Sunday, April 27, 2008

ಅರಮನೆ ಅಂದ್ರೆ ಸುಮ್ನೇನಾ?


ಅರಮನೆ ಅಂಕಣದಲ್ಲಿ.... !

ಅರಮನೆ ಚಿತ್ರ ಒಟ್ಟಾರೆ ಹೇಗಿದೆ?
ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆ ಅರಮನೆ ಸೃಷ್ಟಿಯ ಹಿಂದೆ ನಿರ್ದೇಶಕ ನಾಗಶೇಖರ್ ಹರಿಸಿದ ಬೆವರಿದೆ. ಅವರ ಬಹುವರ್ಷದ ಕನಸಿನ ಪ್ರತಿಫಲವಿದೆ. ಅದಕ್ಕೆ ತಕ್ಕ, ಎಲ್ಲೆಲ್ಲೂ ಫಳಫಳಿಸುವ ಪಾತ್ರವರ್ಗವಿದೆ. ಇಡೀ ಕತೆಯಲ್ಲಿ ಸ್ವಂತಿಕೆಯಿದೆ. ಎಲ್ಲಿಯೂ ಅಭಾಸವೆಸದ ಅಪರೂಪದ ಸಂಭಾಷಣೆಯಿದೆ. ಒಟ್ಟಾರೆ ಹೇಳುವುದಾದರೆ ಇದು ಕೆಟ್ಟ ಚಿತ್ರವಂತೂ ಅಲ್ಲ.

ಹೀಗೆನ್ನಲು ಕೆಲವು ಕಾರಣಗಳಿವೆ. ಗಣೇಶ್ ಎಂದಾಗ ನೆನಪಾಗುವುದು: ಗಾಳಿಯ ವೇಗ ಮೀರಿಸುವ ಪಟಪಟ ಮಾತುಗಾರಿಕೆ. ಅಲ್ಲಿ ಕಾಮಿಡಿಯ ಲೇಪನ. ಜತೆಗೆ ಅಂತರಾಳದ ನೋವನ್ನು ಅನುಕರಿಸುವ, ಅಭಿವ್ಯಕ್ತಿಸುವ ಚಾಕಚಕ್ಯತೆ. ಅದನ್ನೇ ಬಂಡವಾಳವಾಗಿಸಿ ಪ್ರೇಕ್ಷಕರನ್ನು ಕಟ್ಟಿ ಕೂರಿಸುವ ತಾಕತ್ತು ಗಣೇಶ್‌ಗಿದೆ!

ಹಾಗಂತ ಊಟಕ್ಕೆ ಉಪ್ಪಿನಕಾಯಿಯೇ ಅನ್ನವಾದರೆ? ಊಹೂಂ... ಅದು ಉಣ್ಣಲಲ್ಲ, ಸಹಿಸಲೂ ಅಸಾಧ್ಯ.

ಅದರ ಬದಲು ಗಣೇಶ ಹೊಸ ಆಯಾಮ ಹುಡಕಬೇಕು.ಎಲ್ಲಕ್ಕಿಂತ ಭಿನ್ನವಾದ, ಹಿಂದೆಂದೂ ಮಾಡದ ಪಾತ್ರ ಮಾಡಬೇಕು. ಯೋಗ್ಯ ಕತೆ ಆರಿಸಬೇಕು. ಎಲ್ಲಿಯೂ 'ಗಣೇಷಿಸಂ' ರಿಪೀಟ್ ಆಗದಂತೆ ನೋಡಿ ಕೊಳ್ಳಬೇಕು. ಒಟ್ಟರೆ ಹೇಳುವುದಾದರೆ ಆ ಎಲ್ಲ ಹ್ಯಾಂಗೋವರ್‌ನಿಂದ ಗಣೇಶ್ ಹೊರಬರಬೇಕು. ಆಗ ಮಾತ್ರ ಅಲ್ಲಿ ಏನಾದರೂ ಹೊಸತನ್ನು ಕಾಣಬಹುದು.

ಅರಮನೆ ಚಿತ್ರದಲ್ಲಿ ಈ ಎಲ್ಲ ಬದಲಾವಣೆಗಳು ಅಪ್‌ಡೇಟ್ ಆಗಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಕೊಂಚ ಕತೆಯ ಕಡೆ ಹೊರಳಿಕೊಳ್ಳಬೇಕು.

-ಅರುಣ್, ವೃತ್ತಿಯಲ್ಲಿ ಫೋಟೊಗ್ರಾಫರ್. ಪಾದರಸದಂತ ಮಾತುಗಾರಿಕೆ ಅವನ ಬಂಡವಾಳ. ಕೈನಲ್ಲಿ ಕಾಸಿಲ್ಲ. ಆದರೆ ಪ್ರೀತಿ, ಸ್ನೇಹಕ್ಕೆ ಮೋಸವಿಲ್ಲ. ಯಾರೊಬ್ಬರ ನೋವಿಗೂ ನಲುಗುವ ಜೀವ. ಅದು ಸಾಧ್ಯವಾಗಲು ಅವ ಎಂಥ ತ್ಯಾಗಕ್ಕೂ ಸಿದ್ಧ. ಒಂದು ದಿನ ರಾಜಶೇಖರ್ ಅರಸ್ ಎಂಬಶ್ರೀಮಂತನ ಮನೆಗೆ ಬರುತ್ತಾನೆ. ಆತ ತನ್ನೆಲ್ಲ ಬಂಧುಬಳಗದಿಂದ ದೂರವಿತುತ್ತಾನೆ. ಆ ಕಾರಣಕ್ಕೆಸ್'ಬಾಟಲ್'ನ ಬಾಯಿಯನ್ನು ತನ್ನ ಬಾಯಿಗಿಟ್ಟಿರುತ್ತಾನೆ. ಫೋಟೋ ತೆಗೆಯಲು ಬಂದ ಅರುಣ್ಅವನ ಮನಸ್ಸಿನ ಮೇಲೆ ನಗುವಿನ ಚಿತ್ತಾರ ಬರೆಯುತ್ತಾನೆ. ನೋವಿನ ಕತೆ ಕೇಳುತ್ತಾನೆ. ಕುಟುಂಬವನ್ನು ಮತ್ತೆ ಸೇರಿಸಿ ಫ್ಯಾಮಿಲಿ ಫೋಟೊ ತೆಗೆಯುತ್ತೇನೆ ಎಂದು ಮಾತು ಕೊಡುತ್ತಾನೆ. ಅದಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಅರಸ್ ಮಗಳು ಅಳಿಯನ ವಿವರಕ್ಕಾಗಿ ಒಂದಿಷ್ಟು 'ಕಾಲಹರಣ' ಮಾಡುತ್ತಾನೆ. ಅವರ ಮಕ್ಕಳಾದ ಗೀತಾ, ನೀತಾರನ್ನು ಭೇಟಿಯಾಗುತ್ತಾನೆ. ಗೀತಾಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ, ಆಕೆಗೆ ಇನ್ನೊಂದು ಅಫೇರ್ ಇದೆ ಎಂದು ಗೊತ್ತಾಗಿ ತಲೆ ಮೇಲೆ ಕೈಹೊತ್ತು ಕೂರುತ್ತಾನೆ, ಕುಡಿದು ತೇಲುತ್ತಾನೆ. ಕೊನೆಗೇನು ಮಾಡುತ್ತಾನೆ...?

ಇದು ಕತೆ. ಈ ಕತೆಯಲ್ಲಿ ಇನ್ನೊಂದು ಪಾತ್ರ ಪರಕಾಯ ಪ್ರವೇಶ ಮಾಡಿದೆ. ಅದು ಗಣೇಶ್ ಹಾಗೂ ಅನಂತನಾಗ್ ನಡುವಣ ಭಾವಲಹರಿ. ಏನೂ ಸಂಬಂಧವಿಲ್ಲದ ಇನ್ನೊಂದು ಜೀವಕ್ಕಾಗಿ ತುಡಿಯುವ, ದುಡಿಯುವ ಪಾತ್ರ. ಆ ಎರಡು ಪಾತ್ರಗಳೇ ಇಡೀ ಕತೆಯ ಜೀವಾಳ. ಹೆಚ್ಚು ಮಾತಿಲ್ಲ. ಆದರೂ ಅಲ್ಲಿ ಲವಲವಿಕೆಯಿದೆ. ಪರಸ್ಪರ ಮನುಷ್ಯತ್ವದ ಭಾವನೆಗಳ ಸಂಗ್ರಹವಿದೆ. ಅವು ಕಣ್ಣಿನಲ್ಲೇ ಮಾತನಾಡಿಕೊಳ್ಳುತ್ತವೆ. ಆ ಎರಡು ಪಾತ್ರಗಳೇ ಚಿತ್ರ ಗೆಲ್ಲಿಸಿದರೆ ಆಶ್ಚರ್ಯವೇನಿಲ್ಲ!

ಗಣೇಶ್ ಮಾತುಗಾರಿಕೆಯಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಮನಸ್ಸಿನ ಭಾವನೆಗಳ ಸಂಘರ್ಷಗಳಿಗೆ ಅವರು ಉತ್ತರವಾಗಿದ್ದಾರೆ. ಅವರ ಹಿಂದೆ ನಿಲ್ಲುವವರು ನಾಗಶೇಖರ್. ವಿದೇಶಿಗರಿಬ್ಬರು ಮಗುವಿನ ಕೈಗೆ ಕ್ಯಾಮರಾ ಕೊಟ್ಟು, 'ನೀನೇ ಇಟ್ಟುಕೋ' ಎಂದಾಗ ಆ ಮಗುವಿನ ಹಾವಭಾವದಲ್ಲಿ ನಾಗಶೇಖರ್ ಪ್ರತಿಫಲಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ಗೆದ್ದಿದ್ದಾರೆ. ಜತೆಗೆ ತುಷಾರ್ ರಂಗನಾಥ್ ಸಂಭಾಷಣೆ ನಾಗಶೇಖರ್ ಕತೆಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಹೇಳುವಲ್ಲಿ ನಾಗಶೇಖರ್ ಸೋತಿದ್ದಾರೆ. ಆದರೆ ಪಾತ್ರ, ದೃಶ್ಯ ಮತ್ತು ನಿರೂಪಣೆಯ ಮಜಲಿನಲ್ಲಿ ಖಂಡಿತ ಗೆದ್ದಿದ್ದಾರೆ. ಅವರು ಸುತಾರಾಂ ಸೋತಿದ್ದು ಸಂಕಲನದಲ್ಲಿ. ಮಧ್ಯೆಮಧ್ಯೆ ಕತೆ ಮುಗ್ಗರಿಸುತ್ತೆ. ಗುರುಕಿರಣ್ ಸಂಗೀತ ಅಬ್ಬಬ್ಬಾ ಎನ್ನುವ ಹಾಗಿಲ್ಲ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಬರೆದ ಸಾಹಿತ್ಯವನ್ನು ತಮ್ಮ ಸಂಗೀತದ ನಾಲಿಗೆಯಿಂದ ನುಂಗಿ, ನೀರು ಕುಡಿಸಿದ್ದಾರೆ. ನಟಿ ರೋಮಾ ಅವರನ್ನು ನಾಯಕಿ ಎನ್ನುವುದಕ್ಕಿಂತ ಪೋಷಕ ನಟಿ ಎನ್ನಬಹುದು.

ಈ ಎಲ್ಲಾ ಅಂಶಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಿದರೆ ಸಿಗುವ ಉತ್ತರ-ಇದು ಖಂಡಿತ ಕೆಟ್ಟ ಚಿತ್ರವಲ್ಲ!

ಹಾಗಾದರೆ ಪಕ್ಕಾ ಒಳ್ಳೆಯ ಚಿತ್ರವಾ? ಉತ್ತರವನ್ನು ಪ್ರೇಕ್ಷಕರು ಹೇಳುತ್ತಾರೆ ಕಣ್ರೀ...!

ಪೂರ್ಣ ವಿ-ರಾಮ / ಕಲಗಾರು



Saturday, April 12, 2008

ಕೋಮಲ್‌ ಕಮಾಲ್‌ !



ಕೋಮಲಪ್ಪ ಕಿಲಕಿಲ, ೧೦೦% ಕಾಮಿಡಿ ಕನ್ಲಾ!
ಕೋಲೇಶ: ಲೋ ಮಲ್ಲಿ... ಈ ವಾರ ಅದೆಂತದೋ ಗರಗಸ ಸಿನ್ಮಾ ಬಿಡಗಡೆ ಆಗೈತಲ್ಲಾ,ನೀನ್ ನೋಡದ್ಯೇನ್ಲಾ?

ಮಲ್ಲೇಶ: ಇಲ್ಲಾ ಕನ್ಲಾ. ನೀ ಹೋಗಿದ್ಯೇನ್ಲಾ?

ಕೋಲೇಶ: ನಾನ್ ಮಾರ್ನಿಂಗ್ ಸೋಗೇ ಹೋಗಿದ್ದೆ ಕನ್ಲಾ?

ಮಲ್ಲೇಶ: ಹೌದೇನ್ಲಾ ಬಡ್ಡೆತ್ತೊದೆ. ಹೆಂಗೈತ್ಲಾ ಗರಗಸ. ಪೋಸ್ಟರ್‌ನಾಗೆ ಅದೇನೋ ಸಕತ್ ಕುಯ್ತಾನೆ ಅಂತೈತಲ್ಲಾ ಏನ್ಲಾ ಅದೂ ?

ಕೋಲೇಶ : ಹೂಂ. ಕೋಮಲಪ್ಪನ್ ಆಕ್ಟಿಂಗು ಬಲ್ ಮಸ್ತಾಗೈತ್ಲೆ. ಆ ಯಪ್ಪಾನೇ ಕಲಾ ಗರಗಸ !

ಮಲ್ಲೇಶ: ಅಯ್ಯೋ, ಅದೇನೂ ಅಂತ ಒಸಿ ಬಿಡಿಸಿ ಹೇಳ್ಲಾ?

ಕೋಲೇಶ: ಅದೆಂತಾ ಕ್ಯೋಳ್‌ತೀಯಾ. ಮುನಿಯಾ ಅನ್ನೋ ಪಾತ್ರದಾಗೆ ಕೋಮಲಪ್ಪ ಸಖತ್ ಮಿಂಚವ್ನೆ.

ಮಲ್ಲೇಶ: ಹೌದೇನ್ಲಾ! ಹಂಗಾರೆ ಹೊಡದಾಟ ಐತಿ ಅಂತಾತು. ಮುನಿಯಾ ಗರಗಸದಾಗೆ ತಲೇ ಕುತ್ಯಾನೋ ಕಾಲ್ನೋ ?

ಕೋಲೇಶ: ಪೆದ್‌ಮುಂಡೇದೇ ಅದು ಹಂಗಲ್ಲ ಕನ್ಲಾ. ಅವ ಬರೀ ಮಾತ್ನಾಗೇ ಕುಯ್ದು ಇಳಸ್ತಾನೆ. ಆದ್ರೂ ಅವನ ಮಾತ್ನಾಗಿರೋ ಮಜಾ ಐತಲ್ಲಾ, ಅದೇ ಬಲ್ ಮಸ್ತಾಗೈತೆ.

ಮಲ್ಲೇಶ: ಏನ್ ಯೋಳ್ತೀಯೋ ಅದನ್ನ ನೆಟ್ಟಗೆ ಯೋಳು ಆಟೆಯಾ.

ಕೋಲೇಶ: ಮುನಿಯಾ ಅನ್ನೋ ಅಸಾಮಿ ಇರ್‍ತಾನೆ. ಟಿಪಟೂರಿನ ಸುಬ್ನಳ್ಳಿಯವ. ಮು ಪಾರ್ ಮೂದೇವಿ ಅಂತಾನೆ. ಆತ್ಗೆ ಕತೆ ಹೇಳೋ ಹುಚ್ಚು. ಅದೂ ಸಿನಿಮಾ ಕತೆ ಅಂದ್ರೆ ಹಗಲೆಲ್ಲಾ ಕುಯ್ತಾನೆ. ಹಿಂಗೇ ಬೆಂಗ್ಳೂರ್‌ಗೆ ಬತ್ತಾನೆ. ಅದ್ಹ್ಯಾಗೋ ಪ್ರೊಡ್ಯೂಜರ್ ಪಾರ್ಥಸಾರಥಿ ಮನ್ಯಾಗ್ ಸೇರ್‍ಕೊಂತಾನೆ. ಆ ಪಾತ್ರ ನಮ್ ಅನಂತ್‌ನಾಗಪ್ಪಂದು. ಆತನ್ ಹತ್ರ ಕತೆ ಯೋಳ್ತೀನಿ ಅಂತ ಐದು ತಾಸ್ ಕುಯ್ಯಕ್ ಸುರುಮಾಡ್ತಾನೆ ಕನ್ಲಾ ಮುನಿಯ. ಪಾರ್ಥಪ್ಪಗೆ ಹೆಂಡತಿ ಮನೆ ಬಿಟ್ಟೋಗವ್ಳೆ ಅನ್ನೋ ತೆಲಿಬಿಸಿ. ಇದ್ದೊಬ್ಬ ಹೆಣ್‌ಮಗಿ ತೇಜಮ್ಮಗೆ ಮಲತಾಯಿ ಮಾಧವಮ್ಮನ್ ಕಂಡ್ರೆ ಆಗಕ್ಕಿಲ್ಲ. ಇಬ್ಬ್ರಿಗೂ ಹೊತ್ತಾರೇನೆ ಜಗ್ಳಾ ಸುರು. ಚಿಕ್ಕವ್ವ ಮಗ್ಳು ಕಿತ್ತಾಡಿ ಮನೆ ಬಿಟ್ ಓಯ್ತಾರೆ. ಈ ಪಾರ್ಥಪ್ಪ ಅರ್‍ವತ್ತೊಂದ್ ಆದ್ರೂ ಹದ್ನಾರರ ‘ಪಡ್ಡೆ’ತದ್ ಆಡ್ದಂಗ್ ಆಡ್ತದೆ. ತನ್ನ್ ಹೆಂಡ್ರು ಡೈರೆಕ್ಟರು ಸರತಪ್ಪನ್ ಜ್ವತ್ಗೆ ಓಗವ್ಳೆ ಅಂತ ಗುಮಾನಿ. ಈ ಸರತಪ್ಪ ಹೆಂಡ್ತೀ ಕೈಗೆ ಸೋಡಾಚೀಟಿ ಕೊಟ್ಟಿರ್‍ತಾನೆ ಕನ್ಲಾ. ಆತನ್ ಹೆಂಡ್ತಿ ಗೌರಿ ಪಾರ್ಥಪ್ಪನ್ ಹೆಂಡ್ತಿ ಕಿವಿಯಾಗೆ ‘ಗಂಡನ್ ಬುಟ್ಟಬುಡೇ’ ಅನ್ನಕ್ ಸುರು ಮಾಡ್ತಾಳೆ. ಇತ್ಲಾಗ್ ಪಾರ್ಥಪ್ಪಗೆ ಮಗ್ಳು ಯಾರ್ ಜ್ವತ್ಗಾರೂ ಓಡ್ ಹೋಗ್‌ಬುಟ್ಟಾಳು ಅನ್ನೋ ಬ್ಯಾನಿ ಬ್ಯಾರೆ. ಆದ್ರೆ ಮುನಿಯಪ್ಪಂದು ಒಂದೇ ಹಟ. ಕತೆ ಕ್ಯೋಳಿ, ಕತೆ ಕ್ಯೋಳಿ... ಯಾಕ್ಲಾ ಮಲ್ಲಿ, ಏನೂ ಅರ್ಥ ಆಗಕ್ಕಿಲ್ಲೇನ್ಲಾ?

ಮಲ್ಲೇಶ: ಅಯ್ಯೋ ಸಾಕ್ ಬುಡ್ಲಾ ನೀನೂ ಕುಯ್‌ಬ್ಯಾಡಾ.

ಕೋಲೇಶ: ಹಂಗಾರೆ ಸುಮ್ನೆ ಸಸನೀನೇ ಸಿನ್ಮಾ ನೋಡ್ ಬಾರಲಾ...

ಮಲ್ಲೇಶ: ಅಲ್ಲಾ, ನೀ ಹೇಳೋದ್ ಕ್ಯೋಳಿದ್ರೆ ಇದು ಬ್ಯಾರೆ ಭಾಷೆ ಸಿನ್ಮಾ ಇದ್ದಾಂಗ್ ಐತೆ ಅಂತ ಡೌಟ್ ಬತ್ತೈತೆ?

ಕೋಲೇಶ: ಅಯ್ಯೋ ಹಂಗೇನಿಲ್ಲ ಕನ್ಲಾ. ಆದ್ರೆ ‘ಅದ್ಯಾವ್ದೋ ಪ್ರೆಂಚ್ ಸಿನ್ಮಾ ಇದ್ದಂಗೈತೆ. ಆದ್ರೆ ಥೇಟ್ ಅದೇ ಅಲ್ಲ’ ಅಂತಾ ಯಾರೋ ಯೋಳ್‌ತಿದ್ರು.

ಮಲ್ಲೇಶ: ಕತೀ ಬುಡು. ಹಾಡ್ ಚೆನ್ನಾಗೈತೇನ್ಲಾ?

ಕೋಲೇಶ: ಹಾಡೇನೋ ಐತೆ. ಆದ್ರೆ ಒಂದೇ ಒಂದು. ಸಿನ್ಮಾ ಸುರು ಆಗಿ ಹತ್ತ್ ನಿಮಿಸಕ್ಕೇ ಬತದೆ. ಆಮ್ಯಾಕ್ ಒಂದೂ ಇಲ್ಲ ಕನ್ಲಾ.

ಮಲ್ಲೇಶ: ಹೌದೇನ್ಲಾ, ಒಂದೇ ಹಾಡೇನ್ಲಾ? ಹೋಗ್ಲಿ ಬುಡು. ಎಲ್ಲಾ ಹ್ಯಾಂಗ್ ಆಕ್ಟ್ ಮಾಡವ್ರೆ ಅಂತಾನಾದ್ರೂ ಯೋಳೋ?

ಕೋಲೇಶ: ನಮ್ ಕೋಮಲ್ಲು ಗರಗಸ ಅಷ್ಟೇ ಅಲ್ಲ, ಅವ ಪಾದರಸ ಇದ್ದಾಂಗೆ. ಇಡೀ ಸಿನಿಮಾ ಅವ್ನ ಮ್ಯಾಕೇ ನಿಂತೈತೆ ಅಂತೀನಿ. ಆ ಯಪ್ಪ ಮಾಡಿದ್ದನ್ನ ನೆನಸ್ಕಂಡ್ರೇ ಈಗ್ಲೂ ನಗು ಬತ್ತದೆ. ಬರೀ ಮಾತ್ನಾಗೇ ಮನೇ ಕಟ್ಟವ್ನೆ. ಅನಂತನಾಗಪ್ಪನೋರಿಗೆ ವಯಸ್ಸಾತು ಅಂತ ಗೊತ್ತಾಯ್ತದೆ. ಆದ್ರೆ ಆ ಯಪ್ಪ ತನ್ನ ಕಣ್ಣಲ್ಲೇ ಆಟ ಆಡ್‌ಬುಟ್ಟವ್ರೆ ಕಣಪ್ಪೊವ್...!. ಸುಧಾರಾಣಿಯಮ್ಮ, ಪವಿತ್ರಾ ಲೋಕೇಸಮ್ಮ, ಚಿದಾನಂದಪ್ಪ, ಮಧಪ್ಪ ಎಲ್ಲಾ ಆಂಗ್ ಬಂದ್ ಹಿಂಗ್ ಓಯ್ತಾರೆ. ನಾಗಾಭರಣಪ್ಪ ಬರೀ ಮಾತ್ಗಷ್ಟೇ ವಾಕೆ. ಲಕ್ಷ್ಮಮ್ಮ, ಐಸ್ವರ್ಯಮ್ಮ, ವಾಣ್ಯಮ್ಮ ಬೋ ಕುಲುಕುಲು ಅಂತಾರೆ ಕನ್ಲಾ.

ಮಲ್ಲೇಶ: ಹೌದೇನ್ಲಾ? ಒಟ್ಟಾರೆ ಸಿನಿಮಾ ಏನ್ ಯೋಳ್ತದೆ?

ಕೋಲೇಶ: ಓ ಅದಾ. ಗಂಡ ಹೆಂಡ್ತಿ ಮ್ಯಾಕ್ ಅನುಮಾನಾ ಪಡ್ಬಾರ್‍ದು. ಹೆಂಡ್ರಿಗೂ ಒಸಿ ಪ್ರೀಡಮ್ ಕೊಡ್ಬಕು. ಆತ್ರಬಿದ್ದು ತೀರ್ಮಾನ ತಕ್ಕಳಕ್ ಹೋಗ್ಬಾರ್‍ದು ಅಂತ ನಿರ್ದೇಸಕ ದಿನೇಸಪ್ಪ ಯೋಳಕ್ ಪ್ರಯತ್ನ ಮಾಡವ್ರೆ. ಜ್ವತ್ಗೆ ಕೋಮಲಪ್ಪಂಗೆ ನಾಯಕನ ಪಟ್ಟ ಕೊಟ್ಟವ್ರೆ. ಕಿತ್ತಾಟ, ಕೂಗಾಟ ಇಲ್ದೇನೇ ಹಿಂಗೂ ಒಂದ್ ಸಿನ್ಮಾ ಮಾಡ್‌ಬೈದು ಅಂತ ತೋರ್‍ಸ್‌ಕೊಟ್ಟವ್ರೆ. ರಾಜೇಂದ್ರ ಕಾರಾಂತಪ್ಪನ್ ಡೈಲಾಕೂ ಅಷ್ಟೇ ಮಜುಬೂತಾಗೈತೆ.
ಒಂದ್ ಕಿತಾ ಅಂತೂ ಗ್ಯಾರಂಟಿ ನೋಡ್ ಬರ್‌ಬೈದು ಕಲಾ.

ಮಲ್ಲೇಶ: ಆಯ್ತ್ ಕನ್ಲಾ ಈಗ್ಲೇ ಓಗ್‌ಬತ್ತೀನಿ.
ಬರ್‍ಲೇನ್ಲಾ ಬಡ್ಡೇತ್ತೊದೇ...

ಪೂರ್ಣ ವಿ-ರಾಮ / ಕಲಗಾರು

Thursday, April 3, 2008

ಸಭ್ಯ ನಟನ ಪಕ್ಕದಲ್ಲಿ ನಾನು ನಿಂತಾಗ...!


ಮೊನ್ನೆ ನಾನು ನಟ ರಮೇಶ್ ಅರವಿಂದ್ ಅವರ ಪಕ್ಕದಲ್ಲಿ ನಿಂತು ಫೋಸ್‌ ಕೊಟ್ಟ ಪರಿಯಿದು.

Tuesday, April 1, 2008

'ಸತ್ಯ'ನ ಪರಮಾವಧಿ !


ಪ್ರೀತಿಗಾಗಿ *ಅಖಾಡ*ಕ್ಕಿಳಿದ ಶಿವಣ್ಣ


ಶಿವರಾಜ್ ಕುಮಾರ್ ಮಚ್ಚು ಹಿಡಿದು ನಿಂತಿದ್ದಾರೆ, ಎಂತಹ ಬಿರುಗಾಳಿಯನ್ನೂ ಎದುರಿಸುವ ಸಲುವಾಗಿ 'ಅಖಾಡ'ಕ್ಕಿಳಿದಿದ್ದಾರೆ ಎಂದರೆ ಸಾಕು. ಅದಕ್ಕೊಂದು ಕಾರಣ ಇರಲೇ ಬೇಕು. ಸುಖಾಸುಮ್ಮನೆ ಪೋಸ್ ಕೊಡುವವರಲ್ಲ ಶಿವಣ್ಣ.

ಎತ್ತಾಡಿಸಿ, 'ಜೋ'ಗುಳ ಹಾಡಿ, ತೊಟ್ಟಿಲು ತೂ'ಗಿ'ದ ತಾಯಿಗಾಗಿಯೋ, ಬೆನ್ನಿಗೆ ಬಿದ್ದ ತಂಗಿಯ 'ಸಂತ'ಸಕ್ಕೆ ಅಡ್ಡಿಬಂದವರನ್ನು ಬಗ್ಗುಬಡಿಯುವ ಸಲುವಾಗಿಯೋ, ದೇಹಿ ಎಂದ ಬಡ ಜನರನ್ನು ಕಾಡುವ ವೈರಿಗಳ ಮಗ್ಗುಲು ಮುರಿಯಲೋ... ಒಟ್ಟಾರೆ ಅದಕ್ಕೊಂದು 'ಧರ್ಮಕಾರಣ' ಇದ್ದೇ ಇರುತ್ತೆ; ಇರಲೇ ಬೇಕು ಕೂಡ.

ಶಿವಣ್ಣ ಮತ್ತೊಮ್ಮೆ ಅದೇ ಮಚ್ಚು ಹಿಡಿದು, ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮಲ್ಲಿ ಅಂಕುರಿಸಿದ ಪ್ರೀತಿಗಾಗಿ, ಅದರ ನೀತಿಗಾಗಿ, ಆ ನೀತಿಯ ಪರಿಪೂರ್ಣ ಪಾಲನೆಗಾಗಿ ಆ ವೇಷ ಧರಿಸಿದ್ದಾರೆ. 'ಸತ್ಯ'ನಾಗಿ ಬದಲಾಗಿದ್ದಾರೆ. ಐ ಆಮ್ 'ಇನ್ ಲವ್' ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.

ಸತ್ಯವನ್ನೇ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ. ಆ ಸತ್ಯದಾಣೆಗೂ ಪ್ರೀತಿಯೇ ಸತ್ಯ ಎಂಬ ಕಹಿ ಸತ್ಯವನ್ನು ಶಿವಣ್ಣನ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.

ಒಂದು ಸಾಮಾನ್ಯ ಕಥೆಯ ಎಳೆಯನ್ನಿಟ್ಟುಕೊಂಡು 'ಈ ಭೂಮಿ ಮೇಲೆ ಪ್ರೀತಿ ಏಕಿದೆ?' ಪ್ರೀತಿಯ ಮುಂದಿರುವ ಸವಾಲುಗಳೇನು? ಅಂಥದ್ದೊಂದು ಪರಿಪೂರ್ಣ ಪ್ರೀತಿಗೆ ಹೇಗೆ ನ್ಯಾಯ ಸಲ್ಲಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಿದ್ದಾರೆ. ಆ ಪ್ರೀತಿಯನ್ನು ಪ್ರಚುರ ಪಡಿಸಲು ಸತ್ಯ ಎಂಬ ಪ್ರಧಾನ ಪಾತ್ರ ಸೃಷ್ಟಿಸಿದ್ದಾರೆ. ಆ ಪಾತ್ರದ ಹತ್ತು ಹಲವು ನೇಪಥ್ಯ ದೃಶ್ಯಗಳನ್ನು ಸೃಷ್ಟಿಸಿ ಕತೆಗೆ ಇನ್ನಷ್ಟು ಮೆರುಗು ನೀಡಿದ್ದಾರೆ.

ಒಂದು ಪಕ್ಕಾ ಮಾಸ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲವನ್ನು ಒಂದೆಡೆ ಕಲೆಹಾಕಿ ಪ್ಯಾಕೇಜ್ ರೀತಿಯಲ್ಲಿ ನೀಡಿದ್ದಾರೆ. ಒಂದು ದೃಶ್ಯ, ಅದರ ಬೆನ್ನಿಗೇ ಒಂದು ಫೈಟು, ಮತ್ತೊಂದಿಷ್ಟು ಕಾಮಿಡಿ ಟ್ರ್ಯಾಕ್, ಜತೆಗೊಂದು ಹಾಡು, ನಂತರ ಮತ್ತೊಂದು ದೃಶ್ಯ... ಹೀಗೆ ಎಲ್ಲವೂ ಫಟಾಫಟ್. ಶಿವಣ್ಣನ ಮ್ಯಾನರಿಸಂಗೆ ಸರಿಹೊಂದುವಂತಹ ಡೈಲಾಗ್‌ಗಳು, ಅವರಿಗೆ ಸರಿಹೊಂದುವ ವಿಲನ್‌ಗಳು ಹೀಗೆ ಪ್ರತಿ ಫ್ರೇಮ್‌ನಲ್ಲೂ ಹೊಸತನ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.

ಎಲ್ಲಾ ಅರ್ಥವಾಗಬೇಕಾದರೆ ಮೊದಲು ಕತೆ ಕೇಳಲೇ ಬೇಕು. ಆತ ಸತ್ಯ. ಅಪ್ಪ, ಅಮ್ಮ, ಅಕ್ಕ-ಭಾವನೊಂದಿಗಿರುತ್ತಾನೆ. ಜತೆಗೊಂದಿಷ್ಟು ಪಡ್ಡೆ ಹುಡುಗರು. ಎಲ್ಲರದ್ದೂ ಪಾರ್ಕು, ಡಿಸ್ಕೋಥೆಕ್ ಅಲ್ಲಿ ಇಲ್ಲಿ ಅಂಡಲೆಯುವ ವೃತ್ತಿ. ಸತ್ಯ ಜಂಟಲ್‌ಮನ್. ಯಾರಾದರೂ ಹೆಣ್ಣುಮಕ್ಕಳ ತಂಟೆಗೆ ಹೋದರೆ ಅವರ ಜತೆ ಫೈಟ್ ಮಾಡುತ್ತಾನೆ. ಆದರೆ ಪ್ರೀತಿ, ಪ್ರೇಮದ ಬಗ್ಗೆ ಮಾತ್ರ ಆತ ನೂರು ಮಾರು ದೂರ. ಆದರೆ ಲಲನಾಮಣಿಯರಿಗೆ ಮಾತ್ರ ಸತ್ಯ ನಿತ್ಯ ಮದನ.

ಮನೆಮಂದಿಯಲ್ಲಾ ಸೇರಿ ಮಂತ್ರಾಲಯಕ್ಕೆ ಟ್ರಿಪ್ ಹೋಗುತ್ತಾರೆ. ಸತ್ಯನಿಗೆ ಅಲ್ಲೊಬ್ಬಳು ವೇದಾ ಎಂಬ ಹುಡುಗಿ ಸಿಗುತ್ತಾಳೆ. ಅವರಳ ನೋಟ, ಮೈಮಾಟ ಸತ್ಯನ ಮನಸ್ಸಿನಲ್ಲಿ ಪ್ರೀತಿಯ ಅಲೆ ಎಬ್ಬಿಸುತ್ತದೆ. ಅದುವೇ ನಿಜವಾದ ಪ್ರೀತಿ ಎಂದು ಮನದಟ್ಟಾಗುವ ವೇಳೆಗೆ ಆಕೆ ಮಾಯವಾಗುತ್ತಾಳೆ. ಅವಳ ಹುಡುಕಾಟದಲ್ಲಿ ಒಂದಷ್ಟು ಕಾಲಹರಣ ಮಾಡುತ್ತಾನೆ. ಕೊನೆಗೂ ಅವಳ ಮೂಲವನ್ನು ಪತ್ತೆಹಚ್ಚುತ್ತಾನೆ. ಆಕೆ ಆಂಧ್ರದ ಕರ್ನೂಲು ಮೂಲದ ರೌಡಿ ರಂಗಾರೆಡ್ಡಿಯ ಮಗಳು ಎಂಬ ವಿಷಯ ಅರಿತು ಅವಳನ್ನು ಪಡೆದುಕೊಳ್ಳಲು ರೈಲು ಹತ್ತುತ್ತಾನೆ. ಇತ್ತ ರಂಗಾರೆಡ್ಡಿ ಮಕ್ಕಳಿಗೆ ಸತ್ಯನ ಉದ್ದೇಶ ಗೊತ್ತಾಗಿ ಅವನನ್ನು ಮುಗಿಸುವ ಸಂಚು ಹೂಡುತ್ತಾರೆ. ಆದರೂ ಸತ್ಯ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ. ಅವಳಿಗಾಗಿ ಎಲ್ಲದಕ್ಕೂ ಸಿದ್ಧನಾಗುತ್ತಾನೆ. ಅವಳ ಮನಸ್ಸು ಗೆಲ್ಲಲು ಯತ್ನಿಸುತ್ತಾನೆ. ಸಾಕಷ್ಟು ಬಾರಿ ಸಾವಿನ ದವಡೆಗೂ ಹೋಗಿ ಮತ್ತೆ ಎದ್ದು ಬರುತ್ತಾನೆ... ಮುಂದಿನದನ್ನು ತೆರೆ ಮೇಲೆ ನೋಡಿದರಷ್ಟೇ ಚೆಂದ.

ಇಡೀ ಚಿತ್ರದ ಹೈಲೈಟ್ ಎಂದರೆ ಶಿವಣ್ಣನ ಅಮೋಘ ಅಭಿನಯ. ಒಟ್ಟಾರೆ ಹೇಳುವುದಾದರೆ ಸರ್ವಂ 'ಶಿವ' ಮಯಂ. ಪ್ರೀತಿಯ ಹುಡುಕಾಟದಲ್ಲಿ ಅವರು ಪಡುವ ಪಾಡು, ಅದು ಸಿಗುವ ಸೂಚನೆಗಳೇ ಇಲ್ಲದಿದ್ದಾಗ ನಲುಗುವ ಪರಿ... ಅವೆಲ್ಲ ಶಿವಣ್ಣನಿಂದ ಮಾತ್ರ ಸಾಧ್ಯ. ಹಾಗಂತ ದೂರದಿಂದ ಬಂದಂತ ಸುಂದರಾಂಗ ಜಾಣೆ ಜೆನಿಲಿಯಾಳನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ. ಆದರೆ ಆಕೆ ಗಟ್ಟಿಯಾಗಿ ತುಟಿ ಕಚ್ಚಿ ನುಲಿದಾಗ, ಅಂದವಾಗಿ ನಕ್ಕಾಗ, ಶಿವಣ್ಣನ ಜತೆ ಥೈ ಥೈ ಎನ್ನುವಾಗ ಮಾತ್ರ ನೋಡಲು ಎರಡು ಕಣ್ಣು ಸಾಲದು. ಇನ್ನು ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸೆರೆಯಾದೆನೂ...ಮತ್ತು ರೋಮಾಂಚನಾ... ಹಾಡುಗಳು ಖುಷಿ ಕೊಡುತ್ತವೆ. ಶ್ರೀನಾಥ್, ವಿನಯಾ ಪ್ರಸಾದ್, ಜಯಪ್ರಕಾಶ್, ಅಜಯ್, ಸುಬ್ಬರಾವ್ ಮುಂತಾದ ಪಾತ್ರಗಳು ಕತೆಗೆ ಅನಿವಾರ್ಯ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರುವ ತೆಲುಗು ಸಂಭಾಷಣೆ ಅಚ್ಚಕನ್ನಡಿಗರಿಗೆ ಅರಗಿಸಿಕೊಳ್ಳುವುದು ತುಸು ಕಷ್ಟ.

ಅಂದಹಾಗೆ ನಿರ್ದೇಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆದ್ದಿದ್ದಾರೆ. ಚಿತ್ರದ ಪ್ರತಿ ಸೀನ್‌ನಲ್ಲೂ ಥಳಥಳಿಸುವ ಅದ್ದೂರಿತನ, ಕರ್ನೂಲಿನ ದೃಶ್ಯಗಳಿಗೆ ತೆಲುಗಿನ ನಟರನ್ನೇ ಬಳಸಿಕೊಂಡು ಎಲ್ಲೂ ಅಭಾಸವಾಗದಂತೆ ಚಿತ್ರಿಸಿರುವುದು ಸುಲಭದ ಮಾತಲ್ಲ. ಆ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯವೇ ಸರಿ. ಅವರು ನಿರ್ಮಾಪಕರು ವ್ಯಯಿಸಿದ ಕಾಸಿಗಂತೂ ಮೋಸ ಮಾಡಿಲ್ಲ. ಒಟ್ಟಾರೆ ಶಿವಣ್ಣನ ಹಳೇ ಖದರ್ ನೋಡುವ ಹಂಬಲವಿದ್ದರೆ ಚಿತ್ರವನ್ನು ನೋಡಿ..

ಪೂರ್ಣ ವಿ-ರಾಮ/ ಕಲಗಾರು

ಹಲವು ವಿಸ್ಮಯಗಳಲ್ಲೊಂದು ಈ ತಾಣ !




ಇನ್ನೋವೇಟಿವ್ ಫಿಲಂ ಸಿಟಿ ಎಂಬ ವಿಸ್ಮಯ ಜಗತ್ತು

ಕರ್ನಾಟಕದಲ್ಲಿ ಹಾಲಿವುಡ್ ಮಾದರಿಯ ಚಿತ್ರನಗರಿ ಇಲ್ಲ ಎಂಬ ಕಲಾಪ್ರಿಯರ ಕೊರಗು ಇನ್ನೊವೇಟಿವ್ ಫಿಲ್ಮ್ ಸಿಟಿ ನಿರ್ಮಾಣದಿಂದ ನಿವಾರಣೆಯಾಗಿದೆ.
ಬೆಂಗಳೂರಿನ ಹೊರವಲಯದ ಬಿಡದಿ ಸಮೀಪ ಸುಮಾರು ಐವತ್ತು ಎಕರೆ ಪ್ರದೇಶದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ತೆರೆದುಕೊಂಡ ಈ ಚಿತ್ರನಗರಿ ಐದು ನೂರು ಕೋಟಿ ವೆಚ್ಚದ ಬೃಹತ್ ಯೋಜನೆಯಾಗಿದ್ದು, ೧೦೦ ಕೋಟಿ ವೆಚ್ಚದ ಪ್ರಥಮ ಹಂತದ ನಿರ್ಮಾಣ ಕಾಣಸಿಗುತ್ತಿದೆ.
ಮೊದಲ ಹಂತದ ನಿರ್ಮಾಣದಲ್ಲಿಯೇ ಡೈನೊಪಾರ್ಕ್, ಫನ್ ಪ್ಲೆಕ್ಸ್, ಕಾರ್ಟೂನ್ ಸಿಟಿ, ಅಕ್ವಾ ಕಿಂಗ್‌ಡಂ, ಆಂಪಿ ಚಿತ್ರಮಂದಿರ ಮೊದಲಾದವುಗಳನ್ನು ಮೈಗೂಡಿಸಿಕೊಂಡಿರುವ ಈ ತಾಣ, ಚಿತ್ರನಗರಿ ಮಾತ್ರವಾಗಿರದೇ ಅಂತಾರಾಷ್ಟ್ರೀಯ ಗುಣಮಟ್ಟದ ಮನರಂಜನೆಯ ತಾಣವಾಗಿ, ಶಾಪಿಂಗ್ ಸ್ಥಳವಾಗಿ ಹೊರಹೊಮ್ಮಲಿದೆ.
ಯೂರೋಪಿಯನ್ ವಾಸ್ತುಶೈಲಿ ವಿನ್ಯಾಸದ ಈ ನಗರಿ ಮುಂದಿನ ಹಂತದಲ್ಲಿ ಅತ್ಯಾಧುನಿಕ ಮೆಗಾ ಸ್ಟುಡಿಯೊ, ಫಿಲ್ಮ್ ಅಕಾಡೆಮಿ, ೨೧ ಪರದೆಯ ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಐಟಿ ಪಾರ್ಕ್, ವಿಲ್ಲಾಸ್ ಐಶಾರಾಮಿ ಹೋಟೆಲ್‌ಗಳು, ಮ್ಯಾನ್‌ಶನ್ಸ್, ೪ಡಿ ಚಿತ್ರಮಂದಿರ ಸೇರಿದಂತೆ ಹಲವು ಅಚ್ಚರಿಗಳನ್ನು ಮೈಗೂಡಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳು ತ್ವರಿತಗತಿಯಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿದೆ.


ಇದರ ಹುಟ್ಟು ಯಾರಿಂದ?
ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ ಸ್ಟುಡಿಯೊಸ್‌ನ ಮಾಲೀಕ ಶರವಣ ಪ್ರಸಾದ್ ಈ ಚಿತ್ರನಗರಿಯ ಪ್ರಮುಖ ರೂವಾರಿ. ಜತೆಗೆ ಮನರಂಜನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ರಿಪ್ಲೇಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಬಾಬ್ ಮಾಸ್ಟರ್ ಸನ್ ಕೈಜೋಡಿಸಿದ್ದಾರೆ. ದುಬೈನ ನಿರ್ಮಾಣ ಸಂಸ್ಥೆ ಈಟಿಎನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಎಂ. ಸಲಾವುದ್ದಿನ್ ಅವರ ಸಂಪೂರ್ಣ ಸಹಕಾರವಿದೆ. ನಿರ್ಮಾಪಕ ರ್‍ಯಾಕ್‌ಲೈನ್ ವೆಂಕಟೇಶ್ ಈ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು. ಚಿತ್ರನಗರಿಯ ಸಂಪೂರ್ಣ ಸಿಂಗಾರದ ಜವಾಬ್ದಾರಿಯನ್ನು ವಿಶ್ವ ಪ್ರಸಿದ್ಧ ವಿನ್ಯಾಸಕಾರ ನಿತೀಶ್ ರಾಯ್ ಹೊತ್ತಿದ್ದಾರೆ.
ಮುಂದಿನ ಯೋಜನೆಗಳು
ಮನರಂಜನೆಯೊಂದನ್ನೇ ಗುರಿಯಾಗಿಟ್ಟುಕೊಂಡಿರುವ ಚಿತ್ರನಗರಿ ಪ್ರತಿವರ್ಷ ೬ ಕೋಟಿ ವೀಕ್ಷಕರ ಭೇಟಿಗೆ ಅವಕಾಶ ಕಲ್ಪಿಸಿಕೊಡಲಿದೆ. ೨೫ ಅದ್ಭುತಗಳನ್ನು ಒಂದೆಡೆ ಕಲೆಹಾಕುವ ಗುರಿಯೂ ಇದೆ. ಒಮ್ಮೆಗೇ ೫ ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಅತಿಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಬೃಹತ್ ವೆಚ್ಚದ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಅಲ್ಲದೇ ಒಂದು ಕಡೆಯಲ್ಲಿ ಆರು ಪಥ ರಸ್ತೆ, ಇನ್ನೊಂದು ಕಡೆ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿದಿನ ಬೆಂಗಳೂರಿನಿಂದ ಮೈಸೂರಿಗೆ ಚಿತ್ರನಗರಿ ಮುಖೇನ ೧೨ ರೈಲುಗಳು ಸಂಚರಿಸಲಿವೆ. ದಿನಂಪ್ರತಿ ೫೦೦ ಪ್ರವಾಸಿ ಬಸ್ಸುಗಳು ಓಡಾಡುತ್ತವೆ. ಈ ಸಂಬಂಧ ರಾಜ್ಯ ಪ್ರವಾಸೋದ್ಯಮ ಹಾಗೂ ಮಾಹಿತಿ ಇಲಾಖೆ ಸಾಕಷ್ಟು ಕಾರ್ಯಪ್ರವೃತ್ತವಾಗಿದೆ. ಜತೆಗೆ ಫಿಲಂ ಇನ್ಸ್ಟಿಟ್ಯೂಟ್, ಸ್ಟುಡಿಯೊಗಳನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಹೊಂದಿದೆ.
ರಾಕ್‌ಲೈನ್ ಏನೆನ್ನುತ್ತಾರೆ?
ಇದು ಪ್ರತಿಯೊಬ್ಬ ಕನ್ನಡಿಗನ ಕನಸು. ಅದು ಈ ಮೂಲಕ ಸಾಕಾರಗೊಳ್ಳುತ್ತಿದೆ. ಇಲ್ಲಿ ಸಿನಿಮಾಕ್ಕೆ ಸಂಬಂಸಿದ ಎಲ್ಲವೂ ಲಭ್ಯ. ಅದಕ್ಕಾಗಿ ಬೇರೆಡೆ ಹೋಗುವ ಅಗತ್ಯವೂ ಇಲ್ಲ. ಇಂಥದ್ದೊಂದು ನಮ್ಮಲ್ಲೇ ಹುಟ್ಟಿಕೊಳ್ಳುತ್ತಿದೆಯಲ್ಲಾ ಎಂದು ತುಂಬ ಖುಷಿಯೆನಿಸುತ್ತಿದೆ.
ಹೋಗುವುದು ಹೇಗೆ?
ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿದರೆ ಕೇವಲ ಮುಕ್ಕಾಲು ಗಂಟೆಯಲ್ಲಿ ಬಿಡದಿ ತಲುಪುತ್ತೀರಿ. ಅಲ್ಲೊಂದು ಕೊಕೊಕೋಲಾ ಕಾರ್ಖಾನೆಯಿದೆ. ಅಲ್ಲಿಂದ ಕೂಗಳತೆಯಷ್ಟು ದೂರ. ಗೊತ್ತಾಗದಿದ್ದರೆ ಅಲ್ಲಿಯೇ ಯಾರನ್ನಾದರೂ ಕೇಳಿ ಅಷ್ಟೇ.
ಪ್ರವೇಶ ಶುಲ್ಕವೆಷ್ಟು?
ಅಬ್ಬಬ್ಬಾ ಇದಕ್ಕೆಲ್ಲ್ಲ ನಮ್ಮಂಥವರು ಹೋಗುವುದಾ ಎಂಬ ಪ್ರಶ್ನೆಯೇ ಬೇಡ. ಏಕೆಂದರೆ ಪ್ರವೇಶ ಶುಲ್ಕ ಎಂದು ಸದ್ಯಕ್ಕೆ ಕೇವಲ ೫೦ ರೂ. ಗಳಷ್ಟೇ.
ಡೈನೊಪಾರ್ಕ್
ಸುಮಾರು ೨೦೦೦೦ ಸಾವಿರ ವರ್ಷಗಳ ಹಿಂದೆ ಬದುಕಿದ್ದವು ಎನ್ನಲಾದ ಡೈನೊಸಾರ್‌ಗಳು ಇಲ್ಲಿವೆ. ಹಾಗಂತ ಇದು ಕೇವಲ ಚಿತ್ರವಲ್ಲ. ಉತ್ತಮ ಗುಣಮಟ್ಟದ ರಬ್ಬರ್‌ಗಳನ್ನು ಬಳಸಿ ಬೃಹದಾಕಾರದ ಡೈನೊಸಾರ್‌ಗಳನ್ನು ನಿರ್ಮಿಸಲಾಗಿದೆ. ಈ ಡೈನೊಸಾರ್ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೇ ಹಚ್ಚಹಸಿರ ಕಾಡು ಕಂಗೊಳಿಸುತ್ತವೆ. ಡೈನೊಸಾರ್‌ಗಳ ಅಬ್ಬರದ ಕೂಗು ಕಿವಿಗೆ ರಾಚುತ್ತವೆ. ಎದೆ ಝಲ್ ಎನ್ನುವಂತೆ ಅವು ಆ ಕಡೆ ಈ ಕಡೆ ಚಲಿಸುತ್ತವೆ. ವಾಲ್ಕೆನೊ ಬುಗ್ಗೆಗಳು ಭಯ ಮೂಡಿಸುತ್ತವೆ.
ಲಿಲ್ಲಿ ಪುಟ್ ಪ್ರಪಂಚ

ವಿಶ್ವದ ಹಲವು ಅದ್ಭುತಗಳನ್ನು ಪುಟ್ಟ ಪುಟ್ಟ ಗಾತ್ರದಲ್ಲಿ ಸೃಷ್ಟಿಸಲಾಗಿದೆ. ಇಲ್ಲಿಗೆ ಪ್ರವೇಶಿಸುತ್ತಿದ್ದಂತೇ ನಾವು ಗಜಗಾತ್ರದಷ್ಟಿದ್ದೇವೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತವೆ.
ಫನ್ ಪ್ಲೆಕ್ಸ್ ಇದು ಇರುವುದು ಮಕ್ಕಳಿಗಷ್ಟೇ ಅಲ್ಲ. ಎಲ್ಲರೂ ಇಲ್ಲಿಗೆ ಬರಬಹುದು. ಬೌಲಿಂಗ್, ಸೈಕಲಿಂಗ್ ಮುಂತಾದ ಹತ್ತಾರು ಕ್ರೀಡೆಗಳು ಇಲ್ಲಿ ಲಭ್ಯ. ೪ಡಿ ಥಿಯೇಟರ್‌ಗಳು, ಡಿಜಿಟಲ್ ತಂತ್ರಜ್ಞಾನದ ಗೇಮ್‌ಗಳು ಮನರಂಜನೆಗೆ ಹೇಳಿಮಾಡಿಸಿದಂತಿವೆ.
ವ್ಯಾಕ್ಸ್ ಮ್ಯೂಸಿಯಂ
ಸಿನಿಮಾ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ವಿಶ್ವ ಮಾನ್ಯತೆ ಪಡೆದ ಮಹಾನ್ ವ್ಯಕ್ತಿಗಳ ಮೇಣದ ಆಕೃತಿಗಳು ಇಲ್ಲಿ ಕಾಣಸಿಗುತ್ತವೆ. ಏಸುಕ್ರಿಸ್ತ, ಶ್ರೀ ಕೃಷ್ಣ, ಮಹಾತ್ಮ ಗಾಂಜಿ, ವಿಲಿಯಂ ಶೇಕ್ಸ್‌ಪಿಯರ್, ಚಾರ್ಲಿ ಚಾಪ್ಲಿನ್ ಹೀಗೆ ಲೆಕ್ಕವಿಲ್ಲದಷ್ಟು ಕಲಾಕೃತಿಗಳು ಕಣ್ಮನ ತಣಿಸುತ್ತವೆ.
ನಂಬಿ ಇಲ್ಲವೇ ಬಿಡಿ....!
ಅಪರೂಪದ ಆನೆಗಳ ಅಸ್ಥಿಪಂಜರಗಳು, ಮುಟ್ಟಿದರೆ ಬಸಿರಾಗಿಬಿಡುವ ವಿಶೇಷ ವಾಸ್ತುಶಿಲ್ಪಗಳು! ಡೈನೊಸಾರ್ ಮೊಟ್ಟೆಗಳು ಮುಂತಾದ ಹಲವುವಿಸ್ಮಯಭರಿತ, ಅಪರೂಪದ, ಚಮತ್ಕಾರಿಕ ವಸ್ತುಗಳು. ಅಬ್ಬಬ್ಬಾ ಅವುಗಳನ್ನೆಲ್ಲ ನೋಡಿಯೇ ಅನುಭವಿಸಬೇಕು.
ಆಂಫಿ ಥಿಯೇಟರ್ಸ್

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳು, ಸಂಗೀತೋತ್ಸವಗಳು ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿ ಒಮ್ಮೆಗೇ ೧೫ ಸಾವಿರ ವೀಕ್ಷಕರು ಕೂರುವ ವ್ಯವಸ್ಥೆ ಕಲ್ಪಿಸಲಾಗುವುದು. ಇಂತಹದ್ದೊಂದು ಥಿಯೇಟರ್ ಇರುವುದು ಭಾರತದಲ್ಲೇ ಮೊದಲು.
ವಿಸ್ಮಯ ಜಗತ್ತು!

ಭೂಕಂಪ, ಚಂಡಮಾರುತ, ಬಿರುಗಾಳಿ ಮುಂತಾದವು ಹೇಗೆ ಉದ್ಭವಿಸುತ್ತವೆ ಎಂಬುದನ್ನು ಇಲ್ಲಿ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ವಿಶ್ವದ ನಾನಾ ನುರಿತ ವಿಜ್ಞಾನಿಗಳು ಇವುಗಳ ಕುರಿತು ಪ್ರಾತ್ಯಕ್ಷಿಕೆ ಕಟ್ಟಿಕೊಡಲಿದ್ದಾರೆ. ಮೈ ನವಿರೇಳಿಸುವ ಗಾತ್ರದ ಅಸ್ತಿ ಪಂಜರಗಳು, ದೈತ್ಯಾಕಾರದ, ನಿಗೂಢತೆ ಸೂಸುವ ಭಯಾನಕ, ಭ್ರಮೆ ಮೂಡಿಸುವ, ಮನುಷ್ಯರ ರಕ್ತ ಹೀರುವ ನರಪಿಶಾಚಿಗಳ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಪೂರ್ಣವಿ- ರಾಮ/ ಕಲಗಾರು