ಆ ಚಂದಿರನ ಮೊಗದಲ್ಲಿ ಅವಳ ನಿರಾಳ ನಗು ಕಂಡೆ
‘ಇಷ್ಟು ಬೇಗ ಎದ್ದು ಮಾಡುವುದಾದರೂ ಏನು?’ಹೀಗೊಂದು ಆಕಳಿಕೆಭರಿತ ಕನವರಿಕೆಯೊಂದಿಗೆ ಮಗ್ಗಲು ತಿರುಗಿಸಿದೆ.
‘ಹೋಗೋದು ಕಾಲೇಜಿಗೆ ತಾನೇ. ಅದೂ ೧೦ ಗಂಟೆಗೆ. ಇವತ್ತು ಶನಿವಾರ ಬೇರೆ. ಆ ದೈನೇಸಿ ದೀಪು ಬೇರೆ ಬರೊಲ್ಲ. ಸ್ನಾನವೊಂದಾದರೆ ಅಮ್ಮನ ತಿಂಡಿಗೇನು ಮೋಸವಿಲ್ಲ. ಇನ್ನೇನು ಅವಸರ ?’ ಎನ್ನುತ್ತಾ ಮತ್ತೆ ಮಗುಚಿ ಮಲಗಿದೆ.
ಸರಿಯಾಗಿ ಎಂಟು ಗಂಟೆ. ಪಕ್ಕದ ಬೀದಿಯ ಶಾಲೆಯ ಗಂಟೆ ಕರ್ಕಶ ಧ್ವನಿಯಲ್ಲಿ ಡಣ್ಡಣ್.. ಎನ್ನತೊಡಗಿತು. ‘ಈ ಹಾಳಾದ ಗಂಟೆ, ನಿದ್ದೆ ಮಾಡೋಕೂ ಬಿಡೊಲ್ಲ’ ಎಂದು ಹಿಡಿಹಿಡಿ ಶಾಪ ಹಾಕಿದೆ. ಮತ್ತೆ ಕಣ್ಮುಚ್ಚಲು ಪ್ರಯತ್ನಿದೆ. ಊಹುಂ.. ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಎದ್ದೆ. ಪುಟ್ಟಿ ಸ್ಕೂಲ್ ಟೀಚರ್ಗೆ ಮನಸೋಇಚ್ಛೆ ಬೈದು, ಕೈಕೈ ಮಿಲಾಯಿಸಿ ನೆಟಿಕೆ ಮುರಿದೆ.
ಅಮ್ಮನಿಗೆ ಎಂದಿನಂತೆ ಕಾಲೇಜಿಗೆ ಹೋಗ್ತಿದ್ಧೀನಿ ಎನ್ನುವ ಮನಸಾಗಲಿಲ್ಲ. ಎಂದಿನ ಖುಷಿ ಅಂದಿರಲಿಲ್ಲ. ಕಾಲೇಜಿಗೆ ಹೊರಟೆ. ದಾರಿಯುದ್ದಕ್ಕೂ ದೀಪು ಅಡ್ಡಗಟ್ಟುತ್ತಿದ್ದ; ಇನ್ನೂ ಹತ್ತತ್ತಿರ ಬರುತ್ತಿದ್ದ. ನಾನು ನಾಚಿ ನೀರಾಗುವ ಹೊತ್ತಿಗೆ ಮತ್ತೆ ಮಂಗಮಾಯ.ಅಲ್ಲೇನೋ ಹೇಳತೀರದ ಹಿತವಿತ್ತು. ಆಡಿತೀರದ ಅತೀತ ಆನಂದವಿತ್ತು. ಮೂರು ಮಾರು ದೂರವಿರುವ ಕಾಲೇಜು ಮೂವತ್ತು ಮೈಲಿಯಷ್ಟು ದೂರ ದೂರ! ನನಗೇನು ಅದು ಹೊಸ ಅನುಭವವಲ್ಲ. ಆರು ತಿಂಗಳಿನಿಂದ ತವಕ. ಮತ್ತದೇ ತಲ್ಲಣ.
ಅಂತೂ ಕಾಲೇಜು ಬಂತು. ಆಗಲೇ ಹತ್ತೂ ನಲವತ್ತಾಗಿಬಿಟ್ಟಿತ್ತು. ಕಾರಿಡಾರ್ನಲ್ಲಿ ಅಟೆಂಡರ್ ಸೀನಪ್ಪ ಬುಸುಬುಸು ಬರಹತ್ತಿದ್ದ. ಯಾರನ್ನೋ ಹರಿದು ತಿನ್ನುವವನಂತಿತ್ತು ಅವನ ಹಾವಭಾವ. ಅವನನ್ನು ತಡೆದುನಿಲ್ಲಿಸಿ:
-‘ಶೀನಣ್ಣ, ತಿರುಮಲ ಮಾವಿನಕುಳಿ ಸಾರ್ ಬಂದಿದ್ದಾರಾ?’ ಎಂದೆ. ಘಮಗುಡುವ ಬೀಡಿ ವಾಸನೆ ಬರುತ್ತಿದ್ದ ಆ ಬೊಚ್ಚುಬಾಯಲ್ಲೇ ‘ನಿಮ್ ತಿಳಿ ಸಾರ್ರು ಬಂದದ್ದೂ ಆಯ್ತು, ಪಾಠ ಶುರುಮಾಡಿದ್ದೂ ಆಯ್ತು. ನಡಿ ಇದೆ ನಿನಗೆ ಬಿಸಿಬಿಸಿ ಕಜ್ಜಾಯ’ ಎಂದು ಹಲ್ಲುಗಿಂಜುತ್ತ ಅದೇ ಭಂಗಿಯಲ್ಲಿ ಹೊರಟ.
ತಿಳಿ ಸಾರ್ರು ಎನ್ನುತ್ತಿದ್ದಂತೇ ಎದೆನಡುಕ ಶುರುವಾಯ್ತು. ‘ದೇವ್ರೆ ದೇವ್ರೆ ಕಾಪಾಡಪ್ಪ’ ಎನ್ನುತ್ತ ಕ್ಲಾಸ್ ಕಡೆ ಬಂದೆ.
‘ವೈದೇಹಿ ಕಥೆಗಳಲ್ಲಿ ಹೆಚ್ಚಾಗಿ....’ ಎಂದು ಪಾಠದ ಅಮಲಿನಲ್ಲಿ ತೇಲುತ್ತಿದ್ದರು ತಿಳಿ ಸಾರ್ರು. ಮೈಯೆಲ್ಲಾ ಭಯಂಕರ ನಡುಕ. ಒಳಗೆ ಕಾಲಿಡುವ ಮುನ್ನ, ‘ಮೇ ಐ ಕಂ ಇನ್ ಸಾರ್’ ಎಂದೆ. ಅವರ ಕೆಂಡಭರಿತ ಕಣ್ಣು ನನ್ನತ್ತ ತಿರುಗಿತು.
‘ಇತ್ತೀಚೆಗೆ ನಿನ್ನ ವರ್ತನೆ ಅತಿಯಾಯ್ತು. ಕಾಲೇಜು ಮುಗಿಯುವ ದಿನ ಬಂತು. ಇನ್ನೂ ಬುದ್ಧಿ ಬಂದಿಲ್ಲ. ನೆಟ್ಟಗೆ ಕ್ಲಾಸಿಗೆ ಬರೊಲ್ಲ, ಓದಲ್ಲ, ಬರೆಯೊಲ್ಲ...’ ; ವೈದೇಹಿಯನ್ನೇ ಮರೆತುಬಿಟ್ಟರು. ‘ಸಾರಿ ಸಾರ್’ ಎಂದೆ. ಸರಿ ಬಾ ಒಳಗೆ ಎಂದು ‘ವೈದೇಹಿ...’ಯತ್ತ ಹೊರಳಿಕೊಂಡರು.
ಯಥಾಪ್ರಕಾರ ಕೊನೇ ಬೆಂಚಿನ ಬಲಬದಿಯಲ್ಲಿ ಕುಳಿತೆ. ಅಲ್ಲಿ ನನ್ನ ಮಾಮೂಲಿ ಮೊಕ್ಕಾಂ. ಪಕ್ಕದಲ್ಲಿ ಹುಡುಗರ ಸಾಲು. ಮೊದಲ ಬೆಂಚಿನ ಎಡತುದಿಯಲ್ಲಿ ದೀಪು ಎದೆ ಮುಂದು ಮಾಡಿಕೊಂಡು ಕುಕ್ಕರುಗಾಲಿನಲ್ಲಿ ಕೂರುತ್ತಿದ್ದ. ಅವನ ಹಿಂದಿನ ಬೆಂಚ್ ಪಕ್ಕದಲ್ಲಿ ಒಂದು ಟೇಬಲ್ಲು. ಅದರ ಮೇಲೆ ತಿಳಿ ಸಾರ್ರು ಹತ್ತಿ ಕೂರುತ್ತಿದ್ದರು. ಅಷ್ಟಾದರೆ ಮುಗೀತು. ಬೆಲ್ಲುಭಾರಿಸುವವರೆಗೂ ಬಿಲ್ಕುಲ್ ಅಲ್ಲಾಡುತ್ತಿರಲಿಲ್ಲ. ಪಾಠ ಕೇಳುವಾಗ ದೀಪುಗೆ ಹಿಂದಿರುಗಿ ಮೇಷ್ಟ್ರ ಮುಖ ನೋಡೋದು ಅನಿವಾರ್ಯ. ಅವ ಹಾಗೆ ತಿರುಗಿದಾಗ ನಾನೊಮ್ಮೆ ನಗುತ್ತಿದ್ದೆ; ಅವ ಮಾತ್ರ ಕಲ್ಲುಬಂಡೆಯಂತೇ ಕೂರುತ್ತಿದ್ದ. ಅಪರೂಪಕ್ಕೊಮ್ಮೆ ನಕ್ಕಂತೇ ನಟಿಸುತ್ತಿದ್ದ. ಆದರೆ ಹಾಗೆ ನಗಲು ಆ ಜಾಗ ಖಾಲಿ ಖಾಲಿ. ಅವತ್ತಿನ ಪಾಠ ಮಾತ್ರ ಯಾಕೋ ಬೋರೋ ಬೋರು.
........................................................
ಅಂದು ಭಾನುವಾರವಾದ್ದರಿಂದ ಹತ್ತೂವರೆಯಾದರೂ ಏಳುವ ಮನಸ್ಸಿರಲಿಲ್ಲ. ಹೊರಜಗುಲಿಯಲ್ಲಿ ಹಾಳಾದ ಫೋನು ಬೊಬ್ಬೆ ಹೊಡೆಯತೊಡಗಿತು. ಇನ್ನೇನು ನೈಟಿಯಲ್ಲೇ ಎದ್ದು ಬರಬೇಕು, ಅಷ್ಟರಲ್ಲಿ ಕಸಗುಡಿಸುತ್ತಿದ್ದ ಸುಬ್ಬಿ- ‘ದೀಪಮ್ಮಾವ್ರೆ, ನಿಮ್ ಚಿಕ್ಕಮ್ಮಾವ್ರುದ್ದು ಪೋನು. ಅತ್ತೀಕೆರೆಯಿಂದಂತೆ. ಒಂದ್ ವಾರಾ ಅಂಗನ್ವಾಡಿಗೆ ರಜಾ ಐತೆ. ನಾಳೀಕ್ ವತ್ತಾರೇನೇ ಇಲ್ಲಿಗ್ ಬರ್ತಿದ್ದೀವ್ನಿ ಅಂತ ಯೋಳು ಅಂದ್ರು. ಜ್ವತ್ಗೆ ಮಗೀನೂ ಕರ್ಕಂಬತ್ತವ್ರಂತೆ. ನಿಮ್ಮನ್ ಕೂಗ್ಲಾ ಅಂತ್ ಕ್ಯೋಳ್ದೆ. ಬ್ಯಾಡ ಬುಡು ಮಗಿ ಮಲೀಕಳ್ಳಿ ಅಂದ್ರು’ ಎಂದು ಅಲ್ಲಿಂದಲೇ ಅರಚಿದಳು.ನನಗೆ ಎಲ್ಲಿಲ್ಲದ ಆಶ್ಚರ್ಯ. ಚಿಕ್ಕಮ್ಮ ಬರೋದಾ! ನನಗೇನು ಅರೆನಿದ್ರೆಯ ಐಲ್ ಪೈಲಾ ಎಂದು ಮತ್ತೊಮ್ಮೆ ಗಲ್ಲ ಚಿವುಟಿಕೊಂಡೆ. ಊಹುಂ.. ನಿಜಾ ಹೌದು. ಎರಡು ವರ್ಷಗಳಿಂದ ‘ಒಂದು ಸಾರಿಯಾದ್ರೂ ಮನೇಗೆ ಬಾ ಚಿಕ್ಕಮ್ಮ’ ಅಂತ ಗೋಗರೆದು ಸುಸ್ತಾಗಿದ್ದೆ. ಅವಳಿಗೆ ಅಂಗನವಾಡಿ ಬಿಟ್ಟರೆ, ಆರು ವರ್ಷದ ಅಂಕುಶ. ಯಾವಾಗ ಕೇಳಿದರೂ ಸಬೂಬುಗಳ ಸುರಿಮಳೆ ಸುರಿಸುತ್ತಿದ್ದಳು. ಉಳಿಚಿಕೊಂಡುಬಿಡುತ್ತಿದ್ದಳು. ಆದರೆ ಇವತ್ತು ದಿಢೀರನೆ ಬರೋದಕ್ಕೆ ಕಾರಣ! ಮತ್ತೆ ಮಲಗುವ ಮಾತು ಮರೆತೇ ಹೋಯ್ತು. ಚಿಕ್ಕಮ್ಮನ ಛಿದ್ರಗೊಂಡ ಬದುಕಿನ ಚಿತ್ರಣ ಕಣ್ಮುಂದೆ ಬಂತು...
ಅವಳಂಥ ನಿಷ್ಪಾಪಿಗೆ ಆ ದೇವರು ಅಂಥದ್ದೊಂದು ಘೋರ ಶಿಕ್ಷೆ ಕೊಡಬಾರದಿತ್ತು. ಬದುಕಿ ಬಾಳಬೇಕಿದ್ದ ಅವಳ ಹಸಿಹಸಿ ಜೀವನಕ್ಕೆ ಪೂರ್ಣವಿರಾಮ ಬಿದ್ದಿತ್ತು. ಹದಿನಾರರ ಎಳೆಪ್ರಾಯದಲ್ಲಿ ಅವಳ ಕುತ್ತಿಗೆಗೆ ಮೂರು ಗಂಟು ಬಿಗಿಸಲಾಗಿತ್ತು. ಆಗ ಅವಳಿಗೆ ಸಂಸಾರ ಎಂದರೆ ಏನೆಂದೇ ಗೊತ್ತಿರಲಿಲ್ಲ. ಮನೆಯವರ ಒತ್ತಾಯಕ್ಕೆ ಓದುವ ಮನಸ್ಸಿದ್ದರೂ ಹಸೆಮಣೆ ಏರಿದ್ದಳು. ಆದರೆ ಆ ಹಾಳಾದ ವಿಯ ಹುನ್ನಾರವೇ ಬೇರೆಯಿತ್ತು. ಅವಳ ಜೀವನದಲ್ಲಿ ಲಗೋರಿ ಆಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಎಂದೆನಿಸುತ್ತದೆ. ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಚಿಕ್ಕಪ್ಪ ಬಸ್ ಆಕ್ಸಿಡೆಂಟ್ನಲ್ಲಿ ತೀರಿಹೋದರು. ಆಗ ಚಿಕ್ಕಮ್ಮ ಮೂರು ತಿಂಗಳ ಚೊಚ್ಚಲ ಗರ್ಭಿಣಿ ಬೇರೆ... ಆ ದಿನಗಳು ಮತ್ತೆ ಮರುಕಳಿಸತೊಡಗಿತು. ‘ಈ ಜೀವನ ಅಂದರೆ ಇಷ್ಟೇನಾ’ ಎಂಬ ಶೂನ್ಯಭಾವ ಕಣ್ಮುಂದೆ ಆವರಿಸಿತು. ‘ಆ ದೇವರು ಚಿಕ್ಕಮ್ಮನಿಗೆ ಕೊಡುವ ಕಷ್ಟವನ್ನು ನನಗಾದರೂ ಕೊಡಬಾರದಿತ್ತೇ?’ ಎಂದುಕೊಂಡೆ. ಅಷ್ಟು ಹೊತ್ತಿಗೆ ಅಡುಗೆ ಮನೆಯಿಂದ ಅಮ್ಮ ತಿಂಡಿಗೆ ಕರೆದಳು
.......................................................
ಯಾಕೋ ಗೊತ್ತಿಲ್ಲ. ಅಂದು ಹುಚ್ಚು ಮನಸ್ಸು ಸಾಕಷ್ಟು ಲವಲವಿಕೆಯಿಂದಿತ್ತು. ಆ ನಗುವಿಗೆ ಚಿಕ್ಕಮ್ಮನಲ್ಲಿ ಅರಳಿದ ನಿರಾಳ ನಗು ಕಾರಣವಾಗಿರಲೂಬಹುದು.
ರಾತ್ರಿ ಮಲಗುವ ಮುನ್ನ ಯೋಚಿಸಿದ್ದು ಥಟ್ ಅಂತ ನೆನಪಾಯಿತು. ಕೂಡಲೇ ಬಡಬಡಿಸಿ ಎದ್ದು, ದೀಪುಗೆ ಫೋನಾಯಿಸಿದೆ. ಆದರೆ ಅವ ಇನ್ನೂ ಗೊರಕೆಯ ಪರಮಾವಯಲ್ಲಿದ್ದ. ಶಂಕರಘಟ್ಟದ ಸಹ್ಯಾದ್ರಿ ಉತ್ಸವ ಅವನನ್ನು ಆ ಪರಮಾವಗೆ ಕರೆದೊಯ್ದಿತ್ತು. ಕುವೆಂಪು ಘಟಿಕೋತ್ಸವದಲ್ಲಿ ಇಡೀ ಕಾಲೇಜನ್ನು ಪ್ರತಿನಿಸಿ ಬಂದಿದ್ದ. ಸಾಂಸ್ಕೃತಿಕ ವಿಭಾಗದಲ್ಲಿ ಕಾಲೇಜಿಗೇ ಚಾಂಪಿಯನ್ ಎನಿಸಿಕೊಂಡಿದ್ದ. ಒಂದು ವಾರದ ಅಗಲಿಕೆ ಅವನನ್ನು ಇನ್ನಷ್ಟು ಹತ್ತಿರವಾಗಿಸಿತ್ತು; ಮನಸ್ಸು ಅವನ ಬರುವಿಕೆಗಾಗಿ ಹಪಹಪಿಸುತ್ತಿತ್ತು. ಇವತ್ತು ಏನಾದರೂ ಸರಿ, ಎಂದು ಹತ್ತು ಬಾರಿ ರಿಂಗ್ ಬಿಟ್ಟೆ. ಪುಣ್ಯಾತ್ಮ ಕೊನೇಸಾರಿ ಹಲೋ ಎಂದ.
‘ಅಲ್ಲಾ ದೀಪು, ಫೋನೆತ್ತೋಕೆ ಎಷ್ಟೊತ್ತು? ’ ಎಂದೆ. ‘ಸಾರಿ ದೀಪಾ ನಾಲ್ಕು ದಿವಸದಿಂದ ಸರಿಯಾಗಿ ನಿದ್ದೇನೇ ಮಾಡಿಲ್ಲ ಗೊತ್ತಾ. ಸರಿ ಏನ್ ಹೇಳು’ ಎಂದು ಮತ್ತೆ ಆಕಳಿಸಿದ. ‘ಏನಿಲ್ಲ. ಇವತ್ತು ಕಾಲೇಜಿಗೆ ರಜಾ ಅಲ್ವಾ. ನಮ್ಮ ಚಿಕ್ಕಮ್ಮಾನೂ ಬಂದಿದ್ದಾರೆ. ಎಲ್ಲಾ ಸೇರಿ ಜೋಗಕ್ಕೆ ಹೋಗಿ ಬರೋಣ್ವಾ’ ಎಂದೆ. ಅದಕ್ಕವ ‘ಹೂಂ ಹೋಗೋಣ. ಆದರೆ ನಾನು ಬರೋದಿದ್ದರೆ ಮಧ್ಯಾಹ್ನ ಮಾತ್ರ’ ಎಂದು ಫೋನು ಕುಕ್ಕಿದ.
ದೀಪು ಅಷ್ಟೆಂದದ್ದೇ ತಡ. ಜೋಗಕ್ಕೆ ಹೋಗೋಕೆ ಬೆಳಗಿನಿಂದಲೇ ತರಾತುರಿಯ ತಯಾರಿ ನಡೆಸಿದೆ.
........................................................
ಅಲ್ಲಿನ ಭೋರ್ಗರೆವ ಜಲಪಾತ ಕಣ್ಣಂಚಿನಲ್ಲಿ ಹೊಸ ಅಲೆ ಎಬ್ಬಿಸುತ್ತಿತ್ತು. ಮೈಮನವನ್ನು ತಂಗಾಳಿಯಂತಾಗಿಸುತ್ತಿತ್ತು. ಜಿಗಿಜಿಗಿದು ಹರಿವ, ಮೈ ಝುಂ ಎನ್ನುವ ಜಲಲಧಾರೆ. ಅದು ಜೋಗ ಜಲಪಾತ. ಆಗಷ್ಟೇ ಮುಂಗಾರು ಮಳೆ ಸುರಿದು ಮತ್ತೆಲ್ಲೋ ಮಾಯವಾಗಿತ್ತು. ನಾನು ಚಿಕ್ಕಮ್ಮನ ಜತೆ ಒಂಟಿಮುಖದ ಹೆಬ್ಬಂಡೆಯೊಂದರ ಮೇಲೆ ಕುಳಿತಿದ್ದೆ. ದೀಪು ಅದೇ ಸಾಲಿನ ಇನ್ನೊಂದರ ಮೇಲಿದ್ದ. ಜತೆಗೆ ಕಾಲಿಗೆ ಲೊಚಲೊಚನೆ ಮುತ್ತಿಟ್ಟು , ರಕ್ತತರ್ಪಣ ಕೇಳುತ್ತಿದ್ದ ಜಿಗಣೆಗಳು. ಮಳೆಗಾಲವಾದ್ದರಿಂದ ಜನಜಂಗುಳಿ ಜೋರಾಗಿಯೇ ಇತ್ತು. ಪುಟ್ಟು ಶಶಾಂಕ್ ಅಲ್ಲೇ ಆಡಿಕೊಂಡಿದ್ದ. ನಾನೊಮ್ಮೆ ದೀಪು ಕಡೆ ಕಣ್ಣು ಹೊರಳಿಸಿದೆ. ಅವನ ಕಣ್ಣು ಮಾತ್ರ ಇನ್ನೆಲ್ಲೋ. ಏನೇ ಆಗಲಿ ಇವತ್ತು ನನ್ನಂತರಾಳವನ್ನು ಅವನೆದುರು ಹರವಿಡಬೇಕು ಎಂದು ಮಗದೊಮ್ಮೆ ನಿರ್ಧರಿಸಿದೆ.ಆಗ ಚಿಕ್ಕಮ್ಮ, ‘ಹೇ ಅಂಕುಶ್ ನಿಲ್ಲೋ. ಓಡಬೇಡ. ಎದುರಿಗೆ ದೊಡ್ಡ ಪ್ರಪಾತ ಇದೆ’ ಎಂದು ಒಂದೇ ಸಮನೆ ಅರಚಿದ್ದು ಕೇಳಿಸಿತು. ಇಬ್ಬರೂ ಎದ್ದು ಹೋಗುವಷ್ಟರಲ್ಲಿ ದೀಪು ಶಶಾಂಕನನ್ನು ತಬ್ಬಿ ಹಿಡಿದು ಮೇಲೆತ್ತಿಕೊಂಡ. ‘ಪಾಪೂ ಯಾವತ್ತೂ ಅಪ್ಪ ಅಮ್ಮ ಹೇಳಿದಹಾಗೇ ಕೇಳಬೇಕು. ಹಟ ಮಾಡಬಾರದು’ ಎಂದು ಮುದ್ದಾಡುತ್ತಾ ಹೇಳಿದ. ಅದಕ್ಕೆ ಅಂಕುಶ್ ‘ಅಂಕಲ್ ನಮ್ ಅಪ್ಪಾ ಯಾರು ಅಂತ ನಿಮಗ್ ಗೊತ್ತಾ’ ಎಂದು ಕೇಳಿಯೇಬಿಟ್ಟ.
ಒಂದು ಬಾರಿ ದೀಪು ದಿಕ್ಕೇ ತೋಚದಂತೆ ಕಂಗಾಲು. ಅವನೇನು ತಾನೆ ಅಂದಾನು? ಕಸಿವಿಸಿಗೊಂಡವನಂತೇ ನನ್ನ ಕಡೆ ನೋಡಿದ. ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಪರಿಸ್ಥಿತಿ ಅರ್ಥವಾಯಿತು. ಕೂಡಲೇ ಎದ್ದು ಅಂಕುಶ್ನನ್ನು ಎತ್ತಿಕೊಂಡಳು. ಅವನಿಗೆ ಅಲ್ನೋಡು ಪುಟ್ಟಾ ನೀರು ಹೇಗೆ ಹರಿಯುತ್ತಿದೆ‘ಎಂದು ಅವನ ಗಮನ ಬೇರೆಡೆ ಸೆಳೆದಳು.
ಆವತ್ತಿನ ಇಡೀ ಟ್ರಿಪ್ನಲ್ಲಿ ನಾ ಅಂದುಕೊಂಡಂತೇ ಆಗಲೇ ಇಲ್ಲ. ಅವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು. ಅದೇ ದಿನ ಸಂಜೆ ದೀಪು ಮತ್ತೆ ಫೋನ್ ಮಾಡಿದ. ಚಿಕ್ಕಮ್ಮನ ಛಿದ್ರವಾದ ಬದುಕಿನ ಬಗ್ಗೆ ಕೇಳಿದ. ನಾನು ಎಲ್ಲವನ್ನೂ ಚಾಚೂ ತಪ್ಪದೇ ಹೇಳಿಬಿಟ್ಟೆ.
........................................................
ಮರುದಿನ ಬೆಳಗ್ಗೆ ಏಳುತ್ತಿದ್ದಂತೇ ಗೋವಾದಲ್ಲಿದ್ದ ಭಾಗತ್ತೆಯಿಂದ ಫೋನ್ ಬಂತು. ಒಂದು ತಿಂಗಳು ಸುಬ್ಬುಮಾವ ಮಸ್ಕತ್ತಿಗೆ ಹೋಗುತ್ತಿದ್ದಾರೆ. ಮನೇಲಿರೂಕೆ ಒಬ್ಬಳಿಗೇ ಬೋರು. ನೀನು ಬಂದರೆ ನನಗೂ ಬೇಸರ ಕಳೆಯುತ್ತೆ. ಕಾಲೇಜ್ ಬೇರೆ ಮುಗಿದಿದೆ. ಪರೀಕ್ಷೆಗೆ ಇಲ್ಲಿಯೇ ಓದಿಕೊಂಡರಾಯಿತು ಎನ್ನತೊಡಗಿದಳು. ಆಗಲ್ಲ ಅತ್ತೆ ಎನ್ನಲು ಮನಸಾಗಲಿಲ್ಲ. ಮೊದಲೇ ಅವಳಿಗೆ ನಾನೆಂದರೆ ಪ್ರಾಣ. ‘ಸರಿ ಅತ್ತೆ’ ಎಂದಷ್ಟೇ ಹೇಳಿ ಸುಮ್ಮನಾದೆ. ಆ ವಿಷಯವನ್ನು ಅಮ್ಮನಿಗೆ ಹೇಳಬೇಕು ಎನ್ನುವಷ್ಟರಲ್ಲಿ ಮತ್ತೆ ಫೋನು...ಅದು ದೀಪು ಧ್ವನಿ. ಗೋವಾಗೆ ಹೋಗುವ ವಿಷಯವನ್ನು ಅವನಿಗೂ ಹೇಳಿಬಿಡೋಣ ಎನ್ನುವಷ್ಟರಲ್ಲಿ, ‘ದೀಪಾ, ನಿಮ್ಮ ಚಿಕ್ಕಮ್ಮನ ಹತ್ತಿರ ಸ್ವಲ್ಪ ಮಾತಾಡಬೇಕು. ನಾಳೆ ಸಂಜೆ ಊರಾಚೆಯ ರಾಗೀ ಗುಡ್ಡಕ್ಕೆ ಕರ್ಕೊಂಡ್ ಬರ್ತೀಯಾ’ ಎಂದ.
ನನಗೆ ಒಂದು ರೀತಿಯ ಧರ್ಮ ಸಂಕಟ. ಆಗೊಲ್ಲ ಎನ್ನುವ ಹಾಗಿಲ್ಲ. ‘ಸಾರಿ ಕಣೊ. ನಾನು ನಾಳೆ ಬೆಳಗ್ಗೇನೆ ಗೋವಾಕ್ಕೆ ಹೋಗ್ತಿದೀನಿ. ಒಂದೇ ತಿಂಗಳಲ್ಲಿ ವಾಪಸ್ ಬರುತ್ತೇನೆ. ಬಂದ ದಿನವೇ ನಿನ್ನ ಹತ್ರ ಒಂದು ವಿಷಯ ಹೇಳಬೇಕು. ಸಿಗ್ತೀಯಾ ತಾನೆ’ ಎಂದು ಕೇಳಿದೆ.
‘ಅದು ಇರಲಿ. ನಾನು ಹೇಳಿದ್ದು’ ಎಂದ. ‘ಸರಿ ದೀಪು. ಚಿಕ್ಕಮ್ಮನಿಗೆ ಹೇಳುತ್ತೀನಿ. ಅಮ್ಮ - ಮಗನನ್ನು ಕಳಿಸುತ್ತೇನೆ’ ಎಂದು ಹೇಳಿ, ಅವ ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಚಿಕ್ಕಮ್ಮನೆದುರಿಗೆ ಒಪ್ಪಿಸಿಬಿಟ್ಟೆ.
ಮರುದಿನ ಬೆಳಗ್ಗೆ ಎದ್ದು ಚಿಕ್ಕಮ್ಮನಿಗೆ ಮತ್ತೊಮ್ಮೆ ರಾಗೀಗುಡ್ಡವನ್ನು ನೆನಪಿಸಿ, ಹೊನ್ನಾವರದ ಬಸ್ಸು ಹತ್ತಿದೆ. ಅಲ್ಲಿಂದ ಕಾರವಾರ. ಅಲ್ಲಿಂದ ಸೀದಾ ಗೋವಾ...
..........................................................
ಅತ್ತೆ ಮನೆಯಲ್ಲಿದ್ದ ನನಗೆ ಹಗಲಿರುಳೂ ದೀಪುನದ್ದೇ ಯೋಚನೆ. ಅವ ನನ್ನನ್ನು ‘ವಲ್ಲೆ’ ಎಂದುಬಿಟ್ಟರೆ ಎಂಬ ಆತಂಕ ಬೇರೆ. ಮತ್ತೆ ಊರಿಗೆ ಯಾವಾಗ ಹೋಗುತ್ತೀನೋ ಎಂದುಕೊಂಡೆ. ಅತ್ತೆಯೊಂದಿಗೆ ಎಷ್ಟೇ ಹರಟಿದರೂ ಅವ ಮಾತ್ರ ಮತ್ತೆ ಮತ್ತೆ ಕಾಡುತ್ತಿದ್ದ.ಸರಿಸುಮಾರು ಸಂಜೆಗತ್ತಲ್ತು. ಮೈ ಬಗಬಗನೆ ಹತ್ತಿ ಉರಿಯುವುದೇನೋ ಎಂಬ ತುಮುಲ. ಅತ್ತೆ ಪಕ್ಕದ ಮನೆಗೆ ಹೋಗಿಬರುತ್ತೇನೆ ಎಂದು ಹೊರಟಳು. ಒಬ್ಬಳೇ ಕುಳಿತು ಯಂಡಮೂರಿಯ ‘ಪ್ರೇಯಸಿಯ ಕರೆ’ ಪುಸ್ತಕ ಓದಹತ್ತಿದೆ. ವರಾಂಡದಲ್ಲಿ ಆಗಾಗ ತಂಪುಗಾಳಿ ಬೀಸಹತ್ತಿತು. ಆಗ ಮತ್ತೆ ಫೋನ್ ರಿಂಗಾಯಿತು. ಗೆಳತಿ ದೀಪಿಕಾ ಅಪರೂಪಕ್ಕೆ ಫೋನಾಯಿಸಿದ್ದಳು.
‘ಏನೇ ದೀಪಿಕಾ ಚೆನ್ನಾಗಿದ್ದೀಯಾ’ ಎಂದೆ. ‘ಹೂಂ ದೀಪಾ. ನನಗೇನಾಗಿದೆ ದಾಡಿ. ಅದಿರಲಿ, ನಿನ್ನ ದೀಪೂ ಏನ್ ಘನಂಧಾರಿ ಕೆಲಸ ಮಾಡಿದ್ದಾನೆ ಗೊತ್ತಾ’ ಎಂದಳು ವ್ಯಂಗ್ಯವಾಗಿ. ‘ಏನೋ ಗೊತ್ತಿಲ್ಲ ಮಾರಾಯ್ತಿ. ಏನಾಯ್ತು ಹೇಳೇ’ ಎಂದೆ. ಬರೀ ಅದು ಇದು ಓದಿ ಅವನ ತಲೆ ಹಾಳಾಗಿದೆ. ಈಗ ಒಬ್ಬ ವಿಧವೆಯನ್ನ ಕಟ್ಟಿಕೊಳ್ಳೋಕೆ ಹೊರಟಿದ್ದಾನೆ. ಅವನಿಗೇನು ಕಮ್ಮಿಯಾಗಿ ಹಾಗೆ ಮಾಡ್ತಿದ್ದಾನೆ ಮಾರಾಯ್ತಿ....’ ಅಷ್ಟು ಹೊತ್ತಿಗೆ ಆ ಹಾಳಾದ ಫೋನು ಡಿಸ್ಕನೆಕ್ಟ್ ಆಯ್ತು. ಹಾಗೆಯೇ ಕುಸಿದು ಕುಳಿತ ನನಗೆ ಗಾಬರಿ, ಉದ್ವೇಗಗಳು ಒಟ್ಟೊಟ್ಟಿಗೇ ದಾಳಿ ಮಾಡತೊಡಗಿದವು. ಕಣ್ಣು ಇದ್ದಕ್ಕಿದ್ದಂತೇ ಮಂಜಾಗತೊಡಗಿದವು. ಅಷ್ಟು ಹೊತ್ತಿಗೆ ಹೊರಗಡೆ ಕಾಲಿಂಗ್ ಬೆಲ್ ರಿಂಗ್ ಆಯಿತು. ಅಲ್ಲೊಬ್ಬ ಪೋಸ್ಟ್ ಮ್ಯಾನ್ ನಿಂತಿದ್ದ. ಕಷ್ಟಪಟ್ಟು ಅವನಲ್ಲಿಗೆ ತೆರಳಿ, ಪತ್ರ ಇಸ್ಕೊಂಡೆ.
ಲಕೋಟೆಯ ಹಿಂಭಾಗದಲ್ಲಿ ‘ಇಂದ- ದೀಪಕ್ ರಾವ್ ಕೆ. ಎಲ್ ಎಂದು ಬರೆದಿತ್ತು. ಏನಿರಬಹುದೆಂಬ ಕುತೂಹಲದಿಂದ ಬಿಚ್ಚಿ ನೋಡಿದೆ...
‘ಪ್ರೀತಿಯ ದೀಪಾ...
ಮೊದಲು ಕ್ಷಮೆ ಕೋರಿ ಮುಂದಿನದನ್ನು ಹೇಳುತ್ತೇನೆ. ನಿನ್ನಲ್ಲಿ ನನ್ನ ಬಗ್ಗೆ ಮೂಡಿರುವ ಭಾವನೆಗಳೇನು ಎಂದು ಮೂರು ತಿಂಗಳ ಹಿಂದೆಯೇ ತಿಳಿದಿತ್ತು. ಆದರೆ ನಾನು ಆದಷ್ಟು ದೂರವಿರಲು ಪ್ರಯತ್ನಿಸುತ್ತಿದ್ದೆ. ಅದಕ್ಕೆ ಬಲವಾದ ಕಾರಣವೂ ಇದೆ. ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಾಯಿಯ ಹಣೆ ಬರಿದಾಗಿ, ನಾವಿಬ್ಬರೂ ದಿಕ್ಕುತೋಚದೇ ಕುಳಿತಾಗ ಒಬ್ಬ ಮಹಾನುಭಾವರು ನನ್ನಮ್ಮನ ಹಣೆಗೆ ಕುಂಕುಮವನ್ನಿಟ್ಟು, ನನಗೆ ತಂದೆ ಸ್ಥಾನ ಕಲ್ಪಿಸಿದರು. ಬೇರೆ ಮಕ್ಕಳು ಹುಟ್ಟಿದರೆ ನನ್ನ ಬಗ್ಗೆ ಪ್ರೀತಿ ಕಡಿಮೆಯಾದೀತು ಎಂದು ಅದಕ್ಕೆಲ್ಲಾ ಆಸ್ಪದ ಕೊಡಲಿಲ್ಲ. ನನ್ನನ್ನು ಇಷ್ಟು ದೊಡ್ಡವನನ್ನಾಗಿಸಿ, ಬದುಕುವ ಹಾದಿ ರೂಪಿಸಿಕೊಟ್ಟವರೂ ಅವರೇ. ಇವಿಷ್ಟನ್ನು ನಿನ್ನ ಬಳಿ ಹೇಳಬೇಕೆಂದು ಸಾಕಷ್ಟು ಬಾರಿ ಪ್ರಯತ್ನಿಸಿದೆ.ಆದರೆ ಆದು ಸಾಧ್ಯವಾಗಿರಲಿಲ್ಲ. ನಮ್ಮ ಅಪ್ಪಯ್ಯ ಹಾಕಿಕೊಟ್ಟ ನೆಲೆಗಟ್ಟಿನಲ್ಲಿ ನಾನು ಬದುಕು ಸಾಗಿಸುತ್ತಿದ್ದೇನೆ. ನಾನೂ ಅವರ ಆದರ್ಶಗಳಲ್ಲಿ ಅಲ್ಪಭಾಗವನ್ನಾದರೂ ರೂಢಿಸಿಕೊಳ್ಳಬೇಕೆಂದಿದ್ದೆ. ನಿಮ್ಮ ಚಿಕ್ಕಮ್ಮನನ್ನು ಭೇಟಿಯಾದೆ. ವಾಸ್ತವಾಂಶಗಳನ್ನೆಲ್ಲಾ ಸವಿವರವಾಗಿ ಹೇಳಿದೆ. ಒಂದು ನೊಂದ ಜೀವಕ್ಕೆ ಸಾಂತ್ವನ ಸಿಗಬೇಕೆನ್ನುವುದಷ್ಟೇ ನನ್ನ ನನ್ನ ಉದ್ದೇಶ. ಅನ್ಯತಾ ಭಾವಿಸುವುದಿಲ್ಲವೆಂದುಕೊಂಡಿದ್ದೇನೆ.
ಎಂದೆಂದೂ ನಿನ್ನ ಹಿತ ಬಯಸುವ ಹಿತೈಶಿ
ದೀಪು
ಆ ಕೊನೆಯ ಎರಡು ಅಕ್ಷರಗಳು ನನ್ನೆರಡೂ ಕಣ್ಣುಗಳ ಹನಿಗಳ ರೂಪ ಪಡೆದಿತ್ತು. ಪಕ್ಕದಲ್ಲಿದ್ದ ಏಣಿ ಮೆಟ್ಟಿಲಿಗೆ ಒರಗಿ, ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕುಳಿತೆ. ಆಗಸದಿ ಕಂಡ ಚಂದಿರನ ಮೊಗ ದೀಪುವನ್ನೇ ಹೋಲುವಂತೆ ಭಾಸವಾಯಿತು. ಆ ಮುದ್ದುಮೊಗದಲ್ಲಿ ಚಿಕ್ಕಮ್ಮ ನಿರಾಳಭಾವದಿಂದ ನಗುತ್ತಿದ್ದಳು. ಪಕ್ಕದಲ್ಲಿದ್ದ ಅಂಕುಶ್ ಕೂಡ ಕಂಡ ಕಣ್ಣಿಗೆ ಬಿದ್ದ.......!
ಪೂರ್ಣ ವಿರಾಮ/ ಕಲಗಾರು
4 comments:
ನಮಸ್ತೇ, ಇಂದು ತಾನೆ ನಿಮ್ಮ ಬ್ಲಾಗ್ ನೋಡಿದೆ. ಚೆನ್ನಾಗಿದೆ.ಬರೆಯುತ್ತಿರಿ.
ಜೊತೆಗೊಂದು ಆಹ್ವಾನ ಪತ್ರ.
ನಾವೆಲ್ಲ ಬಹಳ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಶ್ರೀನಿಧಿ.ಡಿ.ಎಸ್
ತುಂಬಾ ಥ್ಯಾಂಕ್ಸು ಶ್ರೀನಿಧಿಯವರೆ.. ನಿಮ್ಮ ಆತ್ಮೀಯ ಕರೆಯೋಲೆ ನನ್ನೆದೆಯಾಳದವರೆಗೂ ತಲುಪಿದೆ. ಆದರೆ ಕೆಲಸದಲ್ಲಿದ್ದೀನಿ. ಖಂಡಿತಾ ಪುರಸೊತ್ತು ಮಾಡಿಕೊಂಡು ಬರಲು ಪ್ರಯತ್ನಿಸುತ್ತೇನೆ.
ಪ್ರೀತಿಯಿರಲಿ ಚಿರಕಾಲ......
ಅದೆಷ್ಟು ಸಿರಿಯಸ್ ಆಗಿದ್ಯೋ ವಿನಾಯಕ ರಾಮ ರಾಮ .... ತುಂಬಾ ಖುಷಿಯಾಯ್ತು.... ವಿ ಕ ದಲ್ಲಿ ಬರೆಯುವ ನಿನ್ನ ಬರವಣಿಗೆಗಳನ್ನ ನೋಡಿ ನಾನು ದಂಗಾಗಿದ್ದೇನೆ... ಅವನೆ ನೀನಾ ? ನಿನ್ನ ಚೆಷ್ಟೆಗಳನ್ನೆಲ್ಲ ಎಲ್ಲಿ ಬಿಟ್ಯಪ್ಪಾ...ಗುಡ್ ಲಕ್...ನಿನ್ನ ಹೆಸರನ್ನ ಹೇಳೊದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ.
Post a Comment