Monday, May 12, 2008



ತಾಯಿಗೆ ಸರಿಸಾಟಿ ಯಾರು?

ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಧಿಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.

ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.

ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ?
ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ !

ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.

ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.

ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ !

ಪೂರ್ಣ ವಿ-ರಾಮ / ಕಲಗಾರು

No comments: