Thursday, January 29, 2009

ಆಪ್ತಮಿತ್ರನ ಜತೆ ಆಪ್ತ ಸಂವಾda...



ತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮಾತಿಗೆ ಸಿಕ್ಕಿದ್ದರು. ಕನ್ನಡ ಕುಳ್ಳ ಎಂದೇ ಖ್ಯಾತರಾಗಿರುವ ಅವರು ಜತೆಗೆ ಮಾತಿಗೆ ಕುಳಿತರು. ಅಲ್ಲಿ ಆಯ್ದ ಕೆಲ ಪ್ರಶ್ನೋತ್ತರಗಳ ರೂಪ ನಿಮ್ಮ ಮುಂದಿದೆ...


ಕನ್ನಡದಲ್ಲಿ ರೀಮೇಕ್ ಸಿನಿಮಾ ಅನಿವಾರ್ಯವಾ?

ಸ್ವಾಮಿ, ಈಗ ಕಾಲ ಬದಲಾಗಿದೆ. ರಾಜ್‌ಕಪೂರ್, ಸುನಿಲ್ ದತ್... ಅಷ್ಟೇ ಏಕೆ, ಇತ್ತೀಚೆಗೆ ಅಮೀರ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಘಜನಿ ಎಷ್ಟು ಕೋಟಿ ಕಮಾಯಿಸಿದೆ ಗೊತ್ತಾ? ಪ್ರಚಾರಕ್ಕೆ ರಸ್ತೆಯಲ್ಲಿ ನಿಂತು ಕ್ಷೌರ ಮಾಡಿದ್ದಾರೆ. ಆ ಮೇಕು ಈ ಮೇಕು ಎಂಬುದು ಮುಖ್ಯವಲ್ಲ, ಮನರಂಜನೆ ಬೇಕು. ಅದು ಎಲ್ಲಿ ಸಿಕ್ಕರೆ ಏನಂತೆ? ನಾನಂತೂ ಮುಲಾಜಿಲ್ಲದೇ ಮಾಡುತ್ತೇನೆ. ಹಾಗಂತ ಸ್ವಮೇಕ್ ಮಾಡುವುದಿಲ್ಲ ಎಂದಲ್ಲ.
ನಿಮ್ಮನ್ನು ರೀಮೇಕ್ ಸರದಾರ ಅಂತಾರಂತೆ?
ಅನ್ನಲಿ ಬಿಡಿ, ನಾನು ಮುಳುಗಿ ಹೋಗುವ ಕಾಲದಲ್ಲಿ ಅಂಬಲಿ ಉಣಿಸಿದ್ದು ಆಪ್ತಮಿತ್ರ. ಆದರೆ ಅಷ್ಟಕ್ಕೇ ನಾನು ಸೀಮಿತವಾಗಿಲ್ಲ. ನಿರ್ದೇಶನ, ನಿರ್ಮಾಣ, ನಟನೆ ಎಲ್ಲ ಮಾಡಿದ್ದೇನೆ. ೧೮ ವರ್ಷ ಅನ್ನಕ್ಕೂ ಗತಿ ಇಲ್ಲದೆ ನಕ್ಷತ್ರ ಎಣಿಸಿದ್ದೇನೆ. ನಂತರ ಮತ್ತೆ ಭಲೇ ಕುಳ್ಳ ಎನಿಸಿಕೊಂಡೆ. ಈಗ ಸುಖವಾಗಿದ್ದೇನೆ, ಮತ್ತೆ ಸಿನಿಮಾ ಮಾಡುತ್ತೇನೆ. ಆದರೆ ಇನ್ನೊಂದು ಆಪ್ತಮಿತ್ರ ಅಂತೂ ಅಲ್ಲ. ಎಲ್ಲವನ್ನೂ ಮಾಡಬಹುದು, ಆದರೆ ಸೌಂದರ್ಯಾ!?!

ಆಪ್ತಮಿತ್ರ ಆಗಿ ೫ ವರ್ಷ ಆಯ್ತು, ಗ್ಯಾಪ್ ಏಕೆ?
ಆ ಪ್ರಶ್ನೆಯನ್ನು ಇತ್ತೀಚಿನ ನಾಯಕರಿಗೆ ಕೇಳಿ. ನನಗೆ ಸಿನಿಮಾ ಮಾಡಲು ಇಷ್ಟು ವರ್ಷ ಅಂತರ ಬೇಕಿರಲಿಲ್ಲ. ಐವತ್ತು ವರ್ಷದಿಂದ ಅದೇ ಬದುಕು. ಈಗಿನವರು ಬಹಳ ‘ಬುದ್ದಿವಂತ’ರು. ಎಲ್ಲಿ ಕಾಲ್‌ಶೀಟ್ ಕೇಳಿ, ಕಿರಿಕಿರಿ ಮಾಡುತ್ತಾರೋ ಎಂದು ಫೋನ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಾರೆ. ಕಡೇ ಪಕ್ಷ ವಿಷ್ಣುವರ್ಧನ್ ಆದರೂ ಯೋಚಿಸಬಹುದಿತ್ತು. ಎಲ್ಲಿರಿಗೂ ‘ಸ್ವಾಭಿಮಾನ’. ಅದೇ ಮಲಯಾಳಂ ಚಿತ್ರರಂಗ ನೋಡಿ... ಇತ್ತೀಚೆಗೆ ದಿಲೀಪ್ ಎನ್ನುವ ನಾಯಕ ಸಕ್ಸಸ್ ಇಲ್ಲದೇ ಕಾಲಿ ಕುಳಿತಿದ್ದ. ಅವನನ್ನು ಗೆಲ್ಲಿಸಲು ೧೨ ನಾಯಕರು ಒಟ್ಟಿಗೆ ಸಿನಿಮಾ ಮಾಡಿದರು. ಅದು ಸೂಪರ್‌ಹಿಟ್!
ಕನ್ನಡ ಚಿತ್ರರಂಗಕ್ಕೆ ೭೫ ವರ್ಷ, ಏನನ್ನಿಸುತ್ತಿದೆ?
ಹೆಮ್ಮೆಯಿದೆ. ಆದರೂ ಅಡಿಪಾಯಕ್ಕೆ ಬೆನ್ನಾಗಿ ನಿಂತವರಿಗೆ ಬೆಲೆ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬ ನೋವೂ ಇದೆ. ಈಗಲಾದರೂ ಅಂಥವರ ಬೆವರು ಮುತ್ತಾಗಲಿ. ಹದಿನೈದು ದಿನ ಉದ್ಯಮಕ್ಕೆ ರಜೆ ಇರುತ್ತೆ. ಇರಲಿ, ಸಂಭ್ರಮಿಸೋಣ. ಇದು ನಮ್ಮ ಮನೆ. ನಮ್ಮ ಹೊಟ್ಟೆಗೆ ಹಿಟ್ಟು ಕೊಟ್ಟವರು ಪ್ರೇಕ್ಷಕರು. ಅವರನ್ನು ರಂಜಿಸೋಣ. ನಮ್ಮಿಂದಾದ ಕೈಂಕರ್ಯ ಮಾಡಿ, ಋಣ ತೀರಿಸಿಕೊಳ್ಳೋಣ.

ಸಂಭ್ರಮದ ಖುಷಿ ಹಂಚಿಕೊಳ್ಳಿ...
ಖುಷಿ ಪಡುವ ಮುನ್ನ ವಾಸ್ತವದ ಬಗ್ಗೆ ಒಮ್ಮೆ ಅವಲೋಕಿಸಬೇಕು. ೭೫ನೇ ವರ್ಷದಲ್ಲಿ ೨೫ ಚಿತ್ರವೂ ಗೆಲ್ಲಲಿಲ್ಲ. ನೂರರಲ್ಲಿ ಮೂರು ಮಾತ್ರ ಹಿಟ್. ಕಾರಣ ಕೆದಕಿ, ಕಿತ್ತೊಗೆಯಬೇಕು. ಸಿನಿಮಾವನ್ನು ಮಕ್ಕಳಂತೆ ಪ್ರೀತಿಸಬೇಕು. ಕಥೆಗಾರರಿಗೆ ಬೆಲೆ ಸಿಗಬೇಕು. ಅದ್ಧೂರಿತನದ ಹೆಸರಿನಲ್ಲಿ ದುಂದುವೆಚ್ಚ ನಿಲ್ಲಿಸಬೇಕು. ಸೃಜನ ಶೀಲ ನಿರ್ಮಾಪಕರು ಮಾತ್ರ ಬರಬೇಕು. ಕೊನೇ ಪಕ್ಷ ಇವುಗಳಲ್ಲಿ ಒಂದಾದರೂ ಜಾರಿಯಾಗಬೇಕು!

ಪೂರ್ಣ ವಿ-ರಾಮ ಕಲಗಾರು

No comments: