Tuesday, April 1, 2008

ಹಲವು ವಿಸ್ಮಯಗಳಲ್ಲೊಂದು ಈ ತಾಣ !
ಇನ್ನೋವೇಟಿವ್ ಫಿಲಂ ಸಿಟಿ ಎಂಬ ವಿಸ್ಮಯ ಜಗತ್ತು

ಕರ್ನಾಟಕದಲ್ಲಿ ಹಾಲಿವುಡ್ ಮಾದರಿಯ ಚಿತ್ರನಗರಿ ಇಲ್ಲ ಎಂಬ ಕಲಾಪ್ರಿಯರ ಕೊರಗು ಇನ್ನೊವೇಟಿವ್ ಫಿಲ್ಮ್ ಸಿಟಿ ನಿರ್ಮಾಣದಿಂದ ನಿವಾರಣೆಯಾಗಿದೆ.
ಬೆಂಗಳೂರಿನ ಹೊರವಲಯದ ಬಿಡದಿ ಸಮೀಪ ಸುಮಾರು ಐವತ್ತು ಎಕರೆ ಪ್ರದೇಶದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ತೆರೆದುಕೊಂಡ ಈ ಚಿತ್ರನಗರಿ ಐದು ನೂರು ಕೋಟಿ ವೆಚ್ಚದ ಬೃಹತ್ ಯೋಜನೆಯಾಗಿದ್ದು, ೧೦೦ ಕೋಟಿ ವೆಚ್ಚದ ಪ್ರಥಮ ಹಂತದ ನಿರ್ಮಾಣ ಕಾಣಸಿಗುತ್ತಿದೆ.
ಮೊದಲ ಹಂತದ ನಿರ್ಮಾಣದಲ್ಲಿಯೇ ಡೈನೊಪಾರ್ಕ್, ಫನ್ ಪ್ಲೆಕ್ಸ್, ಕಾರ್ಟೂನ್ ಸಿಟಿ, ಅಕ್ವಾ ಕಿಂಗ್‌ಡಂ, ಆಂಪಿ ಚಿತ್ರಮಂದಿರ ಮೊದಲಾದವುಗಳನ್ನು ಮೈಗೂಡಿಸಿಕೊಂಡಿರುವ ಈ ತಾಣ, ಚಿತ್ರನಗರಿ ಮಾತ್ರವಾಗಿರದೇ ಅಂತಾರಾಷ್ಟ್ರೀಯ ಗುಣಮಟ್ಟದ ಮನರಂಜನೆಯ ತಾಣವಾಗಿ, ಶಾಪಿಂಗ್ ಸ್ಥಳವಾಗಿ ಹೊರಹೊಮ್ಮಲಿದೆ.
ಯೂರೋಪಿಯನ್ ವಾಸ್ತುಶೈಲಿ ವಿನ್ಯಾಸದ ಈ ನಗರಿ ಮುಂದಿನ ಹಂತದಲ್ಲಿ ಅತ್ಯಾಧುನಿಕ ಮೆಗಾ ಸ್ಟುಡಿಯೊ, ಫಿಲ್ಮ್ ಅಕಾಡೆಮಿ, ೨೧ ಪರದೆಯ ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಐಟಿ ಪಾರ್ಕ್, ವಿಲ್ಲಾಸ್ ಐಶಾರಾಮಿ ಹೋಟೆಲ್‌ಗಳು, ಮ್ಯಾನ್‌ಶನ್ಸ್, ೪ಡಿ ಚಿತ್ರಮಂದಿರ ಸೇರಿದಂತೆ ಹಲವು ಅಚ್ಚರಿಗಳನ್ನು ಮೈಗೂಡಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳು ತ್ವರಿತಗತಿಯಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿದೆ.


ಇದರ ಹುಟ್ಟು ಯಾರಿಂದ?
ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ ಸ್ಟುಡಿಯೊಸ್‌ನ ಮಾಲೀಕ ಶರವಣ ಪ್ರಸಾದ್ ಈ ಚಿತ್ರನಗರಿಯ ಪ್ರಮುಖ ರೂವಾರಿ. ಜತೆಗೆ ಮನರಂಜನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ರಿಪ್ಲೇಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಬಾಬ್ ಮಾಸ್ಟರ್ ಸನ್ ಕೈಜೋಡಿಸಿದ್ದಾರೆ. ದುಬೈನ ನಿರ್ಮಾಣ ಸಂಸ್ಥೆ ಈಟಿಎನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಎಂ. ಸಲಾವುದ್ದಿನ್ ಅವರ ಸಂಪೂರ್ಣ ಸಹಕಾರವಿದೆ. ನಿರ್ಮಾಪಕ ರ್‍ಯಾಕ್‌ಲೈನ್ ವೆಂಕಟೇಶ್ ಈ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು. ಚಿತ್ರನಗರಿಯ ಸಂಪೂರ್ಣ ಸಿಂಗಾರದ ಜವಾಬ್ದಾರಿಯನ್ನು ವಿಶ್ವ ಪ್ರಸಿದ್ಧ ವಿನ್ಯಾಸಕಾರ ನಿತೀಶ್ ರಾಯ್ ಹೊತ್ತಿದ್ದಾರೆ.
ಮುಂದಿನ ಯೋಜನೆಗಳು
ಮನರಂಜನೆಯೊಂದನ್ನೇ ಗುರಿಯಾಗಿಟ್ಟುಕೊಂಡಿರುವ ಚಿತ್ರನಗರಿ ಪ್ರತಿವರ್ಷ ೬ ಕೋಟಿ ವೀಕ್ಷಕರ ಭೇಟಿಗೆ ಅವಕಾಶ ಕಲ್ಪಿಸಿಕೊಡಲಿದೆ. ೨೫ ಅದ್ಭುತಗಳನ್ನು ಒಂದೆಡೆ ಕಲೆಹಾಕುವ ಗುರಿಯೂ ಇದೆ. ಒಮ್ಮೆಗೇ ೫ ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಅತಿಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಬೃಹತ್ ವೆಚ್ಚದ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಅಲ್ಲದೇ ಒಂದು ಕಡೆಯಲ್ಲಿ ಆರು ಪಥ ರಸ್ತೆ, ಇನ್ನೊಂದು ಕಡೆ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿದಿನ ಬೆಂಗಳೂರಿನಿಂದ ಮೈಸೂರಿಗೆ ಚಿತ್ರನಗರಿ ಮುಖೇನ ೧೨ ರೈಲುಗಳು ಸಂಚರಿಸಲಿವೆ. ದಿನಂಪ್ರತಿ ೫೦೦ ಪ್ರವಾಸಿ ಬಸ್ಸುಗಳು ಓಡಾಡುತ್ತವೆ. ಈ ಸಂಬಂಧ ರಾಜ್ಯ ಪ್ರವಾಸೋದ್ಯಮ ಹಾಗೂ ಮಾಹಿತಿ ಇಲಾಖೆ ಸಾಕಷ್ಟು ಕಾರ್ಯಪ್ರವೃತ್ತವಾಗಿದೆ. ಜತೆಗೆ ಫಿಲಂ ಇನ್ಸ್ಟಿಟ್ಯೂಟ್, ಸ್ಟುಡಿಯೊಗಳನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಹೊಂದಿದೆ.
ರಾಕ್‌ಲೈನ್ ಏನೆನ್ನುತ್ತಾರೆ?
ಇದು ಪ್ರತಿಯೊಬ್ಬ ಕನ್ನಡಿಗನ ಕನಸು. ಅದು ಈ ಮೂಲಕ ಸಾಕಾರಗೊಳ್ಳುತ್ತಿದೆ. ಇಲ್ಲಿ ಸಿನಿಮಾಕ್ಕೆ ಸಂಬಂಸಿದ ಎಲ್ಲವೂ ಲಭ್ಯ. ಅದಕ್ಕಾಗಿ ಬೇರೆಡೆ ಹೋಗುವ ಅಗತ್ಯವೂ ಇಲ್ಲ. ಇಂಥದ್ದೊಂದು ನಮ್ಮಲ್ಲೇ ಹುಟ್ಟಿಕೊಳ್ಳುತ್ತಿದೆಯಲ್ಲಾ ಎಂದು ತುಂಬ ಖುಷಿಯೆನಿಸುತ್ತಿದೆ.
ಹೋಗುವುದು ಹೇಗೆ?
ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿದರೆ ಕೇವಲ ಮುಕ್ಕಾಲು ಗಂಟೆಯಲ್ಲಿ ಬಿಡದಿ ತಲುಪುತ್ತೀರಿ. ಅಲ್ಲೊಂದು ಕೊಕೊಕೋಲಾ ಕಾರ್ಖಾನೆಯಿದೆ. ಅಲ್ಲಿಂದ ಕೂಗಳತೆಯಷ್ಟು ದೂರ. ಗೊತ್ತಾಗದಿದ್ದರೆ ಅಲ್ಲಿಯೇ ಯಾರನ್ನಾದರೂ ಕೇಳಿ ಅಷ್ಟೇ.
ಪ್ರವೇಶ ಶುಲ್ಕವೆಷ್ಟು?
ಅಬ್ಬಬ್ಬಾ ಇದಕ್ಕೆಲ್ಲ್ಲ ನಮ್ಮಂಥವರು ಹೋಗುವುದಾ ಎಂಬ ಪ್ರಶ್ನೆಯೇ ಬೇಡ. ಏಕೆಂದರೆ ಪ್ರವೇಶ ಶುಲ್ಕ ಎಂದು ಸದ್ಯಕ್ಕೆ ಕೇವಲ ೫೦ ರೂ. ಗಳಷ್ಟೇ.
ಡೈನೊಪಾರ್ಕ್
ಸುಮಾರು ೨೦೦೦೦ ಸಾವಿರ ವರ್ಷಗಳ ಹಿಂದೆ ಬದುಕಿದ್ದವು ಎನ್ನಲಾದ ಡೈನೊಸಾರ್‌ಗಳು ಇಲ್ಲಿವೆ. ಹಾಗಂತ ಇದು ಕೇವಲ ಚಿತ್ರವಲ್ಲ. ಉತ್ತಮ ಗುಣಮಟ್ಟದ ರಬ್ಬರ್‌ಗಳನ್ನು ಬಳಸಿ ಬೃಹದಾಕಾರದ ಡೈನೊಸಾರ್‌ಗಳನ್ನು ನಿರ್ಮಿಸಲಾಗಿದೆ. ಈ ಡೈನೊಸಾರ್ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೇ ಹಚ್ಚಹಸಿರ ಕಾಡು ಕಂಗೊಳಿಸುತ್ತವೆ. ಡೈನೊಸಾರ್‌ಗಳ ಅಬ್ಬರದ ಕೂಗು ಕಿವಿಗೆ ರಾಚುತ್ತವೆ. ಎದೆ ಝಲ್ ಎನ್ನುವಂತೆ ಅವು ಆ ಕಡೆ ಈ ಕಡೆ ಚಲಿಸುತ್ತವೆ. ವಾಲ್ಕೆನೊ ಬುಗ್ಗೆಗಳು ಭಯ ಮೂಡಿಸುತ್ತವೆ.
ಲಿಲ್ಲಿ ಪುಟ್ ಪ್ರಪಂಚ

ವಿಶ್ವದ ಹಲವು ಅದ್ಭುತಗಳನ್ನು ಪುಟ್ಟ ಪುಟ್ಟ ಗಾತ್ರದಲ್ಲಿ ಸೃಷ್ಟಿಸಲಾಗಿದೆ. ಇಲ್ಲಿಗೆ ಪ್ರವೇಶಿಸುತ್ತಿದ್ದಂತೇ ನಾವು ಗಜಗಾತ್ರದಷ್ಟಿದ್ದೇವೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತವೆ.
ಫನ್ ಪ್ಲೆಕ್ಸ್ ಇದು ಇರುವುದು ಮಕ್ಕಳಿಗಷ್ಟೇ ಅಲ್ಲ. ಎಲ್ಲರೂ ಇಲ್ಲಿಗೆ ಬರಬಹುದು. ಬೌಲಿಂಗ್, ಸೈಕಲಿಂಗ್ ಮುಂತಾದ ಹತ್ತಾರು ಕ್ರೀಡೆಗಳು ಇಲ್ಲಿ ಲಭ್ಯ. ೪ಡಿ ಥಿಯೇಟರ್‌ಗಳು, ಡಿಜಿಟಲ್ ತಂತ್ರಜ್ಞಾನದ ಗೇಮ್‌ಗಳು ಮನರಂಜನೆಗೆ ಹೇಳಿಮಾಡಿಸಿದಂತಿವೆ.
ವ್ಯಾಕ್ಸ್ ಮ್ಯೂಸಿಯಂ
ಸಿನಿಮಾ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ವಿಶ್ವ ಮಾನ್ಯತೆ ಪಡೆದ ಮಹಾನ್ ವ್ಯಕ್ತಿಗಳ ಮೇಣದ ಆಕೃತಿಗಳು ಇಲ್ಲಿ ಕಾಣಸಿಗುತ್ತವೆ. ಏಸುಕ್ರಿಸ್ತ, ಶ್ರೀ ಕೃಷ್ಣ, ಮಹಾತ್ಮ ಗಾಂಜಿ, ವಿಲಿಯಂ ಶೇಕ್ಸ್‌ಪಿಯರ್, ಚಾರ್ಲಿ ಚಾಪ್ಲಿನ್ ಹೀಗೆ ಲೆಕ್ಕವಿಲ್ಲದಷ್ಟು ಕಲಾಕೃತಿಗಳು ಕಣ್ಮನ ತಣಿಸುತ್ತವೆ.
ನಂಬಿ ಇಲ್ಲವೇ ಬಿಡಿ....!
ಅಪರೂಪದ ಆನೆಗಳ ಅಸ್ಥಿಪಂಜರಗಳು, ಮುಟ್ಟಿದರೆ ಬಸಿರಾಗಿಬಿಡುವ ವಿಶೇಷ ವಾಸ್ತುಶಿಲ್ಪಗಳು! ಡೈನೊಸಾರ್ ಮೊಟ್ಟೆಗಳು ಮುಂತಾದ ಹಲವುವಿಸ್ಮಯಭರಿತ, ಅಪರೂಪದ, ಚಮತ್ಕಾರಿಕ ವಸ್ತುಗಳು. ಅಬ್ಬಬ್ಬಾ ಅವುಗಳನ್ನೆಲ್ಲ ನೋಡಿಯೇ ಅನುಭವಿಸಬೇಕು.
ಆಂಫಿ ಥಿಯೇಟರ್ಸ್

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳು, ಸಂಗೀತೋತ್ಸವಗಳು ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿ ಒಮ್ಮೆಗೇ ೧೫ ಸಾವಿರ ವೀಕ್ಷಕರು ಕೂರುವ ವ್ಯವಸ್ಥೆ ಕಲ್ಪಿಸಲಾಗುವುದು. ಇಂತಹದ್ದೊಂದು ಥಿಯೇಟರ್ ಇರುವುದು ಭಾರತದಲ್ಲೇ ಮೊದಲು.
ವಿಸ್ಮಯ ಜಗತ್ತು!

ಭೂಕಂಪ, ಚಂಡಮಾರುತ, ಬಿರುಗಾಳಿ ಮುಂತಾದವು ಹೇಗೆ ಉದ್ಭವಿಸುತ್ತವೆ ಎಂಬುದನ್ನು ಇಲ್ಲಿ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ವಿಶ್ವದ ನಾನಾ ನುರಿತ ವಿಜ್ಞಾನಿಗಳು ಇವುಗಳ ಕುರಿತು ಪ್ರಾತ್ಯಕ್ಷಿಕೆ ಕಟ್ಟಿಕೊಡಲಿದ್ದಾರೆ. ಮೈ ನವಿರೇಳಿಸುವ ಗಾತ್ರದ ಅಸ್ತಿ ಪಂಜರಗಳು, ದೈತ್ಯಾಕಾರದ, ನಿಗೂಢತೆ ಸೂಸುವ ಭಯಾನಕ, ಭ್ರಮೆ ಮೂಡಿಸುವ, ಮನುಷ್ಯರ ರಕ್ತ ಹೀರುವ ನರಪಿಶಾಚಿಗಳ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಪೂರ್ಣವಿ- ರಾಮ/ ಕಲಗಾರು

1 comment:

Shiv said...

ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಯಶ ಸಿಗಲಿ