ಅದೇ ಮಾದ, ಅದೇ ನಾದ, ಅದೇ ಸ್ವಾದ !
ನೈಂಟಿ ಎಣ್ಣೆ ಹಾಕಿದರೆ ತಾಕತ್ತು ಬರುತ್ತೆ. ಆಗ ಮಾತ್ರ ಕುಣಿಯೋಕೆ ಸಾಧ್ಯ. ಕೈನಲ್ಲಿ ಬಾಟಲ್ ಇರಬೇಕು. ಅದು ಇದ್ರೆ ಮಾತ್ರ ಮೀಟ್ರು ಮಗಾ ಎಂಬ ಅಲಿಖಿತ ಸಿದ್ದಾಂತ ಅವನದು. ಹೆಣದ ಮುಂದೆ ಹೆತ್ತವರು ಅಳುತ್ತಿದ್ದರೆ ಈತ ಮೈ ಮರೆತು ಸೊಂಟ ಕುಣಿಸುತ್ತಾನೆ. ಅದು ಅವನ ಹೊಟ್ಟೆಪಾಡು. ಊರಿಗೆ ಊರೇ ಮಲಗಿದ್ದಾಗ ಬಾರಲ್ಲಿ ಇವನ ಕಾರುಬಾರು. ಜತೆಗೊಬ್ಬ ಕ್ವಾಟ್ರು ಹಾಗೂ ಅವನ ಗ್ಯಾಂಗು.
ಆತನೇ ನಂದ. ಏನೂ ಅರಿಯದ ಅಬ್ಬೇಪಾರಿ. ಒಂಥರಾ ಲೂಸ್ ಮಾಡಿದ ಹಾಗೆ ಮಾಡುತ್ತಾನೆ. ಆರು ಕೊಟ್ಟರೆ ಫುಲ್ ಮರ್ಡರ್. ಮೂರು ಕೊಟ್ಟರೆ ಹಾಫ್ ಮರ್ಡರ್. ಅವ ಬೀದಿಗೆ ಬಿದ್ದವ. ಹೆತ್ತಮ್ಮ, ಅಪ್ಪನ ಕಾಟ ತಾಳಲಾರದೇ ಸ್ವರ್ಗ ಸೇರಿರುತ್ತಾಳೆ. ಅಪ್ಪ ಸಂಸಾರ ‘ದೂಡಲು’ ಮತ್ತೊಬ್ಬ ಬಿನ್ನಾಣಗಿತ್ತಿಯನ್ನು ಮದುವೆಯಾಗಿರುತ್ತಾನೆ. ಆಕೆಗೆ ಮಾಮೂಲಿ ಸವತಿ ಮತ್ಸರ. ನಂದನ ಮೇಲೆ ಎಲ್ಲಿಲ್ಲದ ತಾತ್ಸಾರ. ಆ ಕಂದನಿಗೆ ಶಾಲೆ ಕಲಿಯುವ ಆಸೆ. ಆದರೆ ಅಪ್ಪನಿಗೆ ಮಗನ ಕಂಡರೆ ನಿರಾಸೆ. ಚಿಕ್ಕಮ್ಮನಿಗೆ ತನ್ನ ಮಕ್ಕಳು ಮಾತ್ರ ಕಲಿಯಬೇಕೆಂಬ ದುರಾಸೆ. ಆತ ಐದನೇ ಕ್ಲಾಸು ಮುಗಿಸಿ ಶಾಲೆಗೆ ಸಲಾಂ ಹೊಡೆಯುತ್ತಾನೆ. ಪಡ್ಡೆ ಹುಡುಗರ ಜತೆ ಸೇರಿ ಊರೂರು ಅಲೆಯತ್ತಾನೆ. ಕುಡಿದು, ಕುಪ್ಪಳಿಸುತ್ತಾನೆ. ಅದೇ ಮುಖದಲ್ಲಿ ಮನೆ ಸೇರುತ್ತಾನೆ. ಅಪ್ಪ , ಚಿಕ್ಕಮ್ಮನಿಂದ ಹೊರದಬ್ಬಲ್ಪಡುತ್ತಾನೆ. ಹೊಟ್ಟೆಪಾಡಿಗಾಗಿ ಫೈನಾನ್ಸ್ ಹಣ ವಸೂಲಿ ಮಾಡುವ ಕೆಲಸಕ್ಕೆ ಸೇರುತ್ತಾನೆ.
ಆಗೊಬ್ಬ ಹುಡುಗಿ ಬರುತ್ತಾಳೆ. ಅವಳೇ ನಂದಿತಾ. ಈಗಷ್ಟೇ ಹದಿನಾರು ದಾಟಿರುತ್ತಾಳೆ. ಕಾಯಿಲೆ ಬಿದ್ದ ಅಮ್ಮನ ಜತೆಗಿರುತ್ತಾಳೆ. ನಂದನನ್ನು ಅಡ್ಡಾದಲ್ಲಿ ನೋಡುತ್ತಾಳೆ. ಸಹಾಯಹಸ್ತ ಬೇಡುತ್ತಾಳೆ. ಅಲ್ಲಿ ಇಲ್ಲಿ ತಿರುಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇತ್ತ ನಂದ ದುಡ್ಡಿಗಾಗಿ ನಂಬರ್ ಟು ಧಂದೆಗೆ ಇಳಿಯುತ್ತಾನೆ. ರೌಡಿ ದೇವರಾಜ್‌ನಿಂದ ಕ್ಯಾಟ್ ಚಂದ್ರನ ಕೊಲೆಗೆ ಸುಪಾರಿ ಪಡೆಯುತ್ತಾನೆ. ಕೊಲೆಗೆ ಸಂಚು ಹೂಡುತ್ತಾನೆ. ತನ್ನ ಅಡ್ಡಾಕ್ಕೆ ಕರೆತಂದು ಆತನನ್ನು ಅಡ್ಡಡ್ಡಾ ಸಿಗಿಯುತ್ತಾನೆ. ಅದನ್ನು ನಂದಿತಾ ನೋಡಿಬಿಡುತ್ತಾಳೆ. ಅವನ ಭಂಡತನವನ್ನು ಕಣ್ಣಾರೇ ಕಂಡು ಮನೆ ಖಾಲಿ ಮಾಡುತ್ತಾಳೆ.
ಇತ್ತ ಕ್ಯಾಟ್‌ಚಂದ್ರ ಮಾತ್ರ ಪವಾಡ ಸದೃಶವಾಗಿ ಪಾರಾಗಿಬಿಡುತ್ತಾನೆ. ನಂದನಿಗಾಗಿ ಹುಡುಕಾಡತೊಡಗುತ್ತಾನೆ. ಇತ್ತ ನಂದ ನಂದಿತಾಳನ್ನು ಹುಡುಕುತ್ತಾನೆ. ಅತ್ತ ನಮಕ್ ಹರಾಮ್ ಕೆಲಸ ಮಾಡಿದ ಎಂದು ರೌಡಿ ದೇವರಾಜ್ ನಂದನನ್ನು ಹುಡುಕಹತ್ತುತ್ತಾನೆ... ಮುಂದೆ... ಪಾತಕ ಲೋಕದಲ್ಲೊಂದು ಮೊಹಬ್ಬತ್ !
ಇದು ಈ ವಾರಬಂದ ನಂದ ನಂದಿತಾ ಚಿತ್ರದ ಒನ್‌ಲೈನ್ ಸ್ಟೋರಿ. ದುನಿಯಾದ ಲೂಸ್ ಮಾದನಾಗಿ ಗೆದ್ದಿದ್ದ ಯೋಗೀಶ್ ಇಲ್ಲಿ ನಂದನಾಗಿ ಬದಲಾಗಿದ್ದಾನೆ. ಆದರೆ ದುನಿಯಾದ ಹ್ಯಾಂಗೋವರ್ ಇರುವ ಕತೆಗೆ ಮತ್ತೆ ಜೋತು ಬಿದ್ದಿದಾನೆ. ಅದೇ ಅಡ್ಡಾ. ಅದೇ ರೌಡಿಪಾಳ್ಯ. ಅದೇ ಮಚ್ಚು, ಅದೇ ಲಾಂಗು. ಅದೇ ಬಾರು, ರಾತ್ರಿ ಹೊತ್ತಲ್ಲಿ ನಡೆಯುವ ಕಾರುಬಾರು... .ಅದೇ ಲೂಸ್ ಮಾದನ ಡೈಲಾಗ್‌ಗಳು. ಆದರೂ ಅವನ ಮಾತು ಕಣ್ಣು ಮುಚ್ಚಿಕೊಂಡು ಕೇಳಲು ಬಲು ಇಷ್ಟವಾಗುತ್ತೆ. ಏಕೆಂದರೆ ಚಿತ್ರದ ಸಂಭಾಷಣೆ ಹಾಗಿದೆ. ಏನೂ ಇಲ್ಲದಿದ್ದರೂ ಬರೀ ಡೈಲಾಗ್‌ಗಳಿಂದ ಹೇಗೆ ಇಡಿ ಚಿತ್ರಕತೆಯನ್ನು ತಳ್ಳಿಸಿಕೊಂಡು ಹೋಗಬಹುದು ಎಂಬುದನ್ನು ಮಗದೊಮ್ಮೆ ನಿರೂಪಿಸಿದ್ದಾರೆ ಮಂಜು