ಎಲ್ಲ ತತ್ತ್ವದೆಲ್ಲೆ ಮೀರಿ...
ಇಲ್ಲಿರುವ ರೇಖಾಚಿತ್ರವನ್ನು ಸುಮ್ಮನೆ ಗಮನಿಸಿ. ಅದನ್ನು ಬರೆಯುವುದು ನೋಡಿದಷ್ಟು ಸುಲಭವಲ್ಲ. ಈ ಬಾಕ್ಸ್‌ಅನ್ನು ಈಗಲೇ ಬರೆದು ಬಿಸಾಡಬಹುದು ಎಂದುಕೊಂಡರೆ ಅದು ಶುದ್ಧ ತಪ್ಪು. ಅದಕ್ಕೆ ಒಂದು ಕಂಡೀಷನ್ ಇದೆ. ಒಮ್ಮೆ ಪೆನ್ನನ್ನು ಪೇಪರ್ ಮೇಲೆ ಒತ್ತಿದರೆ ಬಾಕ್ಸ್ ಮಾಡಿ ಮುಗಿಸುವವರೆಗೂ ಪೆನ್ ಎತ್ತಬಾರದು. ಒಂದು ಗೆರೆ ಮೇಲೆ ಮತ್ತೊಂದು ಬಾರಿ ತಿದ್ದಬಾರದು. ಒಟ್ಟಾರೆ ಒಂದು ಬಾಕ್ಸ್ ಅಂತೂ ಆಗಲೇಬೇಕು. ಅದು ಹಾಗಾಗಬೇಕಾದರೆ ನೀವು ಈ ರೀತಿಯೇ ಗೆರೆ ಎಳೆಯಬೇಕು. ಎ-)ಇ-)ಬಿ-)ಸಿ-)ಡಿ-)ಇ-)ಸಿ-)ಎ ಮೂಲಕ ಹಾದುಹೋಗಿ ‘ಬಿ’ನಲ್ಲಿ ಕೊನೆಗೊಳ್ಳಬೇಕು. ಆದರೆ ಬಾಕ್ಸ್ ಮಾಡಬೇಕು ಎಂದಾಗ ನೀವು ಏನು ಮಾಡುತ್ತೀರಿ? ಬರೀ ‘ಎ-ಬಿ-ಸಿ-ಇ’ನಲ್ಲೇ ಪಝಲ್ ಮುಗಿಸಲು ಪ್ರಯತ್ನಿಸುತ್ತೀರಿ. ಕೊನೆಗೆ ಸೋತು ಸುಣ್ಣವಾಗುತ್ತೀರಿ. ಅಲ್ಲಿಂದ ಹೊರತಾಗಿ ‘ಡಿ’ಗೆ ಹೋಗಿ ವಾಪಾಸ್ ಬರಬಹುದು ಎಂಬುದನ್ನು ಮಾತ್ರ ಯೋಚಿಸುವುದಿಲ್ಲ. ಅದೇರೀತಿ ನಮ್ಮ ಬದುಕು. ನಾವು ಇಲ್ಲಿಯೇ ಇದ್ದು ಎಲ್ಲವನ್ನೂ ಯೋಚಿಸುತ್ತೇವೆ. ಎಷ್ಟೇ ಹೆಣಗಾಡಿದರೂ ಬದುಕಿನ ಬಾಕ್ಸನ್ನು ಕ್ರಮಬದ್ಧವಾಗಿ ಪೂರ್ತಿಮಾಡಲಾಗುವುದಿಲ್ಲ. ಈ ಚೌಕಟ್ಟಿಗಿಂತ ಹೊರತಾದ ಇನ್ನೊಂದು ಪ್ರಪಂಚವಿದೆ ಎಂಬುದನ್ನು ಮರೆತು ಇಲ್ಲಿಯೇ ಇರುತ್ತೇವೆ; ಇಲ್ಲಿಯೇ ಗಿರುಕಿ ಹೊಡೆದು ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗುತ್ತೇವೆ. ‘ಇಲ್ಲಿ’ ಇದ್ದು ಏನು ಸಾಸಲು ಸಾಧ್ಯ? ‘ಇಲ್ಲಿ’ನ ಮಹತ್ವ ಏನು ಎಂಬುದು ಗೊತ್ತಾಗಬೇಕಾದರೆ ‘ಅಲ್ಲಿ’ಗೆ ಹೋಗಬೇಕು. ಅಲ್ಲಿ ನಿಂತು ಇಲ್ಲಿನದನ್ನು ನೋಡಬೇಕು. ಆಗ ಅವೆರಡರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಸ್ವಾಮಿ ವಿವೇಕಾನಂದರು ನಂಬಿದ್ದು ಇದೇ ಸಿದ್ಧಾಂತವನ್ನು. ಅವರು ಭಾರತದ ರಾಯಭಾರಿಯಂತೆ ಶಿಕಾಗೋಗೆ ಹೋದರು. ಅಲ್ಲಿ ನಿಂತು ಭಾರತದ ಭವಿಷ್ಯದ ಬಗ್ಗೆ ಚಿಂತಿಸಿದರು; ಮಂಥಿಸಿದರು. ಕೊನೆಗೆ ಅವರೊಬ್ಬ ವಿಶ್ವಮಾನವರಾದರು !ಅದೇ ವಿಶ್ವಮಾನವ ಸಂದೇಶಕ್ಕೆ ಕಾವ್ಯರೂಪ ಕೊಟ್ಟವರು ಕನ್ನಡದ ಮೇರುಕವಿ ಕುವೆಂಪು. ಅವರ ಓ ನನ್ನ ಚೇತನ / ಆಗು ನೀ ಅನಿಕೇತನ/ ರೂಪ ರೂಪಗಳನು ದಾಟಿ/ ನಾಮಕೋಟಿಗಳನು ಮೀಟಿ/ ಎದೆಯಬಿರಿಯೆ ಭಾವ ದೀಟಿ/ ಓ ನನ್ನ ಚೇತನ ಆಗು ನೀ ಅನಿಕೇತನ... ಎಂಬ ಕವಿತೆ ಅಲ್ಲಲ್ಲ ದೃಶ್ಯಕಾವ್ಯ ಸಾರಿದ್ದೂ ಇದನ್ನೇ. ಜಾತಿ ಧರ್ಮ ಎಂಬ ಗೊಡ್ಡು ಸಿದ್ಧಾಂತಕ್ಕೆ ತಿಲಾಂಜಲಿ ಹಾಡಿ ಎಂದು ಅವರು ಸಾರಿಸಾರಿ ಹೇಳಿದರು. ಎಲ್ಲ ತತ್ತ್ವಗಳ ಗಡಿ ದಾಟಿ ಬನ್ನಿ ಎಂದು ಪ್ರತಿಯೊಬ್ಬ ಭಾರತೀಯರನ್ನು ಬಡಿದೆಚ್ಚರಿಸಿದರು. ಕೊನೆಗೆ ರಾಷ್ಟ್ರಕವಿಯಾದರು! ಕಮಲ್‌ಹಾಸನ್ ಅಭಿನಯದ ‘ದಶಾವತಾರಂ’ ಚಿತ್ರವೂ ಇದೇ ವಿಷಯದ ಮೇಲೆ ಆಧರಿಸಿ ನಿಂತಿದೆ. ಅದೊಂದು ಜಾಗತಿಕ ವಿಷಯ ಪ್ರತಿಪಾದಿಸುವ ಚಿತ್ರ. ಅಲ್ಲಿ ಒಬ್ಬ ವ್ಯಕ್ತಿ, ಕುಟುಂಬ, ಸಮಾಜ, ಜಾತಿ, ಮತ, ವರ್ಗ, ಭಾಷೆ, ಧರ್ಮ... ಈ ಎಲ್ಲ ವಿಷಯಗಳಿಗೂ ಮಿಗಿಲಾದ ಒಂದು ಹೊಸ ಕಾನ್ಸೆಪ್ಟ್ ಇದೆ. ಇದು ಮಾಸ್ ಚಿತ್ರವಂತೂ ಖಂಡಿತ ಅಲ್ಲ. ಒಟ್ಟಾರೆ ಹೇಳುವುದಾದರೆ ಇದು ಕ್ಲಾಸ್ ಚಿತ್ರ. ಅಲ್ಲಿ ಕಮಲ್ ಹೇಳಹೊರಟಿರುವುದು ವಿಶ್ವಮಾನವ ಸಂದೇಶವನ್ನು. ಹತ್ತು ಪಾತ್ರಗಳಲ್ಲಿ ಅವರು ಹತ್ತಾರು ವರ್ಗಗಳನ್ನು, ಹತ್ತಾರು ದೇಶ/ಭಾಷೆಗಳನ್ನು ಪ್ರತಿನಿಸುತ್ತಾರೆ. ಹತ್ತಾರು ಜಾತಿ/ಧರ್ಮಗಳನ್ನು ಪ್ರತಿಜ್ವಲಿಸುತ್ತಾರೆ. ಒಬ್ಬ ನಟ ಒಂದೇ ಚಿತ್ರದಲ್ಲಿ ಹತ್ತು ಪಾತ್ರಗಳನ್ನು ನಿರ್ವಹಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ತಕ್ಕ ಗಟ್ಟಿತನ, ಮ್ಯಾನರಿಸಂ ಬೇಕು. ಆದರೂ ಅವೆಲ್ಲವನ್ನೂ ಒಟ್ಟಿಗೆ, ಒಮ್ಮೆಲೇ ಅಭಿನಯಿಸಲು ಕಮಲ್‌ಹಾಸನ್‌ನಿಂದ ಮಾತ್ರ ಸಾಧ್ಯ.ಮೊದಲನೆಯದ್ದು ಒಬ್ಬ ವಿಷ್ಣು ಭಕ್ತನ ಪಾತ್ರ. ಅಲ್ಲಿ ಆತ ಹೇಳ ಹೊರಟಿದ್ದು ಒಟ್ಟಾರೆ ಜಾತಿ ಸಂಘರ್ಷವನ್ನು. ಆನಂತರದ್ದು ವಿಜ್ಞಾನಿಯ ಪಾತ್ರ. ಈ ಪಾತ್ರ ಇಂದಿನ ತಂತ್ರಜ್ಞಾನ, ಮನುಷ್ಯನ ಬುದ್ಧಿಮತ್ತೆಯನ್ನು ಪ್ರತಿಧ್ವನಿಸುತ್ತದೆ. ಜತೆಗೆ ನಾಸ್ತಿಕತೆಯನ್ನೂ. ಅದಕ್ಕೆ ತದ್ವಿರುದ್ಧವಾದ ನಾಯಕಿ. ಆಕೆ ದೈವಭಕ್ತೆ. ಚಿತ್ರದ ಕೊನೆಯಲ್ಲಿ ಆಕೆ ಕೇಳುತ್ತಾಳೆ, ‘ಅಲ್ಲ ನೀನು ಈಗಲೂ ಏಕೆ ದೇವರು ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತೀಯಾ?’ ಅದಕ್ಕೆ ವಿeನಿ ಕೊಡುವ ಉತ್ತರ- ‘ನಾನು ಎಲ್ಲಿ ಹಾಗೆ ಹೇಳಿದೆ? ನಾನು ಹೇಳಿದ್ದು ದೇವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅಷ್ಟೇ !’ ಈ ಪಾತ್ರದಲ್ಲಿ ದೇಶಭಕ್ತಿಯಿದೆ. ಜತೆಗೆ ವಿದ್ರೋಹಕ ಕೃತ್ಯದ ವಿರುದ್ಧದ ಸಮರವಿದೆ. ಜಾಗತೀಕರಣ ಎಂಬ ಭೂತ ಕೊಡುಗೆಯಾಗಿ ನೀಡುವ ಭವಿಷ್ಯದ ಚಿತ್ರಣವಿದೆ. ನಂತರದ್ದು ವಿಲನ್ ಪಾತ್ರ. ಇದು ಇಂದು ನಡೆಯುತ್ತಿರುವ ಭ್ರಷ್ಟಾಚಾರವನ್ನು ಅಭಿವ್ಯಕ್ತಿಗೊಳಿಸುತ್ತದೆ. ದುಷ್ಟ ಶಕ್ತಿಯೊಂದು ಹಣಕ್ಕಾಗಿ ಯಾವ ದೇಶ, ರಾಜ್ಯಕ್ಕಾದರೂ ನುಗ್ಗಿ ಎಲ್ಲವನ್ನೂ ಸರ್ವನಾಶ ಮಾಡಬಲ್ಲದು ಎಂಬ ಸಂದೇಶವಿದೆ. ಅಷ್ಟೊತ್ತಿಗೆ ಬರುತ್ತಾನೆ ಜಾರ್ಜ್ ಬುಷ್(ಮತ್ತೊಂದು ಪಾತ್ರ). ಈತ ನಾನಾ ರಾಷ್ಟ್ರಗಳ ಹಿರಿಯಣ್ಣ ಅಮೆರಿಕದ ಅನಾಯಕ. ಆ ಪಾತ್ರದಲ್ಲಿ ಕಮಲ್ ಬುಷ್‌ಗೇ ಸೆಡ್ಡು ಹೊಡೆದಿದ್ದಾರೆ. ಅಷ್ಟಾದ ಮೇಲೆ ಬರುವವನು ಪೊಲೀಸ್ ಅಕಾರಿ ರಾಮದಾಸ್ ನಾಯ್ಡು (ಇನ್ನೊಂದು ಪಾತ್ರ). ಆತ ಸಮಾಜದಲ್ಲಿನ ವರ್ಗಗಳನ್ನು ಪ್ರತಿನಿಸುತ್ತಾನೆ. ನಂತರದ್ದು ಖಲೀಫ ಹಾಗೂ ದಲಿತ ನಾಯಕ ವಿನ್ಸೆಂಟ್‌ನ ಪಾತ್ರ. ಈ ಎರಡೂ ಪಾತ್ರಗಳು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಪ್ರತಿಬಿಂಬ. ಅದರಲ್ಲೂ ವಿನ್ಸೆಂಟ್ ಆಗಿ ಕಮಲ್‌ಹಾಸನ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಇನ್ನೊಂದು ಕುಂಗ್ ಫು ಥರದ ಪಾತ್ರ. ಆತ ರಕ್ತ ಸಂಬಂಧಗಳ ಪ್ರತೀಕ. ತನ್ನ ತಂಗಿಯ ಕೊಲೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ದೇಶವನ್ನೇ ಬಿಟ್ಟು ಬರುತ್ತಾನೆ. ಸಂಬಂಧಗಳಿಗೆ ಚೌಕಟ್ಟಿಲ್ಲ ಎನ್ನುವುದು ಆ ಪಾತ್ರದ ತಾತ್ಪರ್ಯ. ಇನ್ನೊಂದು ಅವತಾರ್‌ಸಿಂಗ್ ಪಾತ್ರ. ಆತ ಸಿಖ್ ಸಮುದಾಯದ ಪ್ರತೀಕ. ಉತ್ತಮ ಹಾಡುಗಾರ. ಆದರೆ ಕ್ಯಾನ್ಸರ್ ಭೂತ ಅವನಲ್ಲಿ ಪರಕಾಯ ಪ್ರವೇಶ ಮಾಡಿರುತ್ತೆ. ಆತ ಬದುಕು ಹಾಗೂ ಸಾವಿನ ನಡುವೆ ಇರುವ ಅಂತರಕ್ಕೆ ಹಿಡಿದ ಕೈಗನ್ನಡಿ. ಸಾವಿನ ದವಡೆ ತಲುಪಿದ ಆತ ಕೊನೆಗೂ ಬದುಕಿಬರುತ್ತಾನೆ! ಇನ್ನೊಂದು ಪ್ರಮುಖ ಪಾತ್ರ ಅಜ್ಜಿಯದ್ದು. ಆಕೆ ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಾಯಭಾರಿ... ಹೀಗೆ ಇಡೀ ಕತೆ ನಾನಾ ಆಯಾಮಗಳಲ್ಲಿ ಬಿತ್ತರವಾಗುತ್ತಾ ಹೋಗುತ್ತದೆ. ಒಟ್ಟಾರೆ ಕಮಲ್ ಹೇಳುವ ಕೊನೆಯ ಸಂದೇಶ ಅದು ವಿಶ್ವಮಾನವ ಸಂದೇಶ!
ಪೂರ್ಣ ವಿ-ರಾಮ / ಕಲಗಾರು
1 comment:
ಕಮಲಹಾಸನ್ ಒಬ್ಬ ಶ್ರೇಷ್ಠ ನಟ. ಇಷ್ಟೆಲ್ಲಾ ಪಾತ್ರಗಳನ್ನು ಹೆಣೆದ ಕತೆ ಹ್ಯಾಗಿದೆಯೊ?
Post a Comment