Sunday, March 23, 2008



ರಕ್ತದೋಕುಳಿಯಲ್ಲಿ ಮಿಂದೆದ್ದ ಗೂಳಿ !

ನಟ ಸುದೀಪ್ ಲಾಂಗ್ ಗ್ಯಾಪಿನ ನಂತರ ಮತ್ತೆ ಬಂದಿದ್ದಾರೆ.
ಜತೆಗೆ ಫಳಪಳಿಸುವ ಲಾಂಗ್‌ಒಂದನ್ನು ಲಂಗುಲಗಾಮಿಲ್ಲದೇ ತಿರುತಿರುಗಿಸುತ್ತಾ ಬಂದಿದ್ದಾರೆ.
ಇತ್ತೀಚೆಗೆ ಬರೀ ಕ್ಲಾಸ್ ಪ್ರೇಕ್ಷಕರ ಅಭಿರುಚಿಗೆ ಸರಿಹೊಂದುವ ಪಾತ್ರ, ಚಿತ್ರಗಳನ್ನೇ ಮಾಡಿಕೊಂಡಿದ್ದ ಅವರು ಮತ್ತೊಮ್ಮೆ ಕಿಚ್ಚನ ವರಸೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂನಿಂದ ಮನೆಮಾತಾಗಿದ್ದ ಅವರು, ಈಗ ಮತ್ತದೇ ಮುಖವಾಡ ಧರಿಸಿದ್ದಾರೆ. ಗುಟ್ಟಾಗಿ ಘೋರಿ ತೋಡುವ 'ಗೂಳಿ’ಯಾಗಿ ಬದಲಾಗಿದ್ದಾರೆ. ಮಾತೆತ್ತಿದರೆ ಮಾಂಜಾಕೊಡುವ, ಸೊಲ್ಲೆತ್ತಿದರೆ ಸುಡಗಾಡು ತೋರಿಸುವ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಹಲವು ವರ್ಷಗಳಿಂದ ಹಸಿದು ಬಸವಳಿದಿದ್ದ ತಮ್ಮ ಅಭಿಮಾನಿಗಳಿಗೆ "ಮೃಷ್ಟಾನ್ನ ಭೋಜನ’ ಉಣಬಡಿಸಿದ್ದಾರೆ. ಮಚ್ಚಿನ "ರುಚಿ’ ತೋರಿಸಿದ್ದಾರೆ.

ಗೂಳಿ ಬಂತು ಗೂಳಿ... ಆತ ದೊಡ್ಡ ರೌಡಿ. ಹೆಸರು ಹೂಳಿ. ಅವನ ಹಿಂದೆ ದೊಡ್ಡದೊಂದು ಠೋಳಿ. ಹೆಸರು ನೈಂಟಿ, ಕ್ವಾಟ್ರು, ಮೀಟ್ರು...ಎಲ್ಲೆಲ್ಲಿ ಯಾವಯಾವ ಹತಾರ ಮಡಗಿರುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಮಾತೆತ್ತಿದರೆ ಮಾಂಜಾ. ಸೊಲ್ಲೆತ್ತಿದರೆ ಸುಡಗಾಡು. ಇಡೀ ಬೆಂಗಳೂರಿನಲ್ಲಿ ಅವರದ್ದೇ ಹಾವಳಿ. ಗೂಳಿ ಬಂದ ಎಂದರೆ ಅಲ್ಲೊಂದಿಷ್ಟು ಜನ ಹೆಣವಾಗೋದು ಗ್ಯಾರಂಟಿ. ಕೈಲೊಂದು ಮಾರುದ್ದ ಲಾಂಗ್ ಇದ್ದರೆ ಸಾಕು, ಅದು ಯಾರ್‍ಯಾರನ್ನು ತಿವಿಯುತ್ತೋ ಅಂಥ ಆ ದೇವರಿಗೇ ಗೊತ್ತು!
ಶಿವಾಜಿನಗರದ ಫಯಾಜ್, ಮತ್ತಿ ಸೀನ, ಶ್ರೀರಾಂಪುರದ ಸೆಲ್ವ... ಗೂಳಿಯ ಎದುರಾಳಿಗಳು. ಅವರದ್ದೂ ಒಂದೇ ಸಿದ್ಧಾಂತ- ಹೊಡಿ, ಬಡಿ, ಕಡಿ... ಅವರು ಯಾವುದಕ್ಕೂ ರೆಡಿ. ಗೂಳಿಯ ತಂಟೆಗೆ ಹೋಗೋದು ಸುಖಾಸುಮ್ಮನೇ ಲತ್ತೆ ತಿನ್ನೋದು.

ಆಗೊಬ್ಬ ರಮ್ಯಾ ಎಂಬ ಬೆಡಗಿ ಬರುತ್ತಾಳ. ಆಕೆ ಹೈಟೆಕ್ ಹುಡುಗಿ. ಇದ್ದ ಇಬ್ಬರು ಅಣ್ಣಂದಿರಿಗೆ ಅವಳೇ ಸರ್ವಸ್ವ. ಅಕಸ್ಮಾತ್ ಗೂಳಿಯನ್ನು ಭೇಟಿಯಾಗುತ್ತಾಳೆ. ಅವನ ಸ್ಟೈಲಿಗೆ, ಒರಟುತನಕ್ಕೆ ಮರುಳಾಗುತ್ತಾಳೆ. ಅವನ ನಿಷ್ಕಲ್ಮಶ ಹೃದಯಕ್ಕೆ ಮಾರುಹೋಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಅವ ಭೂಗತಪಾತಕಿ ಎಂದು ಗೊತ್ತಾಗಿಯೂ ಅದನ್ನೇ ಮಾಡುತ್ತಾಳೆ. ಅವನನ್ನೇ ಬದಲಿಸುವ ಪ್ರಯತ್ನ ಮಾಡುತ್ತಾಳೆ. ಗೂಳಿಯ ವಿರೋಧಿಗಳ ಕೈಗೆ ಸಿಕ್ಕಿ ನಲುಗುತ್ತಾಳೆ. ಇನ್ನೇನು ಗೂಳಿ ಬದಲಾಗಿ, ಗೊಸ ಬಾಳಿಗೆ ಅಡಿಯಿಡಬೇಕು ಎನ್ನುವಷ್ಟರಲ್ಲಿ ಮತ್ತೆ ಭೂಗತ ಜಗತ್ತು ಕೈಬೀಸಿ ಕರೆಯುತ್ತೆ... ಮುಂದೈತೆ ಗೂಳಿಯ ಹೋಳಿ ಹಬ್ಬ.
ಇದು ಗೂಳಿ ಚಿತ್ರದ ಕೇವಲ ಸ್ಯಾಂಪಲ್ ಅಷ್ಟೇ. ಇನ್ನಷ್ಟು ರಕ್ತಪಾತ, ಕೊಲೆ, ಸುಲಿಗೆ, ರಕ್ತ ಸಿಕ್ತ ಹೋಳಿಹಬ್ಬ ನೋಡುವ ಹಂಬಲವಿದ್ದರೆ ಗೂಳಿಯ ಬಳಿ ಬನ್ನಿ. ಅಂಥದ್ದೊಂದು 'ಭಯಂಕರ ಪ್ರಾತ್ಯಕ್ಷಿಕೆ’ಯನ್ನು ನಿಮಗೆ ನೀಡಿದ್ದಾರೆ ನಿರ್ದೇಶಕ ಪಿ. ಸತ್ಯಾ. ಎದುರಾಳಿಗಳನ್ನು ಹೇಗೆ ಅಟ್ಟಾಡಿಸಿಕೊಂಡು ಹೋಗಿ ಅಡ್ಡಡ್ಡಾ ಸಿಗಿಯಬೇಕು, ಎಲ್ಲೆಲ್ಲಿ ತಿವಿದರೆ ಬೇಗೆ ಸಾಯುತ್ತಾರೆ ಎಂಬುದನ್ನು ಮೊದಲಾರ್ಧದಲ್ಲಿ ಚಾಚೂತಪ್ಪದೇ ಅವರು ವಿವರಿಸಿದ್ದಾರೆ. ರೌಡಿಸಂ ಬ್ಯಾಡ, ಭೂಗತ ಲೋಕ ಅಷ್ಟು ಸುಲಭವಲ್ಲ ಎಂಬುದನ್ನು ಒಂದು 'ಅದ್ಬುತ ಸಾಕ್ಯಚಿತ್ರ'ದಂತೇ ಹೇಳಲು ಪ್ರಯತ್ನಿಸಿ ಎಲ್ಲೋ ಒಂದುಕಡೆ ಎಡವಿದ್ದಾರೆ. ಬರೀ ಹಿಂಸಾತ್ಮಕ ದೃಶ್ಯಗಳಿಗೇ ಒತ್ತುಕೊಟ್ಟು ಇಡೀ ಚಿತ್ರಕ್ಕೆ ಸಿಗಬೇಕಾದ ಕಿಮ್ಮತ್ತಿಗೇ ಕಪ್ಪುಚುಕ್ಕೆ ಇಟ್ಟಿದ್ದಾರೆ. ಆದರೆ ಅಯ್ಯಯ್ಯೋ ಇದೇನಪ್ಪಾ "ಬರೀ ಹೊಡೆದಾಟ’ಎಂದುಕೊಳ್ಳುತ್ತಿದ್ದಂತೇ ಮಧ್ಯಮಧ್ಯ ಬರುವ ಕೆಲವು ಹಾಡುಗಳು ಕೆಲಸಮಯ ಮುದ ನೀಡುತ್ತವೆ. ಸುಮ್ ಸುಮ್ನೆಯಾಕೋ.. ಕದ್ದು ಕದ್ದು ನನ್ನ ನೋಡೋ... ಹಾಡುಗಳು ಕೊನೆವರೆಗೂ ನಮ್ಮನ್ನೇ ಹಿಂಬಾಲಿಸುತ್ತವೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ಗೆ ಉತ್ತಮ ಭವಿಷ್ಯವಿದೆ. ಸಾಹಸ ನಿರ್ದೇಶಕ ಪಳನಿರಾಜ್ ಕೂಡ ಪ್ರತಿ ಫ್ರೇಮ್‌ನಲ್ಲೂ ಫಳಫಳಿಸಿದ್ದಾರೆ.

ಆದರೆ ನಟಿ ಮಮತಾ ಮೋಹನ್‌ದಾಸ್ ಮಾತ್ರ ಬೆಳ್ಳಗಿರೋದೆಲ್ಲಾ ಹಾಲಲ್ಲಾ ಎಂಬುದನ್ನು ನಿರೂಪಿಸಿದ್ದಾರೆ. ತಮ್ಮ ಮಾತಿಗೂ ಅಭಿನಯಕ್ಕೂ ಒಂದಕ್ಕೊಂಡು ಸಂಬಂಧವೇ ಇಲ್ಲವೇನೋ ಎಂಬಂತೇ ಅವರ ಅಭಿನಯ ಸಪ್ಪೆಸಪ್ಪೆ. ಕಿಶೋರ್, ಭವ್ಯ,
ಸುದೀಪ್ ಎಲ್ಲೂ ಸೋತಿಲ್ಲ. ಬದಲಾಗಿ ಇನ್ನಷ್ಟು ಮಾಗಿದ್ದಾರೆ. ತಮ್ಮ ಸೂಪರ್‌ಫಾಸ್ಟ್ ಡೈಲಾಗ್‌ಗಳಿಂದ "ಗೂಳಿ’ಗೆ ಮತ್ತಷ್ಟು ಜೀವತುಂಬಿದ್ದಾರೆ. ಜತೆಗೆ ಚಿತ್ರದ ಫಟಾಫಟ್ ಸಂಭಾಷಣೆ ಕೂಡ ಗೂಳಿಗೆ ಇನ್ನಷ್ಟು ಓಟ ನೀಡಿದೆ. ಒಟ್ಟಾರೆ ಇದೊಂದು ಅಪ್ಪಟ ಮಾಸ್ ಚಿತ್ರವಂತೂ ಹೌದು. ಕ್ಲಾಸ್ ಸಿನಿಮಾ ಎನ್ನಲು ಗೂಳಿಯ ಕೈನಲ್ಲಿರುವ ಇಷ್ಟುದ್ದದ ಲಾಂಗು ಅಡ್ಡಗೋಡೆಯಾಗಿ ನಿಂತಿದೆ!

ಪೂರ್ಣ ವಿರಾಮ / ಕಲಗಾರು

Tuesday, March 18, 2008

ನಾನೂ 'ಕಿರಣ್ ಬೇಡಿ'ಯನ್ನುಭೇಟಿಯಾಗಿದ್ದೆ ಗೊತ್ತಾ... !


ಮಾಲಾಶ್ರೀಜೀ‌ ಜೊತೆ
ಒಂದಿಷ್ಟು ಮಾತುಕತೆ...

ಕನ್ನಡಿಗರ 'ಕನಸಿನ ರಾಣಿ’ ಮಾಲಾಶ್ರಿ ಸದ್ಯಕ್ಕೆ ತೆರೆಮರೆಯಲ್ಲಿ ಬಿಜಿಯಾಗಿದ್ದಾರೆ. ತೆರೆಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ ಕೂಡ. ಈ ಮಧ್ಯೆ ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಗುಲಾಮ ಚಿತ್ರದ ಮುಹೂರ್ತ ಸಮಾರಂಭಕ್ಕಾಗಿ ಕಂಠೀರವ ಸ್ಟುಡಿಯೊಕ್ಕೆ ಬಂದಿದ್ದರು. ಅಲ್ಲೆಲ್ಲೋ ಅಡ್ಡಾಡುತ್ತಿದ್ದ ನನಗೆ ಕೆಲವೇ ನಿಮಿಷ ಮಾತಿಗೆ ಸಿಕ್ಕರು. ಅವರ ಮಾತುಗಳನ್ನು ಪ್ರಶ್ನೋತ್ತರ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಅದು ನಿಮಗೂ ಇಷ್ಟವಾಗುತ್ತೆ ಎಂದುಕೊಳ್ಳುತ್ತಾ...

* ಎಲ್ಲಿ ಮೇಡಮ್ ಸುಮಾರು ತಿಂಗಳಿಂದ ಪತ್ತೇನೇ ಇಲ್ಲ?
ಹಾಗೇನಿಲ್ಲ. ಸದ್ಯಕ್ಕೆ ಓಂ ಪ್ರಕಾಶ್ ನಿರ್ದೇಶನದ ಕಿರಣ್ ಬೇಡಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೆ. ಅರ್ಧಬಾಗ ಶೂಟಿಂಗ್ ಮುಗಿದಿದೆ. ಈಗ ಬಳ್ಳಾರಿಯಲ್ಲಿ ನಡೀತಾ ಇದೆ. ಇನ್ನೇನು ಮುಗಿದುಬಿಡುತ್ತೆ.

* ಸ್ವಲ್ಪ ತೆಳ್ಳಗಾಗಿದ್ದೀರಿ...?
ಹೌದು. ಶೂಟಿಂಗ್‌ಗಾಗಿ ಸಾಕಷ್ಟು ಡಯಟ್ ಮಾಡ್ತಾ ಇದ್ದೀನಿ. ಕಿರಣ್ ಬೇಡಿಗೋಸ್ಕರ ಅಂತಾನೇ ೧೯ ಕೆಜಿ ಇಳಿದಿದ್ದೀನಿ. ಎಣ್ಣೆ ಪದಾರ್ಥವನ್ನೇ ಮುಟ್ಟದೆ ಎಷ್ಟೋ ದಿನ ಆಗೋಯ್ತು. ಡೆಲಿವರಿ ಬೇರೆ ಆಗಿದೆಯಲ್ಲ. ಆದ್ದರಿಂದ ತುಂಬಾ ಕೇರ್ ತೊಗೋತಾ ಇದೀನಿ. ನೀವ್ ನಂಬುತ್ತೀರೋ ಇಲ್ಲವೊ. ಮಸಾಲೆ ದೋಸೆ ತಿನ್ನದೇ ಎಷ್ಟೋ ತಿಂಗಳಾಗಿತ್ತು. ನಿನ್ನೆ ತಿಂದೆ ಗೊತ್ತಾ!

* ಕಿರಣ್ ಬೇಡಿ ಜತೆ ಮಾತನಾಡಿದ್ದೀರಾ? ಅವರ ಆತ್ಮ ಚರಿತ್ರೆ ಓದಿದ್ದೀರಾ?
ಅದನ್ನೇನೂ ಓದಿಲ್ಲ. ತಯಾರಿ ಅಂತೇನಿಲ್ಲ. ಅವರನ್ನು ಭೇಟಿಯಾಗಬೇಕೆಂದಿದ್ದೆ. ಸಾಧ್ಯವಾಗಲಿಲ್ಲ. ಆದರೆ ಅವರನ್ನು ಈ ಮೇಲ್ ಮುಖಾಂತರ ಭೇಟಿಯಾಗಿದ್ದೀನಿ.

* ಅಂದಿನ ಕ್ರೇಜ್‌ಅನ್ನೇ ಉಳಿಸಿಕೊಂಡಿದ್ದೀರಾ?
ಅದಕ್ಕಿಂತಲೂ ಹೆಚ್ಚಾಗಿದೆ ಸ್ವಾಮಿ. ಅದಕ್ಕೊಂದು ಘಟನೆ ಹೇಳ್ತೀನಿ ಕೇಳಿ. ಚಾಮುಂಡಿ ಬಿಡುಗಡೆಯಾದ ಸಮಯದಲ್ಲಿ ಅನ್ನಿಸುತ್ತೆ. ಕೆಲವು ಪಡ್ಡೆಗಳು ಟೈಟ್‌ಆಗಿ ಬಂದು, ಕೈಯಲ್ಲಿ ಇಷ್ಟುದ್ದುದ್ದ ಬಾಟಲ್ ಹಿಡಕೊಂಡು, 'ತೊಗೋಳ್ಳಿ ಮೇಡಮ್. ನೀವು ಗುಂಡಿನ ರಾಣಿ. ಈ ಗುಂಡು ಒಳಗೆ ಸೇರಿದರೆ ಅದರ ಲೆವೆಲ್ಲೇ ಬೇರೆ ಮೇಡಮ್’ ಎಂದುಬಿಟ್ಟರು. (ಒಮ್ಮೆ ಜೋರಾಗಿ ನಕ್ಕರು) ಕೊನೆಗೆ ಬಾಟೆಲ್‌ಗಳ ಸರಮಾಲೆಯನ್ನೇ ನನ್ನ ಕೊರಳಿಗೆ ನೇತು ಹಾಕಿಬಿಟ್ಟರು. ಗುಂಡಿನ ರಾಣಿ ಅಂತ ಅನಂತ್‌ನಾಗ್ ಪ್ರೀತಿಯಿಂದ ಕರೆಯುತ್ತಿದ್ದರು. ಈಗ ಹೇಳಿ ಕ್ರೇಜ್ ಹೇಗಿದೆ ಅಂತ.

* ಬೇರೆ ಬ್ಯಾನರ್‌ನಲ್ಲಿ ಆಫರ್ ಬರಲಿಲ್ಲವಾ?
ಸಾಕಷ್ಟು ಬಂದಿತ್ತು. ದುರ್ಗಿ ನಂತರ ತುಂಬಾ ನಿರ್ಮಾಪಕರು ಕೇಳಿಕೊಂಡು ಬಂದರು. ಆದರೆ ಮಾಲಾಶ್ರೀ ಎಂದರೆ ಹೀಗೇ ಇರಬೇಕು ಎಂಬ ಕನಸು ಪ್ರತಿಯೊಬ್ಬ ಪ್ರೇಕ್ಷಕನಿಗೂ ಇದೆ. ಆ ನನ್ನ ಇಮೇಜಿಗೆ ದಕ್ಕೆಯಾಗಬಾರದು ಎಂದು ಕೆಲಕಾಲ ಸುಮ್ಮನಿದ್ದೆ. ನಂತರ ಬಸುರಿ, ಬಾಣಂತನ ಅಂತ ಮನೆ ಸೇರಿಬಿಟ್ಟೆ. ಈಗ ಕಿರಣ್ ಬೇಡಿಯಲ್ಲಿ ಬಿಜಿಯಾದೆ. ಯಾವುದೇ ಒಳ್ಳೆಯ ಪಾತ್ರಕ್ಕಾದರೂ ಸದಾ ಸಿದ್ಧಳಿದ್ದೇನೆ.

* ನಟನೆಯಲ್ಲಿ ಅಂದಿನ ಎನರ್ಜಿ ಇಂದಿಗೂ ಇದೆಯಾ?
ಓ... ಅದೇ ತಾಕತ್ತು, ಅದೇ ಎನರ್ಜಿ ಇಂದಿಗೂ ಇದೆ. ಆದರೆ ನನಗೆ ಇದು ಶೂಟಿಂಗು, ಇಲ್ಲಿ ಹೀಗೇ ಇರಬೇಕು, ಹೀಗೇ ಮಾಡಬೇಕು ಎಂದು ಯಾವತ್ತೂ ಅನಿಸಿಯೇ ಇಲ್ಲ. ನಿರ್ದೇಶಕರು ಏನು ಹೇಳ್ತಾರೋ ಅದನ್ನು ಯಥಾವತ್ತಾಗಿ ಮಾಡುತ್ತಿದ್ದೆ ಅಷ್ಟೆ. ಆ ವರಸೆಯನ್ನು ಇವತ್ತು ಟಿವಿಯಲ್ಲಿ ನೋಡಿದರೆ ನನಗೇ ಆಶ್ಚರ್ಯ ಆಗುತ್ತೆ. ಇದು ನಾನೇನಾ ಎಂಬ ಸಂಶಯವೂ ಬರುತ್ತೆ. ಆದರೆ ಈಗ ಅಭಿನಯದಲ್ಲಿ ಇನ್ನಷ್ಟು ಗಟ್ಟಿತನ, ಆಳವನ್ನು ಕಂಡುಕೊಂಡಿದ್ದೇನೆ. ಎಲ್ಲಾ ಒಂದೇ ಶಾಟ್‌ನಲ್ಲಿ ಫಿನಿಶ್.


ಪೂರ್ಣ ವಿ-ರಾಮ / ಕಲಗಾರು

Sunday, March 16, 2008




ಐವತ್ತರ ಹೈದನಿಗೊಂದು ಗೀತೆ

ಬರವಣಿಗೆಯೆಂಬ
ಧನ್ವ ಹಿಡಿದು
ಬಂದ ಧರಾಮರ,
ನೇತಿಮಾರ್ಗವನು
ಪ್ರತಿಪಾದಿಸಿ, ತಿಮಿರತೆಗೆ
ಪ್ರತಿಬಂಧಕನಾಗಿ ನೇರ
ನಡೆಯಿಂದ ನುತನಾಗಿ,
ಬೆಳಗಿನ ರವಿಗೆ ಬಾಯ್ಗೂಟವಿಡುತ
ಬಂದ ಬೆಳಗೆರೆ

ರವಿ ಕಾಣದ ಕೊತ್ತಣವ,
ಬಿಳಿಹಾಳೆಯ ಮೇಲೆ
ಧವಳಿಸುವ ಪದಗಳ
ಜೋಡಿಸುತ, ಜಂಕಿಸುತ
ಧೂಸರದ ದಾಡಿಯಲಿ ಧಾವಿಸಿ
ಬಂದ ಬೆಳಗೆರೆ

ಈ ಧುರ್ಯನಿಗೀಗ ಐವತ್ತರ ವಸಂತ
ಅವರ ಧೀವಸಭರಿತ, ಮೊಣಚಾದ
ಬರಹ ಚಿರಕಾಲ ಪ್ರರೋಮಂಥಿಸಲಿ


ಪೂರ್ಣವಿ-ರಾಮ / ಕಲಗಾರು

Saturday, March 15, 2008

ನಿನ್ನೆ ನಾ ನೋಡಿದ ನಂದಾ ನಂದಿತಾ ಸಿನಿಮಾ....


ಅದೇ ಮಾದ, ಅದೇ ನಾದ, ಅದೇ ಸ್ವಾದ !

ನೈಂಟಿ ಎಣ್ಣೆ ಹಾಕಿದರೆ ತಾಕತ್ತು ಬರುತ್ತೆ. ಆಗ ಮಾತ್ರ ಕುಣಿಯೋಕೆ ಸಾಧ್ಯ. ಕೈನಲ್ಲಿ ಬಾಟಲ್ ಇರಬೇಕು. ಅದು ಇದ್ರೆ ಮಾತ್ರ ಮೀಟ್ರು ಮಗಾ ಎಂಬ ಅಲಿಖಿತ ಸಿದ್ದಾಂತ ಅವನದು. ಹೆಣದ ಮುಂದೆ ಹೆತ್ತವರು ಅಳುತ್ತಿದ್ದರೆ ಈತ ಮೈ ಮರೆತು ಸೊಂಟ ಕುಣಿಸುತ್ತಾನೆ. ಅದು ಅವನ ಹೊಟ್ಟೆಪಾಡು. ಊರಿಗೆ ಊರೇ ಮಲಗಿದ್ದಾಗ ಬಾರಲ್ಲಿ ಇವನ ಕಾರುಬಾರು. ಜತೆಗೊಬ್ಬ ಕ್ವಾಟ್ರು ಹಾಗೂ ಅವನ ಗ್ಯಾಂಗು.

ಆತನೇ ನಂದ. ಏನೂ ಅರಿಯದ ಅಬ್ಬೇಪಾರಿ. ಒಂಥರಾ ಲೂಸ್ ಮಾಡಿ ಹಾಗೆ ಮಾಡುತ್ತಾನೆ. ಆರು ಕೊಟ್ಟರೆ ಫುಲ್ ಮರ್ಡರ್. ಮೂರು ಕೊಟ್ಟರೆ ಹಾಫ್ ಮರ್ಡರ್. ಅವ ಬೀದಿಗೆ ಬಿದ್ದವ. ಹೆತ್ತಮ್ಮ, ಅಪ್ಪನ ಕಾಟ ತಾಳಲಾರದೇ ಸ್ವರ್ಗ ಸೇರಿರುತ್ತಾಳೆ. ಅಪ್ಪ ಸಂಸಾರ ‘ದೂಡಲು’ ಮತ್ತೊಬ್ಬ ಬಿನ್ನಾಣಗಿತ್ತಿಯನ್ನು ಮದುವೆಯಾಗಿರುತ್ತಾನೆ. ಆಕೆಗೆ ಮಾಮೂಲಿ ಸವತಿ ಮತ್ಸರ. ನಂದನ ಮೇಲೆ ಎಲ್ಲಿಲ್ಲದ ತಾತ್ಸಾರ. ಆ ಕಂದನಿಗೆ ಶಾಲೆ ಕಲಿಯುವ ಆಸೆ. ಆದರೆ ಅಪ್ಪನಿಗೆ ಮಗನ ಕಂಡರೆ ನಿರಾಸೆ. ಚಿಕ್ಕಮ್ಮನಿಗೆ ತನ್ನ ಮಕ್ಕಳು ಮಾತ್ರ ಕಲಿಯಬೇಕೆಂಬ ದುರಾಸೆ. ಆತ ಐದನೇ ಕ್ಲಾಸು ಮುಗಿಸಿ ಶಾಲೆಗೆ ಸಲಾಂ ಹೊಡೆಯುತ್ತಾನೆ. ಪಡ್ಡೆ ಹುಡುಗರ ಜತೆ ಸೇರಿ ಊರೂರು ಅಲೆಯತ್ತಾನೆ. ಕುಡಿದು, ಕುಪ್ಪಳಿಸುತ್ತಾನೆ. ಅದೇ ಮುಖದಲ್ಲಿ ಮನೆ ಸೇರುತ್ತಾನೆ. ಅಪ್ಪ , ಚಿಕ್ಕಮ್ಮನಿಂದ ಹೊರದಬ್ಬಲ್ಪಡುತ್ತಾನೆ. ಹೊಟ್ಟೆಪಾಡಿಗಾಗಿ ಫೈನಾನ್ಸ್ ಹಣ ವಸೂಲಿ ಮಾಡುವ ಕೆಲಸಕ್ಕೆ ಸೇರುತ್ತಾನೆ.

ಆಗೊಬ್ಬ ಹುಡುಗಿ ಬರುತ್ತಾಳೆ. ಅವಳೇ ನಂದಿತಾ. ಈಗಷ್ಟೇ ಹದಿನಾರು ದಾಟಿರುತ್ತಾಳೆ. ಕಾಯಿಲೆ ಬಿದ್ದ ಅಮ್ಮನ ಜತೆಗಿರುತ್ತಾಳೆ. ನಂದನನ್ನು ಅಡ್ಡಾದಲ್ಲಿ ನೋಡುತ್ತಾಳೆ. ಸಹಾಯಹಸ್ತ ಬೇಡುತ್ತಾಳೆ. ಅಲ್ಲಿ ಇಲ್ಲಿ ತಿರುಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇತ್ತ ನಂದ ದುಡ್ಡಿಗಾಗಿ ನಂಬರ್ ಟು ಧಂದೆಗೆ ಇಳಿಯುತ್ತಾನೆ. ರೌಡಿ ದೇವರಾಜ್‌ನಿಂದ ಕ್ಯಾಟ್ ಚಂದ್ರನ ಕೊಲೆಗೆ ಸುಪಾರಿ ಪಡೆಯುತ್ತಾನೆ. ಕೊಲೆಗೆ ಸಂಚು ಹೂಡುತ್ತಾನೆ. ತನ್ನ ಅಡ್ಡಾಕ್ಕೆ ಕರೆತಂದು ಆತನನ್ನು ಅಡ್ಡಡ್ಡಾ ಸಿಗಿಯುತ್ತಾನೆ. ಅದನ್ನು ನಂದಿತಾ ನೋಡಿಬಿಡುತ್ತಾಳೆ. ಅವನ ಭಂಡತನವನ್ನು ಕಣ್ಣಾರೇ ಕಂಡು ಮನೆ ಖಾಲಿ ಮಾಡುತ್ತಾಳೆ.
ಇತ್ತ ಕ್ಯಾಟ್‌ಚಂದ್ರ ಮಾತ್ರ ಪವಾಡ ಸದೃಶವಾಗಿ ಪಾರಾಗಿಬಿಡುತ್ತಾನೆ. ನಂದನಿಗಾಗಿ ಹುಡುಕಾಡತೊಡಗುತ್ತಾನೆ. ಇತ್ತ ನಂದ ನಂದಿತಾಳನ್ನು ಹುಡುಕುತ್ತಾನೆ. ಅತ್ತ ನಮಕ್ ಹರಾಮ್ ಕೆಲಸ ಮಾಡಿದ ಎಂದು ರೌಡಿ ದೇವರಾಜ್ ನಂದನನ್ನು ಹುಡುಕಹತ್ತುತ್ತಾನೆ... ಮುಂದೆ... ಪಾತಕ ಲೋಕದಲ್ಲೊಂದು ಮೊಹಬ್ಬತ್ !

ಇದು ಈ ವಾರಬಂದ ನಂದ ನಂದಿತಾ ಚಿತ್ರದ ಒನ್‌ಲೈನ್ ಸ್ಟೋರಿ. ದುನಿಯಾದ ಲೂಸ್ ಮಾದನಾಗಿ ಗೆದ್ದಿದ್ದ ಯೋಗೀಶ್ ಇಲ್ಲಿ ನಂದನಾಗಿ ಬದಲಾಗಿದ್ದಾನೆ. ಆದರೆ ದುನಿಯಾದ ಹ್ಯಾಂಗೋವರ್ ಇರುವ ಕತೆಗೆ ಮತ್ತೆ ಜೋತು ಬಿದ್ದಿದಾನೆ. ಅದೇ ಅಡ್ಡಾ. ಅದೇ ರೌಡಿಪಾಳ್ಯ. ಅದೇ ಮಚ್ಚು, ಅದೇ ಲಾಂಗು. ಅದೇ ಬಾರು, ರಾತ್ರಿ ಹೊತ್ತಲ್ಲಿ ನಡೆಯುವ ಕಾರುಬಾರು... .ಅದೇ ಲೂಸ್ ಮಾದನ ಡೈಲಾಗ್‌ಗಳು. ಆದರೂ ಅವನ ಮಾತು ಕಣ್ಣು ಮುಚ್ಚಿಕೊಂಡು ಕೇಳಲು ಬಲು ಇಷ್ಟವಾಗುತ್ತೆ. ಏಕೆಂದರೆ ಚಿತ್ರದ ಸಂಭಾಷಣೆ ಹಾಗಿದೆ. ಏನೂ ಇಲ್ಲದಿದ್ದರೂ ಬರೀ ಡೈಲಾಗ್‌ಗಳಿಂದ ಹೇಗೆ ಇಡಿ ಚಿತ್ರಕತೆಯನ್ನು ತಳ್ಳಿಸಿಕೊಂಡು ಹೋಗಬಹುದು ಎಂಬುದನ್ನು ಮಗದೊಮ್ಮೆ ನಿರೂಪಿಸಿದ್ದಾರೆ ಮಂಜು ಮಾಂಡವ್ಯ . ಹಾಗಂತ ಯೋಗಿ ಎಲ್ಲಾ ಕಡೆ ಖಂಡಿತಾ ಸೋತಿಲ್ಲ. ಕುಣಿಯಲು ಕಾಲೆತ್ತಿದಾಗ, ಎದೆ ಮುಂದುಮಾಡಿಕೊಂಡು ಮೈಕೊಡವಿನಿಂತಾಗ, ಅಬ್ಬಬ್ಬಾ ಅದು ಯೋಗಿಯಿಂದ ಮಾತ್ರ ಸಾಧ್ಯ. ಆದರೆ ನಟನೆಯಲ್ಲಿ ಇನ್ನೂ ಟೈಟ್ ಆಗಬೇಕಿದೆ. ಎಲ್ಲಾ ಕಡೆ ಫುಲ್ ಟೈಟ್ ಆದವರಂತೇ ಆಡಿದರೆ ಜನ ಎಷ್ಟು ಹೊತ್ತು ಅಂತ ನೋಡುತ್ತಾರೆ ? ಅಮ್ಮಮ್ಮಾ ಅಂದರೆ ಮೊದಲಾರ್ಧದವರೆಗೆ... ಕೊನೆಕೊನೆಗೆ ಅದು ಅತಿರೇಕವೆನಿಸುತ್ತದೆ. ಹಾಗಂತ ಯೋಗಿಯೇ ನೇರ ಹೊಣೆ ಎಂದರೆ ಅದು ತಪ್ಪಾಗುತ್ತದೆ. ಅವ ಹೇಳಿದಂತೇ ಮಾಡುವವ. ಅವರಿಂದ ಕೆಲಸ ತೆಗೆಸಲು ನಿರ್ದೇಶಕ ವಿಜಯಕುಮಾರ್ ಇನ್ನಷ್ಟು ಹೆಣಗಾಡಿದ್ದರೆ ಅದರ ಕತೆಯೇ ಬೇರೆಯಾಗಿರುತ್ತಿತ್ತು.

ಕತೆಯದ್ದೂ ಅದೇ ಕತೆ. ಮೊದಲಾರ್ಧ ರಾಯರ ಕುದುರೆ. ಆದರೆ ಹೋಗ್ತಾ ಹೋಗ್ತಾ ಅದು ... ಆಗಿದೆ. ಇನ್ನು ನಾಯಕಿ ಶ್ವೇತಾ. ವಾಹ್...ಎನ್ನುವಷ್ಟೇನೂ ಇಲ್ಲ. ಆದರೆ ಅಯ್ಯಯ್ಯೋ ಎನ್ನುವಷ್ಟೂ ಇಲ್ಲ. ಕೊಟ್ಟ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಫ್ಯಾಮಿಲಿ ಲುಕ್‌ನ ಈ ಹುಡುಗಿ ಒಂದು ಆಂಗಲ್‌ನಲ್ಲಿ ಸಿಂಧು ಮೆನನ್‌ಳನ್ನು ನೆನಪಿಸುತ್ತಾಳೆ. ಎಮಿಲಿ ಸಂಗೀತ ಜೋರಾಗಿದೆ. ಬರಿ ಸ್ಟೆಪ್ ಹಾಕೋ ಸಂಗೀತವಷ್ಟೇ ಇದ್ದರೆ ಅದು ಎಲ್ಲರಿಗೂ ಇಷ್ಟವಾಗೊಲ್ಲ. ಜತೆಗೊಂದು ಮೆಲೋಡಿ ಕೂಡ ಇದ್ದರೆ ಅದಕ್ಕೆ ಸಿಗುವ ಕಿಮ್ಮತ್ತೇ ಬೇರೆ. ಆದರೂ ಜಿಂಕೆ ಮರೀನಾ... ಹಾಡು ಕೇಳಲಾರೆ ಎನ್ನುವಂತಿಲ್ಲ. ಮ್ಯಾಥ್ಯೂ ರಾಜನ್ ಕ್ಯಾಮೆರಾ, ಡಿಫರೆಂಟ್ ಡ್ಯಾನಿ ಸಾಹಸ ಎಲ್ಲವೂ ಸೇರಿ ಯೋಗೀಶನ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿವೆ. ಅಂದಹಾಗೆ ಇದೊಂದು ಕೌಟುಂಬಿಕ ಚಿತ್ರವೂ ಹೌದು. ಯೋಗೀಶನ ನಿಜ ಜೀವನದ ಕುಟುಂಬ, ಸ್ನೇಹಿತ ಬಳಗ, ಕೆಲವು ಕಡೆ ಸುಖಾ ಸುಮ್ಮನೆ ಬಂದುಹೋಗ್ತಾರೆ..!

- ಪೂರ್ಣ ವಿ-ರಾಮ / ಕಲಗಾರು

Thursday, March 13, 2008

ಸಾಗರ ಮಾರಿಜಾತ್ರೆಯಲ್ಲಿ ಕಣ್ಣಿಗೆ ಬಿದ್ದ ಮಾರಮ್ಮ...!

















ಉದರ ನಿಮಿತ್ತಂ..............

ಖಡ್ಗ, ತ್ರಿಶೂಲ ಮೊದಲಾದ ಆಯುಧ ಹಿಡಿದ ಎಂಟು ಕೈಗಳು, ಬೆಂಕಿಯುಗುಳುವ ಕೆಂಪು ಕಣ್ಣು, ಚಾಚಿದ ಉರಿ ನಾಲಿಗೆ, ಕೊರಳಲ್ಲಿ ರುಂಡಗಳ ಸರಮಾಲೆ ಇರುವ ಅಕರಾಳ-ವಿಕರಾಳವಾದ ಮಾರಮ್ಮನೇ ಎದುರು ಬಂದು ಕಷ್ಟ ಸುಖ ವಿಚಾರಿಸಿ ಹರಸಿದರೆ ! ಸಾಗರ ಮಾರಿಜಾತ್ರೆಯಲ್ಲಿ ಹಾಗೊಂದು ದೃಶ್ಯ ಕಂಡು ಬಂತು.
ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದು ಪ್ರಾಚೀನ ನುಡಿ. ಹೊಟ್ಟೆಪಾಡಿಗೆ ಯಾವ ದಂದೆಯಾದರೂ ನಡೆಯುತ್ತದೆ .ಇದಕ್ಕೆ ಮಾರಿ ವೇಷದಾರಿಯೇ ಸಾಕ್ಷಿ.
ತೀರ್ಥಹಳ್ಳಿ ತಾಲುಕಿನ ನೊಣಬೆಟ್ಟು ಸಮೀಪದ ಅಂಬುತೀರ್ಥದ ಮಲ್ಲಪ್ಪ ಭಾಗವತನಿಗೆ ಮಾರಿ ವೇಷವೇ ಜೀವನ ನಿರ್ವಹಣೆಯ ದಾರಿ. ಕಳೆದ ಇಪ್ಪತ್ತೈದು ವರ್ಷದಿಂದ ಎಲ್ಲೇ ಜಾತ್ರೆಯಾಗಲಿ ಅಲ್ಲಿ ಮಲ್ಲಪ್ಪನ ಮಾರಿ ವೇಷ ಪ್ರತ್ಯಕ್ಷವಾಗುತ್ತದೆ.ಜಾತ್ರೆಯ ಜನ ಜಂಗುಳಿಯಲ್ಲಿ ಅವನ ವೇಷಕ್ಕೆ ಕೈ ಮುಗಿದು, ಅಡ್ಡಬಿದ್ದು, ಕೊಟ್ಟ ಅರಸಿನ ಕುಂಕುಮವನ್ನು ಪ್ರಸಾದವೆಂದು ಸ್ವೀಕರಿಸಿ, ಕಾಣಿಕೆ ನೀಡುವ ಭಾವುಕರೂ ಇರುತ್ತಾರೆ,ಅದನ್ನೇ ಬಂಡವಾಳವಾಗಿಸಿಕೊಂಡು ಮಲ್ಲಪ್ಪನೂ ಬದುಕುತ್ತಿದ್ದಾನೆ. ಅವನನ್ನು ನಂಬಿಕೊಂಡ ಹೆಂಡಿರು ಮಕ್ಕಳೂ ಬದುಕುತ್ತಿದ್ದಾರೆ.



ಪೂರ್ಣ ವಿ-ರಾಮ/ ಕಲಗಾರು

Wednesday, March 12, 2008

ಪ್ರಶ್ನೆಯಾಯಿತು ಮಾಯಾಮೃಗ....!

ಪ್ರಶ್ನೆಯೆಂಬ ಮರೀಚಿಕೆ

ಉತ್ತರ ದೊರೆತಿಲ್ಲ,
ಹುಡುಕಾಟವೂ ನಿಂತಿಲ್ಲ;
ಪ್ರಶ್ನೆಯೂ ಮರೆತಿಲ್ಲ

ತಾಕಲಾಟದ ತಾಂಡವ
ತಾಂಬೇಲುವನ್ನೇ ಮೀರಿಸುವ ಜಡ
ಪರದಾಟದ ಪರಿಧಿಯಲಿ
ಪರಿವೇಶ, ಪರಿ ಪರಿ ವೇಷ
ಉತ್ತರ ದೊರೆತಿಲ್ಲ

ಪರಿಪಕ್ವವಲ್ಲ, ಪರಿತೋಷ ಲಭಿಸಿಲ್ಲ
ಆಗೊಬ್ಬ ಬಂದ ಆಪದ್ಬಾಂಧವ
ಹೆಸರು ಕಾನನ್ ಡಯಲ್
ಅವನೊಬ್ಬ ಸೂತ್ರಧಾರ
ಆದರೂ ಉತ್ತರ ದೊರೆತಿಲ್ಲ

ಜೊತೆಗಿದ್ದರು ಪಾತ್ರಧಾರಿಗಳು
ಶರ್ಲಾಕ್ ಹೋಮ್ಸ್, ಪೆರಿ ಮೆಷನ್
ಪರಿಚಾರಕರಂತೇ ಹಿಂಬಾಲಿಸಿದೆ
ಅವರಿಂದಲೂ ಅದೇ ಉತ್ತರ, ನಿರುತ್ತರ
ಇನ್ನೂ ಉತ್ತರ ದೊರೆತಿಲ್ಲ;
ಪ್ರಶ್ನೆಯೂ ಮರೆತಿಲ್ಲ...




ಪೂರ್ಣ ವಿ-ರಾಮ / ಕಲಗಾರು





Sunday, March 9, 2008

ನಾನೂ ಒಂದು ಕತೆ ಬರೆದಿದ್ದೇನೆ ಸಾರ್...



ಆ ಚಂದಿರನ ಮೊಗದಲ್ಲಿ ಅವಳ ನಿರಾಳ ನಗು ಕಂಡೆ
‘ಇಷ್ಟು ಬೇಗ ಎದ್ದು ಮಾಡುವುದಾದರೂ ಏನು?’
ಹೀಗೊಂದು ಆಕಳಿಕೆಭರಿತ ಕನವರಿಕೆಯೊಂದಿಗೆ ಮಗ್ಗಲು ತಿರುಗಿಸಿದೆ.
‘ಹೋಗೋದು ಕಾಲೇಜಿಗೆ ತಾನೇ. ಅದೂ ೧೦ ಗಂಟೆಗೆ. ಇವತ್ತು ಶನಿವಾರ ಬೇರೆ. ಆ ದೈನೇಸಿ ದೀಪು ಬೇರೆ ಬರೊಲ್ಲ. ಸ್ನಾನವೊಂದಾದರೆ ಅಮ್ಮನ ತಿಂಡಿಗೇನು ಮೋಸವಿಲ್ಲ. ಇನ್ನೇನು ಅವಸರ ?’ ಎನ್ನುತ್ತಾ ಮತ್ತೆ ಮಗುಚಿ ಮಲಗಿದೆ.
ಸರಿಯಾಗಿ ಎಂಟು ಗಂಟೆ. ಪಕ್ಕದ ಬೀದಿಯ ಶಾಲೆಯ ಗಂಟೆ ಕರ್ಕಶ ಧ್ವನಿಯಲ್ಲಿ ಡಣ್‌ಡಣ್.. ಎನ್ನತೊಡಗಿತು. ‘ಈ ಹಾಳಾದ ಗಂಟೆ, ನಿದ್ದೆ ಮಾಡೋಕೂ ಬಿಡೊಲ್ಲ’ ಎಂದು ಹಿಡಿಹಿಡಿ ಶಾಪ ಹಾಕಿದೆ. ಮತ್ತೆ ಕಣ್ಮುಚ್ಚಲು ಪ್ರಯತ್ನಿದೆ. ಊಹುಂ.. ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಎದ್ದೆ. ಪುಟ್ಟಿ ಸ್ಕೂಲ್ ಟೀಚರ್‌ಗೆ ಮನಸೋಇಚ್ಛೆ ಬೈದು, ಕೈಕೈ ಮಿಲಾಯಿಸಿ ನೆಟಿಕೆ ಮುರಿದೆ.
ಅಮ್ಮನಿಗೆ ಎಂದಿನಂತೆ ಕಾಲೇಜಿಗೆ ಹೋಗ್ತಿದ್ಧೀನಿ ಎನ್ನುವ ಮನಸಾಗಲಿಲ್ಲ. ಎಂದಿನ ಖುಷಿ ಅಂದಿರಲಿಲ್ಲ. ಕಾಲೇಜಿಗೆ ಹೊರಟೆ. ದಾರಿಯುದ್ದಕ್ಕೂ ದೀಪು ಅಡ್ಡಗಟ್ಟುತ್ತಿದ್ದ; ಇನ್ನೂ ಹತ್ತತ್ತಿರ ಬರುತ್ತಿದ್ದ. ನಾನು ನಾಚಿ ನೀರಾಗುವ ಹೊತ್ತಿಗೆ ಮತ್ತೆ ಮಂಗಮಾಯ.ಅಲ್ಲೇನೋ ಹೇಳತೀರದ ಹಿತವಿತ್ತು. ಆಡಿತೀರದ ಅತೀತ ಆನಂದವಿತ್ತು. ಮೂರು ಮಾರು ದೂರವಿರುವ ಕಾಲೇಜು ಮೂವತ್ತು ಮೈಲಿಯಷ್ಟು ದೂರ ದೂರ! ನನಗೇನು ಅದು ಹೊಸ ಅನುಭವವಲ್ಲ. ಆರು ತಿಂಗಳಿನಿಂದ ತವಕ. ಮತ್ತದೇ ತಲ್ಲಣ.
ಅಂತೂ ಕಾಲೇಜು ಬಂತು. ಆಗಲೇ ಹತ್ತೂ ನಲವತ್ತಾಗಿಬಿಟ್ಟಿತ್ತು. ಕಾರಿಡಾರ್‌ನಲ್ಲಿ ಅಟೆಂಡರ್ ಸೀನಪ್ಪ ಬುಸುಬುಸು ಬರಹತ್ತಿದ್ದ. ಯಾರನ್ನೋ ಹರಿದು ತಿನ್ನುವವನಂತಿತ್ತು ಅವನ ಹಾವಭಾವ. ಅವನನ್ನು ತಡೆದುನಿಲ್ಲಿಸಿ:
-‘ಶೀನಣ್ಣ, ತಿರುಮಲ ಮಾವಿನಕುಳಿ ಸಾರ್ ಬಂದಿದ್ದಾರಾ?’ ಎಂದೆ. ಘಮಗುಡುವ ಬೀಡಿ ವಾಸನೆ ಬರುತ್ತಿದ್ದ ಆ ಬೊಚ್ಚುಬಾಯಲ್ಲೇ ‘ನಿಮ್ ತಿಳಿ ಸಾರ್ರು ಬಂದದ್ದೂ ಆಯ್ತು, ಪಾಠ ಶುರುಮಾಡಿದ್ದೂ ಆಯ್ತು. ನಡಿ ಇದೆ ನಿನಗೆ ಬಿಸಿಬಿಸಿ ಕಜ್ಜಾಯ’ ಎಂದು ಹಲ್ಲುಗಿಂಜುತ್ತ ಅದೇ ಭಂಗಿಯಲ್ಲಿ ಹೊರಟ.
ತಿಳಿ ಸಾರ್ರು ಎನ್ನುತ್ತಿದ್ದಂತೇ ಎದೆನಡುಕ ಶುರುವಾಯ್ತು. ‘ದೇವ್ರೆ ದೇವ್ರೆ ಕಾಪಾಡಪ್ಪ’ ಎನ್ನುತ್ತ ಕ್ಲಾಸ್ ಕಡೆ ಬಂದೆ.
‘ವೈದೇಹಿ ಕಥೆಗಳಲ್ಲಿ ಹೆಚ್ಚಾಗಿ....’ ಎಂದು ಪಾಠದ ಅಮಲಿನಲ್ಲಿ ತೇಲುತ್ತಿದ್ದರು ತಿಳಿ ಸಾರ್ರು. ಮೈಯೆಲ್ಲಾ ಭಯಂಕರ ನಡುಕ. ಒಳಗೆ ಕಾಲಿಡುವ ಮುನ್ನ, ‘ಮೇ ಐ ಕಂ ಇನ್ ಸಾರ್’ ಎಂದೆ. ಅವರ ಕೆಂಡಭರಿತ ಕಣ್ಣು ನನ್ನತ್ತ ತಿರುಗಿತು.
‘ಇತ್ತೀಚೆಗೆ ನಿನ್ನ ವರ್ತನೆ ಅತಿಯಾಯ್ತು. ಕಾಲೇಜು ಮುಗಿಯುವ ದಿನ ಬಂತು. ಇನ್ನೂ ಬುದ್ಧಿ ಬಂದಿಲ್ಲ. ನೆಟ್ಟಗೆ ಕ್ಲಾಸಿಗೆ ಬರೊಲ್ಲ, ಓದಲ್ಲ, ಬರೆಯೊಲ್ಲ...’ ; ವೈದೇಹಿಯನ್ನೇ ಮರೆತುಬಿಟ್ಟರು. ‘ಸಾರಿ ಸಾರ್’ ಎಂದೆ. ಸರಿ ಬಾ ಒಳಗೆ ಎಂದು ‘ವೈದೇಹಿ...’ಯತ್ತ ಹೊರಳಿಕೊಂಡರು.
ಯಥಾಪ್ರಕಾರ ಕೊನೇ ಬೆಂಚಿನ ಬಲಬದಿಯಲ್ಲಿ ಕುಳಿತೆ. ಅಲ್ಲಿ ನನ್ನ ಮಾಮೂಲಿ ಮೊಕ್ಕಾಂ. ಪಕ್ಕದಲ್ಲಿ ಹುಡುಗರ ಸಾಲು. ಮೊದಲ ಬೆಂಚಿನ ಎಡತುದಿಯಲ್ಲಿ ದೀಪು ಎದೆ ಮುಂದು ಮಾಡಿಕೊಂಡು ಕುಕ್ಕರುಗಾಲಿನಲ್ಲಿ ಕೂರುತ್ತಿದ್ದ. ಅವನ ಹಿಂದಿನ ಬೆಂಚ್ ಪಕ್ಕದಲ್ಲಿ ಒಂದು ಟೇಬಲ್ಲು. ಅದರ ಮೇಲೆ ತಿಳಿ ಸಾರ್ರು ಹತ್ತಿ ಕೂರುತ್ತಿದ್ದರು. ಅಷ್ಟಾದರೆ ಮುಗೀತು. ಬೆಲ್ಲುಭಾರಿಸುವವರೆಗೂ ಬಿಲ್‌ಕುಲ್ ಅಲ್ಲಾಡುತ್ತಿರಲಿಲ್ಲ. ಪಾಠ ಕೇಳುವಾಗ ದೀಪುಗೆ ಹಿಂದಿರುಗಿ ಮೇಷ್ಟ್ರ ಮುಖ ನೋಡೋದು ಅನಿವಾರ್ಯ. ಅವ ಹಾಗೆ ತಿರುಗಿದಾಗ ನಾನೊಮ್ಮೆ ನಗುತ್ತಿದ್ದೆ; ಅವ ಮಾತ್ರ ಕಲ್ಲುಬಂಡೆಯಂತೇ ಕೂರುತ್ತಿದ್ದ. ಅಪರೂಪಕ್ಕೊಮ್ಮೆ ನಕ್ಕಂತೇ ನಟಿಸುತ್ತಿದ್ದ. ಆದರೆ ಹಾಗೆ ನಗಲು ಆ ಜಾಗ ಖಾಲಿ ಖಾಲಿ. ಅವತ್ತಿನ ಪಾಠ ಮಾತ್ರ ಯಾಕೋ ಬೋರೋ ಬೋರು.
........................................................

ಅಂದು ಭಾನುವಾರವಾದ್ದರಿಂದ ಹತ್ತೂವರೆಯಾದರೂ ಏಳುವ ಮನಸ್ಸಿರಲಿಲ್ಲ. ಹೊರಜಗುಲಿಯಲ್ಲಿ ಹಾಳಾದ ಫೋನು ಬೊಬ್ಬೆ ಹೊಡೆಯತೊಡಗಿತು. ಇನ್ನೇನು ನೈಟಿಯಲ್ಲೇ ಎದ್ದು ಬರಬೇಕು, ಅಷ್ಟರಲ್ಲಿ ಕಸಗುಡಿಸುತ್ತಿದ್ದ ಸುಬ್ಬಿ- ‘ದೀಪಮ್ಮಾವ್ರೆ, ನಿಮ್ ಚಿಕ್ಕಮ್ಮಾವ್ರುದ್ದು ಪೋನು. ಅತ್ತೀಕೆರೆಯಿಂದಂತೆ. ಒಂದ್ ವಾರಾ ಅಂಗನ್‌ವಾಡಿಗೆ ರಜಾ ಐತೆ. ನಾಳೀಕ್ ವತ್ತಾರೇನೇ ಇಲ್ಲಿಗ್ ಬರ್‍ತಿದ್ದೀವ್ನಿ ಅಂತ ಯೋಳು ಅಂದ್ರು. ಜ್ವತ್ಗೆ ಮಗೀನೂ ಕರ್‍ಕಂಬತ್ತವ್ರಂತೆ. ನಿಮ್ಮನ್ ಕೂಗ್ಲಾ ಅಂತ್ ಕ್ಯೋಳ್ದೆ. ಬ್ಯಾಡ ಬುಡು ಮಗಿ ಮಲೀಕಳ್ಳಿ ಅಂದ್ರು’ ಎಂದು ಅಲ್ಲಿಂದಲೇ ಅರಚಿದಳು.
ನನಗೆ ಎಲ್ಲಿಲ್ಲದ ಆಶ್ಚರ್ಯ. ಚಿಕ್ಕಮ್ಮ ಬರೋದಾ! ನನಗೇನು ಅರೆನಿದ್ರೆಯ ಐಲ್ ಪೈಲಾ ಎಂದು ಮತ್ತೊಮ್ಮೆ ಗಲ್ಲ ಚಿವುಟಿಕೊಂಡೆ. ಊಹುಂ.. ನಿಜಾ ಹೌದು. ಎರಡು ವರ್ಷಗಳಿಂದ ‘ಒಂದು ಸಾರಿಯಾದ್ರೂ ಮನೇಗೆ ಬಾ ಚಿಕ್ಕಮ್ಮ’ ಅಂತ ಗೋಗರೆದು ಸುಸ್ತಾಗಿದ್ದೆ. ಅವಳಿಗೆ ಅಂಗನವಾಡಿ ಬಿಟ್ಟರೆ, ಆರು ವರ್ಷದ ಅಂಕುಶ. ಯಾವಾಗ ಕೇಳಿದರೂ ಸಬೂಬುಗಳ ಸುರಿಮಳೆ ಸುರಿಸುತ್ತಿದ್ದಳು. ಉಳಿಚಿಕೊಂಡುಬಿಡುತ್ತಿದ್ದಳು. ಆದರೆ ಇವತ್ತು ದಿಢೀರನೆ ಬರೋದಕ್ಕೆ ಕಾರಣ! ಮತ್ತೆ ಮಲಗುವ ಮಾತು ಮರೆತೇ ಹೋಯ್ತು. ಚಿಕ್ಕಮ್ಮನ ಛಿದ್ರಗೊಂಡ ಬದುಕಿನ ಚಿತ್ರಣ ಕಣ್ಮುಂದೆ ಬಂತು...
ಅವಳಂಥ ನಿಷ್ಪಾಪಿಗೆ ಆ ದೇವರು ಅಂಥದ್ದೊಂದು ಘೋರ ಶಿಕ್ಷೆ ಕೊಡಬಾರದಿತ್ತು. ಬದುಕಿ ಬಾಳಬೇಕಿದ್ದ ಅವಳ ಹಸಿಹಸಿ ಜೀವನಕ್ಕೆ ಪೂರ್ಣವಿರಾಮ ಬಿದ್ದಿತ್ತು. ಹದಿನಾರರ ಎಳೆಪ್ರಾಯದಲ್ಲಿ ಅವಳ ಕುತ್ತಿಗೆಗೆ ಮೂರು ಗಂಟು ಬಿಗಿಸಲಾಗಿತ್ತು. ಆಗ ಅವಳಿಗೆ ಸಂಸಾರ ಎಂದರೆ ಏನೆಂದೇ ಗೊತ್ತಿರಲಿಲ್ಲ. ಮನೆಯವರ ಒತ್ತಾಯಕ್ಕೆ ಓದುವ ಮನಸ್ಸಿದ್ದರೂ ಹಸೆಮಣೆ ಏರಿದ್ದಳು. ಆದರೆ ಆ ಹಾಳಾದ ವಿಯ ಹುನ್ನಾರವೇ ಬೇರೆಯಿತ್ತು. ಅವಳ ಜೀವನದಲ್ಲಿ ಲಗೋರಿ ಆಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಎಂದೆನಿಸುತ್ತದೆ. ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಚಿಕ್ಕಪ್ಪ ಬಸ್ ಆಕ್ಸಿಡೆಂಟ್‌ನಲ್ಲಿ ತೀರಿಹೋದರು. ಆಗ ಚಿಕ್ಕಮ್ಮ ಮೂರು ತಿಂಗಳ ಚೊಚ್ಚಲ ಗರ್ಭಿಣಿ ಬೇರೆ... ಆ ದಿನಗಳು ಮತ್ತೆ ಮರುಕಳಿಸತೊಡಗಿತು. ‘ಈ ಜೀವನ ಅಂದರೆ ಇಷ್ಟೇನಾ’ ಎಂಬ ಶೂನ್ಯಭಾವ ಕಣ್ಮುಂದೆ ಆವರಿಸಿತು. ‘ಆ ದೇವರು ಚಿಕ್ಕಮ್ಮನಿಗೆ ಕೊಡುವ ಕಷ್ಟವನ್ನು ನನಗಾದರೂ ಕೊಡಬಾರದಿತ್ತೇ?’ ಎಂದುಕೊಂಡೆ. ಅಷ್ಟು ಹೊತ್ತಿಗೆ ಅಡುಗೆ ಮನೆಯಿಂದ ಅಮ್ಮ ತಿಂಡಿಗೆ ಕರೆದಳು
.......................................................

ಯಾಕೋ ಗೊತ್ತಿಲ್ಲ. ಅಂದು ಹುಚ್ಚು ಮನಸ್ಸು ಸಾಕಷ್ಟು ಲವಲವಿಕೆಯಿಂದಿತ್ತು. ಆ ನಗುವಿಗೆ ಚಿಕ್ಕಮ್ಮನಲ್ಲಿ ಅರಳಿದ ನಿರಾಳ ನಗು ಕಾರಣವಾಗಿರಲೂಬಹುದು.
ರಾತ್ರಿ ಮಲಗುವ ಮುನ್ನ ಯೋಚಿಸಿದ್ದು ಥಟ್ ಅಂತ ನೆನಪಾಯಿತು. ಕೂಡಲೇ ಬಡಬಡಿಸಿ ಎದ್ದು, ದೀಪುಗೆ ಫೋನಾಯಿಸಿದೆ. ಆದರೆ ಅವ ಇನ್ನೂ ಗೊರಕೆಯ ಪರಮಾವಯಲ್ಲಿದ್ದ. ಶಂಕರಘಟ್ಟದ ಸಹ್ಯಾದ್ರಿ ಉತ್ಸವ ಅವನನ್ನು ಆ ಪರಮಾವಗೆ ಕರೆದೊಯ್ದಿತ್ತು. ಕುವೆಂಪು ಘಟಿಕೋತ್ಸವದಲ್ಲಿ ಇಡೀ ಕಾಲೇಜನ್ನು ಪ್ರತಿನಿಸಿ ಬಂದಿದ್ದ. ಸಾಂಸ್ಕೃತಿಕ ವಿಭಾಗದಲ್ಲಿ ಕಾಲೇಜಿಗೇ ಚಾಂಪಿಯನ್ ಎನಿಸಿಕೊಂಡಿದ್ದ. ಒಂದು ವಾರದ ಅಗಲಿಕೆ ಅವನನ್ನು ಇನ್ನಷ್ಟು ಹತ್ತಿರವಾಗಿಸಿತ್ತು; ಮನಸ್ಸು ಅವನ ಬರುವಿಕೆಗಾಗಿ ಹಪಹಪಿಸುತ್ತಿತ್ತು. ಇವತ್ತು ಏನಾದರೂ ಸರಿ, ಎಂದು ಹತ್ತು ಬಾರಿ ರಿಂಗ್ ಬಿಟ್ಟೆ. ಪುಣ್ಯಾತ್ಮ ಕೊನೇಸಾರಿ ಹಲೋ ಎಂದ.
‘ಅಲ್ಲಾ ದೀಪು, ಫೋನೆತ್ತೋಕೆ ಎಷ್ಟೊತ್ತು? ’ ಎಂದೆ. ‘ಸಾರಿ ದೀಪಾ ನಾಲ್ಕು ದಿವಸದಿಂದ ಸರಿಯಾಗಿ ನಿದ್ದೇನೇ ಮಾಡಿಲ್ಲ ಗೊತ್ತಾ. ಸರಿ ಏನ್ ಹೇಳು’ ಎಂದು ಮತ್ತೆ ಆಕಳಿಸಿದ. ‘ಏನಿಲ್ಲ. ಇವತ್ತು ಕಾಲೇಜಿಗೆ ರಜಾ ಅಲ್ವಾ. ನಮ್ಮ ಚಿಕ್ಕಮ್ಮಾನೂ ಬಂದಿದ್ದಾರೆ. ಎಲ್ಲಾ ಸೇರಿ ಜೋಗಕ್ಕೆ ಹೋಗಿ ಬರೋಣ್ವಾ’ ಎಂದೆ. ಅದಕ್ಕವ ‘ಹೂಂ ಹೋಗೋಣ. ಆದರೆ ನಾನು ಬರೋದಿದ್ದರೆ ಮಧ್ಯಾಹ್ನ ಮಾತ್ರ’ ಎಂದು ಫೋನು ಕುಕ್ಕಿದ.
ದೀಪು ಅಷ್ಟೆಂದದ್ದೇ ತಡ. ಜೋಗಕ್ಕೆ ಹೋಗೋಕೆ ಬೆಳಗಿನಿಂದಲೇ ತರಾತುರಿಯ ತಯಾರಿ ನಡೆಸಿದೆ.
........................................................

ಅಲ್ಲಿನ ಭೋರ್ಗರೆವ ಜಲಪಾತ ಕಣ್ಣಂಚಿನಲ್ಲಿ ಹೊಸ ಅಲೆ ಎಬ್ಬಿಸುತ್ತಿತ್ತು. ಮೈಮನವನ್ನು ತಂಗಾಳಿಯಂತಾಗಿಸುತ್ತಿತ್ತು. ಜಿಗಿಜಿಗಿದು ಹರಿವ, ಮೈ ಝುಂ ಎನ್ನುವ ಜಲಲಧಾರೆ. ಅದು ಜೋಗ ಜಲಪಾತ. ಆಗಷ್ಟೇ ಮುಂಗಾರು ಮಳೆ ಸುರಿದು ಮತ್ತೆಲ್ಲೋ ಮಾಯವಾಗಿತ್ತು. ನಾನು ಚಿಕ್ಕಮ್ಮನ ಜತೆ ಒಂಟಿಮುಖದ ಹೆಬ್ಬಂಡೆಯೊಂದರ ಮೇಲೆ ಕುಳಿತಿದ್ದೆ. ದೀಪು ಅದೇ ಸಾಲಿನ ಇನ್ನೊಂದರ ಮೇಲಿದ್ದ. ಜತೆಗೆ ಕಾಲಿಗೆ ಲೊಚಲೊಚನೆ ಮುತ್ತಿಟ್ಟು , ರಕ್ತತರ್ಪಣ ಕೇಳುತ್ತಿದ್ದ ಜಿಗಣೆಗಳು. ಮಳೆಗಾಲವಾದ್ದರಿಂದ ಜನಜಂಗುಳಿ ಜೋರಾಗಿಯೇ ಇತ್ತು. ಪುಟ್ಟು ಶಶಾಂಕ್ ಅಲ್ಲೇ ಆಡಿಕೊಂಡಿದ್ದ. ನಾನೊಮ್ಮೆ ದೀಪು ಕಡೆ ಕಣ್ಣು ಹೊರಳಿಸಿದೆ. ಅವನ ಕಣ್ಣು ಮಾತ್ರ ಇನ್ನೆಲ್ಲೋ. ಏನೇ ಆಗಲಿ ಇವತ್ತು ನನ್ನಂತರಾಳವನ್ನು ಅವನೆದುರು ಹರವಿಡಬೇಕು ಎಂದು ಮಗದೊಮ್ಮೆ ನಿರ್ಧರಿಸಿದೆ.
ಆಗ ಚಿಕ್ಕಮ್ಮ, ‘ಹೇ ಅಂಕುಶ್ ನಿಲ್ಲೋ. ಓಡಬೇಡ. ಎದುರಿಗೆ ದೊಡ್ಡ ಪ್ರಪಾತ ಇದೆ’ ಎಂದು ಒಂದೇ ಸಮನೆ ಅರಚಿದ್ದು ಕೇಳಿಸಿತು. ಇಬ್ಬರೂ ಎದ್ದು ಹೋಗುವಷ್ಟರಲ್ಲಿ ದೀಪು ಶಶಾಂಕನನ್ನು ತಬ್ಬಿ ಹಿಡಿದು ಮೇಲೆತ್ತಿಕೊಂಡ. ‘ಪಾಪೂ ಯಾವತ್ತೂ ಅಪ್ಪ ಅಮ್ಮ ಹೇಳಿದಹಾಗೇ ಕೇಳಬೇಕು. ಹಟ ಮಾಡಬಾರದು’ ಎಂದು ಮುದ್ದಾಡುತ್ತಾ ಹೇಳಿದ. ಅದಕ್ಕೆ ಅಂಕುಶ್ ‘ಅಂಕಲ್ ನಮ್ ಅಪ್ಪಾ ಯಾರು ಅಂತ ನಿಮಗ್ ಗೊತ್ತಾ’ ಎಂದು ಕೇಳಿಯೇಬಿಟ್ಟ.
ಒಂದು ಬಾರಿ ದೀಪು ದಿಕ್ಕೇ ತೋಚದಂತೆ ಕಂಗಾಲು. ಅವನೇನು ತಾನೆ ಅಂದಾನು? ಕಸಿವಿಸಿಗೊಂಡವನಂತೇ ನನ್ನ ಕಡೆ ನೋಡಿದ. ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಪರಿಸ್ಥಿತಿ ಅರ್ಥವಾಯಿತು. ಕೂಡಲೇ ಎದ್ದು ಅಂಕುಶ್‌ನನ್ನು ಎತ್ತಿಕೊಂಡಳು. ಅವನಿಗೆ ಅಲ್ನೋಡು ಪುಟ್ಟಾ ನೀರು ಹೇಗೆ ಹರಿಯುತ್ತಿದೆ‘ಎಂದು ಅವನ ಗಮನ ಬೇರೆಡೆ ಸೆಳೆದಳು.
ಆವತ್ತಿನ ಇಡೀ ಟ್ರಿಪ್‌ನಲ್ಲಿ ನಾ ಅಂದುಕೊಂಡಂತೇ ಆಗಲೇ ಇಲ್ಲ. ಅವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು. ಅದೇ ದಿನ ಸಂಜೆ ದೀಪು ಮತ್ತೆ ಫೋನ್ ಮಾಡಿದ. ಚಿಕ್ಕಮ್ಮನ ಛಿದ್ರವಾದ ಬದುಕಿನ ಬಗ್ಗೆ ಕೇಳಿದ. ನಾನು ಎಲ್ಲವನ್ನೂ ಚಾಚೂ ತಪ್ಪದೇ ಹೇಳಿಬಿಟ್ಟೆ.
........................................................

ಮರುದಿನ ಬೆಳಗ್ಗೆ ಏಳುತ್ತಿದ್ದಂತೇ ಗೋವಾದಲ್ಲಿದ್ದ ಭಾಗತ್ತೆಯಿಂದ ಫೋನ್ ಬಂತು. ಒಂದು ತಿಂಗಳು ಸುಬ್ಬುಮಾವ ಮಸ್ಕತ್ತಿಗೆ ಹೋಗುತ್ತಿದ್ದಾರೆ. ಮನೇಲಿರೂಕೆ ಒಬ್ಬಳಿಗೇ ಬೋರು. ನೀನು ಬಂದರೆ ನನಗೂ ಬೇಸರ ಕಳೆಯುತ್ತೆ. ಕಾಲೇಜ್ ಬೇರೆ ಮುಗಿದಿದೆ. ಪರೀಕ್ಷೆಗೆ ಇಲ್ಲಿಯೇ ಓದಿಕೊಂಡರಾಯಿತು ಎನ್ನತೊಡಗಿದಳು. ಆಗಲ್ಲ ಅತ್ತೆ ಎನ್ನಲು ಮನಸಾಗಲಿಲ್ಲ. ಮೊದಲೇ ಅವಳಿಗೆ ನಾನೆಂದರೆ ಪ್ರಾಣ. ‘ಸರಿ ಅತ್ತೆ’ ಎಂದಷ್ಟೇ ಹೇಳಿ ಸುಮ್ಮನಾದೆ. ಆ ವಿಷಯವನ್ನು ಅಮ್ಮನಿಗೆ ಹೇಳಬೇಕು ಎನ್ನುವಷ್ಟರಲ್ಲಿ ಮತ್ತೆ ಫೋನು...
ಅದು ದೀಪು ಧ್ವನಿ. ಗೋವಾಗೆ ಹೋಗುವ ವಿಷಯವನ್ನು ಅವನಿಗೂ ಹೇಳಿಬಿಡೋಣ ಎನ್ನುವಷ್ಟರಲ್ಲಿ, ‘ದೀಪಾ, ನಿಮ್ಮ ಚಿಕ್ಕಮ್ಮನ ಹತ್ತಿರ ಸ್ವಲ್ಪ ಮಾತಾಡಬೇಕು. ನಾಳೆ ಸಂಜೆ ಊರಾಚೆಯ ರಾಗೀ ಗುಡ್ಡಕ್ಕೆ ಕರ್‍ಕೊಂಡ್ ಬರ್‍ತೀಯಾ’ ಎಂದ.
ನನಗೆ ಒಂದು ರೀತಿಯ ಧರ್ಮ ಸಂಕಟ. ಆಗೊಲ್ಲ ಎನ್ನುವ ಹಾಗಿಲ್ಲ. ‘ಸಾರಿ ಕಣೊ. ನಾನು ನಾಳೆ ಬೆಳಗ್ಗೇನೆ ಗೋವಾಕ್ಕೆ ಹೋಗ್ತಿದೀನಿ. ಒಂದೇ ತಿಂಗಳಲ್ಲಿ ವಾಪಸ್ ಬರುತ್ತೇನೆ. ಬಂದ ದಿನವೇ ನಿನ್ನ ಹತ್ರ ಒಂದು ವಿಷಯ ಹೇಳಬೇಕು. ಸಿಗ್ತೀಯಾ ತಾನೆ’ ಎಂದು ಕೇಳಿದೆ.
‘ಅದು ಇರಲಿ. ನಾನು ಹೇಳಿದ್ದು’ ಎಂದ. ‘ಸರಿ ದೀಪು. ಚಿಕ್ಕಮ್ಮನಿಗೆ ಹೇಳುತ್ತೀನಿ. ಅಮ್ಮ - ಮಗನನ್ನು ಕಳಿಸುತ್ತೇನೆ’ ಎಂದು ಹೇಳಿ, ಅವ ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಚಿಕ್ಕಮ್ಮನೆದುರಿಗೆ ಒಪ್ಪಿಸಿಬಿಟ್ಟೆ.
ಮರುದಿನ ಬೆಳಗ್ಗೆ ಎದ್ದು ಚಿಕ್ಕಮ್ಮನಿಗೆ ಮತ್ತೊಮ್ಮೆ ರಾಗೀಗುಡ್ಡವನ್ನು ನೆನಪಿಸಿ, ಹೊನ್ನಾವರದ ಬಸ್ಸು ಹತ್ತಿದೆ. ಅಲ್ಲಿಂದ ಕಾರವಾರ. ಅಲ್ಲಿಂದ ಸೀದಾ ಗೋವಾ...
..........................................................

ಅತ್ತೆ ಮನೆಯಲ್ಲಿದ್ದ ನನಗೆ ಹಗಲಿರುಳೂ ದೀಪುನದ್ದೇ ಯೋಚನೆ. ಅವ ನನ್ನನ್ನು ‘ವಲ್ಲೆ’ ಎಂದುಬಿಟ್ಟರೆ ಎಂಬ ಆತಂಕ ಬೇರೆ. ಮತ್ತೆ ಊರಿಗೆ ಯಾವಾಗ ಹೋಗುತ್ತೀನೋ ಎಂದುಕೊಂಡೆ. ಅತ್ತೆಯೊಂದಿಗೆ ಎಷ್ಟೇ ಹರಟಿದರೂ ಅವ ಮಾತ್ರ ಮತ್ತೆ ಮತ್ತೆ ಕಾಡುತ್ತಿದ್ದ.
ಸರಿಸುಮಾರು ಸಂಜೆಗತ್ತಲ್ತು. ಮೈ ಬಗಬಗನೆ ಹತ್ತಿ ಉರಿಯುವುದೇನೋ ಎಂಬ ತುಮುಲ. ಅತ್ತೆ ಪಕ್ಕದ ಮನೆಗೆ ಹೋಗಿಬರುತ್ತೇನೆ ಎಂದು ಹೊರಟಳು. ಒಬ್ಬಳೇ ಕುಳಿತು ಯಂಡಮೂರಿಯ ‘ಪ್ರೇಯಸಿಯ ಕರೆ’ ಪುಸ್ತಕ ಓದಹತ್ತಿದೆ. ವರಾಂಡದಲ್ಲಿ ಆಗಾಗ ತಂಪುಗಾಳಿ ಬೀಸಹತ್ತಿತು. ಆಗ ಮತ್ತೆ ಫೋನ್ ರಿಂಗಾಯಿತು. ಗೆಳತಿ ದೀಪಿಕಾ ಅಪರೂಪಕ್ಕೆ ಫೋನಾಯಿಸಿದ್ದಳು.
‘ಏನೇ ದೀಪಿಕಾ ಚೆನ್ನಾಗಿದ್ದೀಯಾ’ ಎಂದೆ. ‘ಹೂಂ ದೀಪಾ. ನನಗೇನಾಗಿದೆ ದಾಡಿ. ಅದಿರಲಿ, ನಿನ್ನ ದೀಪೂ ಏನ್ ಘನಂಧಾರಿ ಕೆಲಸ ಮಾಡಿದ್ದಾನೆ ಗೊತ್ತಾ’ ಎಂದಳು ವ್ಯಂಗ್ಯವಾಗಿ. ‘ಏನೋ ಗೊತ್ತಿಲ್ಲ ಮಾರಾಯ್ತಿ. ಏನಾಯ್ತು ಹೇಳೇ’ ಎಂದೆ. ಬರೀ ಅದು ಇದು ಓದಿ ಅವನ ತಲೆ ಹಾಳಾಗಿದೆ. ಈಗ ಒಬ್ಬ ವಿಧವೆಯನ್ನ ಕಟ್ಟಿಕೊಳ್ಳೋಕೆ ಹೊರಟಿದ್ದಾನೆ. ಅವನಿಗೇನು ಕಮ್ಮಿಯಾಗಿ ಹಾಗೆ ಮಾಡ್ತಿದ್ದಾನೆ ಮಾರಾಯ್ತಿ....’ ಅಷ್ಟು ಹೊತ್ತಿಗೆ ಆ ಹಾಳಾದ ಫೋನು ಡಿಸ್ಕನೆಕ್ಟ್ ಆಯ್ತು. ಹಾಗೆಯೇ ಕುಸಿದು ಕುಳಿತ ನನಗೆ ಗಾಬರಿ, ಉದ್ವೇಗಗಳು ಒಟ್ಟೊಟ್ಟಿಗೇ ದಾಳಿ ಮಾಡತೊಡಗಿದವು. ಕಣ್ಣು ಇದ್ದಕ್ಕಿದ್ದಂತೇ ಮಂಜಾಗತೊಡಗಿದವು. ಅಷ್ಟು ಹೊತ್ತಿಗೆ ಹೊರಗಡೆ ಕಾಲಿಂಗ್ ಬೆಲ್ ರಿಂಗ್ ಆಯಿತು. ಅಲ್ಲೊಬ್ಬ ಪೋಸ್ಟ್ ಮ್ಯಾನ್ ನಿಂತಿದ್ದ. ಕಷ್ಟಪಟ್ಟು ಅವನಲ್ಲಿಗೆ ತೆರಳಿ, ಪತ್ರ ಇಸ್ಕೊಂಡೆ.
ಲಕೋಟೆಯ ಹಿಂಭಾಗದಲ್ಲಿ ‘ಇಂದ- ದೀಪಕ್ ರಾವ್ ಕೆ. ಎಲ್ ಎಂದು ಬರೆದಿತ್ತು. ಏನಿರಬಹುದೆಂಬ ಕುತೂಹಲದಿಂದ ಬಿಚ್ಚಿ ನೋಡಿದೆ...
‘ಪ್ರೀತಿಯ ದೀಪಾ...
ಮೊದಲು ಕ್ಷಮೆ ಕೋರಿ ಮುಂದಿನದನ್ನು ಹೇಳುತ್ತೇನೆ. ನಿನ್ನಲ್ಲಿ ನನ್ನ ಬಗ್ಗೆ ಮೂಡಿರುವ ಭಾವನೆಗಳೇನು ಎಂದು ಮೂರು ತಿಂಗಳ ಹಿಂದೆಯೇ ತಿಳಿದಿತ್ತು. ಆದರೆ ನಾನು ಆದಷ್ಟು ದೂರವಿರಲು ಪ್ರಯತ್ನಿಸುತ್ತಿದ್ದೆ. ಅದಕ್ಕೆ ಬಲವಾದ ಕಾರಣವೂ ಇದೆ. ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಾಯಿಯ ಹಣೆ ಬರಿದಾಗಿ, ನಾವಿಬ್ಬರೂ ದಿಕ್ಕುತೋಚದೇ ಕುಳಿತಾಗ ಒಬ್ಬ ಮಹಾನುಭಾವರು ನನ್ನಮ್ಮನ ಹಣೆಗೆ ಕುಂಕುಮವನ್ನಿಟ್ಟು, ನನಗೆ ತಂದೆ ಸ್ಥಾನ ಕಲ್ಪಿಸಿದರು. ಬೇರೆ ಮಕ್ಕಳು ಹುಟ್ಟಿದರೆ ನನ್ನ ಬಗ್ಗೆ ಪ್ರೀತಿ ಕಡಿಮೆಯಾದೀತು ಎಂದು ಅದಕ್ಕೆಲ್ಲಾ ಆಸ್ಪದ ಕೊಡಲಿಲ್ಲ. ನನ್ನನ್ನು ಇಷ್ಟು ದೊಡ್ಡವನನ್ನಾಗಿಸಿ, ಬದುಕುವ ಹಾದಿ ರೂಪಿಸಿಕೊಟ್ಟವರೂ ಅವರೇ. ಇವಿಷ್ಟನ್ನು ನಿನ್ನ ಬಳಿ ಹೇಳಬೇಕೆಂದು ಸಾಕಷ್ಟು ಬಾರಿ ಪ್ರಯತ್ನಿಸಿದೆ.ಆದರೆ ಆದು ಸಾಧ್ಯವಾಗಿರಲಿಲ್ಲ. ನಮ್ಮ ಅಪ್ಪಯ್ಯ ಹಾಕಿಕೊಟ್ಟ ನೆಲೆಗಟ್ಟಿನಲ್ಲಿ ನಾನು ಬದುಕು ಸಾಗಿಸುತ್ತಿದ್ದೇನೆ. ನಾನೂ ಅವರ ಆದರ್ಶಗಳಲ್ಲಿ ಅಲ್ಪಭಾಗವನ್ನಾದರೂ ರೂಢಿಸಿಕೊಳ್ಳಬೇಕೆಂದಿದ್ದೆ. ನಿಮ್ಮ ಚಿಕ್ಕಮ್ಮನನ್ನು ಭೇಟಿಯಾದೆ. ವಾಸ್ತವಾಂಶಗಳನ್ನೆಲ್ಲಾ ಸವಿವರವಾಗಿ ಹೇಳಿದೆ. ಒಂದು ನೊಂದ ಜೀವಕ್ಕೆ ಸಾಂತ್ವನ ಸಿಗಬೇಕೆನ್ನುವುದಷ್ಟೇ ನನ್ನ ನನ್ನ ಉದ್ದೇಶ. ಅನ್ಯತಾ ಭಾವಿಸುವುದಿಲ್ಲವೆಂದುಕೊಂಡಿದ್ದೇನೆ.
ಎಂದೆಂದೂ ನಿನ್ನ ಹಿತ ಬಯಸುವ ಹಿತೈಶಿ
ದೀಪು

ಆ ಕೊನೆಯ ಎರಡು ಅಕ್ಷರಗಳು ನನ್ನೆರಡೂ ಕಣ್ಣುಗಳ ಹನಿಗಳ ರೂಪ ಪಡೆದಿತ್ತು. ಪಕ್ಕದಲ್ಲಿದ್ದ ಏಣಿ ಮೆಟ್ಟಿಲಿಗೆ ಒರಗಿ, ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕುಳಿತೆ. ಆಗಸದಿ ಕಂಡ ಚಂದಿರನ ಮೊಗ ದೀಪುವನ್ನೇ ಹೋಲುವಂತೆ ಭಾಸವಾಯಿತು. ಆ ಮುದ್ದುಮೊಗದಲ್ಲಿ ಚಿಕ್ಕಮ್ಮ ನಿರಾಳಭಾವದಿಂದ ನಗುತ್ತಿದ್ದಳು. ಪಕ್ಕದಲ್ಲಿದ್ದ ಅಂಕುಶ್ ಕೂಡ ಕಂಡ ಕಣ್ಣಿಗೆ ಬಿದ್ದ.......!



ಪೂರ್ಣ ವಿರಾಮ/ ಕಲಗಾರು

ಮೊನ್ನೆ ನೋಡಿದ morning show-ಮನಸುಗಳ ಮಾತು ಮಧುರ

'ಅತೀ' ಮಧುರ ಅದೇ ರಾಗ

ಸಾಗರ್-ಸಂಗೀತಾ
ಏನೂ ಅರಿಯದ ಹೈಸ್ಕೂಲ್ ಮಿಳ್ಳೆಗಳು. ಅವರಿಬ್ಬರದ್ದೂ ಎರಡು ದೇಹ, ಒಂದೇ ಜೀವ. ಜತೆಜತೆಗೆ ಶಾಲೆಗೆ ಹೋಗುತ್ತಾರೆ. ಅವನ ಸೈಕಲ್ ಬಂಪರ್ ಮೇಲೆ ಆಕೆಮಾತ್ರ ಕೂರುತ್ತಾಳೆ. ಆ ಸೈಕಲ್ ಮೇಲೆ ಅವರ ಸವಾರಿ ಹೊರಟಿದೆಯೆಂದರೆ ಊರಿನವರಿಗೆ ಉಪಟಳ ತಪ್ಪಿದ್ದಲ್ಲ. ದಾರಿಯುದ್ದಕ್ಕೂ ಕಪಿಚೇಷ್ಟೆ; ಅದು ಗೆಳೆತನದ ಪರಾಕಾಷ್ಟೆ.
ಆಗ ಇದ್ದಕ್ಕಿದ್ದಂತೆ ಸಂಗೀತಾ ದೊಡ್ಡವಳಾಗುತ್ತಾಳೆ. ಇಬ್ಬರೂ ದೂರವಾಗುವುದು ಅನಿವಾರ್ಯವಾಗುತ್ತದೆ. ಇಬ್ಬರೂ ಕದ್ದು ಕದ್ದು ಮನಸುಗಳ ಮಾತನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಅವಳು ತಿಂದುಬಿಟ್ಟ ಐಸ್‌ಕ್ಯಾಂಡಿ, ಸೌತೆಕಾಯಿಯನ್ನು ಇವ ಕದ್ದು ಕದ್ದು ತಿನ್ನುತ್ತಾನೆ. ಪರೀಕ್ಷೆಯಲ್ಲಿ ಅವಳು ಕೊಟ್ಟ ಪೆನ್ನಿನಲ್ಲಿ ಮಾತ್ರ ಪುಟಗಟ್ಟಲೇ ಬರೆಯುತ್ತಾನೆ.
ನಂತರಎರಡೂ ಮನೆಯವರಿಗೆ ಸುಖಾಸುಮ್ಮನೇ ಮನಸ್ಥಾಪ ಎದುರಾಗುತ್ತದೆ. ಇವರಿಬ್ಬರ ಮನಸುಗಳ ಮಾತಿಗೆ ತೂತು ಬೀಳುತ್ತದೆ.
ಈ ಮಧ್ಯೆ ಎಂಎಲ್‌ಎ ಮಾದಪ್ಪನ ಮಗ ತರುಣ್ ಬರುತ್ತಾನೆ. ಆತ ಕಾಮುಕರ ಪ್ರತಿನಿಧಿ. ಸಂಗೀತನ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಅವಳನ್ನು ಮನೆತುಂಬಿಸಿಕೊಳ್ಳಲು ಅಪ್ಪನನ್ನು ಛೂ ಬಿಡುತ್ತಾನೆ ತರುಣ್. ಬಡತನದ ಬೆವರಿನಲ್ಲಿ ಮಿಂದು ಮುರುಟಿಹೋಗಿರುವ ಸಂಗೀತನ ಮನೆಯವರಿಗೆ ಶ್ರೀಮಂತಿಕೆ ಕೈಬೀಸಿ ಕರೆಯುತ್ತೆ. ಚಕಾರವೆತ್ತದೇ ಮಗಳ ಮದುವೆಗೆ ಮಣೆ ಹಾಕುತ್ತಾರೆ.
ತಮ್ಮ ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಪ್ರೇಮಿಗಳಿಬ್ಬರೂ ಬೆಂಗಳೂರಿಗೆ ಓಡಿಬರುತ್ತಾರೆ. ಸಾಕಷ್ಟು ಕಷ್ಟ-ನಷ್ಟ ಅನುಭವಿಸುತ್ತಾರೆ. ಮುಂದೆ ನಡೆಯುವುದು ಪರದೆ ಮುಂದೆ ನೋಡಿದರೆ ಚೆನ್ನ.
ಇದು ಮಂಜು ಮಸ್ಕಲ್‌ಮಟ್ಟಿ ವರ್ಷಗಟ್ಟಲೇ ಕುಳಿತು, ಕಷ್ಟಪಟ್ಟು ಹುಟ್ಟುಹಾಕಿದ "ಮನಸುಗಳ ಮಾತು ಮದುರ’ ಚಿತ್ರದ ಕೆಲವು ಸ್ಯಾಂಪಲ್‌ಗಳು. ಒಂದು ಸರ್ವೇಸಾಧಾರಣ ಕತೆಯನ್ನಾದರಿಸಿ ಸುಮಾರು ಎರಡೂ ಚಿಲ್ಲಗೆ ಗಂಟೆಯ ಸಿನಿಮಾ ಮಾಡಿದ್ದಾರೆ ಮಂಜು. ಟಿವಿ ನಿರೂಪಕನಾಗಿದ್ದ "ಯುಟು’ ಆನಂದನನ್ನು ಇಟ್ಕಂಡು ಒಂದು ಅಪ್ಪಟ "ಚೆಲುವಿನ.. ಚಿತ್ರಕತೆಯನ್ನು ಹೇಳುತ್ತೇನೆ ಎಂದು ಎಡವಿ ಬಿದ್ದಿದ್ದಾರೆ.
ಪ್ರೀತಿ-ರೀತಿ, ಪ್ರೇಮ-ಗೀಮ, ಜಗಳ-ದೊಂಬಿ, ಗಲಾಟೆ-ಗೌಜಿ..... ಇವಿಷ್ಟಕ್ಕೇ ಇನ್ನೊಂದಿಷ್ಟು ಮಸಾಲೆ ಮಿಕ್ಸ್ ಮಾಡಿ ಮ.. ಮಾ.. ಮ.. ಮಾಡಿದ್ದಾರೆ. ಕಳಪೆ ಮಟ್ಟದ ಛಾಯಾಗ್ರಹಣ ಕೂಡ ಆ ಎಡವಿಕೆಗೆ ಕಾರಣವಿರಬಹುದು. ಸಿನಿಮಾ ನೋಡಿಬಂದವರಿಗೆ ಇದು ಹೆಚ್. ಸಿ ವೇಣು ಮಾಡಿರು ಕ್ಯಾಮರಾ ವರ್ಕಾ ಎಂಬ ಡೌಟ್ ಬಂದರೂ ಆಶ್ಚರ್ಯವಿಲ್ಲ. ಮೊದಲಾರ್ಧದ ಕಾಲು ಭಾಗ ಕ್ಯಾಮರಾ ಫೋಕಸಿಂಗ್‌ಗಾಗಿ ಮೀಸಲಿಟ್ಟಿದ್ದಾರೆ ಛಾಯಾಗ್ರಾಹಕ ವೇಣು! ಮಳೆ ಸೀನ್ ಬಂದಾಗ ಅದು ಬಿಸಿಲೋ, ಮಳೆಯೋ... ಊಹುಂ ಖಂಡಿತಾ ಖಾತ್ರಿಯಾಗುವುದಿಲ್ಲ. ಜತೆಗೆ ಸಂಕಲನಕಾರ ಶಿವಕುಮಾರ್ ಅವರಿಗೆ ಎಲ್ಲಿ ಕತ್ತರಿ ಹಾಕಬೇಕು ಎಂಬುದು ಮರೆತೇ ಹೋದಂತಿದೆ. ಸಾಕಷ್ಟು ಕಡೆ "ಒಂದಾ’ ಮಾಡುವುದು ಅಸಯ್ಯ ಎನಿಸುತ್ತದೆ. ಮೂರನೇ ಹಾಡು ಶುರುವಾಗುವಾಗಲೂ ನಾಯಕ ಅದನ್ನೇ ಮಾಡುತ್ತಿರುತ್ತಾನೆ. ಕೆಲವುಕಡೆ ಹೇಳಿದ್ದನ್ನೇ ಹೇಳೋ... ಎನ್ನುವಂತಿದೆ.
ಆದರೆ ಕೆ. ಕಲ್ಯಾಣ್ ಸಂಗೀತ ಮಾತ್ರ ಇವೆಲ್ಲವಕ್ಕೂ ಅಪವಾಧದಂತಿದೆ. ಹಾಡುಗಳು ಇಡೀ ಸಿನಿಮಾದ ಹೈಲೈಟು. ೧೭ ಚೈತ್ರದ ಹುಡುಗಿ... ಹಾಡು ಮತ್ತೆ ಅಮೃತವರ್ಷಿಣಿಯನ್ನು ನೆನಪಿಸುತ್ತೆ. ಇನ್ನು ನಾಯಕಿ ಹರಿಪ್ರಿಯಾ ಹಸಿರೆಲೆಯ ಮೇಲಿಂದ ಆಗಷ್ಟೇ ಜಿನುಗುತ್ತಿರುವ ಮಂಜಿನ ಹನಿಯಂತೇ ಇಷ್ಟವಾಗ್ತಾರೆ. ಅವಳ ನೋಟ, ಹಾವ-ಭಾವ ಎಲ್ಲವೂ ನಿತ್ಯಹರಿದ್ವರ್ಣ. ಆದರೆ ಆನಂದ್ ಮಾತ್ರ ಸುಮ್ಮನೆ ಮುಸಿ ಮುಸಿ ನಕ್ಕಾಗಷ್ಟೇ ಚೆನ್ನಾಗಿ ಕಾಣುತ್ತಾರೆ. ಹೊಸ ವಿಲನ್ ರೇಣು ಕೊಡುವ ಲುಕ್ಕು ಶಕ್ತಿ ಕಪೂರ್ ಥರವಾದರೂ ಮಾಡುವುದೆಲ್ಲಾ ಥೇಟ್ ಕರೀನಾ ಕಪೂರ್. ಅವಿನಾಶ್, ಪವಿತ್ರಾ ಲೋಕೇಶ್, ಭವ್ಯಾ ಎಲ್ಲರೂ ತಮ್ಮತನ ತೋರಿದ್ದಾರೆ.
ಮುಂದಾದರೂ ಮಂಜು ಒಳ್ಳೆಯ ತಂಡವನ್ನು ಕಟ್ಟಿಕೊಂಡರೆ ಒಂದೊಳ್ಳೆ ಮಧುರವಾದ ಸಿನಿಮಾ ಕೊಡಬಹುದೇನೋ....

ಪೂರ್ಣ ವಿ - ರಾಮ/ ಕಲಗಾರು

ಕೊಡಚಾದ್ರಿಯಲ್ಲಿ ಕಂಡ ಕನಸಿನಂಗಳ( ಮನದ ಮುಗಿಲಲ್ಲಿ ಮೊಹಬ್ಬತ್ )










ಪ್ರಿಯರೆ,

ನಾನು ಕೆಲದಿನಗಳ ಹಿಂದೆ ಮಲೆನಾಡಿನ ಹೃದಯಭಾಗವಾದ ಕೊಡಚಾದ್ರಿಗೆ ಹೋಗಿದ್ದೆ. ಅಲ್ಲೊಂದಿಷ್ಟು ಅಪರೂಪದ ಧೃಶ್ಯಗಳನ್ನು ಕಂಡೆ. ಅದನ್ನು ನನ್ನ ಕ್ಯಾಮೆರಾ ಕಣ್ಣಲ್ಲಿ ಗುಟ್ಟಾಗಿ ಸೆರೆಹಿಡಿದಿದ್ದೇನೆ. ಅದನ್ನೀಗ ನಿಮ್ಮ ಮುಂದೆ ಹರವಿಟ್ಟಿದ್ದೇನೆ. ಆದರೆ ಅಷ್ಟನ್ನೂ ಈಗಲೇ ತೋರ್ಪಡಿಸುವುದಿಲ್ಲ. ಕೆಲವೇ ಕೆಲವಷ್ಟನ್ನು ಮಾತ್ರ ಇಲ್ಲಿರಿಸುತ್ತೇನೆ. ನಿಮಗಿವು ಇಷ್ಟವಾಗರೆ ಹೇಳಿ. ಇನ್ನೂ ಸಾಕಷ್ಟಿದೆ. ಹಂತಹಂತವಾಗಿ ಬ್ಲಾಗ್‌‌ನಲ್ಲಿ ಬಂಧಿಸುತ್ತೇನೆ.


ಇದು ನಿಮ್ಮ ಕಣ್ಮನಗಳಿಗೂ ಇಷ್ಟವಾಗುತ್ತೆ ಎಂದುಕೊಳ್ಳುತ್ತೇನೆ.



ನಿಮ್ಮ ಅಕ್ಕರೆಯ ಉತ್ತರಕ್ಕಾಗಿ ಕುಕ್ಕರಗಾಲಿನಿಂದ ಕುಳಿತಿರುವ

ಪೂರ್ಣ ವಿ- ರಾಮ / ಕಲಗಾರು

ಸ್ನೇಹಿತ ಬಂಧುಗಳೇ ನಿಮಗಿದೋ ನಮಸ್ಕಾರ...

ಮೊದಲೊಂದಿಪೆ ನಿಮಗೆ......


ಏನೂ ಅರಿಯದೇ ಇದ್ದಾಗ ಕರೆದು ಸುದ್ದಿಮನೆ ಕತೆ ಹೇಳಿ , ಬರವಣಿಗೆಯ ಗೀಳು ಹಚ್ಚಿಸಿದ ನನ್ನ ಗುರುಗಳಿಗೆ.

ನನ್ನ ಮೊದಲ ಬರಹಗಳಿಗೆ ಕಾಗುಣಿತ ತಿದ್ದುಪಡಿ ಮಾಡಿಕೊಟ್ಟು, ಬೆನ್ನುತಟ್ಟಿದ ಪ್ರೀತಿಯ ಮ-ದೇವಣ್ಣನಿಗೆ.


ಅಕ್ಷರಜ್ಞಾನವೇ ಇಲ್ಲದೇ, ಅಲ್ಲಿ ಇಲ್ಲಿ ಅಂಡಲೆದುಕೊಂಡಿದ್ದಾಗ ಕರೆದು ಅಕ್ಕರೆಯಿಂದ ಅಕ್ಷರ ತಿದ್ದಿಸಿದ ಕುಂಟಗೋಡಿನ ವಿಭೂತಿ ಪುರಷನಿಗೆ.

ಆಶ್ರಯವಿಲ್ಲದೇ ಅಲ್ಲಿ ಇಲ್ಲಿ ಇರುತ್ತಿದ್ದ ನನಗೆ ಕರೆದು ನೀರು- ನೆರಳು ಕೊಟ್ಟ ನನ್ನಕ್ಕರೆಯ ಸಾರ್ರಿಗೆ.

ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ ಅಕ್ಕರೆಯ ಅಪ್ಪಯ್ಯನಿಗೆ.