ಮಾಂಡವ್ಯ . ಹಾಗಂತ ಯೋಗಿ ಎಲ್ಲಾ ಕಡೆ ಖಂಡಿತಾ ಸೋತಿಲ್ಲ. ಕುಣಿಯಲು ಕಾಲೆತ್ತಿದಾಗ, ಎದೆ ಮುಂದುಮಾಡಿಕೊಂಡು ಮೈಕೊಡವಿನಿಂತಾಗ, ಅಬ್ಬಬ್ಬಾ ಅದು ಯೋಗಿಯಿಂದ ಮಾತ್ರ ಸಾಧ್ಯ. ಆದರೆ ನಟನೆಯಲ್ಲಿ ಇನ್ನೂ ಟೈಟ್ ಆಗಬೇಕಿದೆ. ಎಲ್ಲಾ ಕಡೆ ಫುಲ್ ಟೈಟ್ ಆದವರಂತೇ ಆಡಿದರೆ ಜನ ಎಷ್ಟು ಹೊತ್ತು ಅಂತ ನೋಡುತ್ತಾರೆ ? ಅಮ್ಮಮ್ಮಾ ಅಂದರೆ ಮೊದಲಾರ್ಧದವರೆಗೆ... ಕೊನೆಕೊನೆಗೆ ಅದು ಅತಿರೇಕವೆನಿಸುತ್ತದೆ. ಹಾಗಂತ ಯೋಗಿಯೇ ನೇರ ಹೊಣೆ ಎಂದರೆ ಅದು ತಪ್ಪಾಗುತ್ತದೆ. ಅವ ಹೇಳಿದಂತೇ ಮಾಡುವವ. ಅವರಿಂದ ಕೆಲಸ ತೆಗೆಸಲು ನಿರ್ದೇಶಕ ವಿಜಯಕುಮಾರ್ ಇನ್ನಷ್ಟು ಹೆಣಗಾಡಿದ್ದರೆ ಅದರ ಕತೆಯೇ ಬೇರೆಯಾಗಿರುತ್ತಿತ್ತು.
ಕತೆಯದ್ದೂ ಅದೇ ಕತೆ. ಮೊದಲಾರ್ಧ ರಾಯರ ಕುದುರೆ. ಆದರೆ ಹೋಗ್ತಾ ಹೋಗ್ತಾ ಅದು ... ಆಗಿದೆ. ಇನ್ನು ನಾಯಕಿ ಶ್ವೇತಾ. ವಾಹ್...ಎನ್ನುವಷ್ಟೇನೂ ಇಲ್ಲ. ಆದರೆ ಅಯ್ಯಯ್ಯೋ ಎನ್ನುವಷ್ಟೂ ಇಲ್ಲ. ಕೊಟ್ಟ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಫ್ಯಾಮಿಲಿ ಲುಕ್‌ನ ಈ ಹುಡುಗಿ ಒಂದು ಆಂಗಲ್‌ನಲ್ಲಿ ಸಿಂಧು ಮೆನನ್‌ಳನ್ನು ನೆನಪಿಸುತ್ತಾಳೆ. ಎಮಿಲಿ ಸಂಗೀತ ಜೋರಾಗಿದೆ. ಬರಿ ಸ್ಟೆಪ್ ಹಾಕೋ ಸಂಗೀತವಷ್ಟೇ ಇದ್ದರೆ ಅದು ಎಲ್ಲರಿಗೂ ಇಷ್ಟವಾಗೊಲ್ಲ. ಜತೆಗೊಂದು ಮೆಲೋಡಿ ಕೂಡ ಇದ್ದರೆ ಅದಕ್ಕೆ ಸಿಗುವ ಕಿಮ್ಮತ್ತೇ ಬೇರೆ. ಆದರೂ ಜಿಂಕೆ ಮರೀನಾ... ಹಾಡು ಕೇಳಲಾರೆ ಎನ್ನುವಂತಿಲ್ಲ. ಮ್ಯಾಥ್ಯೂ ರಾಜನ್ ಕ್ಯಾಮೆರಾ, ಡಿಫರೆಂಟ್ ಡ್ಯಾನಿ ಸಾಹಸ ಎಲ್ಲವೂ ಸೇರಿ ಯೋಗೀಶನ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿವೆ. ಅಂದಹಾಗೆ ಇದೊಂದು ಕೌಟುಂಬಿಕ ಚಿತ್ರವೂ ಹೌದು. ಯೋಗೀಶನ ನಿಜ ಜೀವನದ ಕುಟುಂಬ, ಸ್ನೇಹಿತ ಬಳಗ, ಕೆಲವು ಕಡೆ ಸುಖಾ ಸುಮ್ಮನೆ ಬಂದುಹೋಗ್ತಾರೆ..!
- ಪೂರ್ಣ ವಿ-ರಾಮ / ಕಲಗಾರು
No comments:
Post a Comment