Sunday, March 23, 2008



ರಕ್ತದೋಕುಳಿಯಲ್ಲಿ ಮಿಂದೆದ್ದ ಗೂಳಿ !

ನಟ ಸುದೀಪ್ ಲಾಂಗ್ ಗ್ಯಾಪಿನ ನಂತರ ಮತ್ತೆ ಬಂದಿದ್ದಾರೆ.
ಜತೆಗೆ ಫಳಪಳಿಸುವ ಲಾಂಗ್‌ಒಂದನ್ನು ಲಂಗುಲಗಾಮಿಲ್ಲದೇ ತಿರುತಿರುಗಿಸುತ್ತಾ ಬಂದಿದ್ದಾರೆ.
ಇತ್ತೀಚೆಗೆ ಬರೀ ಕ್ಲಾಸ್ ಪ್ರೇಕ್ಷಕರ ಅಭಿರುಚಿಗೆ ಸರಿಹೊಂದುವ ಪಾತ್ರ, ಚಿತ್ರಗಳನ್ನೇ ಮಾಡಿಕೊಂಡಿದ್ದ ಅವರು ಮತ್ತೊಮ್ಮೆ ಕಿಚ್ಚನ ವರಸೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂನಿಂದ ಮನೆಮಾತಾಗಿದ್ದ ಅವರು, ಈಗ ಮತ್ತದೇ ಮುಖವಾಡ ಧರಿಸಿದ್ದಾರೆ. ಗುಟ್ಟಾಗಿ ಘೋರಿ ತೋಡುವ 'ಗೂಳಿ’ಯಾಗಿ ಬದಲಾಗಿದ್ದಾರೆ. ಮಾತೆತ್ತಿದರೆ ಮಾಂಜಾಕೊಡುವ, ಸೊಲ್ಲೆತ್ತಿದರೆ ಸುಡಗಾಡು ತೋರಿಸುವ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಹಲವು ವರ್ಷಗಳಿಂದ ಹಸಿದು ಬಸವಳಿದಿದ್ದ ತಮ್ಮ ಅಭಿಮಾನಿಗಳಿಗೆ "ಮೃಷ್ಟಾನ್ನ ಭೋಜನ’ ಉಣಬಡಿಸಿದ್ದಾರೆ. ಮಚ್ಚಿನ "ರುಚಿ’ ತೋರಿಸಿದ್ದಾರೆ.

ಗೂಳಿ ಬಂತು ಗೂಳಿ... ಆತ ದೊಡ್ಡ ರೌಡಿ. ಹೆಸರು ಹೂಳಿ. ಅವನ ಹಿಂದೆ ದೊಡ್ಡದೊಂದು ಠೋಳಿ. ಹೆಸರು ನೈಂಟಿ, ಕ್ವಾಟ್ರು, ಮೀಟ್ರು...ಎಲ್ಲೆಲ್ಲಿ ಯಾವಯಾವ ಹತಾರ ಮಡಗಿರುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಮಾತೆತ್ತಿದರೆ ಮಾಂಜಾ. ಸೊಲ್ಲೆತ್ತಿದರೆ ಸುಡಗಾಡು. ಇಡೀ ಬೆಂಗಳೂರಿನಲ್ಲಿ ಅವರದ್ದೇ ಹಾವಳಿ. ಗೂಳಿ ಬಂದ ಎಂದರೆ ಅಲ್ಲೊಂದಿಷ್ಟು ಜನ ಹೆಣವಾಗೋದು ಗ್ಯಾರಂಟಿ. ಕೈಲೊಂದು ಮಾರುದ್ದ ಲಾಂಗ್ ಇದ್ದರೆ ಸಾಕು, ಅದು ಯಾರ್‍ಯಾರನ್ನು ತಿವಿಯುತ್ತೋ ಅಂಥ ಆ ದೇವರಿಗೇ ಗೊತ್ತು!
ಶಿವಾಜಿನಗರದ ಫಯಾಜ್, ಮತ್ತಿ ಸೀನ, ಶ್ರೀರಾಂಪುರದ ಸೆಲ್ವ... ಗೂಳಿಯ ಎದುರಾಳಿಗಳು. ಅವರದ್ದೂ ಒಂದೇ ಸಿದ್ಧಾಂತ- ಹೊಡಿ, ಬಡಿ, ಕಡಿ... ಅವರು ಯಾವುದಕ್ಕೂ ರೆಡಿ. ಗೂಳಿಯ ತಂಟೆಗೆ ಹೋಗೋದು ಸುಖಾಸುಮ್ಮನೇ ಲತ್ತೆ ತಿನ್ನೋದು.

ಆಗೊಬ್ಬ ರಮ್ಯಾ ಎಂಬ ಬೆಡಗಿ ಬರುತ್ತಾಳ. ಆಕೆ ಹೈಟೆಕ್ ಹುಡುಗಿ. ಇದ್ದ ಇಬ್ಬರು ಅಣ್ಣಂದಿರಿಗೆ ಅವಳೇ ಸರ್ವಸ್ವ. ಅಕಸ್ಮಾತ್ ಗೂಳಿಯನ್ನು ಭೇಟಿಯಾಗುತ್ತಾಳೆ. ಅವನ ಸ್ಟೈಲಿಗೆ, ಒರಟುತನಕ್ಕೆ ಮರುಳಾಗುತ್ತಾಳೆ. ಅವನ ನಿಷ್ಕಲ್ಮಶ ಹೃದಯಕ್ಕೆ ಮಾರುಹೋಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಅವ ಭೂಗತಪಾತಕಿ ಎಂದು ಗೊತ್ತಾಗಿಯೂ ಅದನ್ನೇ ಮಾಡುತ್ತಾಳೆ. ಅವನನ್ನೇ ಬದಲಿಸುವ ಪ್ರಯತ್ನ ಮಾಡುತ್ತಾಳೆ. ಗೂಳಿಯ ವಿರೋಧಿಗಳ ಕೈಗೆ ಸಿಕ್ಕಿ ನಲುಗುತ್ತಾಳೆ. ಇನ್ನೇನು ಗೂಳಿ ಬದಲಾಗಿ, ಗೊಸ ಬಾಳಿಗೆ ಅಡಿಯಿಡಬೇಕು ಎನ್ನುವಷ್ಟರಲ್ಲಿ ಮತ್ತೆ ಭೂಗತ ಜಗತ್ತು ಕೈಬೀಸಿ ಕರೆಯುತ್ತೆ... ಮುಂದೈತೆ ಗೂಳಿಯ ಹೋಳಿ ಹಬ್ಬ.
ಇದು ಗೂಳಿ ಚಿತ್ರದ ಕೇವಲ ಸ್ಯಾಂಪಲ್ ಅಷ್ಟೇ. ಇನ್ನಷ್ಟು ರಕ್ತಪಾತ, ಕೊಲೆ, ಸುಲಿಗೆ, ರಕ್ತ ಸಿಕ್ತ ಹೋಳಿಹಬ್ಬ ನೋಡುವ ಹಂಬಲವಿದ್ದರೆ ಗೂಳಿಯ ಬಳಿ ಬನ್ನಿ. ಅಂಥದ್ದೊಂದು 'ಭಯಂಕರ ಪ್ರಾತ್ಯಕ್ಷಿಕೆ’ಯನ್ನು ನಿಮಗೆ ನೀಡಿದ್ದಾರೆ ನಿರ್ದೇಶಕ ಪಿ. ಸತ್ಯಾ. ಎದುರಾಳಿಗಳನ್ನು ಹೇಗೆ ಅಟ್ಟಾಡಿಸಿಕೊಂಡು ಹೋಗಿ ಅಡ್ಡಡ್ಡಾ ಸಿಗಿಯಬೇಕು, ಎಲ್ಲೆಲ್ಲಿ ತಿವಿದರೆ ಬೇಗೆ ಸಾಯುತ್ತಾರೆ ಎಂಬುದನ್ನು ಮೊದಲಾರ್ಧದಲ್ಲಿ ಚಾಚೂತಪ್ಪದೇ ಅವರು ವಿವರಿಸಿದ್ದಾರೆ. ರೌಡಿಸಂ ಬ್ಯಾಡ, ಭೂಗತ ಲೋಕ ಅಷ್ಟು ಸುಲಭವಲ್ಲ ಎಂಬುದನ್ನು ಒಂದು 'ಅದ್ಬುತ ಸಾಕ್ಯಚಿತ್ರ'ದಂತೇ ಹೇಳಲು ಪ್ರಯತ್ನಿಸಿ ಎಲ್ಲೋ ಒಂದುಕಡೆ ಎಡವಿದ್ದಾರೆ. ಬರೀ ಹಿಂಸಾತ್ಮಕ ದೃಶ್ಯಗಳಿಗೇ ಒತ್ತುಕೊಟ್ಟು ಇಡೀ ಚಿತ್ರಕ್ಕೆ ಸಿಗಬೇಕಾದ ಕಿಮ್ಮತ್ತಿಗೇ ಕಪ್ಪುಚುಕ್ಕೆ ಇಟ್ಟಿದ್ದಾರೆ. ಆದರೆ ಅಯ್ಯಯ್ಯೋ ಇದೇನಪ್ಪಾ "ಬರೀ ಹೊಡೆದಾಟ’ಎಂದುಕೊಳ್ಳುತ್ತಿದ್ದಂತೇ ಮಧ್ಯಮಧ್ಯ ಬರುವ ಕೆಲವು ಹಾಡುಗಳು ಕೆಲಸಮಯ ಮುದ ನೀಡುತ್ತವೆ. ಸುಮ್ ಸುಮ್ನೆಯಾಕೋ.. ಕದ್ದು ಕದ್ದು ನನ್ನ ನೋಡೋ... ಹಾಡುಗಳು ಕೊನೆವರೆಗೂ ನಮ್ಮನ್ನೇ ಹಿಂಬಾಲಿಸುತ್ತವೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ಗೆ ಉತ್ತಮ ಭವಿಷ್ಯವಿದೆ. ಸಾಹಸ ನಿರ್ದೇಶಕ ಪಳನಿರಾಜ್ ಕೂಡ ಪ್ರತಿ ಫ್ರೇಮ್‌ನಲ್ಲೂ ಫಳಫಳಿಸಿದ್ದಾರೆ.

ಆದರೆ ನಟಿ ಮಮತಾ ಮೋಹನ್‌ದಾಸ್ ಮಾತ್ರ ಬೆಳ್ಳಗಿರೋದೆಲ್ಲಾ ಹಾಲಲ್ಲಾ ಎಂಬುದನ್ನು ನಿರೂಪಿಸಿದ್ದಾರೆ. ತಮ್ಮ ಮಾತಿಗೂ ಅಭಿನಯಕ್ಕೂ ಒಂದಕ್ಕೊಂಡು ಸಂಬಂಧವೇ ಇಲ್ಲವೇನೋ ಎಂಬಂತೇ ಅವರ ಅಭಿನಯ ಸಪ್ಪೆಸಪ್ಪೆ. ಕಿಶೋರ್, ಭವ್ಯ,
ಸುದೀಪ್ ಎಲ್ಲೂ ಸೋತಿಲ್ಲ. ಬದಲಾಗಿ ಇನ್ನಷ್ಟು ಮಾಗಿದ್ದಾರೆ. ತಮ್ಮ ಸೂಪರ್‌ಫಾಸ್ಟ್ ಡೈಲಾಗ್‌ಗಳಿಂದ "ಗೂಳಿ’ಗೆ ಮತ್ತಷ್ಟು ಜೀವತುಂಬಿದ್ದಾರೆ. ಜತೆಗೆ ಚಿತ್ರದ ಫಟಾಫಟ್ ಸಂಭಾಷಣೆ ಕೂಡ ಗೂಳಿಗೆ ಇನ್ನಷ್ಟು ಓಟ ನೀಡಿದೆ. ಒಟ್ಟಾರೆ ಇದೊಂದು ಅಪ್ಪಟ ಮಾಸ್ ಚಿತ್ರವಂತೂ ಹೌದು. ಕ್ಲಾಸ್ ಸಿನಿಮಾ ಎನ್ನಲು ಗೂಳಿಯ ಕೈನಲ್ಲಿರುವ ಇಷ್ಟುದ್ದದ ಲಾಂಗು ಅಡ್ಡಗೋಡೆಯಾಗಿ ನಿಂತಿದೆ!

ಪೂರ್ಣ ವಿರಾಮ / ಕಲಗಾರು

No comments: