Thursday, January 29, 2009

ಆಪ್ತಮಿತ್ರನ ಜತೆ ಆಪ್ತ ಸಂವಾda...



ತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮಾತಿಗೆ ಸಿಕ್ಕಿದ್ದರು. ಕನ್ನಡ ಕುಳ್ಳ ಎಂದೇ ಖ್ಯಾತರಾಗಿರುವ ಅವರು ಜತೆಗೆ ಮಾತಿಗೆ ಕುಳಿತರು. ಅಲ್ಲಿ ಆಯ್ದ ಕೆಲ ಪ್ರಶ್ನೋತ್ತರಗಳ ರೂಪ ನಿಮ್ಮ ಮುಂದಿದೆ...


ಕನ್ನಡದಲ್ಲಿ ರೀಮೇಕ್ ಸಿನಿಮಾ ಅನಿವಾರ್ಯವಾ?

ಸ್ವಾಮಿ, ಈಗ ಕಾಲ ಬದಲಾಗಿದೆ. ರಾಜ್‌ಕಪೂರ್, ಸುನಿಲ್ ದತ್... ಅಷ್ಟೇ ಏಕೆ, ಇತ್ತೀಚೆಗೆ ಅಮೀರ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಘಜನಿ ಎಷ್ಟು ಕೋಟಿ ಕಮಾಯಿಸಿದೆ ಗೊತ್ತಾ? ಪ್ರಚಾರಕ್ಕೆ ರಸ್ತೆಯಲ್ಲಿ ನಿಂತು ಕ್ಷೌರ ಮಾಡಿದ್ದಾರೆ. ಆ ಮೇಕು ಈ ಮೇಕು ಎಂಬುದು ಮುಖ್ಯವಲ್ಲ, ಮನರಂಜನೆ ಬೇಕು. ಅದು ಎಲ್ಲಿ ಸಿಕ್ಕರೆ ಏನಂತೆ? ನಾನಂತೂ ಮುಲಾಜಿಲ್ಲದೇ ಮಾಡುತ್ತೇನೆ. ಹಾಗಂತ ಸ್ವಮೇಕ್ ಮಾಡುವುದಿಲ್ಲ ಎಂದಲ್ಲ.
ನಿಮ್ಮನ್ನು ರೀಮೇಕ್ ಸರದಾರ ಅಂತಾರಂತೆ?
ಅನ್ನಲಿ ಬಿಡಿ, ನಾನು ಮುಳುಗಿ ಹೋಗುವ ಕಾಲದಲ್ಲಿ ಅಂಬಲಿ ಉಣಿಸಿದ್ದು ಆಪ್ತಮಿತ್ರ. ಆದರೆ ಅಷ್ಟಕ್ಕೇ ನಾನು ಸೀಮಿತವಾಗಿಲ್ಲ. ನಿರ್ದೇಶನ, ನಿರ್ಮಾಣ, ನಟನೆ ಎಲ್ಲ ಮಾಡಿದ್ದೇನೆ. ೧೮ ವರ್ಷ ಅನ್ನಕ್ಕೂ ಗತಿ ಇಲ್ಲದೆ ನಕ್ಷತ್ರ ಎಣಿಸಿದ್ದೇನೆ. ನಂತರ ಮತ್ತೆ ಭಲೇ ಕುಳ್ಳ ಎನಿಸಿಕೊಂಡೆ. ಈಗ ಸುಖವಾಗಿದ್ದೇನೆ, ಮತ್ತೆ ಸಿನಿಮಾ ಮಾಡುತ್ತೇನೆ. ಆದರೆ ಇನ್ನೊಂದು ಆಪ್ತಮಿತ್ರ ಅಂತೂ ಅಲ್ಲ. ಎಲ್ಲವನ್ನೂ ಮಾಡಬಹುದು, ಆದರೆ ಸೌಂದರ್ಯಾ!?!

ಆಪ್ತಮಿತ್ರ ಆಗಿ ೫ ವರ್ಷ ಆಯ್ತು, ಗ್ಯಾಪ್ ಏಕೆ?
ಆ ಪ್ರಶ್ನೆಯನ್ನು ಇತ್ತೀಚಿನ ನಾಯಕರಿಗೆ ಕೇಳಿ. ನನಗೆ ಸಿನಿಮಾ ಮಾಡಲು ಇಷ್ಟು ವರ್ಷ ಅಂತರ ಬೇಕಿರಲಿಲ್ಲ. ಐವತ್ತು ವರ್ಷದಿಂದ ಅದೇ ಬದುಕು. ಈಗಿನವರು ಬಹಳ ‘ಬುದ್ದಿವಂತ’ರು. ಎಲ್ಲಿ ಕಾಲ್‌ಶೀಟ್ ಕೇಳಿ, ಕಿರಿಕಿರಿ ಮಾಡುತ್ತಾರೋ ಎಂದು ಫೋನ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಾರೆ. ಕಡೇ ಪಕ್ಷ ವಿಷ್ಣುವರ್ಧನ್ ಆದರೂ ಯೋಚಿಸಬಹುದಿತ್ತು. ಎಲ್ಲಿರಿಗೂ ‘ಸ್ವಾಭಿಮಾನ’. ಅದೇ ಮಲಯಾಳಂ ಚಿತ್ರರಂಗ ನೋಡಿ... ಇತ್ತೀಚೆಗೆ ದಿಲೀಪ್ ಎನ್ನುವ ನಾಯಕ ಸಕ್ಸಸ್ ಇಲ್ಲದೇ ಕಾಲಿ ಕುಳಿತಿದ್ದ. ಅವನನ್ನು ಗೆಲ್ಲಿಸಲು ೧೨ ನಾಯಕರು ಒಟ್ಟಿಗೆ ಸಿನಿಮಾ ಮಾಡಿದರು. ಅದು ಸೂಪರ್‌ಹಿಟ್!
ಕನ್ನಡ ಚಿತ್ರರಂಗಕ್ಕೆ ೭೫ ವರ್ಷ, ಏನನ್ನಿಸುತ್ತಿದೆ?
ಹೆಮ್ಮೆಯಿದೆ. ಆದರೂ ಅಡಿಪಾಯಕ್ಕೆ ಬೆನ್ನಾಗಿ ನಿಂತವರಿಗೆ ಬೆಲೆ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬ ನೋವೂ ಇದೆ. ಈಗಲಾದರೂ ಅಂಥವರ ಬೆವರು ಮುತ್ತಾಗಲಿ. ಹದಿನೈದು ದಿನ ಉದ್ಯಮಕ್ಕೆ ರಜೆ ಇರುತ್ತೆ. ಇರಲಿ, ಸಂಭ್ರಮಿಸೋಣ. ಇದು ನಮ್ಮ ಮನೆ. ನಮ್ಮ ಹೊಟ್ಟೆಗೆ ಹಿಟ್ಟು ಕೊಟ್ಟವರು ಪ್ರೇಕ್ಷಕರು. ಅವರನ್ನು ರಂಜಿಸೋಣ. ನಮ್ಮಿಂದಾದ ಕೈಂಕರ್ಯ ಮಾಡಿ, ಋಣ ತೀರಿಸಿಕೊಳ್ಳೋಣ.

ಸಂಭ್ರಮದ ಖುಷಿ ಹಂಚಿಕೊಳ್ಳಿ...
ಖುಷಿ ಪಡುವ ಮುನ್ನ ವಾಸ್ತವದ ಬಗ್ಗೆ ಒಮ್ಮೆ ಅವಲೋಕಿಸಬೇಕು. ೭೫ನೇ ವರ್ಷದಲ್ಲಿ ೨೫ ಚಿತ್ರವೂ ಗೆಲ್ಲಲಿಲ್ಲ. ನೂರರಲ್ಲಿ ಮೂರು ಮಾತ್ರ ಹಿಟ್. ಕಾರಣ ಕೆದಕಿ, ಕಿತ್ತೊಗೆಯಬೇಕು. ಸಿನಿಮಾವನ್ನು ಮಕ್ಕಳಂತೆ ಪ್ರೀತಿಸಬೇಕು. ಕಥೆಗಾರರಿಗೆ ಬೆಲೆ ಸಿಗಬೇಕು. ಅದ್ಧೂರಿತನದ ಹೆಸರಿನಲ್ಲಿ ದುಂದುವೆಚ್ಚ ನಿಲ್ಲಿಸಬೇಕು. ಸೃಜನ ಶೀಲ ನಿರ್ಮಾಪಕರು ಮಾತ್ರ ಬರಬೇಕು. ಕೊನೇ ಪಕ್ಷ ಇವುಗಳಲ್ಲಿ ಒಂದಾದರೂ ಜಾರಿಯಾಗಬೇಕು!

ಪೂರ್ಣ ವಿ-ರಾಮ ಕಲಗಾರು

ಝಂಡಾ ಊಂಚಾ ರಹೇ ಹಮಾರಾ



ಭಾರತದ ಮೊದಲ ಸ್ವಾತಂತ್ರ್ಯೋತ್ಸವ

ಜನವರಿ ೨೬. ಭಾರತೀಯರು ತಮ್ಮದೇ ಆದ ಸಂವಿಧಾನ ಅಂಗೀಕರಿಸಿ ಸರ್ವ ತಂತ್ರ ಸ್ವತಂತ್ರ್ಯ ಗಣರಾಜ್ಯವಾಗಿ ಘೋಷಿಸಿಕೊಂಡು ವಿಶ್ವ ಮಾನ್ಯತೆ ಪಡೆದ ದಿನ.ರಾಷ್ಟ್ರ ಇತಿಹಾಸದ ಈ ಅವಿಸ್ಮರಣೀಯ ಘಟನೆ ಜನಮಾನಸದಿಂದ ಮರೆಯಾಗದಿರಲು ರಾಷ್ಟ್ರೀಯ ಉತ್ಸವಗಳಲ್ಲಿ ಗಣರಾಜ್ಯೋತ್ಸವ ದಿನಕ್ಕೆ ಮಹತ್ವದ ಸ್ಥಾನ.
ಆದರೆ ಜನವರಿ ೨೬ರ ಹಿರಿಮೆ ಇಷ್ಟೇ ಅಲ್ಲ. ಅದು ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆಗೊಂಡ ದಿನ. ರಾಷ್ಟ್ರದಾದ್ಯಂತ ಜನರು ನಾಡಗುಡಿ ಏರಿಸಿ ಝಂಡಾ ಊಂಚಾ ರಹೇ ಹಮಾರಾ ಎಂದು ಹಾಡಿ ನಲಿದಾಡಿದ ದಿನ.
ಕಾಂಗ್ರೆಸ್‌ನ ಧ್ಯೇಯವು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯವಾಗಿರಬೇಕೆಂದು ತರುಣ ಗುಂಪಿನ ಆತುರ. ಕ್ರಾಂತಿಕಾರ ಮನೋಭಾವದವರಿಗಂತೂ ಮೊದಲಿನಿಂದಲೂ ಪರಕೀಯ ಪ್ರಭುತ್ವವನ್ನು ನಿರ್ಮೂಲನಗೊಳಿಸಬೇಕೆಂಬ ಹಠ. ಬ್ರಿಟಿಷರು ತಾವಾಗಿಯೇ ರಾಷ್ಟ್ರ ಬಿಟ್ಟ ತೆರಳುತ್ತಾರೆ ಎಂಬ ಕಾಂಗ್ರೆಸಿನ ವಿಶ್ವಾಸ ಕರಗಲಾರಂಬಿಸಿತ್ತು. ಸ್ವಾತಂತ್ರ್ಯದ ತಳಮಳ ರಾಷ್ಟ್ರದ ದಶ ದಿಕ್ಕುಗಳಿಂದಲೂ ವ್ಯಕ್ತಗೊಳ್ಳತೊಡಗಿತು..ಶಕ್ಯವಾದರೆ ಸಾಮ್ರಾಜ್ಯದಲ್ಲಿ ಅಗತ್ಯವಾದರೆ ಅದರ ಹೊರೆಗೆ ಎಂಬ ಅನಿಶ್ಚಿತ ಆಕಾಂಕ್ಷೆಗೆ ದೇಶದಲ್ಲಿ ಆಸರೆ ಇಲ್ಲದಂತಾಗಿ ಸರ್ವತಂತ್ರ ಸ್ವತಂತ್ರ್ಯದ ಬೃಹತ್ ವೃಕ್ಷ ಆಳವಾಗಿ ಬೇರೂರಿ ಚಿಗುರಿ ಎಲ್ಲೆಲ್ಲಿಯೂ ಕಾಣಲಾರಂಬಿಸಿತ್ತು. ಹಿರಿಯ ಮುಂದಾಳುಗಳಲ್ಲಿ ಸರಕಾರದ ಹೊಣೆಯಿಲ್ಲದ ಅನ್ಯಾಯದ ಆಳ್ವಿಕೆಯನ್ನು ಸೈರಿಸಲಾಗದೆ ತರುಣರ ಹಂಬಲಕ್ಕೆ ಬೆಂಬಲ ನೀಡುವ ಒಲವು ಒತ್ತರಿಸಿತ್ತು. ನಾಡಿನ ಸ್ವಾತಂತ್ರ್ಯ ಸಮರದ ನಾವೆಯನ್ನು ಜಾಣ್ಮೆಯಿಂದ ನಡೆಸುತ್ತಿರುವ, ಎಲ್ಲಾ ಮನೋಭಾವದವರನ್ನೂ ಒಂದೇ ತೂಕದಲ್ಲಿ ನೆಲೆ ನಿಲ್ಲಿಸಿದ ಮಹಾತ್ಮ ಗಾಂಯವರಿಗೆ ಭಾರತೀಯರ ಈ ಹೊಯ್ದಾಟ ಅರ್ಥವಾಗಿತ್ತು. ಅವರು ಲಾಹೋರಿನ ಕಾಂಗ್ರೆಸ್ಸಿನ ಸಭೆಯಲ್ಲಿ ಪೂರ್ಣ ಸ್ವರಾಜ್ಯದ ಧ್ಯೇಯಕ್ಕೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದರು. ತರುಣರ ಅಪೇಕ್ಷೆಗೆ ಹಿರಿಯರು ಒತ್ತಾಸೆಯಾದರು. ಇವರಲ್ಲರಿಗೂ ಮಹಾತ್ಮರು ಮುಂದಾಳಾಗಿ ಮಹಾತ್ಮ ಗಾಂಜಿಯವರು ಹೆಗಲುಕೊಟ್ಟರು.ಆದರೆ ಗಾಂಜಿಯವರು ಧ್ಯೇಯ ಧೋರಣೆಗಳನ್ನು ನಿರ್ಣಯಿಸಿ ಸುಮ್ಮನೆ ಕೂರುವ ಜಾಯಮಾನದವರಲ್ಲ. ದ್ಯೇಯಕ್ಕೆ ತಕ್ಕ ದುಡಿಮೆ ಇಲ್ಲದಿದ್ದರೆ ಧ್ಯೇಯ ದರ್ಶನವಾಗುವುದಿಲ್ಲ ಎಂಬುದು ಅವರ ಅರಿವು.ಆದ್ದರಿಂದ ದೇಶದಲ್ಲಿ ಸ್ವಾತಂತ್ರ್ಯದ ತಳಮಳ ಎಷ್ಟು ಆಳವಿದೆ,ಎಷ್ಟು ತೀವ್ರವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬಯಸಿದರು.
ಈ ಹಿನ್ನೆಲೆಯಲ್ಲಿ ೧೯೩೦ನೇ ಜನವರಿ ೨೬ನೇ ದಿನವನ್ನು ಸ್ವಾತಂತ್ರದಿನವೆಂದು ಅಖಿಲ ಹಿಂದುಸ್ಥಾನದಲ್ಲಿ ಆಚರಿಸ ಬೇಕೆಂದೂ, ಎಲ್ಲೆಲ್ಲಿಯೂ ರಾಷ್ಟ್ರ ಧ್ವಜ ಹಾರಿಸಿ,ಸಭೆ ಸೇರಿ ಸ್ವಾತಂತ್ರ್ಯದ ನಿರ್ಣಯವನ್ನು ಓದಿ,ಅದಕ್ಕೆ ಸರ್ವರ ಸಮ್ಮತಿಯನ್ನೂ,ಪ್ರತಿಜ್ಞೆಯನ್ನೂ ಪಡೆಯಬೇಕೆಂದೂ ಕಾಂಗ್ರೆಸ್ಸಿನ ಕಾರ್ಯಕಾರಿ ಮಂಡಲಿ ಪ್ರಕಟಿಸಿತು. ಅದರಂತೆ ರಾಷ್ಟ್ರದಾದ್ಯಂತ ೧೯೩೦ನೇ ಜನವರಿ ೨೬ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆಗೊಂಡಿತು. (ಅಂದಿನ ವರದಿಯಂತೆ)
ಅಂದು ಎಲ್ಲೆಲ್ಲಿಯೂ ಸಂತೋಷz ಸುಗ್ಗಿ. ಸಾರಣೆ ಕಾರಣೆಗಳಿಂದ ಅಂಗಳಗಳು ಶೋಭಿಸುತ್ತಿದ್ದವು. ತಳಿರು ತೋರಣಗಳಿಂದ ಗುಡಿ ಗುಂಡಾರಗಳು, ಮನೆ ಮಠಗಳು ಮಂಗಲಮಯವಾಗಿ ಸಿಂಗಾರಗೊಂಡಿದ್ದವು. ಅನೇಕ ಸ್ಥಳಗಳಲ್ಲಿ ಬೆಳಿಗ್ಗೆ ಗೌರವದಿಂದ ಏರಿಸಲ್ಪಟ್ಟ ಸ್ವಾತಂತ್ರ್ಯದ ಗುಡಿಯು ಗುಡಿಗೋಪುರಗಳ ಮೇಲೆ ಪಟಪಟನೆ ಹಾರಾಡಿ ಆಳರಸರ ಎದೆಯನ್ನು ಅಳುಕಿಸಿ ತಲ್ಲಣಗೊಳಿಸಿತು.ಪೇಟೆ ಪಟ್ಟಣಗಳಲ್ಲಿ ನಡೆದ ಪ್ರಚಂಡ ಮೆರವಣಿಗೆಗಳು ಸ್ವತಂತ್ರ್ಯ ಸೇನೆಯ ರಭಸ, ಗೌರವ ಗಾಂಭೀರ್ಯಗಳನ್ನು ಸೂಚಿಸುತ್ತಿದ್ದವು. ಎಲ್ಲಕಡೆಯ ಕಾರ್ಯಕ್ರಮಗಳು ಒಂದೇ ಮಾದರಿಯಲ್ಲಿತ್ತು. ತರುಣರು ಎಲ್ಲೆಲ್ಲಿಯೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಖಾದಿಯನ್ನು ವಿತರಿಸಿದರು.
ಮೈಸೂರು ಸಂಸ್ಥಾನದಲ್ಲಿ ಎಲ್ಲಾಜಿಲ್ಲೆಯ ಮುಖ್ಯಾಕಾರಿಗಳು ಆದಿನ ಪೋಲೀಸ್ ಕಾಯಿದೆಯ ೩೯,೪೫,೪೬,ಮತ್ತು ೧೪೪ನೇ ಕಲಮುಗಳನ್ನು ಕಾರ್ಯರಂಗಕ್ಕಿಳಿಸಿದ್ದರು. ಪೋಲೀಸರು ಬೆತ್ತ, ಬಡಿಗೆ, ರಿವಾಲ್ವರುಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವವನ್ನು ಭಂಗಗೊಳಿಸಲು ಯತ್ನಿಸಿದರು. ಬೀದಿ ಬೈಲುಗಳನ್ನು ಸುತ್ತಾಡಿ ಜನಜಂಗುಳಿಯ ಮೇಲೆ ಬಿದ್ದು ನಾಡಗುಡಿಯನ್ನು ಕಿತ್ತೊಗೆದರು. ಚಿಕ್ಕ ಪುಟ್ಟ ಕಂದಮ್ಮಗಳ ಮೇಲೆ ಕೈ ಮಾಡಿ ರಾಷ್ರದ್ವಜವನ್ನೂ,ಟೊಪ್ಪಿಗೆಗಳನ್ನೂ ಕಸಿದುಕೊಂಡರು. ಆದರೆ ಸರಕಾರದ ಬಿಗಿ ಬಂದೋವಸ್ತ್ ಇದ್ದರೂ ಸ್ವಾತಂತ್ರ್ಯ ದಿನಾಚರಣೆ ನಿಲ್ಲಲಿಲ್ಲ.
ಕರ್ನಾಟಕದ ಎಲ್ಲಾ ಸ್ಥಳಗಳಲ್ಲಿಯೂ ಸ್ವಾತಂತ್ರ ದಿನಾಚರಣೆ ನಡೆಯಿತು. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಕೊಡಗು, ಮಂಗಳೂರು, ಸಿದ್ದಾಪುರ, ಅಂಕೋಲಾ ಸೇರಿದಂತೆ ಮಹತ್ವದ ಪ್ರತಿಯೊಂದು ಊರಿನಲ್ಲಿಯೂ ಸಭೆಗಳಾದವು. ಬೆಂಗಳೂರಿನಲ್ಲಿ ಸಿ.ವಿ.ನರಸಿಂಹ ಅಯ್ಯಂಗಾರರ ಮನೆಯಲ್ಲಿ ಶ್ರೀ ಕೆ.ಟಿ.ಭಾಷ್ಯಂ ಅವರಿಂದ ಧ್ವಜಾರೋಹಣ ನಡೆಯಿತು. ಮೈಸೂರಲ್ಲಿ ಅಗರಂ ರಂಗಯ್ಯ ಮತ್ತು ರಾಜಗೋಪಾಲ, ತುಮಕೂರಿನಲ್ಲಿ ಕೆ ರಂಗಯ್ಯ ಅಯ್ಯಂಗಾರ್, ಟಿ.ಸುಬ್ರಮಣ್ಯಂ ತಮಗೆ ವಿಸಿದ ೩೯ನೇ ಕಲಂ ಅನ್ನು ಧೈರ್ಯದಿಂದ ಕ್ಕರಿಸಿ ನಾಡಗುಡಿಯನ್ನು ಏರಿಸಿ ಸ್ವಾತಂತ್ರ್ಯೋತ್ಸವ ಜರುಗಿಸಿದರು. ಬೆಂಗಳೂರಿನಲ್ಲಿ ಕೆಲವರು ತಗಡೂರು ರಾಮಚಂದ್ರರಾಯರ ಮುಂದಾಳ್ತತನದಲ್ಲಿ ಜನವರಿ ೨೫ರಂದೇ ನಾಡಗುಡಿಯನ್ನು ಏರಿಸಿ ಕಾಯಿದೆಗೆ ಸವಾಲೊಡ್ಡಿದರು.ದೊಡ್ಡ ಬಳ್ಳಾಪುರದಲ್ಲಿ ಜನವರಿ ೨೫ನೇ ತಾರಿಖಿನಂದಲೇ ೧೪೪ನೇ ಕಲಂ ಜಾರಿಗೊಳಿಸಲಾಗಿತ್ತು. ಆದರೂ ಜನರು ೨೬ನೇ ತಾರೀಖಿನಂದು ಗೊತ್ತುಪಡಿಸಿದ ಸ್ಥಳದಲ್ಲಿ ದ್ವಜಾರೋಹಣ ನೆರವೇರಿಸಲು ಯತ್ನಿಸಿದರು. ಪೊಲೀಸರು ರಾಷ್ಟ್ರ ಧ್ವಜ ಹಾಗೂ ಗಾಂಜಿಯ ಭಾವಚಿತ್ರವನ್ನು ಕಸಿದುಕೊಂಡು, ಸಭೆ ನಡೆಯಗೊಡಲಿಲ್ಲ. ಶೃಂಗೇರಿ ಹಾಗೂ ಮೈಸೂರು ಸಂಸ್ಥಾನದ ಅನೇಕ ಕಡೆಗಳಲ್ಲಿ ಅಕಾರಿಗಳಿಂದ ಬಹಿರಂಗ ಕಾರ್ಯಕ್ರಮಕ್ಕೆ ತಡೆಯುಂಟಾದರೂ ಖಾಸಗಿ ರೀತಿಯಲ್ಲಿ ಮನೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾನೂನು ಉಲಂಘಿಸಿದರೆಂದು ಅನೇಕ ಜನರ ಮೇಲೆ ಖಟ್ಲೆ ಹೂಡಲಾಯಿತು. ಅದಾಗಿ ೧೭ ವರ್ಷಗಳ ನಂತರ ರಾಷ್ಟ್ರ ಸ್ವತಂತ್ರ್ಯಗೊಂಡು ೧೯೫೨ನೇ ಜನವರಿ ೨೬ರಂದು ಗಣರಾಜ್ಯವಾಯಿತು.

ನಾವು ಮರೆತ ಧ್ವಜಗೀತೆ

ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ, ಭಾವೈಕ್ಯವನ್ನು ಪ್ರೇರೇಪಿಸುವುದರಲ್ಲಿ ದೇಶ ಭಕ್ತಿಗೀತೆಗಳಿಗೆ ಪ್ರಥಮ ಆದ್ಯತೆ. ಜನಗಣ ಮನ, ವಂದೇ ಮಾತರಂ ಗೀತೆಗಳು ಇಂದಿಗೂ ಕೇಳಿಸುತ್ತಿದ್ದರೆ ಸ್ವಾತಂತ್ರ್ಯ ಸಮರದ ಜನ ಜನರನ್ನು ಬಡಿದೆಬ್ಬಿಸಿದ ಝಂಡಾ ಊಂಚಾ ರಹೇ ಹಮಾರಾ ಗೀತೆಯನ್ನು ನಾವು ಮರೆತು ಬಿಟ್ಟಿದ್ದೇವೆ.
ಮಹಾತ್ಮ ಗಾಂಯವರು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಶೈಲಿಯಲ್ಲಿ,ಧ್ವಜ ಗೀತೆ ಇರಬೇಕೆಂದು ಬಯಸಿದ್ದರು. ಅಪ್ಪಟ ದೇಶಭಕ್ತ,ಸ್ವಾತಂತ್ರ್ಯ ಸೇನಾನಿ, ಖ್ಯಾತ ಹಿಂದೀ ಕವಿ ಶ್ಯಾಮಲಾಲ್ ಗುಪ್ತ’ಪಾರ್ಷದ್ ೧೯೨೪ ರಚಿಸಿದ ವಿಜಯೀ ವಿಶ್ವ ತಿರಂಗಾ ಪ್ಯಾರಾ, ಝಂಡಾ ಊಂಚಾ ರಹೇ ಹಮಾರಾ ಗೀತೆ ಗಾಂಜಿ ಬಯಸಿದಂತೆಯೇ ಇತ್ತು. ಅದು ಧ್ವಜ ಗೀತೆಯಾಗಿ ಸ್ವೀಕಾರಗೊಂಡಿತು. ಐದು ಸಾಲುಗಳಲ್ಲಿ ಆರು ನುಡಿಗಳನ್ನು ಹೊಂದಿರುವ ಈಗೀತೆ ಸುಗಮ, ಸರಳ ಶೈಲಿಯಲ್ಲಿ ಧ್ವಜವನ್ನು ವರ್ಣಿಸುವುದಲ್ಲದೆ ನಮ್ಮ ರಾಷ್ಟ್ರ ಭಕ್ತಿಯನ್ನೂ ಶೌರ್ಯವನ್ನು ಉದಾತ್ತತೆಯನ್ನೂ ಪ್ರತಿಬಿಂಬಿಸುತ್ತದೆ. ಸ್ವಾತಂತ್ರ ಸಂಗ್ರಾಮದ ವೇಳೆ ಈ ಗೀತೆ ಇಲ್ಲದೆ ಸಭೆ, ಮೆರವಣಿಗೆಗಳು ನಡೆಯಲಿಲ್ಲ. ಈ ಗೀತೆಯಿಂದ ಅಸಂಖ್ಯಾತ ರಾಷ್ಟರ ವೀರರು ಸ್ಪೂರ್ತಿ ಪಡೆದರು. ತ್ರಿಪುರಾ ಕಾಂಗ್ರೆಸ್ ಅವೇಶನದಲ್ಲಿ ಸುಭಾಸಚಂದ್ರ ಬೋಸ್ ಒಂದು ಲಕ್ಷ ಜನರೊಂದಿಗೆ ಈ ಗೀತೆಯನ್ನು ಹಾಡಿದರು. ಸ್ವಾತಂತ್ರ್ಯ ಬಂದ ಮೇಲೆ ಕೆಲವರ್ಷ ಶಾಲಾ ಮಕ್ಕಳಿಗೆ ಈ ಗೀತೆಯನ್ನು ಕಲಿಸಿ, ಧ್ವಜಾರೋಹಣ ಕಾಲದಲ್ಲಿ ಹಾಡಿಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಮರೆತು ಹೋಗಿರುವುದು ಖೇದಕರ ಸಂಗತಿ.

ಪೂರ್ಣ ವಿ-ರಾಮ ಕಲಗಾರು

Friday, June 20, 2008



ಎಲ್ಲ ತತ್ತ್ವದೆಲ್ಲೆ ಮೀರಿ...



ಇಲ್ಲಿರುವ ರೇಖಾಚಿತ್ರವನ್ನು ಸುಮ್ಮನೆ ಗಮನಿಸಿ. ಅದನ್ನು ಬರೆಯುವುದು ನೋಡಿದಷ್ಟು ಸುಲಭವಲ್ಲ. ಈ ಬಾಕ್ಸ್‌ಅನ್ನು ಈಗಲೇ ಬರೆದು ಬಿಸಾಡಬಹುದು ಎಂದುಕೊಂಡರೆ ಅದು ಶುದ್ಧ ತಪ್ಪು. ಅದಕ್ಕೆ ಒಂದು ಕಂಡೀಷನ್ ಇದೆ. ಒಮ್ಮೆ ಪೆನ್ನನ್ನು ಪೇಪರ್ ಮೇಲೆ ಒತ್ತಿದರೆ ಬಾಕ್ಸ್ ಮಾಡಿ ಮುಗಿಸುವವರೆಗೂ ಪೆನ್ ಎತ್ತಬಾರದು. ಒಂದು ಗೆರೆ ಮೇಲೆ ಮತ್ತೊಂದು ಬಾರಿ ತಿದ್ದಬಾರದು. ಒಟ್ಟಾರೆ ಒಂದು ಬಾಕ್ಸ್ ಅಂತೂ ಆಗಲೇಬೇಕು. ಅದು ಹಾಗಾಗಬೇಕಾದರೆ ನೀವು ಈ ರೀತಿಯೇ ಗೆರೆ ಎಳೆಯಬೇಕು. ಎ-)ಇ-)ಬಿ-)ಸಿ-)ಡಿ-)ಇ-)ಸಿ-)ಎ ಮೂಲಕ ಹಾದುಹೋಗಿ ‘ಬಿ’ನಲ್ಲಿ ಕೊನೆಗೊಳ್ಳಬೇಕು. ಆದರೆ ಬಾಕ್ಸ್ ಮಾಡಬೇಕು ಎಂದಾಗ ನೀವು ಏನು ಮಾಡುತ್ತೀರಿ? ಬರೀ ‘ಎ-ಬಿ-ಸಿ-ಇ’ನಲ್ಲೇ ಪಝಲ್ ಮುಗಿಸಲು ಪ್ರಯತ್ನಿಸುತ್ತೀರಿ. ಕೊನೆಗೆ ಸೋತು ಸುಣ್ಣವಾಗುತ್ತೀರಿ. ಅಲ್ಲಿಂದ ಹೊರತಾಗಿ ‘ಡಿ’ಗೆ ಹೋಗಿ ವಾಪಾಸ್ ಬರಬಹುದು ಎಂಬುದನ್ನು ಮಾತ್ರ ಯೋಚಿಸುವುದಿಲ್ಲ. ಅದೇರೀತಿ ನಮ್ಮ ಬದುಕು. ನಾವು ಇಲ್ಲಿಯೇ ಇದ್ದು ಎಲ್ಲವನ್ನೂ ಯೋಚಿಸುತ್ತೇವೆ. ಎಷ್ಟೇ ಹೆಣಗಾಡಿದರೂ ಬದುಕಿನ ಬಾಕ್ಸನ್ನು ಕ್ರಮಬದ್ಧವಾಗಿ ಪೂರ್ತಿಮಾಡಲಾಗುವುದಿಲ್ಲ. ಈ ಚೌಕಟ್ಟಿಗಿಂತ ಹೊರತಾದ ಇನ್ನೊಂದು ಪ್ರಪಂಚವಿದೆ ಎಂಬುದನ್ನು ಮರೆತು ಇಲ್ಲಿಯೇ ಇರುತ್ತೇವೆ; ಇಲ್ಲಿಯೇ ಗಿರುಕಿ ಹೊಡೆದು ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗುತ್ತೇವೆ. ‘ಇಲ್ಲಿ’ ಇದ್ದು ಏನು ಸಾಸಲು ಸಾಧ್ಯ? ‘ಇಲ್ಲಿ’ನ ಮಹತ್ವ ಏನು ಎಂಬುದು ಗೊತ್ತಾಗಬೇಕಾದರೆ ‘ಅಲ್ಲಿ’ಗೆ ಹೋಗಬೇಕು. ಅಲ್ಲಿ ನಿಂತು ಇಲ್ಲಿನದನ್ನು ನೋಡಬೇಕು. ಆಗ ಅವೆರಡರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಸ್ವಾಮಿ ವಿವೇಕಾನಂದರು ನಂಬಿದ್ದು ಇದೇ ಸಿದ್ಧಾಂತವನ್ನು. ಅವರು ಭಾರತದ ರಾಯಭಾರಿಯಂತೆ ಶಿಕಾಗೋಗೆ ಹೋದರು. ಅಲ್ಲಿ ನಿಂತು ಭಾರತದ ಭವಿಷ್ಯದ ಬಗ್ಗೆ ಚಿಂತಿಸಿದರು; ಮಂಥಿಸಿದರು. ಕೊನೆಗೆ ಅವರೊಬ್ಬ ವಿಶ್ವಮಾನವರಾದರು !ಅದೇ ವಿಶ್ವಮಾನವ ಸಂದೇಶಕ್ಕೆ ಕಾವ್ಯರೂಪ ಕೊಟ್ಟವರು ಕನ್ನಡದ ಮೇರುಕವಿ ಕುವೆಂಪು. ಅವರ ಓ ನನ್ನ ಚೇತನ / ಆಗು ನೀ ಅನಿಕೇತನ/ ರೂಪ ರೂಪಗಳನು ದಾಟಿ/ ನಾಮಕೋಟಿಗಳನು ಮೀಟಿ/ ಎದೆಯಬಿರಿಯೆ ಭಾವ ದೀಟಿ/ ಓ ನನ್ನ ಚೇತನ ಆಗು ನೀ ಅನಿಕೇತನ... ಎಂಬ ಕವಿತೆ ಅಲ್ಲಲ್ಲ ದೃಶ್ಯಕಾವ್ಯ ಸಾರಿದ್ದೂ ಇದನ್ನೇ. ಜಾತಿ ಧರ್ಮ ಎಂಬ ಗೊಡ್ಡು ಸಿದ್ಧಾಂತಕ್ಕೆ ತಿಲಾಂಜಲಿ ಹಾಡಿ ಎಂದು ಅವರು ಸಾರಿಸಾರಿ ಹೇಳಿದರು. ಎಲ್ಲ ತತ್ತ್ವಗಳ ಗಡಿ ದಾಟಿ ಬನ್ನಿ ಎಂದು ಪ್ರತಿಯೊಬ್ಬ ಭಾರತೀಯರನ್ನು ಬಡಿದೆಚ್ಚರಿಸಿದರು. ಕೊನೆಗೆ ರಾಷ್ಟ್ರಕವಿಯಾದರು! ಕಮಲ್‌ಹಾಸನ್ ಅಭಿನಯದ ‘ದಶಾವತಾರಂ’ ಚಿತ್ರವೂ ಇದೇ ವಿಷಯದ ಮೇಲೆ ಆಧರಿಸಿ ನಿಂತಿದೆ. ಅದೊಂದು ಜಾಗತಿಕ ವಿಷಯ ಪ್ರತಿಪಾದಿಸುವ ಚಿತ್ರ. ಅಲ್ಲಿ ಒಬ್ಬ ವ್ಯಕ್ತಿ, ಕುಟುಂಬ, ಸಮಾಜ, ಜಾತಿ, ಮತ, ವರ್ಗ, ಭಾಷೆ, ಧರ್ಮ... ಈ ಎಲ್ಲ ವಿಷಯಗಳಿಗೂ ಮಿಗಿಲಾದ ಒಂದು ಹೊಸ ಕಾನ್ಸೆಪ್ಟ್ ಇದೆ. ಇದು ಮಾಸ್ ಚಿತ್ರವಂತೂ ಖಂಡಿತ ಅಲ್ಲ. ಒಟ್ಟಾರೆ ಹೇಳುವುದಾದರೆ ಇದು ಕ್ಲಾಸ್ ಚಿತ್ರ. ಅಲ್ಲಿ ಕಮಲ್ ಹೇಳಹೊರಟಿರುವುದು ವಿಶ್ವಮಾನವ ಸಂದೇಶವನ್ನು. ಹತ್ತು ಪಾತ್ರಗಳಲ್ಲಿ ಅವರು ಹತ್ತಾರು ವರ್ಗಗಳನ್ನು, ಹತ್ತಾರು ದೇಶ/ಭಾಷೆಗಳನ್ನು ಪ್ರತಿನಿಸುತ್ತಾರೆ. ಹತ್ತಾರು ಜಾತಿ/ಧರ್ಮಗಳನ್ನು ಪ್ರತಿಜ್ವಲಿಸುತ್ತಾರೆ. ಒಬ್ಬ ನಟ ಒಂದೇ ಚಿತ್ರದಲ್ಲಿ ಹತ್ತು ಪಾತ್ರಗಳನ್ನು ನಿರ್ವಹಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ತಕ್ಕ ಗಟ್ಟಿತನ, ಮ್ಯಾನರಿಸಂ ಬೇಕು. ಆದರೂ ಅವೆಲ್ಲವನ್ನೂ ಒಟ್ಟಿಗೆ, ಒಮ್ಮೆಲೇ ಅಭಿನಯಿಸಲು ಕಮಲ್‌ಹಾಸನ್‌ನಿಂದ ಮಾತ್ರ ಸಾಧ್ಯ.ಮೊದಲನೆಯದ್ದು ಒಬ್ಬ ವಿಷ್ಣು ಭಕ್ತನ ಪಾತ್ರ. ಅಲ್ಲಿ ಆತ ಹೇಳ ಹೊರಟಿದ್ದು ಒಟ್ಟಾರೆ ಜಾತಿ ಸಂಘರ್ಷವನ್ನು. ಆನಂತರದ್ದು ವಿಜ್ಞಾನಿಯ ಪಾತ್ರ. ಈ ಪಾತ್ರ ಇಂದಿನ ತಂತ್ರಜ್ಞಾನ, ಮನುಷ್ಯನ ಬುದ್ಧಿಮತ್ತೆಯನ್ನು ಪ್ರತಿಧ್ವನಿಸುತ್ತದೆ. ಜತೆಗೆ ನಾಸ್ತಿಕತೆಯನ್ನೂ. ಅದಕ್ಕೆ ತದ್ವಿರುದ್ಧವಾದ ನಾಯಕಿ. ಆಕೆ ದೈವಭಕ್ತೆ. ಚಿತ್ರದ ಕೊನೆಯಲ್ಲಿ ಆಕೆ ಕೇಳುತ್ತಾಳೆ, ‘ಅಲ್ಲ ನೀನು ಈಗಲೂ ಏಕೆ ದೇವರು ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತೀಯಾ?’ ಅದಕ್ಕೆ ವಿeನಿ ಕೊಡುವ ಉತ್ತರ- ‘ನಾನು ಎಲ್ಲಿ ಹಾಗೆ ಹೇಳಿದೆ? ನಾನು ಹೇಳಿದ್ದು ದೇವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅಷ್ಟೇ !’ ಈ ಪಾತ್ರದಲ್ಲಿ ದೇಶಭಕ್ತಿಯಿದೆ. ಜತೆಗೆ ವಿದ್ರೋಹಕ ಕೃತ್ಯದ ವಿರುದ್ಧದ ಸಮರವಿದೆ. ಜಾಗತೀಕರಣ ಎಂಬ ಭೂತ ಕೊಡುಗೆಯಾಗಿ ನೀಡುವ ಭವಿಷ್ಯದ ಚಿತ್ರಣವಿದೆ. ನಂತರದ್ದು ವಿಲನ್ ಪಾತ್ರ. ಇದು ಇಂದು ನಡೆಯುತ್ತಿರುವ ಭ್ರಷ್ಟಾಚಾರವನ್ನು ಅಭಿವ್ಯಕ್ತಿಗೊಳಿಸುತ್ತದೆ. ದುಷ್ಟ ಶಕ್ತಿಯೊಂದು ಹಣಕ್ಕಾಗಿ ಯಾವ ದೇಶ, ರಾಜ್ಯಕ್ಕಾದರೂ ನುಗ್ಗಿ ಎಲ್ಲವನ್ನೂ ಸರ್ವನಾಶ ಮಾಡಬಲ್ಲದು ಎಂಬ ಸಂದೇಶವಿದೆ. ಅಷ್ಟೊತ್ತಿಗೆ ಬರುತ್ತಾನೆ ಜಾರ್ಜ್ ಬುಷ್(ಮತ್ತೊಂದು ಪಾತ್ರ). ಈತ ನಾನಾ ರಾಷ್ಟ್ರಗಳ ಹಿರಿಯಣ್ಣ ಅಮೆರಿಕದ ಅನಾಯಕ. ಆ ಪಾತ್ರದಲ್ಲಿ ಕಮಲ್ ಬುಷ್‌ಗೇ ಸೆಡ್ಡು ಹೊಡೆದಿದ್ದಾರೆ. ಅಷ್ಟಾದ ಮೇಲೆ ಬರುವವನು ಪೊಲೀಸ್ ಅಕಾರಿ ರಾಮದಾಸ್ ನಾಯ್ಡು (ಇನ್ನೊಂದು ಪಾತ್ರ). ಆತ ಸಮಾಜದಲ್ಲಿನ ವರ್ಗಗಳನ್ನು ಪ್ರತಿನಿಸುತ್ತಾನೆ. ನಂತರದ್ದು ಖಲೀಫ ಹಾಗೂ ದಲಿತ ನಾಯಕ ವಿನ್ಸೆಂಟ್‌ನ ಪಾತ್ರ. ಈ ಎರಡೂ ಪಾತ್ರಗಳು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಪ್ರತಿಬಿಂಬ. ಅದರಲ್ಲೂ ವಿನ್ಸೆಂಟ್ ಆಗಿ ಕಮಲ್‌ಹಾಸನ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಇನ್ನೊಂದು ಕುಂಗ್ ಫು ಥರದ ಪಾತ್ರ. ಆತ ರಕ್ತ ಸಂಬಂಧಗಳ ಪ್ರತೀಕ. ತನ್ನ ತಂಗಿಯ ಕೊಲೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ದೇಶವನ್ನೇ ಬಿಟ್ಟು ಬರುತ್ತಾನೆ. ಸಂಬಂಧಗಳಿಗೆ ಚೌಕಟ್ಟಿಲ್ಲ ಎನ್ನುವುದು ಆ ಪಾತ್ರದ ತಾತ್ಪರ್ಯ. ಇನ್ನೊಂದು ಅವತಾರ್‌ಸಿಂಗ್ ಪಾತ್ರ. ಆತ ಸಿಖ್ ಸಮುದಾಯದ ಪ್ರತೀಕ. ಉತ್ತಮ ಹಾಡುಗಾರ. ಆದರೆ ಕ್ಯಾನ್ಸರ್ ಭೂತ ಅವನಲ್ಲಿ ಪರಕಾಯ ಪ್ರವೇಶ ಮಾಡಿರುತ್ತೆ. ಆತ ಬದುಕು ಹಾಗೂ ಸಾವಿನ ನಡುವೆ ಇರುವ ಅಂತರಕ್ಕೆ ಹಿಡಿದ ಕೈಗನ್ನಡಿ. ಸಾವಿನ ದವಡೆ ತಲುಪಿದ ಆತ ಕೊನೆಗೂ ಬದುಕಿಬರುತ್ತಾನೆ! ಇನ್ನೊಂದು ಪ್ರಮುಖ ಪಾತ್ರ ಅಜ್ಜಿಯದ್ದು. ಆಕೆ ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಾಯಭಾರಿ... ಹೀಗೆ ಇಡೀ ಕತೆ ನಾನಾ ಆಯಾಮಗಳಲ್ಲಿ ಬಿತ್ತರವಾಗುತ್ತಾ ಹೋಗುತ್ತದೆ. ಒಟ್ಟಾರೆ ಕಮಲ್ ಹೇಳುವ ಕೊನೆಯ ಸಂದೇಶ ಅದು ವಿಶ್ವಮಾನವ ಸಂದೇಶ!
ಪೂರ್ಣ ವಿ-ರಾಮ / ಕಲಗಾರು

Monday, May 12, 2008



ತಾಯಿಗೆ ಸರಿಸಾಟಿ ಯಾರು?

ಅದು ಸರಿಸುಮಾರು ನೂರು ವರ್ಷದ ಹಿಂದಿನ ಕಾದಂಬರಿ. ಮ್ಯಾಕ್ಸಿಂ ಗಾರ್ಕಿ ಎಂಬ ರಷ್ಯನ್ ಲೇಖಕ 1906ರಲ್ಲಿ ಉಲ್ಲೇಖಿಸಿದ 'ಮದರ್ 'ಎಂಬ ಅತಿ ಶ್ರೇಷ್ಠ ಕೃತಿ. ಅಧಿಕಾರಶಾಹಿತ್ವದ ವಿರುದ್ದ ಪ್ರತಿಭಟನೆ ಎಂಬ ಬಂದೂಕು ಹಿಡಿದ ಬಡವರ್ಗ ಬದುಕಿನ ಕತೆ. ಜಾರ್ ದೊರೆಗಳ ಏಕಸ್ವಾಮಿತ್ವ ಧೋರಣೆ, ಹಣದಾಸೆಯ ಬ್ರಹ್ಮಾಸ್ತ್ರಕ್ಕೆ ಬಲಿಯಾದ `ಗುಬ್ಬಿ'ಗಳ ಜೀವನಗಾಥೆಯಿದು. ಬಡತನದ ಬಾಧೆ ತಾಳಲಾರದೆ, ಉಳ್ಳವರ ದಬ್ಬಾಳಿಕೆಗೆ ತತ್ತರಿಸಿ, ಕ್ರಾಂತಿ ಎಂಬ ಹುಲ್ಲುಕಡ್ಡಿಗಳನ್ನು ಒಟ್ಟುಗೂಡಿಸಿ, ಹೋರಾಟ ಎಂಬ ಗೂಡು ಕಟ್ಟಿದ ಆ ಗುಬ್ಬಚ್ಚಿಗಳ ಸತ್ಯ ಹಾಗೂ ಯಶೋಗಾಥೆಯಿದು.

ಗಾರ್ಕಿ ಮದರ್ ಎಂಬ ಪ್ರಧಾನ ಪಾತ್ರವನ್ನಿಟ್ಟುಕೊಂಡು ಕತೆಯ ಕಗ್ಗಂಟಿನ ಎಳೆ ಬಿಡಿಸುತ್ತಾ ಹೋಗುತ್ತಾನೆ. `ರಾಜತಂತ್ರ'ದ ಅತಿರೇಕಕ್ಕೆ ಬಲಿಯಾದ ತನ್ನ ಮಗ ಪಾವೆಲ್‌ನ ಬಿಡುಗಡೆಗಾಗಿ ಆ ತಾಯಿ ಏನೆಲ್ಲಾ ಕಾರ್ಪಣ್ಯಗಳ ಗಂಜಿ ಕುಡಿಯುತ್ತಾಳೆ. ಕಷ್ಟದ ಗಳಿಗೆಗಳನ್ನು ಮೃಷ್ಟಾನ್ನದಂತೆ ಉಣ್ಣುತ್ತಾಳೆ. ಎಷ್ಟೆಷ್ಟೋ ನೋವಿನ ಪಾಯಸ ಸವಿಯುತ್ತಾಳೆ. ಕೊನೆಗೆ ತನ್ನ ಮಗನ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ. ಶ್ರೀಮಂತರ ಕುಲುಮೆಯಿಂದ ಇಡೀ ಬಡ ಸಮುದಾಯ ಹೊರಬರಬೇಕು ಎಂದು ಪಣ ತೊಡುತ್ತಾಳೆ. ಏಕೆಂದರೆ ಅದು ತಾಯ್ತನದ ಸಂಕೇತ. ಅವಳೊಬ್ಬಳಿಂದ ಮಾತ್ರ ಆ ತ್ಯಾಗ ಸಾಧ್ಯ. ಆ ತಾಯಿಯಮಡಿಲನ್ನು ಇನ್ನಷ್ಟು ಸಿಂಗಾರಗೊಳಿಸಿದ್ದಾರೆ ಗಾರ್ಕಿ.

ಅದೇ ಕತೆಯನ್ನು ಇಂದಿನ ಕಾಲಘಟ್ಟಕ್ಕೆ ಅಪ್‌ಡೇಟ್ ಮಾಡಬಹುದಾ?
ಈ ಪ್ರಶ್ನೆಗೆ ಉತ್ತರವಾಗಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಆ ಕತೆಯನ್ನು ಇಂದಿನ ವಿದ್ಯಮಾನಗಳಿಗೆ ಸರಿಹೊಂದುವಂತೆ, ಸಮಾಜದ ಮುಂದಿರುವ ನೂರಾರು ಸಮಸ್ಯೆಗಳಲ್ಲೊಂದಾರ ಕಾರ್ಮಿಕರ ಸಮಸ್ಯೆಗಳಿಗೆ ಆ ಕತೆಯ ತಿರುಳನ್ನು ಯಥಾವತ್ತಾಗಿ ಜೋಡಿಸಿದ್ದಾರೆ ಬರಗೂರು. ಅದೇ ತತ್ಸಮ ರೀತಿಯ ದಬ್ಬಾಳಿಕೆಗಳು ಇಂದು ಕಾರ್ಮಿಕವರ್ಗದ ಮೇಲಾಗುತ್ತಿವೆ. ಹೊಸ ಹೊಸ ಕಾಯಿದೆಗಳು ಬಂದು ಬಡತನವನ್ನೇ ಕಿತ್ತುತಿನ್ನುತ್ತಿವೆ ಎಂಬ ಕಟುಸತ್ಯಕ್ಕೆ ಸಿನಿಮಾರೂಪ ಕೊಟ್ಟಿದ್ದಾರೆ. ಕೊನೆಗೆ ತಾಯಿಗೆ ಅವರು ಕೊಡುವ ಹೊಸ ಅರ್ಥ ಏನು ಗೊತ್ತೆ ? ಅವಳು ಹೋರಾಟದ ಸಂಕೇತ. ಅಷ್ಟೇ ಅಲ್ಲ ಆ ಹೋರಾಟ ಎನ್ನುವುದೇ ಮಾತೃಸ್ವರೂಪಿ !

ಈ ಮಧ್ಯೆ ಕೆಲವು ಪಾತ್ರಗಳಿಂದ ಸಮಾಜದ ಹಲವು ಮುಖಗಳನ್ನು ಪರಿಚಯಿಸಲಾಗಿದೆ. ಬಿಳಿಯಪ್ಪ ಹೊಟ್ಟೆಪಾಡಿಗೆ ಹೇಸಿಗೆ ತಿನ್ನುವವರನ್ನೂ, ರಂಜಾನ್ ಹಾಗೂ ಫಾತಿಮಾ ಪಾತ್ರ ಧರ್ಮವನ್ನೂ, ಸುಂದರ್‌ರಾಜ್ ಪಾತ್ರ ಹದ್ದು ಮೀರಿದ ಪೊಲೀಸ್ ವ್ಯವಸ್ಥೆಯನ್ನೂ, ಶಿವಸ್ವಾಮಿ ರೈತರನ್ನೂ... ಹೀಗೆ ಪ್ರತಿ ಪಾತ್ರಗಳೂ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಮೀಳಾ ಜೋಷಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದಾ ನೋವು ನುಂಗುತ್ತಾ, ಮಗನ ನಲಿವಿಗಾಗಿ ಹಂಬಲಿಸುತ್ತಾ ತಾಯ್ತನದ ಹಿರಿಮೆಗೆ ಇನ್ನಷ್ಟು ಮೆರಗು ತುಂಬಿದ್ದಾರೆ.

ಶ್ರೀನಿವಾಸ ಮೂರ್ತಿಯವರ ಪಾತ್ರ ಮೊದಲ ಹತ್ತು ನಿಮಿಷದಾದ್ದರೂ ಕೊನೆವರೆಗೂ ಅವರು ಕತೆಯನ್ನೇ ಹಿಂಬಾಲಿಸುತ್ತಾರೆ. ಆದರೆ ಮಗನ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಷ್ಟು ಸರಿ ಹೊಂದುವುದಿಲ್ಲ. ಸಾಕಷ್ಟು ಅಂತರದ ನಂತರ ಬಂದ ಅವರಿಗೆ ಅಭಿನಯದಲ್ಲಿ ಪಕ್ವತೆಮಾಯವಾದಂತಿದೆ. ಆದರೆ ಕತೆ ಹೇಳುವಾಗ ಕೆಲವು ಅನಗತ್ಯ ಸನ್ನಿವೇಶ, ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ, ನೇಪಥ್ಯ ದೃಶ್ಯ, ಪಾತ್ರಗಳ ಆಯ್ಕೆಯಲ್ಲಿ ಬರಗೂರರ ಜಾಣ್ಮೆ ಪ್ರತಿಫಲಿಸುತ್ತದೆ.

ನೋವಿಗಿಂತಾ ಸಾವೇ ವಾಸಿ, ಸತ್ಯ ಯಾವತ್ತೂ ಕತ್ತಲಲ್ಲೇ ಇರುತ್ತೆ ಮುಂತಾದ ಬರಗೂರರ ಅಪರೂಪದ ಸಂಭಾಷಣೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಕೊನೆಯಲ್ಲಿ ನಾಯಕ ರಾಜು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸನ್ನಿವೇಶ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಬದುಕಿನ ಅಂತ್ಯವನ್ನು ನೆನಪಿಸುತ್ತದೆ !

ಪೂರ್ಣ ವಿ-ರಾಮ / ಕಲಗಾರು

Sunday, April 27, 2008

ಅರಮನೆ ಅಂದ್ರೆ ಸುಮ್ನೇನಾ?


ಅರಮನೆ ಅಂಕಣದಲ್ಲಿ.... !

ಅರಮನೆ ಚಿತ್ರ ಒಟ್ಟಾರೆ ಹೇಗಿದೆ?
ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆ ಅರಮನೆ ಸೃಷ್ಟಿಯ ಹಿಂದೆ ನಿರ್ದೇಶಕ ನಾಗಶೇಖರ್ ಹರಿಸಿದ ಬೆವರಿದೆ. ಅವರ ಬಹುವರ್ಷದ ಕನಸಿನ ಪ್ರತಿಫಲವಿದೆ. ಅದಕ್ಕೆ ತಕ್ಕ, ಎಲ್ಲೆಲ್ಲೂ ಫಳಫಳಿಸುವ ಪಾತ್ರವರ್ಗವಿದೆ. ಇಡೀ ಕತೆಯಲ್ಲಿ ಸ್ವಂತಿಕೆಯಿದೆ. ಎಲ್ಲಿಯೂ ಅಭಾಸವೆಸದ ಅಪರೂಪದ ಸಂಭಾಷಣೆಯಿದೆ. ಒಟ್ಟಾರೆ ಹೇಳುವುದಾದರೆ ಇದು ಕೆಟ್ಟ ಚಿತ್ರವಂತೂ ಅಲ್ಲ.

ಹೀಗೆನ್ನಲು ಕೆಲವು ಕಾರಣಗಳಿವೆ. ಗಣೇಶ್ ಎಂದಾಗ ನೆನಪಾಗುವುದು: ಗಾಳಿಯ ವೇಗ ಮೀರಿಸುವ ಪಟಪಟ ಮಾತುಗಾರಿಕೆ. ಅಲ್ಲಿ ಕಾಮಿಡಿಯ ಲೇಪನ. ಜತೆಗೆ ಅಂತರಾಳದ ನೋವನ್ನು ಅನುಕರಿಸುವ, ಅಭಿವ್ಯಕ್ತಿಸುವ ಚಾಕಚಕ್ಯತೆ. ಅದನ್ನೇ ಬಂಡವಾಳವಾಗಿಸಿ ಪ್ರೇಕ್ಷಕರನ್ನು ಕಟ್ಟಿ ಕೂರಿಸುವ ತಾಕತ್ತು ಗಣೇಶ್‌ಗಿದೆ!

ಹಾಗಂತ ಊಟಕ್ಕೆ ಉಪ್ಪಿನಕಾಯಿಯೇ ಅನ್ನವಾದರೆ? ಊಹೂಂ... ಅದು ಉಣ್ಣಲಲ್ಲ, ಸಹಿಸಲೂ ಅಸಾಧ್ಯ.

ಅದರ ಬದಲು ಗಣೇಶ ಹೊಸ ಆಯಾಮ ಹುಡಕಬೇಕು.ಎಲ್ಲಕ್ಕಿಂತ ಭಿನ್ನವಾದ, ಹಿಂದೆಂದೂ ಮಾಡದ ಪಾತ್ರ ಮಾಡಬೇಕು. ಯೋಗ್ಯ ಕತೆ ಆರಿಸಬೇಕು. ಎಲ್ಲಿಯೂ 'ಗಣೇಷಿಸಂ' ರಿಪೀಟ್ ಆಗದಂತೆ ನೋಡಿ ಕೊಳ್ಳಬೇಕು. ಒಟ್ಟರೆ ಹೇಳುವುದಾದರೆ ಆ ಎಲ್ಲ ಹ್ಯಾಂಗೋವರ್‌ನಿಂದ ಗಣೇಶ್ ಹೊರಬರಬೇಕು. ಆಗ ಮಾತ್ರ ಅಲ್ಲಿ ಏನಾದರೂ ಹೊಸತನ್ನು ಕಾಣಬಹುದು.

ಅರಮನೆ ಚಿತ್ರದಲ್ಲಿ ಈ ಎಲ್ಲ ಬದಲಾವಣೆಗಳು ಅಪ್‌ಡೇಟ್ ಆಗಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಕೊಂಚ ಕತೆಯ ಕಡೆ ಹೊರಳಿಕೊಳ್ಳಬೇಕು.

-ಅರುಣ್, ವೃತ್ತಿಯಲ್ಲಿ ಫೋಟೊಗ್ರಾಫರ್. ಪಾದರಸದಂತ ಮಾತುಗಾರಿಕೆ ಅವನ ಬಂಡವಾಳ. ಕೈನಲ್ಲಿ ಕಾಸಿಲ್ಲ. ಆದರೆ ಪ್ರೀತಿ, ಸ್ನೇಹಕ್ಕೆ ಮೋಸವಿಲ್ಲ. ಯಾರೊಬ್ಬರ ನೋವಿಗೂ ನಲುಗುವ ಜೀವ. ಅದು ಸಾಧ್ಯವಾಗಲು ಅವ ಎಂಥ ತ್ಯಾಗಕ್ಕೂ ಸಿದ್ಧ. ಒಂದು ದಿನ ರಾಜಶೇಖರ್ ಅರಸ್ ಎಂಬಶ್ರೀಮಂತನ ಮನೆಗೆ ಬರುತ್ತಾನೆ. ಆತ ತನ್ನೆಲ್ಲ ಬಂಧುಬಳಗದಿಂದ ದೂರವಿತುತ್ತಾನೆ. ಆ ಕಾರಣಕ್ಕೆಸ್'ಬಾಟಲ್'ನ ಬಾಯಿಯನ್ನು ತನ್ನ ಬಾಯಿಗಿಟ್ಟಿರುತ್ತಾನೆ. ಫೋಟೋ ತೆಗೆಯಲು ಬಂದ ಅರುಣ್ಅವನ ಮನಸ್ಸಿನ ಮೇಲೆ ನಗುವಿನ ಚಿತ್ತಾರ ಬರೆಯುತ್ತಾನೆ. ನೋವಿನ ಕತೆ ಕೇಳುತ್ತಾನೆ. ಕುಟುಂಬವನ್ನು ಮತ್ತೆ ಸೇರಿಸಿ ಫ್ಯಾಮಿಲಿ ಫೋಟೊ ತೆಗೆಯುತ್ತೇನೆ ಎಂದು ಮಾತು ಕೊಡುತ್ತಾನೆ. ಅದಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಅರಸ್ ಮಗಳು ಅಳಿಯನ ವಿವರಕ್ಕಾಗಿ ಒಂದಿಷ್ಟು 'ಕಾಲಹರಣ' ಮಾಡುತ್ತಾನೆ. ಅವರ ಮಕ್ಕಳಾದ ಗೀತಾ, ನೀತಾರನ್ನು ಭೇಟಿಯಾಗುತ್ತಾನೆ. ಗೀತಾಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ, ಆಕೆಗೆ ಇನ್ನೊಂದು ಅಫೇರ್ ಇದೆ ಎಂದು ಗೊತ್ತಾಗಿ ತಲೆ ಮೇಲೆ ಕೈಹೊತ್ತು ಕೂರುತ್ತಾನೆ, ಕುಡಿದು ತೇಲುತ್ತಾನೆ. ಕೊನೆಗೇನು ಮಾಡುತ್ತಾನೆ...?

ಇದು ಕತೆ. ಈ ಕತೆಯಲ್ಲಿ ಇನ್ನೊಂದು ಪಾತ್ರ ಪರಕಾಯ ಪ್ರವೇಶ ಮಾಡಿದೆ. ಅದು ಗಣೇಶ್ ಹಾಗೂ ಅನಂತನಾಗ್ ನಡುವಣ ಭಾವಲಹರಿ. ಏನೂ ಸಂಬಂಧವಿಲ್ಲದ ಇನ್ನೊಂದು ಜೀವಕ್ಕಾಗಿ ತುಡಿಯುವ, ದುಡಿಯುವ ಪಾತ್ರ. ಆ ಎರಡು ಪಾತ್ರಗಳೇ ಇಡೀ ಕತೆಯ ಜೀವಾಳ. ಹೆಚ್ಚು ಮಾತಿಲ್ಲ. ಆದರೂ ಅಲ್ಲಿ ಲವಲವಿಕೆಯಿದೆ. ಪರಸ್ಪರ ಮನುಷ್ಯತ್ವದ ಭಾವನೆಗಳ ಸಂಗ್ರಹವಿದೆ. ಅವು ಕಣ್ಣಿನಲ್ಲೇ ಮಾತನಾಡಿಕೊಳ್ಳುತ್ತವೆ. ಆ ಎರಡು ಪಾತ್ರಗಳೇ ಚಿತ್ರ ಗೆಲ್ಲಿಸಿದರೆ ಆಶ್ಚರ್ಯವೇನಿಲ್ಲ!

ಗಣೇಶ್ ಮಾತುಗಾರಿಕೆಯಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಮನಸ್ಸಿನ ಭಾವನೆಗಳ ಸಂಘರ್ಷಗಳಿಗೆ ಅವರು ಉತ್ತರವಾಗಿದ್ದಾರೆ. ಅವರ ಹಿಂದೆ ನಿಲ್ಲುವವರು ನಾಗಶೇಖರ್. ವಿದೇಶಿಗರಿಬ್ಬರು ಮಗುವಿನ ಕೈಗೆ ಕ್ಯಾಮರಾ ಕೊಟ್ಟು, 'ನೀನೇ ಇಟ್ಟುಕೋ' ಎಂದಾಗ ಆ ಮಗುವಿನ ಹಾವಭಾವದಲ್ಲಿ ನಾಗಶೇಖರ್ ಪ್ರತಿಫಲಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ಗೆದ್ದಿದ್ದಾರೆ. ಜತೆಗೆ ತುಷಾರ್ ರಂಗನಾಥ್ ಸಂಭಾಷಣೆ ನಾಗಶೇಖರ್ ಕತೆಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಹೇಳುವಲ್ಲಿ ನಾಗಶೇಖರ್ ಸೋತಿದ್ದಾರೆ. ಆದರೆ ಪಾತ್ರ, ದೃಶ್ಯ ಮತ್ತು ನಿರೂಪಣೆಯ ಮಜಲಿನಲ್ಲಿ ಖಂಡಿತ ಗೆದ್ದಿದ್ದಾರೆ. ಅವರು ಸುತಾರಾಂ ಸೋತಿದ್ದು ಸಂಕಲನದಲ್ಲಿ. ಮಧ್ಯೆಮಧ್ಯೆ ಕತೆ ಮುಗ್ಗರಿಸುತ್ತೆ. ಗುರುಕಿರಣ್ ಸಂಗೀತ ಅಬ್ಬಬ್ಬಾ ಎನ್ನುವ ಹಾಗಿಲ್ಲ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಬರೆದ ಸಾಹಿತ್ಯವನ್ನು ತಮ್ಮ ಸಂಗೀತದ ನಾಲಿಗೆಯಿಂದ ನುಂಗಿ, ನೀರು ಕುಡಿಸಿದ್ದಾರೆ. ನಟಿ ರೋಮಾ ಅವರನ್ನು ನಾಯಕಿ ಎನ್ನುವುದಕ್ಕಿಂತ ಪೋಷಕ ನಟಿ ಎನ್ನಬಹುದು.

ಈ ಎಲ್ಲಾ ಅಂಶಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಿದರೆ ಸಿಗುವ ಉತ್ತರ-ಇದು ಖಂಡಿತ ಕೆಟ್ಟ ಚಿತ್ರವಲ್ಲ!

ಹಾಗಾದರೆ ಪಕ್ಕಾ ಒಳ್ಳೆಯ ಚಿತ್ರವಾ? ಉತ್ತರವನ್ನು ಪ್ರೇಕ್ಷಕರು ಹೇಳುತ್ತಾರೆ ಕಣ್ರೀ...!

ಪೂರ್ಣ ವಿ-ರಾಮ / ಕಲಗಾರು



Saturday, April 12, 2008

ಕೋಮಲ್‌ ಕಮಾಲ್‌ !



ಕೋಮಲಪ್ಪ ಕಿಲಕಿಲ, ೧೦೦% ಕಾಮಿಡಿ ಕನ್ಲಾ!
ಕೋಲೇಶ: ಲೋ ಮಲ್ಲಿ... ಈ ವಾರ ಅದೆಂತದೋ ಗರಗಸ ಸಿನ್ಮಾ ಬಿಡಗಡೆ ಆಗೈತಲ್ಲಾ,ನೀನ್ ನೋಡದ್ಯೇನ್ಲಾ?

ಮಲ್ಲೇಶ: ಇಲ್ಲಾ ಕನ್ಲಾ. ನೀ ಹೋಗಿದ್ಯೇನ್ಲಾ?

ಕೋಲೇಶ: ನಾನ್ ಮಾರ್ನಿಂಗ್ ಸೋಗೇ ಹೋಗಿದ್ದೆ ಕನ್ಲಾ?

ಮಲ್ಲೇಶ: ಹೌದೇನ್ಲಾ ಬಡ್ಡೆತ್ತೊದೆ. ಹೆಂಗೈತ್ಲಾ ಗರಗಸ. ಪೋಸ್ಟರ್‌ನಾಗೆ ಅದೇನೋ ಸಕತ್ ಕುಯ್ತಾನೆ ಅಂತೈತಲ್ಲಾ ಏನ್ಲಾ ಅದೂ ?

ಕೋಲೇಶ : ಹೂಂ. ಕೋಮಲಪ್ಪನ್ ಆಕ್ಟಿಂಗು ಬಲ್ ಮಸ್ತಾಗೈತ್ಲೆ. ಆ ಯಪ್ಪಾನೇ ಕಲಾ ಗರಗಸ !

ಮಲ್ಲೇಶ: ಅಯ್ಯೋ, ಅದೇನೂ ಅಂತ ಒಸಿ ಬಿಡಿಸಿ ಹೇಳ್ಲಾ?

ಕೋಲೇಶ: ಅದೆಂತಾ ಕ್ಯೋಳ್‌ತೀಯಾ. ಮುನಿಯಾ ಅನ್ನೋ ಪಾತ್ರದಾಗೆ ಕೋಮಲಪ್ಪ ಸಖತ್ ಮಿಂಚವ್ನೆ.

ಮಲ್ಲೇಶ: ಹೌದೇನ್ಲಾ! ಹಂಗಾರೆ ಹೊಡದಾಟ ಐತಿ ಅಂತಾತು. ಮುನಿಯಾ ಗರಗಸದಾಗೆ ತಲೇ ಕುತ್ಯಾನೋ ಕಾಲ್ನೋ ?

ಕೋಲೇಶ: ಪೆದ್‌ಮುಂಡೇದೇ ಅದು ಹಂಗಲ್ಲ ಕನ್ಲಾ. ಅವ ಬರೀ ಮಾತ್ನಾಗೇ ಕುಯ್ದು ಇಳಸ್ತಾನೆ. ಆದ್ರೂ ಅವನ ಮಾತ್ನಾಗಿರೋ ಮಜಾ ಐತಲ್ಲಾ, ಅದೇ ಬಲ್ ಮಸ್ತಾಗೈತೆ.

ಮಲ್ಲೇಶ: ಏನ್ ಯೋಳ್ತೀಯೋ ಅದನ್ನ ನೆಟ್ಟಗೆ ಯೋಳು ಆಟೆಯಾ.

ಕೋಲೇಶ: ಮುನಿಯಾ ಅನ್ನೋ ಅಸಾಮಿ ಇರ್‍ತಾನೆ. ಟಿಪಟೂರಿನ ಸುಬ್ನಳ್ಳಿಯವ. ಮು ಪಾರ್ ಮೂದೇವಿ ಅಂತಾನೆ. ಆತ್ಗೆ ಕತೆ ಹೇಳೋ ಹುಚ್ಚು. ಅದೂ ಸಿನಿಮಾ ಕತೆ ಅಂದ್ರೆ ಹಗಲೆಲ್ಲಾ ಕುಯ್ತಾನೆ. ಹಿಂಗೇ ಬೆಂಗ್ಳೂರ್‌ಗೆ ಬತ್ತಾನೆ. ಅದ್ಹ್ಯಾಗೋ ಪ್ರೊಡ್ಯೂಜರ್ ಪಾರ್ಥಸಾರಥಿ ಮನ್ಯಾಗ್ ಸೇರ್‍ಕೊಂತಾನೆ. ಆ ಪಾತ್ರ ನಮ್ ಅನಂತ್‌ನಾಗಪ್ಪಂದು. ಆತನ್ ಹತ್ರ ಕತೆ ಯೋಳ್ತೀನಿ ಅಂತ ಐದು ತಾಸ್ ಕುಯ್ಯಕ್ ಸುರುಮಾಡ್ತಾನೆ ಕನ್ಲಾ ಮುನಿಯ. ಪಾರ್ಥಪ್ಪಗೆ ಹೆಂಡತಿ ಮನೆ ಬಿಟ್ಟೋಗವ್ಳೆ ಅನ್ನೋ ತೆಲಿಬಿಸಿ. ಇದ್ದೊಬ್ಬ ಹೆಣ್‌ಮಗಿ ತೇಜಮ್ಮಗೆ ಮಲತಾಯಿ ಮಾಧವಮ್ಮನ್ ಕಂಡ್ರೆ ಆಗಕ್ಕಿಲ್ಲ. ಇಬ್ಬ್ರಿಗೂ ಹೊತ್ತಾರೇನೆ ಜಗ್ಳಾ ಸುರು. ಚಿಕ್ಕವ್ವ ಮಗ್ಳು ಕಿತ್ತಾಡಿ ಮನೆ ಬಿಟ್ ಓಯ್ತಾರೆ. ಈ ಪಾರ್ಥಪ್ಪ ಅರ್‍ವತ್ತೊಂದ್ ಆದ್ರೂ ಹದ್ನಾರರ ‘ಪಡ್ಡೆ’ತದ್ ಆಡ್ದಂಗ್ ಆಡ್ತದೆ. ತನ್ನ್ ಹೆಂಡ್ರು ಡೈರೆಕ್ಟರು ಸರತಪ್ಪನ್ ಜ್ವತ್ಗೆ ಓಗವ್ಳೆ ಅಂತ ಗುಮಾನಿ. ಈ ಸರತಪ್ಪ ಹೆಂಡ್ತೀ ಕೈಗೆ ಸೋಡಾಚೀಟಿ ಕೊಟ್ಟಿರ್‍ತಾನೆ ಕನ್ಲಾ. ಆತನ್ ಹೆಂಡ್ತಿ ಗೌರಿ ಪಾರ್ಥಪ್ಪನ್ ಹೆಂಡ್ತಿ ಕಿವಿಯಾಗೆ ‘ಗಂಡನ್ ಬುಟ್ಟಬುಡೇ’ ಅನ್ನಕ್ ಸುರು ಮಾಡ್ತಾಳೆ. ಇತ್ಲಾಗ್ ಪಾರ್ಥಪ್ಪಗೆ ಮಗ್ಳು ಯಾರ್ ಜ್ವತ್ಗಾರೂ ಓಡ್ ಹೋಗ್‌ಬುಟ್ಟಾಳು ಅನ್ನೋ ಬ್ಯಾನಿ ಬ್ಯಾರೆ. ಆದ್ರೆ ಮುನಿಯಪ್ಪಂದು ಒಂದೇ ಹಟ. ಕತೆ ಕ್ಯೋಳಿ, ಕತೆ ಕ್ಯೋಳಿ... ಯಾಕ್ಲಾ ಮಲ್ಲಿ, ಏನೂ ಅರ್ಥ ಆಗಕ್ಕಿಲ್ಲೇನ್ಲಾ?

ಮಲ್ಲೇಶ: ಅಯ್ಯೋ ಸಾಕ್ ಬುಡ್ಲಾ ನೀನೂ ಕುಯ್‌ಬ್ಯಾಡಾ.

ಕೋಲೇಶ: ಹಂಗಾರೆ ಸುಮ್ನೆ ಸಸನೀನೇ ಸಿನ್ಮಾ ನೋಡ್ ಬಾರಲಾ...

ಮಲ್ಲೇಶ: ಅಲ್ಲಾ, ನೀ ಹೇಳೋದ್ ಕ್ಯೋಳಿದ್ರೆ ಇದು ಬ್ಯಾರೆ ಭಾಷೆ ಸಿನ್ಮಾ ಇದ್ದಾಂಗ್ ಐತೆ ಅಂತ ಡೌಟ್ ಬತ್ತೈತೆ?

ಕೋಲೇಶ: ಅಯ್ಯೋ ಹಂಗೇನಿಲ್ಲ ಕನ್ಲಾ. ಆದ್ರೆ ‘ಅದ್ಯಾವ್ದೋ ಪ್ರೆಂಚ್ ಸಿನ್ಮಾ ಇದ್ದಂಗೈತೆ. ಆದ್ರೆ ಥೇಟ್ ಅದೇ ಅಲ್ಲ’ ಅಂತಾ ಯಾರೋ ಯೋಳ್‌ತಿದ್ರು.

ಮಲ್ಲೇಶ: ಕತೀ ಬುಡು. ಹಾಡ್ ಚೆನ್ನಾಗೈತೇನ್ಲಾ?

ಕೋಲೇಶ: ಹಾಡೇನೋ ಐತೆ. ಆದ್ರೆ ಒಂದೇ ಒಂದು. ಸಿನ್ಮಾ ಸುರು ಆಗಿ ಹತ್ತ್ ನಿಮಿಸಕ್ಕೇ ಬತದೆ. ಆಮ್ಯಾಕ್ ಒಂದೂ ಇಲ್ಲ ಕನ್ಲಾ.

ಮಲ್ಲೇಶ: ಹೌದೇನ್ಲಾ, ಒಂದೇ ಹಾಡೇನ್ಲಾ? ಹೋಗ್ಲಿ ಬುಡು. ಎಲ್ಲಾ ಹ್ಯಾಂಗ್ ಆಕ್ಟ್ ಮಾಡವ್ರೆ ಅಂತಾನಾದ್ರೂ ಯೋಳೋ?

ಕೋಲೇಶ: ನಮ್ ಕೋಮಲ್ಲು ಗರಗಸ ಅಷ್ಟೇ ಅಲ್ಲ, ಅವ ಪಾದರಸ ಇದ್ದಾಂಗೆ. ಇಡೀ ಸಿನಿಮಾ ಅವ್ನ ಮ್ಯಾಕೇ ನಿಂತೈತೆ ಅಂತೀನಿ. ಆ ಯಪ್ಪ ಮಾಡಿದ್ದನ್ನ ನೆನಸ್ಕಂಡ್ರೇ ಈಗ್ಲೂ ನಗು ಬತ್ತದೆ. ಬರೀ ಮಾತ್ನಾಗೇ ಮನೇ ಕಟ್ಟವ್ನೆ. ಅನಂತನಾಗಪ್ಪನೋರಿಗೆ ವಯಸ್ಸಾತು ಅಂತ ಗೊತ್ತಾಯ್ತದೆ. ಆದ್ರೆ ಆ ಯಪ್ಪ ತನ್ನ ಕಣ್ಣಲ್ಲೇ ಆಟ ಆಡ್‌ಬುಟ್ಟವ್ರೆ ಕಣಪ್ಪೊವ್...!. ಸುಧಾರಾಣಿಯಮ್ಮ, ಪವಿತ್ರಾ ಲೋಕೇಸಮ್ಮ, ಚಿದಾನಂದಪ್ಪ, ಮಧಪ್ಪ ಎಲ್ಲಾ ಆಂಗ್ ಬಂದ್ ಹಿಂಗ್ ಓಯ್ತಾರೆ. ನಾಗಾಭರಣಪ್ಪ ಬರೀ ಮಾತ್ಗಷ್ಟೇ ವಾಕೆ. ಲಕ್ಷ್ಮಮ್ಮ, ಐಸ್ವರ್ಯಮ್ಮ, ವಾಣ್ಯಮ್ಮ ಬೋ ಕುಲುಕುಲು ಅಂತಾರೆ ಕನ್ಲಾ.

ಮಲ್ಲೇಶ: ಹೌದೇನ್ಲಾ? ಒಟ್ಟಾರೆ ಸಿನಿಮಾ ಏನ್ ಯೋಳ್ತದೆ?

ಕೋಲೇಶ: ಓ ಅದಾ. ಗಂಡ ಹೆಂಡ್ತಿ ಮ್ಯಾಕ್ ಅನುಮಾನಾ ಪಡ್ಬಾರ್‍ದು. ಹೆಂಡ್ರಿಗೂ ಒಸಿ ಪ್ರೀಡಮ್ ಕೊಡ್ಬಕು. ಆತ್ರಬಿದ್ದು ತೀರ್ಮಾನ ತಕ್ಕಳಕ್ ಹೋಗ್ಬಾರ್‍ದು ಅಂತ ನಿರ್ದೇಸಕ ದಿನೇಸಪ್ಪ ಯೋಳಕ್ ಪ್ರಯತ್ನ ಮಾಡವ್ರೆ. ಜ್ವತ್ಗೆ ಕೋಮಲಪ್ಪಂಗೆ ನಾಯಕನ ಪಟ್ಟ ಕೊಟ್ಟವ್ರೆ. ಕಿತ್ತಾಟ, ಕೂಗಾಟ ಇಲ್ದೇನೇ ಹಿಂಗೂ ಒಂದ್ ಸಿನ್ಮಾ ಮಾಡ್‌ಬೈದು ಅಂತ ತೋರ್‍ಸ್‌ಕೊಟ್ಟವ್ರೆ. ರಾಜೇಂದ್ರ ಕಾರಾಂತಪ್ಪನ್ ಡೈಲಾಕೂ ಅಷ್ಟೇ ಮಜುಬೂತಾಗೈತೆ.
ಒಂದ್ ಕಿತಾ ಅಂತೂ ಗ್ಯಾರಂಟಿ ನೋಡ್ ಬರ್‌ಬೈದು ಕಲಾ.

ಮಲ್ಲೇಶ: ಆಯ್ತ್ ಕನ್ಲಾ ಈಗ್ಲೇ ಓಗ್‌ಬತ್ತೀನಿ.
ಬರ್‍ಲೇನ್ಲಾ ಬಡ್ಡೇತ್ತೊದೇ...

ಪೂರ್ಣ ವಿ-ರಾಮ / ಕಲಗಾರು

Thursday, April 3, 2008

ಸಭ್ಯ ನಟನ ಪಕ್ಕದಲ್ಲಿ ನಾನು ನಿಂತಾಗ...!


ಮೊನ್ನೆ ನಾನು ನಟ ರಮೇಶ್ ಅರವಿಂದ್ ಅವರ ಪಕ್ಕದಲ್ಲಿ ನಿಂತು ಫೋಸ್‌ ಕೊಟ್ಟ ಪರಿಯಿದು.

Tuesday, April 1, 2008

'ಸತ್ಯ'ನ ಪರಮಾವಧಿ !


ಪ್ರೀತಿಗಾಗಿ *ಅಖಾಡ*ಕ್ಕಿಳಿದ ಶಿವಣ್ಣ


ಶಿವರಾಜ್ ಕುಮಾರ್ ಮಚ್ಚು ಹಿಡಿದು ನಿಂತಿದ್ದಾರೆ, ಎಂತಹ ಬಿರುಗಾಳಿಯನ್ನೂ ಎದುರಿಸುವ ಸಲುವಾಗಿ 'ಅಖಾಡ'ಕ್ಕಿಳಿದಿದ್ದಾರೆ ಎಂದರೆ ಸಾಕು. ಅದಕ್ಕೊಂದು ಕಾರಣ ಇರಲೇ ಬೇಕು. ಸುಖಾಸುಮ್ಮನೆ ಪೋಸ್ ಕೊಡುವವರಲ್ಲ ಶಿವಣ್ಣ.

ಎತ್ತಾಡಿಸಿ, 'ಜೋ'ಗುಳ ಹಾಡಿ, ತೊಟ್ಟಿಲು ತೂ'ಗಿ'ದ ತಾಯಿಗಾಗಿಯೋ, ಬೆನ್ನಿಗೆ ಬಿದ್ದ ತಂಗಿಯ 'ಸಂತ'ಸಕ್ಕೆ ಅಡ್ಡಿಬಂದವರನ್ನು ಬಗ್ಗುಬಡಿಯುವ ಸಲುವಾಗಿಯೋ, ದೇಹಿ ಎಂದ ಬಡ ಜನರನ್ನು ಕಾಡುವ ವೈರಿಗಳ ಮಗ್ಗುಲು ಮುರಿಯಲೋ... ಒಟ್ಟಾರೆ ಅದಕ್ಕೊಂದು 'ಧರ್ಮಕಾರಣ' ಇದ್ದೇ ಇರುತ್ತೆ; ಇರಲೇ ಬೇಕು ಕೂಡ.

ಶಿವಣ್ಣ ಮತ್ತೊಮ್ಮೆ ಅದೇ ಮಚ್ಚು ಹಿಡಿದು, ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮಲ್ಲಿ ಅಂಕುರಿಸಿದ ಪ್ರೀತಿಗಾಗಿ, ಅದರ ನೀತಿಗಾಗಿ, ಆ ನೀತಿಯ ಪರಿಪೂರ್ಣ ಪಾಲನೆಗಾಗಿ ಆ ವೇಷ ಧರಿಸಿದ್ದಾರೆ. 'ಸತ್ಯ'ನಾಗಿ ಬದಲಾಗಿದ್ದಾರೆ. ಐ ಆಮ್ 'ಇನ್ ಲವ್' ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.

ಸತ್ಯವನ್ನೇ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ. ಆ ಸತ್ಯದಾಣೆಗೂ ಪ್ರೀತಿಯೇ ಸತ್ಯ ಎಂಬ ಕಹಿ ಸತ್ಯವನ್ನು ಶಿವಣ್ಣನ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.

ಒಂದು ಸಾಮಾನ್ಯ ಕಥೆಯ ಎಳೆಯನ್ನಿಟ್ಟುಕೊಂಡು 'ಈ ಭೂಮಿ ಮೇಲೆ ಪ್ರೀತಿ ಏಕಿದೆ?' ಪ್ರೀತಿಯ ಮುಂದಿರುವ ಸವಾಲುಗಳೇನು? ಅಂಥದ್ದೊಂದು ಪರಿಪೂರ್ಣ ಪ್ರೀತಿಗೆ ಹೇಗೆ ನ್ಯಾಯ ಸಲ್ಲಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಿದ್ದಾರೆ. ಆ ಪ್ರೀತಿಯನ್ನು ಪ್ರಚುರ ಪಡಿಸಲು ಸತ್ಯ ಎಂಬ ಪ್ರಧಾನ ಪಾತ್ರ ಸೃಷ್ಟಿಸಿದ್ದಾರೆ. ಆ ಪಾತ್ರದ ಹತ್ತು ಹಲವು ನೇಪಥ್ಯ ದೃಶ್ಯಗಳನ್ನು ಸೃಷ್ಟಿಸಿ ಕತೆಗೆ ಇನ್ನಷ್ಟು ಮೆರುಗು ನೀಡಿದ್ದಾರೆ.

ಒಂದು ಪಕ್ಕಾ ಮಾಸ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲವನ್ನು ಒಂದೆಡೆ ಕಲೆಹಾಕಿ ಪ್ಯಾಕೇಜ್ ರೀತಿಯಲ್ಲಿ ನೀಡಿದ್ದಾರೆ. ಒಂದು ದೃಶ್ಯ, ಅದರ ಬೆನ್ನಿಗೇ ಒಂದು ಫೈಟು, ಮತ್ತೊಂದಿಷ್ಟು ಕಾಮಿಡಿ ಟ್ರ್ಯಾಕ್, ಜತೆಗೊಂದು ಹಾಡು, ನಂತರ ಮತ್ತೊಂದು ದೃಶ್ಯ... ಹೀಗೆ ಎಲ್ಲವೂ ಫಟಾಫಟ್. ಶಿವಣ್ಣನ ಮ್ಯಾನರಿಸಂಗೆ ಸರಿಹೊಂದುವಂತಹ ಡೈಲಾಗ್‌ಗಳು, ಅವರಿಗೆ ಸರಿಹೊಂದುವ ವಿಲನ್‌ಗಳು ಹೀಗೆ ಪ್ರತಿ ಫ್ರೇಮ್‌ನಲ್ಲೂ ಹೊಸತನ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.

ಎಲ್ಲಾ ಅರ್ಥವಾಗಬೇಕಾದರೆ ಮೊದಲು ಕತೆ ಕೇಳಲೇ ಬೇಕು. ಆತ ಸತ್ಯ. ಅಪ್ಪ, ಅಮ್ಮ, ಅಕ್ಕ-ಭಾವನೊಂದಿಗಿರುತ್ತಾನೆ. ಜತೆಗೊಂದಿಷ್ಟು ಪಡ್ಡೆ ಹುಡುಗರು. ಎಲ್ಲರದ್ದೂ ಪಾರ್ಕು, ಡಿಸ್ಕೋಥೆಕ್ ಅಲ್ಲಿ ಇಲ್ಲಿ ಅಂಡಲೆಯುವ ವೃತ್ತಿ. ಸತ್ಯ ಜಂಟಲ್‌ಮನ್. ಯಾರಾದರೂ ಹೆಣ್ಣುಮಕ್ಕಳ ತಂಟೆಗೆ ಹೋದರೆ ಅವರ ಜತೆ ಫೈಟ್ ಮಾಡುತ್ತಾನೆ. ಆದರೆ ಪ್ರೀತಿ, ಪ್ರೇಮದ ಬಗ್ಗೆ ಮಾತ್ರ ಆತ ನೂರು ಮಾರು ದೂರ. ಆದರೆ ಲಲನಾಮಣಿಯರಿಗೆ ಮಾತ್ರ ಸತ್ಯ ನಿತ್ಯ ಮದನ.

ಮನೆಮಂದಿಯಲ್ಲಾ ಸೇರಿ ಮಂತ್ರಾಲಯಕ್ಕೆ ಟ್ರಿಪ್ ಹೋಗುತ್ತಾರೆ. ಸತ್ಯನಿಗೆ ಅಲ್ಲೊಬ್ಬಳು ವೇದಾ ಎಂಬ ಹುಡುಗಿ ಸಿಗುತ್ತಾಳೆ. ಅವರಳ ನೋಟ, ಮೈಮಾಟ ಸತ್ಯನ ಮನಸ್ಸಿನಲ್ಲಿ ಪ್ರೀತಿಯ ಅಲೆ ಎಬ್ಬಿಸುತ್ತದೆ. ಅದುವೇ ನಿಜವಾದ ಪ್ರೀತಿ ಎಂದು ಮನದಟ್ಟಾಗುವ ವೇಳೆಗೆ ಆಕೆ ಮಾಯವಾಗುತ್ತಾಳೆ. ಅವಳ ಹುಡುಕಾಟದಲ್ಲಿ ಒಂದಷ್ಟು ಕಾಲಹರಣ ಮಾಡುತ್ತಾನೆ. ಕೊನೆಗೂ ಅವಳ ಮೂಲವನ್ನು ಪತ್ತೆಹಚ್ಚುತ್ತಾನೆ. ಆಕೆ ಆಂಧ್ರದ ಕರ್ನೂಲು ಮೂಲದ ರೌಡಿ ರಂಗಾರೆಡ್ಡಿಯ ಮಗಳು ಎಂಬ ವಿಷಯ ಅರಿತು ಅವಳನ್ನು ಪಡೆದುಕೊಳ್ಳಲು ರೈಲು ಹತ್ತುತ್ತಾನೆ. ಇತ್ತ ರಂಗಾರೆಡ್ಡಿ ಮಕ್ಕಳಿಗೆ ಸತ್ಯನ ಉದ್ದೇಶ ಗೊತ್ತಾಗಿ ಅವನನ್ನು ಮುಗಿಸುವ ಸಂಚು ಹೂಡುತ್ತಾರೆ. ಆದರೂ ಸತ್ಯ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ. ಅವಳಿಗಾಗಿ ಎಲ್ಲದಕ್ಕೂ ಸಿದ್ಧನಾಗುತ್ತಾನೆ. ಅವಳ ಮನಸ್ಸು ಗೆಲ್ಲಲು ಯತ್ನಿಸುತ್ತಾನೆ. ಸಾಕಷ್ಟು ಬಾರಿ ಸಾವಿನ ದವಡೆಗೂ ಹೋಗಿ ಮತ್ತೆ ಎದ್ದು ಬರುತ್ತಾನೆ... ಮುಂದಿನದನ್ನು ತೆರೆ ಮೇಲೆ ನೋಡಿದರಷ್ಟೇ ಚೆಂದ.

ಇಡೀ ಚಿತ್ರದ ಹೈಲೈಟ್ ಎಂದರೆ ಶಿವಣ್ಣನ ಅಮೋಘ ಅಭಿನಯ. ಒಟ್ಟಾರೆ ಹೇಳುವುದಾದರೆ ಸರ್ವಂ 'ಶಿವ' ಮಯಂ. ಪ್ರೀತಿಯ ಹುಡುಕಾಟದಲ್ಲಿ ಅವರು ಪಡುವ ಪಾಡು, ಅದು ಸಿಗುವ ಸೂಚನೆಗಳೇ ಇಲ್ಲದಿದ್ದಾಗ ನಲುಗುವ ಪರಿ... ಅವೆಲ್ಲ ಶಿವಣ್ಣನಿಂದ ಮಾತ್ರ ಸಾಧ್ಯ. ಹಾಗಂತ ದೂರದಿಂದ ಬಂದಂತ ಸುಂದರಾಂಗ ಜಾಣೆ ಜೆನಿಲಿಯಾಳನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ. ಆದರೆ ಆಕೆ ಗಟ್ಟಿಯಾಗಿ ತುಟಿ ಕಚ್ಚಿ ನುಲಿದಾಗ, ಅಂದವಾಗಿ ನಕ್ಕಾಗ, ಶಿವಣ್ಣನ ಜತೆ ಥೈ ಥೈ ಎನ್ನುವಾಗ ಮಾತ್ರ ನೋಡಲು ಎರಡು ಕಣ್ಣು ಸಾಲದು. ಇನ್ನು ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸೆರೆಯಾದೆನೂ...ಮತ್ತು ರೋಮಾಂಚನಾ... ಹಾಡುಗಳು ಖುಷಿ ಕೊಡುತ್ತವೆ. ಶ್ರೀನಾಥ್, ವಿನಯಾ ಪ್ರಸಾದ್, ಜಯಪ್ರಕಾಶ್, ಅಜಯ್, ಸುಬ್ಬರಾವ್ ಮುಂತಾದ ಪಾತ್ರಗಳು ಕತೆಗೆ ಅನಿವಾರ್ಯ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರುವ ತೆಲುಗು ಸಂಭಾಷಣೆ ಅಚ್ಚಕನ್ನಡಿಗರಿಗೆ ಅರಗಿಸಿಕೊಳ್ಳುವುದು ತುಸು ಕಷ್ಟ.

ಅಂದಹಾಗೆ ನಿರ್ದೇಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆದ್ದಿದ್ದಾರೆ. ಚಿತ್ರದ ಪ್ರತಿ ಸೀನ್‌ನಲ್ಲೂ ಥಳಥಳಿಸುವ ಅದ್ದೂರಿತನ, ಕರ್ನೂಲಿನ ದೃಶ್ಯಗಳಿಗೆ ತೆಲುಗಿನ ನಟರನ್ನೇ ಬಳಸಿಕೊಂಡು ಎಲ್ಲೂ ಅಭಾಸವಾಗದಂತೆ ಚಿತ್ರಿಸಿರುವುದು ಸುಲಭದ ಮಾತಲ್ಲ. ಆ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯವೇ ಸರಿ. ಅವರು ನಿರ್ಮಾಪಕರು ವ್ಯಯಿಸಿದ ಕಾಸಿಗಂತೂ ಮೋಸ ಮಾಡಿಲ್ಲ. ಒಟ್ಟಾರೆ ಶಿವಣ್ಣನ ಹಳೇ ಖದರ್ ನೋಡುವ ಹಂಬಲವಿದ್ದರೆ ಚಿತ್ರವನ್ನು ನೋಡಿ..

ಪೂರ್ಣ ವಿ-ರಾಮ/ ಕಲಗಾರು

ಹಲವು ವಿಸ್ಮಯಗಳಲ್ಲೊಂದು ಈ ತಾಣ !




ಇನ್ನೋವೇಟಿವ್ ಫಿಲಂ ಸಿಟಿ ಎಂಬ ವಿಸ್ಮಯ ಜಗತ್ತು

ಕರ್ನಾಟಕದಲ್ಲಿ ಹಾಲಿವುಡ್ ಮಾದರಿಯ ಚಿತ್ರನಗರಿ ಇಲ್ಲ ಎಂಬ ಕಲಾಪ್ರಿಯರ ಕೊರಗು ಇನ್ನೊವೇಟಿವ್ ಫಿಲ್ಮ್ ಸಿಟಿ ನಿರ್ಮಾಣದಿಂದ ನಿವಾರಣೆಯಾಗಿದೆ.
ಬೆಂಗಳೂರಿನ ಹೊರವಲಯದ ಬಿಡದಿ ಸಮೀಪ ಸುಮಾರು ಐವತ್ತು ಎಕರೆ ಪ್ರದೇಶದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ತೆರೆದುಕೊಂಡ ಈ ಚಿತ್ರನಗರಿ ಐದು ನೂರು ಕೋಟಿ ವೆಚ್ಚದ ಬೃಹತ್ ಯೋಜನೆಯಾಗಿದ್ದು, ೧೦೦ ಕೋಟಿ ವೆಚ್ಚದ ಪ್ರಥಮ ಹಂತದ ನಿರ್ಮಾಣ ಕಾಣಸಿಗುತ್ತಿದೆ.
ಮೊದಲ ಹಂತದ ನಿರ್ಮಾಣದಲ್ಲಿಯೇ ಡೈನೊಪಾರ್ಕ್, ಫನ್ ಪ್ಲೆಕ್ಸ್, ಕಾರ್ಟೂನ್ ಸಿಟಿ, ಅಕ್ವಾ ಕಿಂಗ್‌ಡಂ, ಆಂಪಿ ಚಿತ್ರಮಂದಿರ ಮೊದಲಾದವುಗಳನ್ನು ಮೈಗೂಡಿಸಿಕೊಂಡಿರುವ ಈ ತಾಣ, ಚಿತ್ರನಗರಿ ಮಾತ್ರವಾಗಿರದೇ ಅಂತಾರಾಷ್ಟ್ರೀಯ ಗುಣಮಟ್ಟದ ಮನರಂಜನೆಯ ತಾಣವಾಗಿ, ಶಾಪಿಂಗ್ ಸ್ಥಳವಾಗಿ ಹೊರಹೊಮ್ಮಲಿದೆ.
ಯೂರೋಪಿಯನ್ ವಾಸ್ತುಶೈಲಿ ವಿನ್ಯಾಸದ ಈ ನಗರಿ ಮುಂದಿನ ಹಂತದಲ್ಲಿ ಅತ್ಯಾಧುನಿಕ ಮೆಗಾ ಸ್ಟುಡಿಯೊ, ಫಿಲ್ಮ್ ಅಕಾಡೆಮಿ, ೨೧ ಪರದೆಯ ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಐಟಿ ಪಾರ್ಕ್, ವಿಲ್ಲಾಸ್ ಐಶಾರಾಮಿ ಹೋಟೆಲ್‌ಗಳು, ಮ್ಯಾನ್‌ಶನ್ಸ್, ೪ಡಿ ಚಿತ್ರಮಂದಿರ ಸೇರಿದಂತೆ ಹಲವು ಅಚ್ಚರಿಗಳನ್ನು ಮೈಗೂಡಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳು ತ್ವರಿತಗತಿಯಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿದೆ.


ಇದರ ಹುಟ್ಟು ಯಾರಿಂದ?
ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ ಸ್ಟುಡಿಯೊಸ್‌ನ ಮಾಲೀಕ ಶರವಣ ಪ್ರಸಾದ್ ಈ ಚಿತ್ರನಗರಿಯ ಪ್ರಮುಖ ರೂವಾರಿ. ಜತೆಗೆ ಮನರಂಜನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ರಿಪ್ಲೇಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಬಾಬ್ ಮಾಸ್ಟರ್ ಸನ್ ಕೈಜೋಡಿಸಿದ್ದಾರೆ. ದುಬೈನ ನಿರ್ಮಾಣ ಸಂಸ್ಥೆ ಈಟಿಎನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಎಂ. ಸಲಾವುದ್ದಿನ್ ಅವರ ಸಂಪೂರ್ಣ ಸಹಕಾರವಿದೆ. ನಿರ್ಮಾಪಕ ರ್‍ಯಾಕ್‌ಲೈನ್ ವೆಂಕಟೇಶ್ ಈ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು. ಚಿತ್ರನಗರಿಯ ಸಂಪೂರ್ಣ ಸಿಂಗಾರದ ಜವಾಬ್ದಾರಿಯನ್ನು ವಿಶ್ವ ಪ್ರಸಿದ್ಧ ವಿನ್ಯಾಸಕಾರ ನಿತೀಶ್ ರಾಯ್ ಹೊತ್ತಿದ್ದಾರೆ.
ಮುಂದಿನ ಯೋಜನೆಗಳು
ಮನರಂಜನೆಯೊಂದನ್ನೇ ಗುರಿಯಾಗಿಟ್ಟುಕೊಂಡಿರುವ ಚಿತ್ರನಗರಿ ಪ್ರತಿವರ್ಷ ೬ ಕೋಟಿ ವೀಕ್ಷಕರ ಭೇಟಿಗೆ ಅವಕಾಶ ಕಲ್ಪಿಸಿಕೊಡಲಿದೆ. ೨೫ ಅದ್ಭುತಗಳನ್ನು ಒಂದೆಡೆ ಕಲೆಹಾಕುವ ಗುರಿಯೂ ಇದೆ. ಒಮ್ಮೆಗೇ ೫ ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಅತಿಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಬೃಹತ್ ವೆಚ್ಚದ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಅಲ್ಲದೇ ಒಂದು ಕಡೆಯಲ್ಲಿ ಆರು ಪಥ ರಸ್ತೆ, ಇನ್ನೊಂದು ಕಡೆ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿದಿನ ಬೆಂಗಳೂರಿನಿಂದ ಮೈಸೂರಿಗೆ ಚಿತ್ರನಗರಿ ಮುಖೇನ ೧೨ ರೈಲುಗಳು ಸಂಚರಿಸಲಿವೆ. ದಿನಂಪ್ರತಿ ೫೦೦ ಪ್ರವಾಸಿ ಬಸ್ಸುಗಳು ಓಡಾಡುತ್ತವೆ. ಈ ಸಂಬಂಧ ರಾಜ್ಯ ಪ್ರವಾಸೋದ್ಯಮ ಹಾಗೂ ಮಾಹಿತಿ ಇಲಾಖೆ ಸಾಕಷ್ಟು ಕಾರ್ಯಪ್ರವೃತ್ತವಾಗಿದೆ. ಜತೆಗೆ ಫಿಲಂ ಇನ್ಸ್ಟಿಟ್ಯೂಟ್, ಸ್ಟುಡಿಯೊಗಳನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಹೊಂದಿದೆ.
ರಾಕ್‌ಲೈನ್ ಏನೆನ್ನುತ್ತಾರೆ?
ಇದು ಪ್ರತಿಯೊಬ್ಬ ಕನ್ನಡಿಗನ ಕನಸು. ಅದು ಈ ಮೂಲಕ ಸಾಕಾರಗೊಳ್ಳುತ್ತಿದೆ. ಇಲ್ಲಿ ಸಿನಿಮಾಕ್ಕೆ ಸಂಬಂಸಿದ ಎಲ್ಲವೂ ಲಭ್ಯ. ಅದಕ್ಕಾಗಿ ಬೇರೆಡೆ ಹೋಗುವ ಅಗತ್ಯವೂ ಇಲ್ಲ. ಇಂಥದ್ದೊಂದು ನಮ್ಮಲ್ಲೇ ಹುಟ್ಟಿಕೊಳ್ಳುತ್ತಿದೆಯಲ್ಲಾ ಎಂದು ತುಂಬ ಖುಷಿಯೆನಿಸುತ್ತಿದೆ.
ಹೋಗುವುದು ಹೇಗೆ?
ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿದರೆ ಕೇವಲ ಮುಕ್ಕಾಲು ಗಂಟೆಯಲ್ಲಿ ಬಿಡದಿ ತಲುಪುತ್ತೀರಿ. ಅಲ್ಲೊಂದು ಕೊಕೊಕೋಲಾ ಕಾರ್ಖಾನೆಯಿದೆ. ಅಲ್ಲಿಂದ ಕೂಗಳತೆಯಷ್ಟು ದೂರ. ಗೊತ್ತಾಗದಿದ್ದರೆ ಅಲ್ಲಿಯೇ ಯಾರನ್ನಾದರೂ ಕೇಳಿ ಅಷ್ಟೇ.
ಪ್ರವೇಶ ಶುಲ್ಕವೆಷ್ಟು?
ಅಬ್ಬಬ್ಬಾ ಇದಕ್ಕೆಲ್ಲ್ಲ ನಮ್ಮಂಥವರು ಹೋಗುವುದಾ ಎಂಬ ಪ್ರಶ್ನೆಯೇ ಬೇಡ. ಏಕೆಂದರೆ ಪ್ರವೇಶ ಶುಲ್ಕ ಎಂದು ಸದ್ಯಕ್ಕೆ ಕೇವಲ ೫೦ ರೂ. ಗಳಷ್ಟೇ.
ಡೈನೊಪಾರ್ಕ್
ಸುಮಾರು ೨೦೦೦೦ ಸಾವಿರ ವರ್ಷಗಳ ಹಿಂದೆ ಬದುಕಿದ್ದವು ಎನ್ನಲಾದ ಡೈನೊಸಾರ್‌ಗಳು ಇಲ್ಲಿವೆ. ಹಾಗಂತ ಇದು ಕೇವಲ ಚಿತ್ರವಲ್ಲ. ಉತ್ತಮ ಗುಣಮಟ್ಟದ ರಬ್ಬರ್‌ಗಳನ್ನು ಬಳಸಿ ಬೃಹದಾಕಾರದ ಡೈನೊಸಾರ್‌ಗಳನ್ನು ನಿರ್ಮಿಸಲಾಗಿದೆ. ಈ ಡೈನೊಸಾರ್ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೇ ಹಚ್ಚಹಸಿರ ಕಾಡು ಕಂಗೊಳಿಸುತ್ತವೆ. ಡೈನೊಸಾರ್‌ಗಳ ಅಬ್ಬರದ ಕೂಗು ಕಿವಿಗೆ ರಾಚುತ್ತವೆ. ಎದೆ ಝಲ್ ಎನ್ನುವಂತೆ ಅವು ಆ ಕಡೆ ಈ ಕಡೆ ಚಲಿಸುತ್ತವೆ. ವಾಲ್ಕೆನೊ ಬುಗ್ಗೆಗಳು ಭಯ ಮೂಡಿಸುತ್ತವೆ.
ಲಿಲ್ಲಿ ಪುಟ್ ಪ್ರಪಂಚ

ವಿಶ್ವದ ಹಲವು ಅದ್ಭುತಗಳನ್ನು ಪುಟ್ಟ ಪುಟ್ಟ ಗಾತ್ರದಲ್ಲಿ ಸೃಷ್ಟಿಸಲಾಗಿದೆ. ಇಲ್ಲಿಗೆ ಪ್ರವೇಶಿಸುತ್ತಿದ್ದಂತೇ ನಾವು ಗಜಗಾತ್ರದಷ್ಟಿದ್ದೇವೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತವೆ.
ಫನ್ ಪ್ಲೆಕ್ಸ್ ಇದು ಇರುವುದು ಮಕ್ಕಳಿಗಷ್ಟೇ ಅಲ್ಲ. ಎಲ್ಲರೂ ಇಲ್ಲಿಗೆ ಬರಬಹುದು. ಬೌಲಿಂಗ್, ಸೈಕಲಿಂಗ್ ಮುಂತಾದ ಹತ್ತಾರು ಕ್ರೀಡೆಗಳು ಇಲ್ಲಿ ಲಭ್ಯ. ೪ಡಿ ಥಿಯೇಟರ್‌ಗಳು, ಡಿಜಿಟಲ್ ತಂತ್ರಜ್ಞಾನದ ಗೇಮ್‌ಗಳು ಮನರಂಜನೆಗೆ ಹೇಳಿಮಾಡಿಸಿದಂತಿವೆ.
ವ್ಯಾಕ್ಸ್ ಮ್ಯೂಸಿಯಂ
ಸಿನಿಮಾ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ವಿಶ್ವ ಮಾನ್ಯತೆ ಪಡೆದ ಮಹಾನ್ ವ್ಯಕ್ತಿಗಳ ಮೇಣದ ಆಕೃತಿಗಳು ಇಲ್ಲಿ ಕಾಣಸಿಗುತ್ತವೆ. ಏಸುಕ್ರಿಸ್ತ, ಶ್ರೀ ಕೃಷ್ಣ, ಮಹಾತ್ಮ ಗಾಂಜಿ, ವಿಲಿಯಂ ಶೇಕ್ಸ್‌ಪಿಯರ್, ಚಾರ್ಲಿ ಚಾಪ್ಲಿನ್ ಹೀಗೆ ಲೆಕ್ಕವಿಲ್ಲದಷ್ಟು ಕಲಾಕೃತಿಗಳು ಕಣ್ಮನ ತಣಿಸುತ್ತವೆ.
ನಂಬಿ ಇಲ್ಲವೇ ಬಿಡಿ....!
ಅಪರೂಪದ ಆನೆಗಳ ಅಸ್ಥಿಪಂಜರಗಳು, ಮುಟ್ಟಿದರೆ ಬಸಿರಾಗಿಬಿಡುವ ವಿಶೇಷ ವಾಸ್ತುಶಿಲ್ಪಗಳು! ಡೈನೊಸಾರ್ ಮೊಟ್ಟೆಗಳು ಮುಂತಾದ ಹಲವುವಿಸ್ಮಯಭರಿತ, ಅಪರೂಪದ, ಚಮತ್ಕಾರಿಕ ವಸ್ತುಗಳು. ಅಬ್ಬಬ್ಬಾ ಅವುಗಳನ್ನೆಲ್ಲ ನೋಡಿಯೇ ಅನುಭವಿಸಬೇಕು.
ಆಂಫಿ ಥಿಯೇಟರ್ಸ್

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳು, ಸಂಗೀತೋತ್ಸವಗಳು ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿ ಒಮ್ಮೆಗೇ ೧೫ ಸಾವಿರ ವೀಕ್ಷಕರು ಕೂರುವ ವ್ಯವಸ್ಥೆ ಕಲ್ಪಿಸಲಾಗುವುದು. ಇಂತಹದ್ದೊಂದು ಥಿಯೇಟರ್ ಇರುವುದು ಭಾರತದಲ್ಲೇ ಮೊದಲು.
ವಿಸ್ಮಯ ಜಗತ್ತು!

ಭೂಕಂಪ, ಚಂಡಮಾರುತ, ಬಿರುಗಾಳಿ ಮುಂತಾದವು ಹೇಗೆ ಉದ್ಭವಿಸುತ್ತವೆ ಎಂಬುದನ್ನು ಇಲ್ಲಿ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ವಿಶ್ವದ ನಾನಾ ನುರಿತ ವಿಜ್ಞಾನಿಗಳು ಇವುಗಳ ಕುರಿತು ಪ್ರಾತ್ಯಕ್ಷಿಕೆ ಕಟ್ಟಿಕೊಡಲಿದ್ದಾರೆ. ಮೈ ನವಿರೇಳಿಸುವ ಗಾತ್ರದ ಅಸ್ತಿ ಪಂಜರಗಳು, ದೈತ್ಯಾಕಾರದ, ನಿಗೂಢತೆ ಸೂಸುವ ಭಯಾನಕ, ಭ್ರಮೆ ಮೂಡಿಸುವ, ಮನುಷ್ಯರ ರಕ್ತ ಹೀರುವ ನರಪಿಶಾಚಿಗಳ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಪೂರ್ಣವಿ- ರಾಮ/ ಕಲಗಾರು

Sunday, March 23, 2008



ರಕ್ತದೋಕುಳಿಯಲ್ಲಿ ಮಿಂದೆದ್ದ ಗೂಳಿ !

ನಟ ಸುದೀಪ್ ಲಾಂಗ್ ಗ್ಯಾಪಿನ ನಂತರ ಮತ್ತೆ ಬಂದಿದ್ದಾರೆ.
ಜತೆಗೆ ಫಳಪಳಿಸುವ ಲಾಂಗ್‌ಒಂದನ್ನು ಲಂಗುಲಗಾಮಿಲ್ಲದೇ ತಿರುತಿರುಗಿಸುತ್ತಾ ಬಂದಿದ್ದಾರೆ.
ಇತ್ತೀಚೆಗೆ ಬರೀ ಕ್ಲಾಸ್ ಪ್ರೇಕ್ಷಕರ ಅಭಿರುಚಿಗೆ ಸರಿಹೊಂದುವ ಪಾತ್ರ, ಚಿತ್ರಗಳನ್ನೇ ಮಾಡಿಕೊಂಡಿದ್ದ ಅವರು ಮತ್ತೊಮ್ಮೆ ಕಿಚ್ಚನ ವರಸೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂನಿಂದ ಮನೆಮಾತಾಗಿದ್ದ ಅವರು, ಈಗ ಮತ್ತದೇ ಮುಖವಾಡ ಧರಿಸಿದ್ದಾರೆ. ಗುಟ್ಟಾಗಿ ಘೋರಿ ತೋಡುವ 'ಗೂಳಿ’ಯಾಗಿ ಬದಲಾಗಿದ್ದಾರೆ. ಮಾತೆತ್ತಿದರೆ ಮಾಂಜಾಕೊಡುವ, ಸೊಲ್ಲೆತ್ತಿದರೆ ಸುಡಗಾಡು ತೋರಿಸುವ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಹಲವು ವರ್ಷಗಳಿಂದ ಹಸಿದು ಬಸವಳಿದಿದ್ದ ತಮ್ಮ ಅಭಿಮಾನಿಗಳಿಗೆ "ಮೃಷ್ಟಾನ್ನ ಭೋಜನ’ ಉಣಬಡಿಸಿದ್ದಾರೆ. ಮಚ್ಚಿನ "ರುಚಿ’ ತೋರಿಸಿದ್ದಾರೆ.

ಗೂಳಿ ಬಂತು ಗೂಳಿ... ಆತ ದೊಡ್ಡ ರೌಡಿ. ಹೆಸರು ಹೂಳಿ. ಅವನ ಹಿಂದೆ ದೊಡ್ಡದೊಂದು ಠೋಳಿ. ಹೆಸರು ನೈಂಟಿ, ಕ್ವಾಟ್ರು, ಮೀಟ್ರು...ಎಲ್ಲೆಲ್ಲಿ ಯಾವಯಾವ ಹತಾರ ಮಡಗಿರುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಮಾತೆತ್ತಿದರೆ ಮಾಂಜಾ. ಸೊಲ್ಲೆತ್ತಿದರೆ ಸುಡಗಾಡು. ಇಡೀ ಬೆಂಗಳೂರಿನಲ್ಲಿ ಅವರದ್ದೇ ಹಾವಳಿ. ಗೂಳಿ ಬಂದ ಎಂದರೆ ಅಲ್ಲೊಂದಿಷ್ಟು ಜನ ಹೆಣವಾಗೋದು ಗ್ಯಾರಂಟಿ. ಕೈಲೊಂದು ಮಾರುದ್ದ ಲಾಂಗ್ ಇದ್ದರೆ ಸಾಕು, ಅದು ಯಾರ್‍ಯಾರನ್ನು ತಿವಿಯುತ್ತೋ ಅಂಥ ಆ ದೇವರಿಗೇ ಗೊತ್ತು!
ಶಿವಾಜಿನಗರದ ಫಯಾಜ್, ಮತ್ತಿ ಸೀನ, ಶ್ರೀರಾಂಪುರದ ಸೆಲ್ವ... ಗೂಳಿಯ ಎದುರಾಳಿಗಳು. ಅವರದ್ದೂ ಒಂದೇ ಸಿದ್ಧಾಂತ- ಹೊಡಿ, ಬಡಿ, ಕಡಿ... ಅವರು ಯಾವುದಕ್ಕೂ ರೆಡಿ. ಗೂಳಿಯ ತಂಟೆಗೆ ಹೋಗೋದು ಸುಖಾಸುಮ್ಮನೇ ಲತ್ತೆ ತಿನ್ನೋದು.

ಆಗೊಬ್ಬ ರಮ್ಯಾ ಎಂಬ ಬೆಡಗಿ ಬರುತ್ತಾಳ. ಆಕೆ ಹೈಟೆಕ್ ಹುಡುಗಿ. ಇದ್ದ ಇಬ್ಬರು ಅಣ್ಣಂದಿರಿಗೆ ಅವಳೇ ಸರ್ವಸ್ವ. ಅಕಸ್ಮಾತ್ ಗೂಳಿಯನ್ನು ಭೇಟಿಯಾಗುತ್ತಾಳೆ. ಅವನ ಸ್ಟೈಲಿಗೆ, ಒರಟುತನಕ್ಕೆ ಮರುಳಾಗುತ್ತಾಳೆ. ಅವನ ನಿಷ್ಕಲ್ಮಶ ಹೃದಯಕ್ಕೆ ಮಾರುಹೋಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಅವ ಭೂಗತಪಾತಕಿ ಎಂದು ಗೊತ್ತಾಗಿಯೂ ಅದನ್ನೇ ಮಾಡುತ್ತಾಳೆ. ಅವನನ್ನೇ ಬದಲಿಸುವ ಪ್ರಯತ್ನ ಮಾಡುತ್ತಾಳೆ. ಗೂಳಿಯ ವಿರೋಧಿಗಳ ಕೈಗೆ ಸಿಕ್ಕಿ ನಲುಗುತ್ತಾಳೆ. ಇನ್ನೇನು ಗೂಳಿ ಬದಲಾಗಿ, ಗೊಸ ಬಾಳಿಗೆ ಅಡಿಯಿಡಬೇಕು ಎನ್ನುವಷ್ಟರಲ್ಲಿ ಮತ್ತೆ ಭೂಗತ ಜಗತ್ತು ಕೈಬೀಸಿ ಕರೆಯುತ್ತೆ... ಮುಂದೈತೆ ಗೂಳಿಯ ಹೋಳಿ ಹಬ್ಬ.
ಇದು ಗೂಳಿ ಚಿತ್ರದ ಕೇವಲ ಸ್ಯಾಂಪಲ್ ಅಷ್ಟೇ. ಇನ್ನಷ್ಟು ರಕ್ತಪಾತ, ಕೊಲೆ, ಸುಲಿಗೆ, ರಕ್ತ ಸಿಕ್ತ ಹೋಳಿಹಬ್ಬ ನೋಡುವ ಹಂಬಲವಿದ್ದರೆ ಗೂಳಿಯ ಬಳಿ ಬನ್ನಿ. ಅಂಥದ್ದೊಂದು 'ಭಯಂಕರ ಪ್ರಾತ್ಯಕ್ಷಿಕೆ’ಯನ್ನು ನಿಮಗೆ ನೀಡಿದ್ದಾರೆ ನಿರ್ದೇಶಕ ಪಿ. ಸತ್ಯಾ. ಎದುರಾಳಿಗಳನ್ನು ಹೇಗೆ ಅಟ್ಟಾಡಿಸಿಕೊಂಡು ಹೋಗಿ ಅಡ್ಡಡ್ಡಾ ಸಿಗಿಯಬೇಕು, ಎಲ್ಲೆಲ್ಲಿ ತಿವಿದರೆ ಬೇಗೆ ಸಾಯುತ್ತಾರೆ ಎಂಬುದನ್ನು ಮೊದಲಾರ್ಧದಲ್ಲಿ ಚಾಚೂತಪ್ಪದೇ ಅವರು ವಿವರಿಸಿದ್ದಾರೆ. ರೌಡಿಸಂ ಬ್ಯಾಡ, ಭೂಗತ ಲೋಕ ಅಷ್ಟು ಸುಲಭವಲ್ಲ ಎಂಬುದನ್ನು ಒಂದು 'ಅದ್ಬುತ ಸಾಕ್ಯಚಿತ್ರ'ದಂತೇ ಹೇಳಲು ಪ್ರಯತ್ನಿಸಿ ಎಲ್ಲೋ ಒಂದುಕಡೆ ಎಡವಿದ್ದಾರೆ. ಬರೀ ಹಿಂಸಾತ್ಮಕ ದೃಶ್ಯಗಳಿಗೇ ಒತ್ತುಕೊಟ್ಟು ಇಡೀ ಚಿತ್ರಕ್ಕೆ ಸಿಗಬೇಕಾದ ಕಿಮ್ಮತ್ತಿಗೇ ಕಪ್ಪುಚುಕ್ಕೆ ಇಟ್ಟಿದ್ದಾರೆ. ಆದರೆ ಅಯ್ಯಯ್ಯೋ ಇದೇನಪ್ಪಾ "ಬರೀ ಹೊಡೆದಾಟ’ಎಂದುಕೊಳ್ಳುತ್ತಿದ್ದಂತೇ ಮಧ್ಯಮಧ್ಯ ಬರುವ ಕೆಲವು ಹಾಡುಗಳು ಕೆಲಸಮಯ ಮುದ ನೀಡುತ್ತವೆ. ಸುಮ್ ಸುಮ್ನೆಯಾಕೋ.. ಕದ್ದು ಕದ್ದು ನನ್ನ ನೋಡೋ... ಹಾಡುಗಳು ಕೊನೆವರೆಗೂ ನಮ್ಮನ್ನೇ ಹಿಂಬಾಲಿಸುತ್ತವೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್‌ಗೆ ಉತ್ತಮ ಭವಿಷ್ಯವಿದೆ. ಸಾಹಸ ನಿರ್ದೇಶಕ ಪಳನಿರಾಜ್ ಕೂಡ ಪ್ರತಿ ಫ್ರೇಮ್‌ನಲ್ಲೂ ಫಳಫಳಿಸಿದ್ದಾರೆ.

ಆದರೆ ನಟಿ ಮಮತಾ ಮೋಹನ್‌ದಾಸ್ ಮಾತ್ರ ಬೆಳ್ಳಗಿರೋದೆಲ್ಲಾ ಹಾಲಲ್ಲಾ ಎಂಬುದನ್ನು ನಿರೂಪಿಸಿದ್ದಾರೆ. ತಮ್ಮ ಮಾತಿಗೂ ಅಭಿನಯಕ್ಕೂ ಒಂದಕ್ಕೊಂಡು ಸಂಬಂಧವೇ ಇಲ್ಲವೇನೋ ಎಂಬಂತೇ ಅವರ ಅಭಿನಯ ಸಪ್ಪೆಸಪ್ಪೆ. ಕಿಶೋರ್, ಭವ್ಯ,
ಸುದೀಪ್ ಎಲ್ಲೂ ಸೋತಿಲ್ಲ. ಬದಲಾಗಿ ಇನ್ನಷ್ಟು ಮಾಗಿದ್ದಾರೆ. ತಮ್ಮ ಸೂಪರ್‌ಫಾಸ್ಟ್ ಡೈಲಾಗ್‌ಗಳಿಂದ "ಗೂಳಿ’ಗೆ ಮತ್ತಷ್ಟು ಜೀವತುಂಬಿದ್ದಾರೆ. ಜತೆಗೆ ಚಿತ್ರದ ಫಟಾಫಟ್ ಸಂಭಾಷಣೆ ಕೂಡ ಗೂಳಿಗೆ ಇನ್ನಷ್ಟು ಓಟ ನೀಡಿದೆ. ಒಟ್ಟಾರೆ ಇದೊಂದು ಅಪ್ಪಟ ಮಾಸ್ ಚಿತ್ರವಂತೂ ಹೌದು. ಕ್ಲಾಸ್ ಸಿನಿಮಾ ಎನ್ನಲು ಗೂಳಿಯ ಕೈನಲ್ಲಿರುವ ಇಷ್ಟುದ್ದದ ಲಾಂಗು ಅಡ್ಡಗೋಡೆಯಾಗಿ ನಿಂತಿದೆ!

ಪೂರ್ಣ ವಿರಾಮ / ಕಲಗಾರು

Tuesday, March 18, 2008

ನಾನೂ 'ಕಿರಣ್ ಬೇಡಿ'ಯನ್ನುಭೇಟಿಯಾಗಿದ್ದೆ ಗೊತ್ತಾ... !


ಮಾಲಾಶ್ರೀಜೀ‌ ಜೊತೆ
ಒಂದಿಷ್ಟು ಮಾತುಕತೆ...

ಕನ್ನಡಿಗರ 'ಕನಸಿನ ರಾಣಿ’ ಮಾಲಾಶ್ರಿ ಸದ್ಯಕ್ಕೆ ತೆರೆಮರೆಯಲ್ಲಿ ಬಿಜಿಯಾಗಿದ್ದಾರೆ. ತೆರೆಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ ಕೂಡ. ಈ ಮಧ್ಯೆ ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಗುಲಾಮ ಚಿತ್ರದ ಮುಹೂರ್ತ ಸಮಾರಂಭಕ್ಕಾಗಿ ಕಂಠೀರವ ಸ್ಟುಡಿಯೊಕ್ಕೆ ಬಂದಿದ್ದರು. ಅಲ್ಲೆಲ್ಲೋ ಅಡ್ಡಾಡುತ್ತಿದ್ದ ನನಗೆ ಕೆಲವೇ ನಿಮಿಷ ಮಾತಿಗೆ ಸಿಕ್ಕರು. ಅವರ ಮಾತುಗಳನ್ನು ಪ್ರಶ್ನೋತ್ತರ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಅದು ನಿಮಗೂ ಇಷ್ಟವಾಗುತ್ತೆ ಎಂದುಕೊಳ್ಳುತ್ತಾ...

* ಎಲ್ಲಿ ಮೇಡಮ್ ಸುಮಾರು ತಿಂಗಳಿಂದ ಪತ್ತೇನೇ ಇಲ್ಲ?
ಹಾಗೇನಿಲ್ಲ. ಸದ್ಯಕ್ಕೆ ಓಂ ಪ್ರಕಾಶ್ ನಿರ್ದೇಶನದ ಕಿರಣ್ ಬೇಡಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೆ. ಅರ್ಧಬಾಗ ಶೂಟಿಂಗ್ ಮುಗಿದಿದೆ. ಈಗ ಬಳ್ಳಾರಿಯಲ್ಲಿ ನಡೀತಾ ಇದೆ. ಇನ್ನೇನು ಮುಗಿದುಬಿಡುತ್ತೆ.

* ಸ್ವಲ್ಪ ತೆಳ್ಳಗಾಗಿದ್ದೀರಿ...?
ಹೌದು. ಶೂಟಿಂಗ್‌ಗಾಗಿ ಸಾಕಷ್ಟು ಡಯಟ್ ಮಾಡ್ತಾ ಇದ್ದೀನಿ. ಕಿರಣ್ ಬೇಡಿಗೋಸ್ಕರ ಅಂತಾನೇ ೧೯ ಕೆಜಿ ಇಳಿದಿದ್ದೀನಿ. ಎಣ್ಣೆ ಪದಾರ್ಥವನ್ನೇ ಮುಟ್ಟದೆ ಎಷ್ಟೋ ದಿನ ಆಗೋಯ್ತು. ಡೆಲಿವರಿ ಬೇರೆ ಆಗಿದೆಯಲ್ಲ. ಆದ್ದರಿಂದ ತುಂಬಾ ಕೇರ್ ತೊಗೋತಾ ಇದೀನಿ. ನೀವ್ ನಂಬುತ್ತೀರೋ ಇಲ್ಲವೊ. ಮಸಾಲೆ ದೋಸೆ ತಿನ್ನದೇ ಎಷ್ಟೋ ತಿಂಗಳಾಗಿತ್ತು. ನಿನ್ನೆ ತಿಂದೆ ಗೊತ್ತಾ!

* ಕಿರಣ್ ಬೇಡಿ ಜತೆ ಮಾತನಾಡಿದ್ದೀರಾ? ಅವರ ಆತ್ಮ ಚರಿತ್ರೆ ಓದಿದ್ದೀರಾ?
ಅದನ್ನೇನೂ ಓದಿಲ್ಲ. ತಯಾರಿ ಅಂತೇನಿಲ್ಲ. ಅವರನ್ನು ಭೇಟಿಯಾಗಬೇಕೆಂದಿದ್ದೆ. ಸಾಧ್ಯವಾಗಲಿಲ್ಲ. ಆದರೆ ಅವರನ್ನು ಈ ಮೇಲ್ ಮುಖಾಂತರ ಭೇಟಿಯಾಗಿದ್ದೀನಿ.

* ಅಂದಿನ ಕ್ರೇಜ್‌ಅನ್ನೇ ಉಳಿಸಿಕೊಂಡಿದ್ದೀರಾ?
ಅದಕ್ಕಿಂತಲೂ ಹೆಚ್ಚಾಗಿದೆ ಸ್ವಾಮಿ. ಅದಕ್ಕೊಂದು ಘಟನೆ ಹೇಳ್ತೀನಿ ಕೇಳಿ. ಚಾಮುಂಡಿ ಬಿಡುಗಡೆಯಾದ ಸಮಯದಲ್ಲಿ ಅನ್ನಿಸುತ್ತೆ. ಕೆಲವು ಪಡ್ಡೆಗಳು ಟೈಟ್‌ಆಗಿ ಬಂದು, ಕೈಯಲ್ಲಿ ಇಷ್ಟುದ್ದುದ್ದ ಬಾಟಲ್ ಹಿಡಕೊಂಡು, 'ತೊಗೋಳ್ಳಿ ಮೇಡಮ್. ನೀವು ಗುಂಡಿನ ರಾಣಿ. ಈ ಗುಂಡು ಒಳಗೆ ಸೇರಿದರೆ ಅದರ ಲೆವೆಲ್ಲೇ ಬೇರೆ ಮೇಡಮ್’ ಎಂದುಬಿಟ್ಟರು. (ಒಮ್ಮೆ ಜೋರಾಗಿ ನಕ್ಕರು) ಕೊನೆಗೆ ಬಾಟೆಲ್‌ಗಳ ಸರಮಾಲೆಯನ್ನೇ ನನ್ನ ಕೊರಳಿಗೆ ನೇತು ಹಾಕಿಬಿಟ್ಟರು. ಗುಂಡಿನ ರಾಣಿ ಅಂತ ಅನಂತ್‌ನಾಗ್ ಪ್ರೀತಿಯಿಂದ ಕರೆಯುತ್ತಿದ್ದರು. ಈಗ ಹೇಳಿ ಕ್ರೇಜ್ ಹೇಗಿದೆ ಅಂತ.

* ಬೇರೆ ಬ್ಯಾನರ್‌ನಲ್ಲಿ ಆಫರ್ ಬರಲಿಲ್ಲವಾ?
ಸಾಕಷ್ಟು ಬಂದಿತ್ತು. ದುರ್ಗಿ ನಂತರ ತುಂಬಾ ನಿರ್ಮಾಪಕರು ಕೇಳಿಕೊಂಡು ಬಂದರು. ಆದರೆ ಮಾಲಾಶ್ರೀ ಎಂದರೆ ಹೀಗೇ ಇರಬೇಕು ಎಂಬ ಕನಸು ಪ್ರತಿಯೊಬ್ಬ ಪ್ರೇಕ್ಷಕನಿಗೂ ಇದೆ. ಆ ನನ್ನ ಇಮೇಜಿಗೆ ದಕ್ಕೆಯಾಗಬಾರದು ಎಂದು ಕೆಲಕಾಲ ಸುಮ್ಮನಿದ್ದೆ. ನಂತರ ಬಸುರಿ, ಬಾಣಂತನ ಅಂತ ಮನೆ ಸೇರಿಬಿಟ್ಟೆ. ಈಗ ಕಿರಣ್ ಬೇಡಿಯಲ್ಲಿ ಬಿಜಿಯಾದೆ. ಯಾವುದೇ ಒಳ್ಳೆಯ ಪಾತ್ರಕ್ಕಾದರೂ ಸದಾ ಸಿದ್ಧಳಿದ್ದೇನೆ.

* ನಟನೆಯಲ್ಲಿ ಅಂದಿನ ಎನರ್ಜಿ ಇಂದಿಗೂ ಇದೆಯಾ?
ಓ... ಅದೇ ತಾಕತ್ತು, ಅದೇ ಎನರ್ಜಿ ಇಂದಿಗೂ ಇದೆ. ಆದರೆ ನನಗೆ ಇದು ಶೂಟಿಂಗು, ಇಲ್ಲಿ ಹೀಗೇ ಇರಬೇಕು, ಹೀಗೇ ಮಾಡಬೇಕು ಎಂದು ಯಾವತ್ತೂ ಅನಿಸಿಯೇ ಇಲ್ಲ. ನಿರ್ದೇಶಕರು ಏನು ಹೇಳ್ತಾರೋ ಅದನ್ನು ಯಥಾವತ್ತಾಗಿ ಮಾಡುತ್ತಿದ್ದೆ ಅಷ್ಟೆ. ಆ ವರಸೆಯನ್ನು ಇವತ್ತು ಟಿವಿಯಲ್ಲಿ ನೋಡಿದರೆ ನನಗೇ ಆಶ್ಚರ್ಯ ಆಗುತ್ತೆ. ಇದು ನಾನೇನಾ ಎಂಬ ಸಂಶಯವೂ ಬರುತ್ತೆ. ಆದರೆ ಈಗ ಅಭಿನಯದಲ್ಲಿ ಇನ್ನಷ್ಟು ಗಟ್ಟಿತನ, ಆಳವನ್ನು ಕಂಡುಕೊಂಡಿದ್ದೇನೆ. ಎಲ್ಲಾ ಒಂದೇ ಶಾಟ್‌ನಲ್ಲಿ ಫಿನಿಶ್.


ಪೂರ್ಣ ವಿ-ರಾಮ / ಕಲಗಾರು

Sunday, March 16, 2008




ಐವತ್ತರ ಹೈದನಿಗೊಂದು ಗೀತೆ

ಬರವಣಿಗೆಯೆಂಬ
ಧನ್ವ ಹಿಡಿದು
ಬಂದ ಧರಾಮರ,
ನೇತಿಮಾರ್ಗವನು
ಪ್ರತಿಪಾದಿಸಿ, ತಿಮಿರತೆಗೆ
ಪ್ರತಿಬಂಧಕನಾಗಿ ನೇರ
ನಡೆಯಿಂದ ನುತನಾಗಿ,
ಬೆಳಗಿನ ರವಿಗೆ ಬಾಯ್ಗೂಟವಿಡುತ
ಬಂದ ಬೆಳಗೆರೆ

ರವಿ ಕಾಣದ ಕೊತ್ತಣವ,
ಬಿಳಿಹಾಳೆಯ ಮೇಲೆ
ಧವಳಿಸುವ ಪದಗಳ
ಜೋಡಿಸುತ, ಜಂಕಿಸುತ
ಧೂಸರದ ದಾಡಿಯಲಿ ಧಾವಿಸಿ
ಬಂದ ಬೆಳಗೆರೆ

ಈ ಧುರ್ಯನಿಗೀಗ ಐವತ್ತರ ವಸಂತ
ಅವರ ಧೀವಸಭರಿತ, ಮೊಣಚಾದ
ಬರಹ ಚಿರಕಾಲ ಪ್ರರೋಮಂಥಿಸಲಿ


ಪೂರ್ಣವಿ-ರಾಮ / ಕಲಗಾರು

Saturday, March 15, 2008

ನಿನ್ನೆ ನಾ ನೋಡಿದ ನಂದಾ ನಂದಿತಾ ಸಿನಿಮಾ....


ಅದೇ ಮಾದ, ಅದೇ ನಾದ, ಅದೇ ಸ್ವಾದ !

ನೈಂಟಿ ಎಣ್ಣೆ ಹಾಕಿದರೆ ತಾಕತ್ತು ಬರುತ್ತೆ. ಆಗ ಮಾತ್ರ ಕುಣಿಯೋಕೆ ಸಾಧ್ಯ. ಕೈನಲ್ಲಿ ಬಾಟಲ್ ಇರಬೇಕು. ಅದು ಇದ್ರೆ ಮಾತ್ರ ಮೀಟ್ರು ಮಗಾ ಎಂಬ ಅಲಿಖಿತ ಸಿದ್ದಾಂತ ಅವನದು. ಹೆಣದ ಮುಂದೆ ಹೆತ್ತವರು ಅಳುತ್ತಿದ್ದರೆ ಈತ ಮೈ ಮರೆತು ಸೊಂಟ ಕುಣಿಸುತ್ತಾನೆ. ಅದು ಅವನ ಹೊಟ್ಟೆಪಾಡು. ಊರಿಗೆ ಊರೇ ಮಲಗಿದ್ದಾಗ ಬಾರಲ್ಲಿ ಇವನ ಕಾರುಬಾರು. ಜತೆಗೊಬ್ಬ ಕ್ವಾಟ್ರು ಹಾಗೂ ಅವನ ಗ್ಯಾಂಗು.

ಆತನೇ ನಂದ. ಏನೂ ಅರಿಯದ ಅಬ್ಬೇಪಾರಿ. ಒಂಥರಾ ಲೂಸ್ ಮಾಡಿ ಹಾಗೆ ಮಾಡುತ್ತಾನೆ. ಆರು ಕೊಟ್ಟರೆ ಫುಲ್ ಮರ್ಡರ್. ಮೂರು ಕೊಟ್ಟರೆ ಹಾಫ್ ಮರ್ಡರ್. ಅವ ಬೀದಿಗೆ ಬಿದ್ದವ. ಹೆತ್ತಮ್ಮ, ಅಪ್ಪನ ಕಾಟ ತಾಳಲಾರದೇ ಸ್ವರ್ಗ ಸೇರಿರುತ್ತಾಳೆ. ಅಪ್ಪ ಸಂಸಾರ ‘ದೂಡಲು’ ಮತ್ತೊಬ್ಬ ಬಿನ್ನಾಣಗಿತ್ತಿಯನ್ನು ಮದುವೆಯಾಗಿರುತ್ತಾನೆ. ಆಕೆಗೆ ಮಾಮೂಲಿ ಸವತಿ ಮತ್ಸರ. ನಂದನ ಮೇಲೆ ಎಲ್ಲಿಲ್ಲದ ತಾತ್ಸಾರ. ಆ ಕಂದನಿಗೆ ಶಾಲೆ ಕಲಿಯುವ ಆಸೆ. ಆದರೆ ಅಪ್ಪನಿಗೆ ಮಗನ ಕಂಡರೆ ನಿರಾಸೆ. ಚಿಕ್ಕಮ್ಮನಿಗೆ ತನ್ನ ಮಕ್ಕಳು ಮಾತ್ರ ಕಲಿಯಬೇಕೆಂಬ ದುರಾಸೆ. ಆತ ಐದನೇ ಕ್ಲಾಸು ಮುಗಿಸಿ ಶಾಲೆಗೆ ಸಲಾಂ ಹೊಡೆಯುತ್ತಾನೆ. ಪಡ್ಡೆ ಹುಡುಗರ ಜತೆ ಸೇರಿ ಊರೂರು ಅಲೆಯತ್ತಾನೆ. ಕುಡಿದು, ಕುಪ್ಪಳಿಸುತ್ತಾನೆ. ಅದೇ ಮುಖದಲ್ಲಿ ಮನೆ ಸೇರುತ್ತಾನೆ. ಅಪ್ಪ , ಚಿಕ್ಕಮ್ಮನಿಂದ ಹೊರದಬ್ಬಲ್ಪಡುತ್ತಾನೆ. ಹೊಟ್ಟೆಪಾಡಿಗಾಗಿ ಫೈನಾನ್ಸ್ ಹಣ ವಸೂಲಿ ಮಾಡುವ ಕೆಲಸಕ್ಕೆ ಸೇರುತ್ತಾನೆ.

ಆಗೊಬ್ಬ ಹುಡುಗಿ ಬರುತ್ತಾಳೆ. ಅವಳೇ ನಂದಿತಾ. ಈಗಷ್ಟೇ ಹದಿನಾರು ದಾಟಿರುತ್ತಾಳೆ. ಕಾಯಿಲೆ ಬಿದ್ದ ಅಮ್ಮನ ಜತೆಗಿರುತ್ತಾಳೆ. ನಂದನನ್ನು ಅಡ್ಡಾದಲ್ಲಿ ನೋಡುತ್ತಾಳೆ. ಸಹಾಯಹಸ್ತ ಬೇಡುತ್ತಾಳೆ. ಅಲ್ಲಿ ಇಲ್ಲಿ ತಿರುಗುತ್ತಾಳೆ. ಅವನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇತ್ತ ನಂದ ದುಡ್ಡಿಗಾಗಿ ನಂಬರ್ ಟು ಧಂದೆಗೆ ಇಳಿಯುತ್ತಾನೆ. ರೌಡಿ ದೇವರಾಜ್‌ನಿಂದ ಕ್ಯಾಟ್ ಚಂದ್ರನ ಕೊಲೆಗೆ ಸುಪಾರಿ ಪಡೆಯುತ್ತಾನೆ. ಕೊಲೆಗೆ ಸಂಚು ಹೂಡುತ್ತಾನೆ. ತನ್ನ ಅಡ್ಡಾಕ್ಕೆ ಕರೆತಂದು ಆತನನ್ನು ಅಡ್ಡಡ್ಡಾ ಸಿಗಿಯುತ್ತಾನೆ. ಅದನ್ನು ನಂದಿತಾ ನೋಡಿಬಿಡುತ್ತಾಳೆ. ಅವನ ಭಂಡತನವನ್ನು ಕಣ್ಣಾರೇ ಕಂಡು ಮನೆ ಖಾಲಿ ಮಾಡುತ್ತಾಳೆ.
ಇತ್ತ ಕ್ಯಾಟ್‌ಚಂದ್ರ ಮಾತ್ರ ಪವಾಡ ಸದೃಶವಾಗಿ ಪಾರಾಗಿಬಿಡುತ್ತಾನೆ. ನಂದನಿಗಾಗಿ ಹುಡುಕಾಡತೊಡಗುತ್ತಾನೆ. ಇತ್ತ ನಂದ ನಂದಿತಾಳನ್ನು ಹುಡುಕುತ್ತಾನೆ. ಅತ್ತ ನಮಕ್ ಹರಾಮ್ ಕೆಲಸ ಮಾಡಿದ ಎಂದು ರೌಡಿ ದೇವರಾಜ್ ನಂದನನ್ನು ಹುಡುಕಹತ್ತುತ್ತಾನೆ... ಮುಂದೆ... ಪಾತಕ ಲೋಕದಲ್ಲೊಂದು ಮೊಹಬ್ಬತ್ !

ಇದು ಈ ವಾರಬಂದ ನಂದ ನಂದಿತಾ ಚಿತ್ರದ ಒನ್‌ಲೈನ್ ಸ್ಟೋರಿ. ದುನಿಯಾದ ಲೂಸ್ ಮಾದನಾಗಿ ಗೆದ್ದಿದ್ದ ಯೋಗೀಶ್ ಇಲ್ಲಿ ನಂದನಾಗಿ ಬದಲಾಗಿದ್ದಾನೆ. ಆದರೆ ದುನಿಯಾದ ಹ್ಯಾಂಗೋವರ್ ಇರುವ ಕತೆಗೆ ಮತ್ತೆ ಜೋತು ಬಿದ್ದಿದಾನೆ. ಅದೇ ಅಡ್ಡಾ. ಅದೇ ರೌಡಿಪಾಳ್ಯ. ಅದೇ ಮಚ್ಚು, ಅದೇ ಲಾಂಗು. ಅದೇ ಬಾರು, ರಾತ್ರಿ ಹೊತ್ತಲ್ಲಿ ನಡೆಯುವ ಕಾರುಬಾರು... .ಅದೇ ಲೂಸ್ ಮಾದನ ಡೈಲಾಗ್‌ಗಳು. ಆದರೂ ಅವನ ಮಾತು ಕಣ್ಣು ಮುಚ್ಚಿಕೊಂಡು ಕೇಳಲು ಬಲು ಇಷ್ಟವಾಗುತ್ತೆ. ಏಕೆಂದರೆ ಚಿತ್ರದ ಸಂಭಾಷಣೆ ಹಾಗಿದೆ. ಏನೂ ಇಲ್ಲದಿದ್ದರೂ ಬರೀ ಡೈಲಾಗ್‌ಗಳಿಂದ ಹೇಗೆ ಇಡಿ ಚಿತ್ರಕತೆಯನ್ನು ತಳ್ಳಿಸಿಕೊಂಡು ಹೋಗಬಹುದು ಎಂಬುದನ್ನು ಮಗದೊಮ್ಮೆ ನಿರೂಪಿಸಿದ್ದಾರೆ ಮಂಜು ಮಾಂಡವ್ಯ . ಹಾಗಂತ ಯೋಗಿ ಎಲ್ಲಾ ಕಡೆ ಖಂಡಿತಾ ಸೋತಿಲ್ಲ. ಕುಣಿಯಲು ಕಾಲೆತ್ತಿದಾಗ, ಎದೆ ಮುಂದುಮಾಡಿಕೊಂಡು ಮೈಕೊಡವಿನಿಂತಾಗ, ಅಬ್ಬಬ್ಬಾ ಅದು ಯೋಗಿಯಿಂದ ಮಾತ್ರ ಸಾಧ್ಯ. ಆದರೆ ನಟನೆಯಲ್ಲಿ ಇನ್ನೂ ಟೈಟ್ ಆಗಬೇಕಿದೆ. ಎಲ್ಲಾ ಕಡೆ ಫುಲ್ ಟೈಟ್ ಆದವರಂತೇ ಆಡಿದರೆ ಜನ ಎಷ್ಟು ಹೊತ್ತು ಅಂತ ನೋಡುತ್ತಾರೆ ? ಅಮ್ಮಮ್ಮಾ ಅಂದರೆ ಮೊದಲಾರ್ಧದವರೆಗೆ... ಕೊನೆಕೊನೆಗೆ ಅದು ಅತಿರೇಕವೆನಿಸುತ್ತದೆ. ಹಾಗಂತ ಯೋಗಿಯೇ ನೇರ ಹೊಣೆ ಎಂದರೆ ಅದು ತಪ್ಪಾಗುತ್ತದೆ. ಅವ ಹೇಳಿದಂತೇ ಮಾಡುವವ. ಅವರಿಂದ ಕೆಲಸ ತೆಗೆಸಲು ನಿರ್ದೇಶಕ ವಿಜಯಕುಮಾರ್ ಇನ್ನಷ್ಟು ಹೆಣಗಾಡಿದ್ದರೆ ಅದರ ಕತೆಯೇ ಬೇರೆಯಾಗಿರುತ್ತಿತ್ತು.

ಕತೆಯದ್ದೂ ಅದೇ ಕತೆ. ಮೊದಲಾರ್ಧ ರಾಯರ ಕುದುರೆ. ಆದರೆ ಹೋಗ್ತಾ ಹೋಗ್ತಾ ಅದು ... ಆಗಿದೆ. ಇನ್ನು ನಾಯಕಿ ಶ್ವೇತಾ. ವಾಹ್...ಎನ್ನುವಷ್ಟೇನೂ ಇಲ್ಲ. ಆದರೆ ಅಯ್ಯಯ್ಯೋ ಎನ್ನುವಷ್ಟೂ ಇಲ್ಲ. ಕೊಟ್ಟ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಫ್ಯಾಮಿಲಿ ಲುಕ್‌ನ ಈ ಹುಡುಗಿ ಒಂದು ಆಂಗಲ್‌ನಲ್ಲಿ ಸಿಂಧು ಮೆನನ್‌ಳನ್ನು ನೆನಪಿಸುತ್ತಾಳೆ. ಎಮಿಲಿ ಸಂಗೀತ ಜೋರಾಗಿದೆ. ಬರಿ ಸ್ಟೆಪ್ ಹಾಕೋ ಸಂಗೀತವಷ್ಟೇ ಇದ್ದರೆ ಅದು ಎಲ್ಲರಿಗೂ ಇಷ್ಟವಾಗೊಲ್ಲ. ಜತೆಗೊಂದು ಮೆಲೋಡಿ ಕೂಡ ಇದ್ದರೆ ಅದಕ್ಕೆ ಸಿಗುವ ಕಿಮ್ಮತ್ತೇ ಬೇರೆ. ಆದರೂ ಜಿಂಕೆ ಮರೀನಾ... ಹಾಡು ಕೇಳಲಾರೆ ಎನ್ನುವಂತಿಲ್ಲ. ಮ್ಯಾಥ್ಯೂ ರಾಜನ್ ಕ್ಯಾಮೆರಾ, ಡಿಫರೆಂಟ್ ಡ್ಯಾನಿ ಸಾಹಸ ಎಲ್ಲವೂ ಸೇರಿ ಯೋಗೀಶನ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿವೆ. ಅಂದಹಾಗೆ ಇದೊಂದು ಕೌಟುಂಬಿಕ ಚಿತ್ರವೂ ಹೌದು. ಯೋಗೀಶನ ನಿಜ ಜೀವನದ ಕುಟುಂಬ, ಸ್ನೇಹಿತ ಬಳಗ, ಕೆಲವು ಕಡೆ ಸುಖಾ ಸುಮ್ಮನೆ ಬಂದುಹೋಗ್ತಾರೆ..!

- ಪೂರ್ಣ ವಿ-ರಾಮ / ಕಲಗಾರು

Thursday, March 13, 2008

ಸಾಗರ ಮಾರಿಜಾತ್ರೆಯಲ್ಲಿ ಕಣ್ಣಿಗೆ ಬಿದ್ದ ಮಾರಮ್ಮ...!

















ಉದರ ನಿಮಿತ್ತಂ..............

ಖಡ್ಗ, ತ್ರಿಶೂಲ ಮೊದಲಾದ ಆಯುಧ ಹಿಡಿದ ಎಂಟು ಕೈಗಳು, ಬೆಂಕಿಯುಗುಳುವ ಕೆಂಪು ಕಣ್ಣು, ಚಾಚಿದ ಉರಿ ನಾಲಿಗೆ, ಕೊರಳಲ್ಲಿ ರುಂಡಗಳ ಸರಮಾಲೆ ಇರುವ ಅಕರಾಳ-ವಿಕರಾಳವಾದ ಮಾರಮ್ಮನೇ ಎದುರು ಬಂದು ಕಷ್ಟ ಸುಖ ವಿಚಾರಿಸಿ ಹರಸಿದರೆ ! ಸಾಗರ ಮಾರಿಜಾತ್ರೆಯಲ್ಲಿ ಹಾಗೊಂದು ದೃಶ್ಯ ಕಂಡು ಬಂತು.
ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದು ಪ್ರಾಚೀನ ನುಡಿ. ಹೊಟ್ಟೆಪಾಡಿಗೆ ಯಾವ ದಂದೆಯಾದರೂ ನಡೆಯುತ್ತದೆ .ಇದಕ್ಕೆ ಮಾರಿ ವೇಷದಾರಿಯೇ ಸಾಕ್ಷಿ.
ತೀರ್ಥಹಳ್ಳಿ ತಾಲುಕಿನ ನೊಣಬೆಟ್ಟು ಸಮೀಪದ ಅಂಬುತೀರ್ಥದ ಮಲ್ಲಪ್ಪ ಭಾಗವತನಿಗೆ ಮಾರಿ ವೇಷವೇ ಜೀವನ ನಿರ್ವಹಣೆಯ ದಾರಿ. ಕಳೆದ ಇಪ್ಪತ್ತೈದು ವರ್ಷದಿಂದ ಎಲ್ಲೇ ಜಾತ್ರೆಯಾಗಲಿ ಅಲ್ಲಿ ಮಲ್ಲಪ್ಪನ ಮಾರಿ ವೇಷ ಪ್ರತ್ಯಕ್ಷವಾಗುತ್ತದೆ.ಜಾತ್ರೆಯ ಜನ ಜಂಗುಳಿಯಲ್ಲಿ ಅವನ ವೇಷಕ್ಕೆ ಕೈ ಮುಗಿದು, ಅಡ್ಡಬಿದ್ದು, ಕೊಟ್ಟ ಅರಸಿನ ಕುಂಕುಮವನ್ನು ಪ್ರಸಾದವೆಂದು ಸ್ವೀಕರಿಸಿ, ಕಾಣಿಕೆ ನೀಡುವ ಭಾವುಕರೂ ಇರುತ್ತಾರೆ,ಅದನ್ನೇ ಬಂಡವಾಳವಾಗಿಸಿಕೊಂಡು ಮಲ್ಲಪ್ಪನೂ ಬದುಕುತ್ತಿದ್ದಾನೆ. ಅವನನ್ನು ನಂಬಿಕೊಂಡ ಹೆಂಡಿರು ಮಕ್ಕಳೂ ಬದುಕುತ್ತಿದ್ದಾರೆ.



ಪೂರ್ಣ ವಿ-ರಾಮ/ ಕಲಗಾರು

Wednesday, March 12, 2008

ಪ್ರಶ್ನೆಯಾಯಿತು ಮಾಯಾಮೃಗ....!

ಪ್ರಶ್ನೆಯೆಂಬ ಮರೀಚಿಕೆ

ಉತ್ತರ ದೊರೆತಿಲ್ಲ,
ಹುಡುಕಾಟವೂ ನಿಂತಿಲ್ಲ;
ಪ್ರಶ್ನೆಯೂ ಮರೆತಿಲ್ಲ

ತಾಕಲಾಟದ ತಾಂಡವ
ತಾಂಬೇಲುವನ್ನೇ ಮೀರಿಸುವ ಜಡ
ಪರದಾಟದ ಪರಿಧಿಯಲಿ
ಪರಿವೇಶ, ಪರಿ ಪರಿ ವೇಷ
ಉತ್ತರ ದೊರೆತಿಲ್ಲ

ಪರಿಪಕ್ವವಲ್ಲ, ಪರಿತೋಷ ಲಭಿಸಿಲ್ಲ
ಆಗೊಬ್ಬ ಬಂದ ಆಪದ್ಬಾಂಧವ
ಹೆಸರು ಕಾನನ್ ಡಯಲ್
ಅವನೊಬ್ಬ ಸೂತ್ರಧಾರ
ಆದರೂ ಉತ್ತರ ದೊರೆತಿಲ್ಲ

ಜೊತೆಗಿದ್ದರು ಪಾತ್ರಧಾರಿಗಳು
ಶರ್ಲಾಕ್ ಹೋಮ್ಸ್, ಪೆರಿ ಮೆಷನ್
ಪರಿಚಾರಕರಂತೇ ಹಿಂಬಾಲಿಸಿದೆ
ಅವರಿಂದಲೂ ಅದೇ ಉತ್ತರ, ನಿರುತ್ತರ
ಇನ್ನೂ ಉತ್ತರ ದೊರೆತಿಲ್ಲ;
ಪ್ರಶ್ನೆಯೂ ಮರೆತಿಲ್ಲ...




ಪೂರ್ಣ ವಿ-ರಾಮ / ಕಲಗಾರು