Sunday, March 9, 2008

ಮೊನ್ನೆ ನೋಡಿದ morning show-ಮನಸುಗಳ ಮಾತು ಮಧುರ

'ಅತೀ' ಮಧುರ ಅದೇ ರಾಗ

ಸಾಗರ್-ಸಂಗೀತಾ
ಏನೂ ಅರಿಯದ ಹೈಸ್ಕೂಲ್ ಮಿಳ್ಳೆಗಳು. ಅವರಿಬ್ಬರದ್ದೂ ಎರಡು ದೇಹ, ಒಂದೇ ಜೀವ. ಜತೆಜತೆಗೆ ಶಾಲೆಗೆ ಹೋಗುತ್ತಾರೆ. ಅವನ ಸೈಕಲ್ ಬಂಪರ್ ಮೇಲೆ ಆಕೆಮಾತ್ರ ಕೂರುತ್ತಾಳೆ. ಆ ಸೈಕಲ್ ಮೇಲೆ ಅವರ ಸವಾರಿ ಹೊರಟಿದೆಯೆಂದರೆ ಊರಿನವರಿಗೆ ಉಪಟಳ ತಪ್ಪಿದ್ದಲ್ಲ. ದಾರಿಯುದ್ದಕ್ಕೂ ಕಪಿಚೇಷ್ಟೆ; ಅದು ಗೆಳೆತನದ ಪರಾಕಾಷ್ಟೆ.
ಆಗ ಇದ್ದಕ್ಕಿದ್ದಂತೆ ಸಂಗೀತಾ ದೊಡ್ಡವಳಾಗುತ್ತಾಳೆ. ಇಬ್ಬರೂ ದೂರವಾಗುವುದು ಅನಿವಾರ್ಯವಾಗುತ್ತದೆ. ಇಬ್ಬರೂ ಕದ್ದು ಕದ್ದು ಮನಸುಗಳ ಮಾತನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಅವಳು ತಿಂದುಬಿಟ್ಟ ಐಸ್‌ಕ್ಯಾಂಡಿ, ಸೌತೆಕಾಯಿಯನ್ನು ಇವ ಕದ್ದು ಕದ್ದು ತಿನ್ನುತ್ತಾನೆ. ಪರೀಕ್ಷೆಯಲ್ಲಿ ಅವಳು ಕೊಟ್ಟ ಪೆನ್ನಿನಲ್ಲಿ ಮಾತ್ರ ಪುಟಗಟ್ಟಲೇ ಬರೆಯುತ್ತಾನೆ.
ನಂತರಎರಡೂ ಮನೆಯವರಿಗೆ ಸುಖಾಸುಮ್ಮನೇ ಮನಸ್ಥಾಪ ಎದುರಾಗುತ್ತದೆ. ಇವರಿಬ್ಬರ ಮನಸುಗಳ ಮಾತಿಗೆ ತೂತು ಬೀಳುತ್ತದೆ.
ಈ ಮಧ್ಯೆ ಎಂಎಲ್‌ಎ ಮಾದಪ್ಪನ ಮಗ ತರುಣ್ ಬರುತ್ತಾನೆ. ಆತ ಕಾಮುಕರ ಪ್ರತಿನಿಧಿ. ಸಂಗೀತನ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಅವಳನ್ನು ಮನೆತುಂಬಿಸಿಕೊಳ್ಳಲು ಅಪ್ಪನನ್ನು ಛೂ ಬಿಡುತ್ತಾನೆ ತರುಣ್. ಬಡತನದ ಬೆವರಿನಲ್ಲಿ ಮಿಂದು ಮುರುಟಿಹೋಗಿರುವ ಸಂಗೀತನ ಮನೆಯವರಿಗೆ ಶ್ರೀಮಂತಿಕೆ ಕೈಬೀಸಿ ಕರೆಯುತ್ತೆ. ಚಕಾರವೆತ್ತದೇ ಮಗಳ ಮದುವೆಗೆ ಮಣೆ ಹಾಕುತ್ತಾರೆ.
ತಮ್ಮ ಪ್ರೀತಿ ಉಳಿಸಿಕೊಳ್ಳುವ ಸಲುವಾಗಿ ಪ್ರೇಮಿಗಳಿಬ್ಬರೂ ಬೆಂಗಳೂರಿಗೆ ಓಡಿಬರುತ್ತಾರೆ. ಸಾಕಷ್ಟು ಕಷ್ಟ-ನಷ್ಟ ಅನುಭವಿಸುತ್ತಾರೆ. ಮುಂದೆ ನಡೆಯುವುದು ಪರದೆ ಮುಂದೆ ನೋಡಿದರೆ ಚೆನ್ನ.
ಇದು ಮಂಜು ಮಸ್ಕಲ್‌ಮಟ್ಟಿ ವರ್ಷಗಟ್ಟಲೇ ಕುಳಿತು, ಕಷ್ಟಪಟ್ಟು ಹುಟ್ಟುಹಾಕಿದ "ಮನಸುಗಳ ಮಾತು ಮದುರ’ ಚಿತ್ರದ ಕೆಲವು ಸ್ಯಾಂಪಲ್‌ಗಳು. ಒಂದು ಸರ್ವೇಸಾಧಾರಣ ಕತೆಯನ್ನಾದರಿಸಿ ಸುಮಾರು ಎರಡೂ ಚಿಲ್ಲಗೆ ಗಂಟೆಯ ಸಿನಿಮಾ ಮಾಡಿದ್ದಾರೆ ಮಂಜು. ಟಿವಿ ನಿರೂಪಕನಾಗಿದ್ದ "ಯುಟು’ ಆನಂದನನ್ನು ಇಟ್ಕಂಡು ಒಂದು ಅಪ್ಪಟ "ಚೆಲುವಿನ.. ಚಿತ್ರಕತೆಯನ್ನು ಹೇಳುತ್ತೇನೆ ಎಂದು ಎಡವಿ ಬಿದ್ದಿದ್ದಾರೆ.
ಪ್ರೀತಿ-ರೀತಿ, ಪ್ರೇಮ-ಗೀಮ, ಜಗಳ-ದೊಂಬಿ, ಗಲಾಟೆ-ಗೌಜಿ..... ಇವಿಷ್ಟಕ್ಕೇ ಇನ್ನೊಂದಿಷ್ಟು ಮಸಾಲೆ ಮಿಕ್ಸ್ ಮಾಡಿ ಮ.. ಮಾ.. ಮ.. ಮಾಡಿದ್ದಾರೆ. ಕಳಪೆ ಮಟ್ಟದ ಛಾಯಾಗ್ರಹಣ ಕೂಡ ಆ ಎಡವಿಕೆಗೆ ಕಾರಣವಿರಬಹುದು. ಸಿನಿಮಾ ನೋಡಿಬಂದವರಿಗೆ ಇದು ಹೆಚ್. ಸಿ ವೇಣು ಮಾಡಿರು ಕ್ಯಾಮರಾ ವರ್ಕಾ ಎಂಬ ಡೌಟ್ ಬಂದರೂ ಆಶ್ಚರ್ಯವಿಲ್ಲ. ಮೊದಲಾರ್ಧದ ಕಾಲು ಭಾಗ ಕ್ಯಾಮರಾ ಫೋಕಸಿಂಗ್‌ಗಾಗಿ ಮೀಸಲಿಟ್ಟಿದ್ದಾರೆ ಛಾಯಾಗ್ರಾಹಕ ವೇಣು! ಮಳೆ ಸೀನ್ ಬಂದಾಗ ಅದು ಬಿಸಿಲೋ, ಮಳೆಯೋ... ಊಹುಂ ಖಂಡಿತಾ ಖಾತ್ರಿಯಾಗುವುದಿಲ್ಲ. ಜತೆಗೆ ಸಂಕಲನಕಾರ ಶಿವಕುಮಾರ್ ಅವರಿಗೆ ಎಲ್ಲಿ ಕತ್ತರಿ ಹಾಕಬೇಕು ಎಂಬುದು ಮರೆತೇ ಹೋದಂತಿದೆ. ಸಾಕಷ್ಟು ಕಡೆ "ಒಂದಾ’ ಮಾಡುವುದು ಅಸಯ್ಯ ಎನಿಸುತ್ತದೆ. ಮೂರನೇ ಹಾಡು ಶುರುವಾಗುವಾಗಲೂ ನಾಯಕ ಅದನ್ನೇ ಮಾಡುತ್ತಿರುತ್ತಾನೆ. ಕೆಲವುಕಡೆ ಹೇಳಿದ್ದನ್ನೇ ಹೇಳೋ... ಎನ್ನುವಂತಿದೆ.
ಆದರೆ ಕೆ. ಕಲ್ಯಾಣ್ ಸಂಗೀತ ಮಾತ್ರ ಇವೆಲ್ಲವಕ್ಕೂ ಅಪವಾಧದಂತಿದೆ. ಹಾಡುಗಳು ಇಡೀ ಸಿನಿಮಾದ ಹೈಲೈಟು. ೧೭ ಚೈತ್ರದ ಹುಡುಗಿ... ಹಾಡು ಮತ್ತೆ ಅಮೃತವರ್ಷಿಣಿಯನ್ನು ನೆನಪಿಸುತ್ತೆ. ಇನ್ನು ನಾಯಕಿ ಹರಿಪ್ರಿಯಾ ಹಸಿರೆಲೆಯ ಮೇಲಿಂದ ಆಗಷ್ಟೇ ಜಿನುಗುತ್ತಿರುವ ಮಂಜಿನ ಹನಿಯಂತೇ ಇಷ್ಟವಾಗ್ತಾರೆ. ಅವಳ ನೋಟ, ಹಾವ-ಭಾವ ಎಲ್ಲವೂ ನಿತ್ಯಹರಿದ್ವರ್ಣ. ಆದರೆ ಆನಂದ್ ಮಾತ್ರ ಸುಮ್ಮನೆ ಮುಸಿ ಮುಸಿ ನಕ್ಕಾಗಷ್ಟೇ ಚೆನ್ನಾಗಿ ಕಾಣುತ್ತಾರೆ. ಹೊಸ ವಿಲನ್ ರೇಣು ಕೊಡುವ ಲುಕ್ಕು ಶಕ್ತಿ ಕಪೂರ್ ಥರವಾದರೂ ಮಾಡುವುದೆಲ್ಲಾ ಥೇಟ್ ಕರೀನಾ ಕಪೂರ್. ಅವಿನಾಶ್, ಪವಿತ್ರಾ ಲೋಕೇಶ್, ಭವ್ಯಾ ಎಲ್ಲರೂ ತಮ್ಮತನ ತೋರಿದ್ದಾರೆ.
ಮುಂದಾದರೂ ಮಂಜು ಒಳ್ಳೆಯ ತಂಡವನ್ನು ಕಟ್ಟಿಕೊಂಡರೆ ಒಂದೊಳ್ಳೆ ಮಧುರವಾದ ಸಿನಿಮಾ ಕೊಡಬಹುದೇನೋ....

ಪೂರ್ಣ ವಿ - ರಾಮ/ ಕಲಗಾರು

No comments: