ಎಡಗೈ ಎರಡೂ ಕಣ್ಣನ್ನು ಒಮ್ಮೆತೀಡಿತು. ಆಗವರಿಗೆ ಒಂದು ಹಾಡು ನೆನಪಿಗೆ ಬಂತು....
ಯಾವ ಮೋಹನ ಮುರಳಿ ಕರೆಯಿತೊ... ದೂರತೀರಕೆ ನಿನ್ನನು....
ಅಮೆರಿಕಾ ಅಮೆರಿಕಾ ಚಿತ್ರದ ಹಾಡು. ರಾಜು ಕೂಡ ಅದೇ ಹಾಡಿನ ಹಿಂದೆ ಹೋಗಿಬಿಟ್ಟ. ಮನೆಯ ಯಾವ ಭಾಗದಲ್ಲಿ ನಿಂತರೂ ಆತ ಕೂಗಿದ ಅನುಭವ. ವೇಲಣ್ಣನನ್ನು ಒಮ್ಮೆ ಊಟಕ್ಕೆ ಕರೆಯಬೇಕು. ಎಲ್ಲ ಒಟ್ಟಿಗೇ ಕುಳಿತು ಕಷ್ಟ ಸುಖ ಹಂಚಿಕೊಳ್ಳೋಣ ಎಂದು ಹಲವು ದಿನಗಳಿಂದ ಹೇಳುತ್ತಿದ್ದ. ಆದರೆ ಇತ್ತೀಚೆಗೆ ಕಣ್ಣಿಗೆ ಬೀಳುವುದೇ ಅಪರೂಪ. ಕೇಳಿದರೆ ಕುಡಿತ ಬಿಟ್ಟಿದ್ದೇನೆ ಎನ್ನುತ್ತಿದ್ದ. ತಿಂಗಳುಗಟ್ಟಲೇ ನಾಪತ್ತೆಯಾಗುತ್ತಿದ್ದ. ಕೆಲವರು ಕಂಡು-ಕೇಳಿದವರು ಮತ್ತೆ ಶುರುಮಾಡಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದರು. ಕೇಳೋಣ ಎಂದರೆ ಕೈಗೆ ಸಿಗುತ್ತಿರಲಿಲ್ಲ. ನನ್ನನ್ನು ಕಂಡರೆ ಭಯ ಪ್ರೀತಿ ಎಲ್ಲ ಇತ್ತು. ರಾಜು ಏಕೆ ಹಾಗಾದ ಎನ್ನುವುದೇ ದುರಂತ. ಅಪ್ಪ ತೀರಿಕೊಂಡ ಮೇಲೆ ಒಂಟಿಯಾದೆ ಎಂಬ ಸಂಕಟ ಕಾಡತೊಡಗಿತು. ಅವರನ್ನು ಸರಕಾರ, ಉದ್ಯಮ ಸರಿಯಾಗಿ ಗುರುತಿಸಲಿಲ್ಲ. ಜೀವಿತಾವಧಿಯ ಸಾಧನೆ ಗುರುತಿಸುವ ಪ್ರೀತಿ ಯಾರಿಗೂ ಇರಲಿಲ್ಲ. ಪ್ರಶಸ್ತಿಯಂತೂ ಮೊದಲೇ ಬರಲಿಲ್ಲ ಎಂಬ ಬೇಸರವಿತ್ತು. ಇನ್ನೊಂದು ಕಡೆ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳಿದ್ದರು. ಮದುವೆಯ ಹೊಣೆ ರಾಜು ಹೆಗಲ ಮೇಲೆ ಬಿತ್ತು. ಜತೆಗೆ ಕೆಲಸದ ಒತ್ತಡ.
ವೇಲು ಮತ್ತೆ ಏದುಸಿರು ಬಿಟ್ಟರು. ಕನ್ನಡಕ ಕೈ ಸೇರಿತ್ತು. ಕಣ್ಣು ಅದನ್ನೇ ನೋಡುತ್ತಿತ್ತು. ಮಾತು ಮತ್ತೆ ತನ್ನ ಹಾದಿಯಲ್ಲಿ ಸಾಗಿತ್ತು...
‘ಒಂದು ಗಾದೆ ಇದೆ... ಅರವತ್ತಕ್ಕೆ ಕಾಯಿಲೆ ಬರಬಾರದು, ಇಪ್ಪತ್ತಕ್ಕೆ ಯಜಮಾನಿಕೆ ಸಿಗಬಾರದು...ಇದು ರಾಜು ಬದುಕಿಗೆ ಸೂಕ್ತವಾಗಿ ಹೋಲುತ್ತದೆ. ತನ್ನದೇ ಆದ ಸಂಗೀತ ಲೋಕ, ಗೆಳೆಯರ ಬಳಗದಲ್ಲಿ ತೇಲಾಡಿಕೊಂಡಿದ್ದ ಆತನ ಮೇಲೆ ಇದ್ದಕ್ಕಿದ್ದಂತೆ ಜವಾಬ್ದಾರಿ ಎಂಬ ನೂರು ಕ್ವಿಂಟಲ್ ಮೂಟೆ ಬಿತ್ತು. ಅಪ್ಪಾಜಿ ಇಹಲೋಕದ ಕೊಂಡಿ ಕಳಚಿಕೊಂಡರು. ಜೀವಕ್ಕೆ ಜೀವವಾಗಿದ್ದ ಜೀವ ಜೋಕಾಲಿ ಕಳಚಿ ಕೆಳಗೆ ಬಿತ್ತು. ಆದರೂ ಸಹನೆಯ ಗುಳಿಗೆ ಅವನ ಕಿಸೆಯಲ್ಲೇ ಕುಳಿತಿತ್ತು. ಆಗಾಗ ಅದನ್ನು ನೀರಿನ ಜತೆ ಸೇವಿಸುತ್ತಿದ್ದ. ನಿಮಗೆ ಆಶ್ಚರ್ಯವಾಗಬಹುದು. ಮೈಸೂರಿನಲ್ಲಿ ರಾಜು ಅಜ್ಜಿ ಇದ್ದಾರೆ. ದೇಹ ಮುಪ್ಪಾಗಿದೆ. ಕಣ್ಣಲ್ಲಿ ಪೊರೆಗಳ ಮಹಾಪೂರ. ಕಿವಿ ಅವರ ಮಾತು ಕೇಳುವುದಿಲ್ಲ. ಜೀವ, ದೇಹಗಳು ಆತ್ಮಕ್ಕೆ ಜೋತುಬಿದ್ದಿವೆ. ದೇವರು ಪಾಲಿಗೆ ಬಂದ ಎರಡು ಪಂಚಾಮೃತವನ್ನೂ ಕಿತ್ತುಕೊಂಡ. ಗುರುಗಳು (ಮೈಸೂರು ಅನಂತಸ್ವಾಮಿ) ತೀರಿಕೊಂಡಾಗ ರಾಜು ನನ್ನ ಬಳಿ ಬಂದು ಅಳುತ್ತಿದ್ದ... ‘ಅಣ್ಣಾ ಅಜ್ಜಿಯನ್ನು ನೋಡುತ್ತಿದ್ದರೆ ಕರುಳು ಕಿತ್ತು ಬರುತ್ತದೆ. ಆ ಭಗವಂತ ಎಷ್ಟು ಕ್ರೂರಿ... ಭೂಮಿಯಲ್ಲಿ ತನಗಿಂತ ಹೆಚ್ಚು ಸಂತೋಷವಾಗಿ ಇರುವವರನ್ನು ಕಂಡರೆ ಅವನಿಗೆ ಹೊಟ್ಟೆಕಿಚ್ಚು. ಅಪ್ಪನ ಮಡಿಲಲ್ಲಿ ಆನಂದವಾಗಿದ್ದೆ. ಒಟ್ಟಿಗೆ ಇರುವವರ ಮೇಲೆ ಇಟ್ಟಿಗೆ ಹಾಕಿದ. ಕನಸಿನ ಕನ್ನಡಿಗೆ ಗುಂಡೇಟು ಹೊಡೆದ...’ ಹೀಗೆ ಹೇಳಿಕೊಂಡು ಭಾವದ ಬುಟ್ಟಿಯಾಗುತ್ತಿದ್ದ.


ಬದುಕು ಜಟಕಾ ಬಂಡಿ... ವಿಧಿಯದರ ಸಾಹೇಬಾ..

ಆಗ ನೆನಪಿನಂಗಳದಲ್ಲಿ ಜಾರಿಹೋಯಿತು ಈ ಡಿವಿಜಿಯವರ ಕಗ್ಗ...
ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬಾ
ಕುದುರೆ ನೀ ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಮಂಕುತಿಮ್ಮಾ...
ರಾಜು ಕೂಡ ಈ ಹಾಡನ್ನು ಎದೆ ತುಂಬಿ ಹಾಡುತ್ತಿದ್ದ. ಅಪ್ಪನ ಆಕೃತಿಯನ್ನು ಕಣ್ಮುಂದೆ ತಂದುಕೊಳ್ಳುತ್ತಿದ್ದ. ಅವ ಇನ್ನೂ ಪ್ರೀತಿಯಿಂದ ಅನುಭವಿಸಿ ಹಾಡುತ್ತಿದ್ದ ಗೀತೆ- ಸ್ನೇಹ ಅತಿಮಧುರ... ಒಮ್ಮೆ ಶಿವಮೊಗ್ಗದ ಸುಗಮ ಸಂಗೀತ ಶಾಸ್ತ್ರೀಯ ಸಮ್ಮೇಳನದಲ್ಲಿ ಈ ಹಾಡು ಹೇಳಿ, ಬೆರಗು ಮೂಡಿಸಿದ್ದ. ನೀವು ನಂಬುವುದಿಲ್ಲ; ಅಲ್ಲಿದ್ದವರು ಅದನ್ನು ಮತ್ತೆ ನಾಲ್ಕು ಬಾರಿ ರಿಪೀಟ್ ಮಾಡಿಸಿದ್ದರು. ಇನ್ನೊಮ್ಮೆ ಮತ್ತೊಮ್ಮೆ ಎಂದು ಚೀಟಿ ಬರೆದುಕೊಡುತ್ತಿದ್ದರು. ಆ ಹಾಡು ಎಷ್ಟು ಅದ್ಭುತವಾಗಿತ್ತೋ ಅದಕ್ಕಿಂತ ಹತ್ತು ಪಟ್ಟು ಅದ್ಭುತವಾಗಿತ್ತು ಅವನ ಕಂಠ ಸಿರಿ.
ಒಮ್ಮೆ ನಾನು ಕೇಳಿದ್ದೆ... ‘ರಾಜು, ನಿನ್ನ ಆ ಕಂಠ ಪೆಟ್ಟಿಗೆಯನ್ನು ನನಗೆ ಬಿಚ್ಚಿಕೊಡು. ಭದ್ರವಾಗಿ ತಿಜೋರಿಯಲ್ಲಿಡುತ್ತೀನಿ. ನೀನು ಬೇಕೆಂದಾಗ ಕೊಡುತ್ತೀನಿ. ನಿನ್ನ ಬಳಿ ಇದ್ದರೆ ಹಾಳುಮಾಡಿಕೊಳ್ಳುತ್ತೀಯಾ’ ಎಂದು ಸದಾ ಹೇಳುತ್ತಿದೆ. ಅದಕ್ಕವ...‘ಅಷ್ಟೇ ತಾನೇ... ಬೇಕಾದ್ರೆ ಈಗಲೇ ಕಳಚಿಕೊಳ್ಳಿ. ಆದರೆ ಒಂದು ಶರತ್ತು, ಮಧ(ದ)ರಾತ್ರಿ ಬಂದು ಕೇಳಿದರೂ ವಾಪಸ್ ಕೊಡಬೇಕು. ನನ್ನ ಮೂಡ್ ಹೇಗಿರುತ್ತೆ ಅಂತ ಗೊತ್ತಿಲ್ಲ’ ಎಂದು ಮಮಾಗೆ ಮಂಗಳಾರತಿ ಎತ್ತುತ್ತಿದ್ದ. ಆಗತಾನೇ ಆತನ ದಾಸನಾಗಲು ರಾಮರಸ ಸ್ಕೆಚ್ ಹಾಕುತ್ತಿತ್ತು. ಆಗಾಗ ಅವರ ಹತ್ತಿರ ಸುಳಿದು, ರುಚಿ ತೋರಿಸಿ ಮಾಯವಾಗುತ್ತಿತ್ತು. ಆದರೂ ಜವಾಬ್ದಾರಿ ಎಂಬ ರಾಮಬಾಣ ಅದನ್ನು ಹೊಡೆದೋಡಿಸಲು ಯತ್ನಿಸುತ್ತಿತ್ತು. ಆದರೆ ಅವನ ಹತ್ತಿರದ ‘ಒಡನಾಡಿ’ಗಳು ಅವನ ಅರಿವಿಗೆ ಬರದಂತೆ ಬತ್ತಳಿಕೆಯಿಂದ ಕಿತ್ತೊಗೆದರು. ನಂತರದ ದಿನಗಳಲ್ಲಿ ಈತನೇ ರಾಮರಸದ ದಾಸನಾಗಿಬಿಟ್ಟ!’
ವೇಲು ಮನಸು ಮತ್ತೊಮ್ಮೆ ಖಿನ್ನಗೊಂಡಿತು. ಒಮ್ಮೆ ಆಕಾಶ ನೋಡಿದರು. ರಾಜು ಕಿನ್ನರಲೋಕದಲ್ಲಿ ಕುಳಿತು ಮತ್ತೆ ಯಾವ ಮೋಹನ ಮುರಳಿ ಕರೆಯಿತು... ಎಂದು ಹಾಡುತ್ತಿದ್ದಾನೆಂದು ಭಾಸವಾಗುತ್ತಿದೆ ಎಂದರು!

ಗಿಣಿಯು ಪಂಜರದೊಳಿಲ್ಲ ರಾಮ.... ರಾಮಾ...
ಬಿ.ವಿ. ಕಾರಂತರ ‘ಸತ್ತವರ ನೆರಳು’ ನಾಟಕದಲ್ಲಿ ಬರುವ ಈ ದಾಸ ಸಾಹಿತ್ಯದ ಸಾಲು ನೆನಪಾಗಿ, ವೇಲು ಮತ್ತೆ ಭಾವ ಲಹರಿಯಾದರು. ತಮ್ಮ ಆತ್ಮದ ಜತೆ ಕುಂಟಾಬಿಲ್ಲೆ ಆಡುತ್ತಾ, ಜೀವಕ್ಕೆ ಹತ್ತಿರವಾಗಿದ್ದ ಆತ ಬೆಳೆಯುವ ಸಿರಿಯಲ್ಲೇ ತೆರೆ ಮರೆಗೆ ಸೇರಿದ್ದ. ಸಂಕಟದ ಸುಳಿ ಅವನ ಬದುಕ ಪಯಣದಲ್ಲಿ ಲಗೋರಿ ಆಡಿತ್ತು. ಅಪ್ಪಯ್ಯ ಅಲ್ಪಾಯುಷ್ಯದಲ್ಲೇ ಇಹಲೋಕಕ್ಕೆ ಇತಿಶ್ರೀ ಹಾಡಿದ್ದರು. ಅಂತೂ ಇಂತು ಬೆನ್ನಿಗೆ ಬಿದ್ದ ಮೂವರು ಹೆಣ್ಣುಮಕ್ಕಳನ್ನು ದಡ ತಲುಪಿಸಿದ ರಾಜು, ಕನಸಿನ ಕಡಲ ತೀರದತ್ತ ಮುಖ ಮಾಡಿದ್ದ. ಸ್ವತಂತ್ರಪಾಳ್ಯದ ಪಾರಿವಾಳವಾಗಲು ಯತ್ನಿಸುತ್ತಿದ್ದ. ಸಂಗೀತ ಗಾರುಡಿಯಿಂದ ಅಭಿಮಾನಿ ವರ್ಗವನ್ನು ತನ್ನತ್ತ ಸೆಳೆಯತೊಡಗಿದ್ದ. ಆಗ ಆ ವರ್ಗದಿಂದ ಹಾರಿ ಬಂತು ಒಂದು ಗಿಣಿ. ಏಕಾಏಕಿ ಅವನ ಎದೆ ಗೂಡಿನಲ್ಲಿ ಬಂದು ರಾಮ ರಾಮಾ ಎನ್ನತೊಡಗಿತ್ತು. ಪ್ರೇಮದ ಕಾಣಿಕೆಯನ್ನು ಹೊತ್ತು ತಂದಿತ್ತು. ಅವರೇ ಡಾ. ವಿನಯಾ. ವೃತ್ತಿಯಲ್ಲಿ ಆಯುರ್ವೇದಿಕ್ ಡಾಕ್ಟರ್. ದಕ್ಷಿಣ ಕನ್ನಡ ದಿಕ್ಕಿನಿಂದ ಬೆಂಗಳೂರು ಸೇರಿದ ಆಕೆ ಹವ್ಯಾಸಿ ಹಾಡುಗಾರ್ತಿ. ಅಂದಮೇಲೆ ಕೇಳಬೇಕೇ? ರಾಜುವಿನ ಮುತ್ತಿನಂಥ ಕಂಠಸಿರಿ ವಿನಯಾ ಎದೆಯಲ್ಲಿ ಅಳಿಸಲಾರದ ನಂಟು ಬೆಸೆದಿತ್ತು. ರಾಜು ನಡೆಸಿಕೊಡುವ ಹೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಳು. ದೂರದಲ್ಲೇ ನಿಂತು ವಿಶ್ ಮಾಡುತ್ತಿದ್ದಳು. ಕೊನೆಗೊಂದು ದಿನ ತನ್ನ ಅಂತರಂಗದ ಕದ ಬಿಚ್ಚಿಟ್ಟು, ಉತ್ತರಕ್ಕಾಗಿ ಕಾದುಕುಳಿತರು.
ಆಗ ರಾಜು ಏನು ಮಾಡಿದ ಗೊತ್ತಾ... ಸೀದಾ ಹೋಗಿ, ಆಕೆಗೆ ತನ್ನಲ್ಲಿರುವ ಗುಣವಿಶೇಷ, ತಪ್ಪು-ಒಪ್ಪು, ‘ಪಾನಕ ಸೇವನೆ’... ಎಲ್ಲವನ್ನೂ ಅರುಹಿದ. ಅದಕ್ಕೆ ಆ ಕಡೆಯಿಂದ ಬಂದ ಉತ್ತರ... ನೀ ಈಗ ಹೇಗೇ ಇರು, ಮುಂದೆ ನಿನ್ನನ್ನು ಹೀಗೆಯೇ ಬದಲಾಯಿಸುತ್ತೀನಿ. ನಿನ್ನ ಜತೆ ಇದ್ದೇ ಎಲ್ಲ ತಿದ್ದುತ್ತೀನಿ...’ ಯಥಾಪ್ರಕಾರ ಮದುವೆ ಆಯಿತು. ಆರು ತಿಂಗಳು ಕಳೆಯಿತು. ರಾಜು ಅದಾಗಲೇ ಅಲ್ಪಸ್ವಲ್ಪ ಸುಧಾರಿಸಿದ್ದ. ಆದರೆ ಏನಾಯಿತೋ ಗೊತ್ತಿಲ್ಲ. ೬೩ರಂತೆ ಒಂದೇ ಕಡೆ ಮುಖ ಮಾಡಿಕೊಂಡಿದ್ದ ಇಬ್ಬರೂ ೩೬ ಆಗಿ ಹೋದರು. ಆಕೆ ಆಕಡೆ, ಈತ ಈಕಡೆ. ಇಲ್ಲಿ ಯಾರ ಕಿವಿ ಹಿತ್ತಾಳೆಯಾಯಿತೋ ಗೊತ್ತಿಲ್ಲ. ದಾಂಪತ್ಯ ಎಂಬ ಕೊಂಡಿಯ ಮೇಲೆ ಆಸಿಡ್ ದಾಳಿಯಾಯಿತು. ರಾಜು ಯಾವಾಗಲೂ ‘ಏಳ್ಕಳಕ್ ಒಂದೂರು, ತಲೆ ಮೇಲೆ ಒಂದ್ಸೂರು, ಮಲ್ಗಾಕೆ ಭೂಮ್‌ತಾಯಿ ಮಂಚ...’ ಎಂಬಂತೆ... ಇಂದು ಬೆಂಗಳೂರು, ನಾಳೆ ಮೈಸೂರು, ನಾಡಿದ್ದು ಮಂಗಳೂರು, ಅಲ್ಲಿಂದ ಇನ್ನೊಂದೂರು, ಮತ್ತೆ ಸಾಗರದಾಚೆಯ ಊರು... ಆತ ಹಾಡು ಹಕ್ಕಿಯಷ್ಟೇ ಅಲ್ಲ, ಹಾರು ಹಕ್ಕಿಯೂ ಆಗಿದ್ದ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ... ಹಾಗಂತ ಹೇಳಿಕೊಂಡು ಎಂದೂ ತಿರುಗುತ್ತಿರಲಿಲ್ಲ. ರಾಜು, ಏಕೆ ಹೀಗೆ... ಎಂದು ಕೇಳಿದರೆ: ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಎಂದು ಗುರುಗಳನ್ನು (ಅನಂತಸ್ವಾಮಿ)ನೆನೆಯುತ್ತಿದ್ದ. ಗರಿ ಗರಿ ಜುಬ್ಬ ಹಸಿ ಹಸಿಯಾಗುತ್ತಿತ್ತು. ಕನ್ನಡಕ ಕೈಗೆ ಹಸ್ತಾಂತರವಾಗುತ್ತಿತ್ತು. ವಿನಯಾ ಬಗ್ಗೆ ಯಾರಾದರೂ ವಿಚಾರಿಸಲು ಮುಂದಾದರೆ, ಅವಳ ಉಭಯ ಕುಶಲೋಪರಿ ಕೇಳಿದರೆ ರಾಜು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ತೀರಾ ಅಸಹಾಯಕ ಪರಿಸ್ಥಿತಿ ಬಂದರೆ ದಯವಿಟ್ಟು ಆ ವಿಷಯ ಬಿಟ್ಟು ಬೇರೆ ಏನಾದ್ರೂ ಮಾತಾಡಿ ಎನ್ನುತ್ತಿದ್ದ. ಬಾಟಲಿಯ ಬಾಯನ್ನು ತನ್ನ ಬಾಯಿಯೊಂದಿಗೆ ಬೆಸೆದುಕೊಳ್ಳುತ್ತಿದ್ದ...
ವೇಲು ಕೊನೆಗೆ ಹೇಳಿದ್ದಿಷ್ಟು: ಇಷ್ಟೆಲ್ಲಾ ಇದ್ದರೂ ರಾಜು ರಾಜುವಾಗಿಯೇ ರಾರಾಜಿಸಿದ. ತನ್ನ ತಂದೆಯ ಮರಣೋತ್ತರ ದಿನಗಳಲ್ಲಿ ಕಷ್ಟದಲ್ಲೇ ಕೈ ತೊಳೆದ. ಹವ್ಯಾಸ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ರಾಜುಗೆ ಅದು ಚಟವಾಗಿ ಬದಲಾಗಿತ್ತು ಅಷ್ಟೇ. ಅದಕ್ಕೆ ಪ್ರಮುಖ ಕಾರಣ ಅಪ್ಪಾಯ್ಯಗೆ ಮರಣೋತ್ತರ ಪ್ರಶಸ್ತಿಯೂ ಲಭಿಸಲಿಲ್ಲ ಎಂಬ ನೋವು. ಈಗಲಾದರೂ ಘನ ಸರಕಾರ ಗುರುಗಳಿಗೆ ಶಿಶು ನಾಳ ಷರೀಫ ಪ್ರಶಸ್ತಿ ನೀಡಿದರೆ, ಅವರ ಹಾಗೂ ರಾಜು ಆತ್ಮಕ್ಕೆ ಶಾಂತಿ, ಇರುವ ಶಾಂತಮ್ಮನ ಮನಸ್ಸಿಗೆ ನೆಮ್ಮದಿಸಿಕ್ಕೀತು; ಹಾಡು ಹಕ್ಕಿಗೆ ಬಿರುದು ಸನ್ಮಾನ ಎರಡೂ ದಕ್ಕೀತು!




ಮುಪ್ಪನ್ನ ಏಮಾರ್‍ಸಿ ಓದ್ಯಲ್ಲೊ ಗೆಳೆಯಾ!


ರತ್ನನ ಪದಗ್ಳನಾ ರಾಜ್‌ರತ್ನ ಬರ್‍ದಿದ್ದು
ಯಾಕಂತ ಗೊತ್ತಾಯ್ತು ರಾಜು
ನೀನದ್ನ ಹಾಡ್ತಿದ್ರೆ ಕಣ್ಮುಂದೆ ರತ್ನಾನೆ
ಬಂದಂಗೆ ನಮ್ಗೆಲ್ಲಾ ಮೋಜು
ಪಕ್ವಾದ್ಯ ಭಾರ್‍ಸೋರು ಭಾರ್‍ಸಿದ್ರೂ ಸುಮ್ಕಿದ್ರು
ಇರ್‍ಲಿಲ್ಲ ನಿಂಗವ್ರ ಗೋಜು
ನೀನೆಲ್ರ ನಗ್ಸೋದ್ನ ಕಾಯ್ತಿದ್ದಾ
ಬಳಗಾನೆ ಇದ್ರಲ್ಲೊ ನಿನ್ನಾಜುಬಾಜು

ನಿನ್‌ತುಂಟು ಕಣ್ಣಲ್ಲೆ ಮಾತಾಡ್ತಾ ಮಾತಾಡ್ತಾ
ನನ್ನನ್ನೇ ಮಾಡ್ತಿದ್ದೆ ಬೆಪ್ಪು
ಸ್ನೇಇತ್ರಾ ಎದ್ಯಾಗೆ ಹಸಿರಾಗ್ಯೆ ಉಳಿಯುತ್ತಾ
ನಗ್‌ನಗ್ತಾ ತಿವಿತಾವೆ ನೆಪ್ಪು
ಇಷ್ಟಾದ್ರೂ ನಾ ಬಲ್ಲೆ ಹುಡುಗಾಟ
ಏನಿದ್ರೂ ನೀನೇನೂ ಮಾಡ್ಲಿಲ್ಲ ತಪ್ಪು
ಹಾಗಾಗೇ ನೀ ನಮ್ಮ ಮನ್ಸಾಗೆ ಜೋರಾಗೇ
ಒತ್‌ತಿದ್ದೆ ಅಳಿವಿಲ್ದ ಛಾಪು

ನಿನ್ನನ್ನ ಹಣ್‌ಮಾಡಕ್ ಕಾಯ್ತಿದ್ದ ಮುಪ್ಪನ್ನ
ಏಮಾರ್‍ಸಿ ಓದ್ಯಲ್ಲೊ ಗೆಳೆಯಾ
ಬ್ರಹ್ಮಂಗೆ ಏನಾಯ್ತೊ ನಿನ್ ಜಾತ್ಕಾ ಬರ್‍ಯೋದ್ನಾ
ಅರ್ಧಕ್ಕೆ ನಿಲ್ಲಿಸ್ದ ಮಡೆಯಾ
ಆಗಾಗ ಸಿಗ್ತಿದ್ದೋನ್ ಇನ್ನೆಂದೂ ಸಿಗ್ದಂಗೆ
ಹೋದ್ಯಲ್ಲೊ ಗಿಲ್‌ಬಿಟ್ಟು ದಿಲ್‌ಗೆ
ಒಂದ್ ಸಾರಿ ನಿನ್ನನ್ನ ನೋಡ್‌ಬೇಕು ಅನ್ಸಿದ್ರೆ
ನಾವೇನೇ ಬರ್‍ಬೇಕಾ ಅಲ್‌ಗೆ
-ಇದು ರಾಜರತ್ನಂ ಬರೆದ ಪದಗಳಲ್ಲ. ರಾಜು ಅನಂತಸ್ವಾಮಿಯ ಹೃದಯ ಗೆದ್ದ ಗೆಳೆಯರಲ್ಲಿ ಒಬ್ಬರಾದ ವಿ. ಮನೋಹರ್ ಎದೆತುಂಬಿ ಹಾಡಿದ ‘ರಾಜು -ರತ್ನನ್ ಪದಗಳು’!
ಮನೋಹರ್ ರಾಜು ಇನ್ನಿಲ್ಲ ಎಂದು ನಂಬಲು ಬಿಲ್ ಕುಲ್ ತಯಾರಿರಲಿಲ್ಲ. ‘ಆ ಭೂಪ ಇಲ್ಲೇ ಇದ್ದಾನೆ. ಅವನ ಅಂತರಾತ್ಮ ಅಸ್ತಂಗತವಾಗಿಲ್ಲ. ಅಂದು ನಾನು ಬರೆದುಕೊಟ್ಟ ಹಾಡಿಗೆ ಪೂರ್ಣ ಸ್ವರ ಸಂಯೋಜನೆ ಮಾಡಲು ಹಾಳಾದ ಬೆನ್ನುನೋವು ಬಿಡಲಿಲ್ಲ ಎಂಬ ನೋವು ಅವನಲ್ಲಿ ಹಚ್ಚಳಿದಿದೆ. ಇಲ್ಲೆಲ್ಲೋ ಹಾರ್ಮೋನಿಯಂ ಹಿಡಿದು... ‘ನೆನಪಿದೆಯಾ ಆ ದಿನಗಳು, ನೆನಪಿದೆಯಾ ಆ ಕ್ಷಣಗಳು’ ಎಂದು ಭಾವ ತಂತಿ ಮೀಟುತ್ತಿದ್ದಾನೆ. ಆತ ಪರಲೋಕ ಪ್ರವೇಶ ಮಾಡುವ ಒಂದು ವಾರದ ಹಿಂದೆ ಹನುಮಂತನಗರದ ಅರವಿಂದ್ ಸ್ಟುಡಿಯೊದಲ್ಲಿ ಜತೆಜತೆಯಾಗಿ ಕಳೆದ ಆ ಕ್ಷಣಗಳು ಇನ್ನೂ ಹಸಿ ಹಸಿಯಾಗಿ ಉಳಿದಿದೆ’ ಎಂದು ಆ ದಿನಗಳತ್ತ ದಾಪುಗಾಲು ಇಡುತ್ತಾರೆ ಮನೋಹರ್...
ಸ್ಟುಡಿಯೊದ ಅ ವಿಭಾಗದಲ್ಲಿ ರಾಜು ಬಳಗವಿತ್ತು. ಕಾರಣಾಂತರದಿಂದ ಆ ಗೆ ಹೋಗಿದ್ದೆ. ರಾಜು ಕಂಠ ಸಿರಿಯಿಂದ ಹೊರಹೊಮ್ಮಿದ ಆ ಸಂಗೀತದ ಆಲಾಪನೆ ನನ್ನ ಕಿವಿಗೆ ಮುತ್ತಿಕ್ಕಿತು. ‘ಹೇ... ಬಹಳ ದಿನವಾಯಿತು ರಾಜು ದರ್ಶನವಾಗಿ. ನೋಡಿಬರೋಣ’ ಎಂದು ಮೆಟ್ಟಿಲೇರಿ, ಒಳ ಪ್ರವೇಶಿಸಿದೆ. ಅಲ್ಲಿ ಮೈಸೂರು ಅನಂತಸ್ವಾಮಿಯವರ ೫೦ ಹಾಡುಗಳ ಸ್ವರ ಸಂಯೋಜನೆ ನಡೆಯುತ್ತಿತ್ತು. ಹಾಗೆ ಮಾಡಲು ಸರಕಾರ ಆರ್ಡರ್ ಮಾಡಿತ್ತು. ಎಲ್.ಎಲ್.ಶಾಸ್ತ್ರಿ, ಮಂಗಳಾರವಿ, ನಗರ ಶ್ರೀನಿವಾಸ ಉಡುಪ ಮೊದಲಾದ ಗಾಯಕರು ರಾಜುವಿನ ರಾಗ ಲೀಲೆಗೆ ತಾಳ ಹಾಕುತ್ತಿದ್ದರು. ಅದು ನೋಡಿ ನಿಜವಾದ ಸ್ವರ ಸಂಯೋಜನೆ. ಅವು ಯಾವುದೇ ರಾಗಾಧಾರಿತವಾಗಿರಲಿಲ್ಲ. ರಾಜು ಎಲ್ಲವನ್ನೂ ಫ್ರೆಶ್‌ಆಗಿ ಕಂಪೋಸ್ ಮಾಡುತ್ತಿದ್ದ. ತಾಯಿ ಶಾಂತಮ್ಮ, ತಂಗಿ ಸುನೀತಾ ಕೂಡ ಇದ್ದರು. ರಾಜು ನನ್ನನ್ನು ಕಂಡವನೇ ಓಡೋಡಿ ಬಂದು, ಬಾಚಿ ತಬ್ಬಿಕೊಂಡ. ‘ಎಷ್ಟು ದಿನ ಆಯ್ತು ಸಾರ್... ಅರ್ಧ ಗಂಟೆಗೆ ಮುನ್ನ ನಿಮ್ಮನ್ನು ನೆನಪಿಸಿಕೊಂಡೆ. ನನಗೆ ಒಂದು ಹಾಡು ಬರೆದುಕೊಡಬೇಕು ನೀವು. ಬೇಕಾದರೆ ನಾಳೆ ಕೊಡಿ ಪರವಾಗಿಲ್ಲ...’ ಎಂದು ನನ್ನ ಉತ್ತರಕ್ಕೂ ಕಾಯದೇ ಎಳೆದುಕೊಂಡು ಹೋಗಿ, ಸೋಫಾ ಮೇಲೆ ಕೂರಿಸಿದ. ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಅಂದು ರಾಜು ಬಲು ಹುಮ್ಮಸ್ಸಿನಲ್ಲಿದ್ದ. ಅವನನ್ನೇ ನೋಡುತ್ತಾ ಬರೆಯಲು ಕುಳಿತೆ...
ನೆನಪಿದೆಯಾ ಆ ದಿನಗಳು... ನೆನಪಿದೆಯಾ ಆ ಕ್ಷಣಗಳು... ರಾಜು ಒಂದೇ ಬಾರಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿಬಿಟ್ಟ. ಥೇಟ್ ಮೈಸೂರು ಅನಂತಸ್ವಾಮಿಯವರ ಹಾಗೆ! ನನಗೆ ಅವನನ್ನು ಒಮ್ಮೆ ತಬ್ಬಿಕೊಳ್ಳಬೇನಿಸಿತು. ‘ರಾಜು ನೀನು ಈಗಲೂ ಪುಟ್ಟ ಮಗು ಥರ ಕಣಯ್ಯಾ...’ ಎಂದೆ. ಅದಕ್ಕೆ ಪ್ರತಿಕ್ರಿಯೆ ಕೊಡುವಷ್ಟು ಸಮಯ ಇರಲಿಲ್ಲ. ಪಲ್ಲವಿಗೆ ಮುದ್ದಾರ ಸ್ವರ ಸಂಯೋಜಿಸಿ, ಇನ್ನೇನು ಚರಣಕ್ಕೆ ಹೊರಳಬೇಕು...; ಒಮ್ಮೆ ಬೆನ್ನು ಹಿಡಿದು ಕೊಂಡು, ‘ಅಮ್ಮಾ... ಎಂದು ಕೂಗಿದ. ಹತ್ತಿರದಲ್ಲೇ ಇದ್ದ ಶಾಂತಮ್ಮ ಓಡೋಡಿ ಬಂದರು.


ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ

ಮನೋಹರ್ ಆ ಸುದ್ದಿ ಕೇಳಿ ಕುಗ್ಗಿ ಹೋದರು. ಬೆನ್ನು ನೋವು ರಾಜುವನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿತ್ತು. ಸ್ನೇಹದ ಬುಗ್ಗೆಯಂತಿದ್ದ ಆ ಜೀವ ಅದಾಗಲೇ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭಿಸಿತ್ತು. ಹಾಡು ಬರೆದುಕೊಟ್ಟು, ‘ರಾಜು ಮತ್ತೆ ಸಿಗುತ್ತೇನೆ, ನೀನು ರಾಗ ಸಂಯೋಜನೆ ಮಾಡಿರು. ನನಗೆ ಅರ್ಜೆಂಟ್ ಕೆಲಸ ಇದೆ ಎಂದು ಹೊರಟ ಮನೋಹರ್‌ಗೆ ಮತ್ತೆ ಆ ಮುಖ ನೋಡುವ ಭಾಗ್ಯವಿರಲಿಲ್ಲ. ಚಿರ ನಿದ್ರೆಗೆ ಜಾರುವ ಶಯ್ಯೆಯಲ್ಲಿ ಮಲಗುವ ಮುಂಚಿನ ದಿನ ಕಾರ್ಯನಿಮಿತ್ತ ಕಾಸರಗೋಡಿಗೆ ಹೋಗಿದ್ದರು. ಬರುವ ಹೊತ್ತಿಗೆ ರಾಜುವನ್ನು ಮರಳಿ ದೂರತೀರಕೆ ಕರೆದೊಯ್ದಿದ್ದ. ರಾಜು ಸಾವಿನ ಸುಳಿಯಲ್ಲಿ ಸಿಲುಕಿ, ವಿಲವಿಲ ಎನ್ನುತ್ತಿರುವ ಸುದ್ದಿ ಇವರ ಎದೆಗೆ ನಾಟಿತು... ಅಯ್ಯೊ ಆ ಹಾಡು...
ನೆನಪಿದೆಯಾ ಆ ದಿನಗಳು
ನೆನಪಿದೆಯಾ ಆ ಕ್ಷಣಗಳು
ಎಂಥ ಹಾಳು ಗಳಿಗೆಯೆಂದು
ಅಂದುಕೊಂಡ ಆ ದಿನ
ಇಂದು ನೆನೆಸಿಕೊಂಡ ಒಡನೆ
ಮೊಗದಿ ನಗೆಯ ಸಿಂಚನ
ಗೆಲುವು ಸಿಕ್ಕ ವೇಳೆ ಆಗುತ್ತಿದ್ದೆ ಮದನ ಮರ್ಕಟ
ಸೋತ ವೇಳೆ ಯಾರದೊ
ಸಂಚಿದೆಂಬ ಸಂಕಟ ಮೌನದಿ ಆರ್ಭಟ
; ಅದು ಅರ್ಧ ಚಂದ್ರವಂತಾಗಿತ್ತು. ಪೂರ್ಣವಾಗಲು ಚರಣಗಳು ಬಾಕಿ ಇದ್ದವು. ಅಷ್ಟೊತ್ತಿಗಾಗಲೇ ಮರಣ ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಕಾಸರಗೋಡಿನಿಂದ ಬರುವ ಹೊತ್ತಿಗೆ ಸಂಸ್ಕಾರವಂತನಾಗಿಬಿಟ್ಟಿದ್ದ!
ಮನೋಹರ್ ಮತ್ತೆ ಮರುಗಿದರು... ‘ರಾಜುಗೆ ಸಿನಿಮಾ ಸಂಗೀತ ನಿರ್ದೇಶಕ ಆಗಬೇಕು ಎಂಬ ಮತ್ತೊಂದು ಮಹದಾಸೆ ಇತ್ತು. ಖುಷಿ ಚಿತ್ರದ ‘ನಾನು ಒತ್ತಾರೆ ಎದ್ಬುಟ್ಟು, ಬೆಡ್‌ಕಾಫಿ ತಂದ್ಕೊಟ್ಟು, ನಿನ್ ಸೇವೆ ಮಾಡ್ತೀನ್ ಕಣೆ...’ ಹಾಡಿಗೆ ಕಂಠದಾನ ಮಾಡುವ ಮುನ್ನ: ಗುರುವೇ... ಒಂದಿಷ್ಟು ಕಾಮಿಡಿ ಹಾಡುಗಳನ್ನು ಬರೆದುಕೊಡಿ, ನಾನು ಅದಕ್ಕೆ ಸಂಗೀತ ಸಂಯೋಜಿಸುತ್ತೇನೆ. ಅದನ್ನು ಸಿನಿಮಾದಲ್ಲಿ ಅಳವಡಿಸೋಣ... ಎಂದು ಹಲ್ಲುಗಿಂಜಿದ್ದ. ಅದಕ್ಕೆ ನಾನು ಅಸ್ತು ಎಂದು ಸುಮಾರು ಎಂಟ್ಹತ್ತು ಹಾಡು ಬರೆದಿದ್ದೆ. ಸಿಕ್ಕಸಿಕ್ಕಲ್ಲೆಲ್ಲಾ: ರಾಜು ಅದು ರೆಡಿ ಇದೆ ಕಣೋ... ಎನ್ನುತ್ತಿದ್ದೆ. ಆದರೆ ಆತ: ಗುರುವೇ ಇನ್ನೊಂದ್ಸಲ ಕೊಡಿ... ಎನ್ನುತ್ತಿದ್ದ...ಇಂದು ಅವು ನನ್ನ ಟೇಬಲ್ ಕೆಳಗೇ ಉಳಿದುಕೊಂಡಿವೆ... ಆಗಾಗ ಕಣ್ಣಿಗೆ ಬಿದ್ದು, ರಾಜು ನೆನಪಾಗುವಂತೆ ಮಾಡುತ್ತಿವೆ... ಎಂದು ನೋವಿನ ಓಕುಳಿಪುರವಾಗುತ್ತಾರೆ ಮನೋಹರ್.
ಕೊನೆಯದಾಗಿ ಅವರು ರಾಜು ಮಾಡುತ್ತಿದ್ದ ಚೇಷ್ಟೆಯನ್ನು ನೆನೆನೆನೆದು ನಗುವಿನ ಜೋಕಾಲಿಯಾದರು...
***
ಒಮ್ಮೆ ವಚನಗಳ ಕಂಪೋಸಿಂಗ್ ನಡೆಯುತ್ತಿತ್ತು. ಎಲ್ಲ ಹೊಸ ಹುಡುಗರು. ದಿನಗಟ್ಟಲೇ ತಿದ್ದಿ, ತೀಡಿದರೂ ಮತ್ತದೇ ಬುದ್ಧಿ. ಮನೋಹರ್ ಮುಲು ಮುಲು ಎನ್ನತೊಡಗಿದರು. ಹಿಂದಿನಿಂದ ಬಂತು ಆ ಧ್ವನಿ... ಮನೋಹರ್ರು ಕಣ್ಣಲ್ಲೇ ಎಣ್ಣೆ ತೆಗೀತಾ ಇದ್ದಾರೆ...; ಥೇಟ್ ಶಿವಮೊಗ್ಗ ಸುಬ್ಬಣ್ಣನ ವಾಯ್ಸ್. ಮನೋಹರ್ ಗಪ್ ಅಂತ ಪೀಚೇ ಮೂಡ್. ಇನ್ನೇನು-ಸುಬ್ಬಣ್ಣ ಅವರೇ... ಎನ್ನಬೇಕು; ಆತ ಗಳಗಳಗಳ ನಗತೊಡಗಿದ್ದ, ನೋಡುತ್ತಾರೆ ರಾಜು!
ಅದೇ ರೀತಿ, ಇದೇ ಹಾಡನ್ನು ಸಿ.ಅಶ್ವತ್ಥ್ ಹಾಡಿದರೆ ಹೇಗಿರುತ್ತೆ ಎಂದು- ರೇ ರೇ ರೇ ರೇ ರಾ.... ಎಂದು ಆಕಾಶಕ್ಕೆ ಕೈ ಎತ್ತುತ್ತಿದ್ದ. ನಗೆಗಡಲಲ್ಲಿ ಕಂಬಳಿ ಹೊದ್ದು ಮಲಗುತ್ತಿದ್ದ!
***
ಅಂದೊಮ್ಮೆ ಹಾಡುಗಳ ರೀರೆಕಾರ್ಡಿಂಗ್ ನಡೆಯುತ್ತಿತ್ತು. ತಬಲಾ ವಾದಕರಾದ ಜರಾರ್ಲ್, ಶಿವಸತ್ಯ ಹಾಗೂ ರಾಜು ಇದ್ದರು. ಮೊದಲು ಮೈಕ್ ಲೆವೆಲ್ ನೋಡೋಣ, ಹಾಗೇ ಸುಮ್ಮನೇ ತಬಲಾ ನುಡಿಸಿ ಎಂದರು ಮನೋಹರ್. ರೂಮಿನ ಒಳಗಡೆ ರಾಜು ಬಳಗ ಇತ್ತು. ಮೊದಲು ಜರಾರ್ಲ್, ನಂತರ ಶಿವಸತ್ಯ ನುಡಿಸಿದರು. ಆದರೆ ಅದು ಕರ್ಕಶವಾಗಿ ಕೇಳಿಸುತಿತ್ತು. ಮನೋಹರ್ ಒಮ್ಮೆಲೇ ಸಾಕು ಸಾಕು ಎಂದು ಸುಮ್ಮನಾದರು. ಕೊನೆಗೆ ರಾಜು ಸರದಿ. ಡುಂ...ಡುಂಂ... ಡುಂಂಂ... ಮನೋಹರ್ ಸೂಪರ್ ಗುರೂ... ಎಂದರು. ಆದರೆ ಒಳಗೆ ಕುಳಿತಿದ್ದವರೆಲ್ಲಾ ಮುಸಿ ಮುಸಿ ನಗುತ್ತಿದ್ದರು. ಮಹೋಹರ್‌ಗೆ ಪರಿಸ್ಥಿತಿ ಅರ್ಥವಾಗಲಿಲ್ಲ. ಎದ್ದು ಹೋಗಿ ನೋಡ್ತಾರೆ; ರಾಜು ಕೈ ಕಟ್ಟಿ ಕುಳಿತಿದ್ದ. ಬರೀ ಬಾಯಲ್ಲಿಯೇ ಡುಂಂಂಂ... ಡುಂಂಂಂಂ ಎನ್ನತೊಡಗಿದ್ದ!
***
ಸಂಗೀತ ಕಲಾವಿದರ ಮದುವೆ ಸಮಾರಂಭ, ಇತರೆ ಕಛೇರಿಗಳಲ್ಲಿ ಹಾಡಲು ಶುರುವಾಡಿದರೆ ಮಧ್ಯ ಮಧ್ಯ ಸ್ನೇಹಿತರ ಹೆಸರು ಸೇರಿಸಿ, ಕಲಸುಮೇಲೋಗರ ಮಾಡುತ್ತಿದ್ದ. ಹಾಗಂತ ರಾಗ, ತಾಳ, ಲಯ ತಪ್ಪುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹೊಂದುಕೊಳ್ಳುವಂತೆ ಬಳಸುತ್ತಿದ್ದ. ಪಕ್ಕ ವಾದ್ಯ ನುಡಿಸಲು ಕುಳಿತವರನ್ನು ಹಾಡುವ ಮಧ್ಯೆ ಮಾತನಾಡಿಸುತ್ತಾ ಮತ್ತೆ ಹಾಡಿನತ್ತ ಮರಳುತ್ತಿದ್ದ. ಇಷ್ಟೆಲ್ಲಾ ತರಲೆ, ತಂಟೆ ಮಾಡಿದರೂ ಕೊನೆಯಲ್ಲಿ ಜನ ಸಿಳ್ಳೆ ಹಾಕುತ್ತಿದ್ದರು. ಎರಡೂ ಕೈ ಜೋಡಿಸಿ ರೊಟ್ಟಿ ತಟ್ಟುತ್ತಿದ್ದರು.
-ಹೀಗೆ ಮನೋಹರ್ ರಾಜು ಜತೆ ಕಳೆದ ಕ್ಷಣಗಳನ್ನು ತಮ್ಮ ನೆನಪಿನಂಗಳದಲ್ಲಿ ಹರವಿಟ್ಟು, ಕಣ್ಣು ಮಿಟುಕಿಸುತ್ತಾರೆ. ರಾಜು ಕಂಡ ಕನಸು ಶಾಶ್ವತ, ಆತ ಹಾಕಿದ ಕಂಠ ಶಾಶ್ವತ ಎಂದು ಅನಿಸಿಕೆಗೆ ಪೂರ್ಣವಿರಾಮ ಇಡುತ್ತಾರೆ...
ಅನಂತ ನಮನ:
ರಾಜು ಬದುಕಿದ್ದಾಗ ತನ್ನ ಇಡೀ ಬದುಕನ್ನು ಮರುಭೂಮಿಯ ರಣ ರಣ ಬಿಸಿಲಲ್ಲಿ ಕಳೆದ. ಆದರೂ ಆಗಾಗ ಓಯಸಿಸ್‌ನ ಚಿಲುಮೆ ಬಂದು ಬಾಯಾರಿಕೆ ತಣಿಸುತ್ತಿತ್ತು. ಆದರೆ ಅಲ್ಲಿಯೇ ಇದ್ದು ಸ್ವರ್ಗ ಕಾಣಲು ರಾಜು ತಯಾರಿರಲಿಲ್ಲ. ನಡೆ ಮುಂದೆ ನಡೆ ಮುಂದೆ ಎನ್ನುತ್ತಿತ್ತು ಅನಂತಸ್ವಾಮಿ ಪುತ್ರನ ಅಂತರಾತ್ಮ. ಆದರೆ ಆತ ಹೆಸರಿನ ಹಿಂದೆ ಹೋಗಲಿಲ್ಲ. ಬಾಟಲಿಯ ಸಂಗ ಬಿಡಲಿಲ್ಲ. ಅದು ದುರಂತವೇ ಸರಿ. ಅದು ಕಲಾಸೇವೆ ಮಾಡಲು ಮುಂದಾದ ಹೆಚ್ಚಿನವರ ಸಹಪಾಠಿಯಾಗಿ ಜತೆ ಜತೆ ಹೆಜ್ಜೆ ಹಾಕಲು ಶುರುಮಾಡುತ್ತದೆ. ಅದರಿಂದ ಅನಕೃ, ಕಾಳಿಂಗರಾವ್, ಯೋಗಾನರಸಿಂಹಮೂರ್ತಿ, ಖಳನಟ ದಿನೇಶ್... ಯಾರೊಬ್ಬರೂ ಹೊರತಲ್ಲ. ಈಗ ರಾಜು ಸರದಿ. ಅದೇ ಪರಿಧಿಯಲ್ಲಿ ಆತನ ಜತೆ ಒಡನಾಡಿಯಾಗಿದ್ದ ಕೆಲ ಆತ್ಮೀಯರು ತಮ್ಮ ಒಡಲಾಳದ ನೋವು, ಅವನ ಜತೆ ಕಳೆದ ಕ್ಷಣಗಳನ್ನು ಈ ಮೂಲಕ ಹಂಚಿಕೊಂಡಿದ್ದಾರೆ.

ಪೂರ್ಣ ವಿರಾಮ / ಕಲಗಾರು

1 comment:

ಜಿ.ಎಸ್.ಬಿ. ಅಗ್ನಿಹೋತ್ರಿ said...

ಬರಹ ಚೆನ್ನಾಗಿದೆ. ರಾಜು ಮತ್ತೆ ನೆನಪಿನಂಗಳಕ್ಕೆ ಬಂದರು. ಅಸಾಮಾನ್ಯ.....