ಅರಮನೆ ಅಂಕಣದಲ್ಲಿ.... !
ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆ ಅರಮನೆ ಸೃಷ್ಟಿಯ ಹಿಂದೆ ನಿರ್ದೇಶಕ ನಾಗಶೇಖರ್ ಹರಿಸಿದ ಬೆವರಿದೆ. ಅವರ ಬಹುವರ್ಷದ ಕನಸಿನ ಪ್ರತಿಫಲವಿದೆ. ಅದಕ್ಕೆ ತಕ್ಕ, ಎಲ್ಲೆಲ್ಲೂ ಫಳಫಳಿಸುವ ಪಾತ್ರವರ್ಗವಿದೆ. ಇಡೀ ಕತೆಯಲ್ಲಿ ಸ್ವಂತಿಕೆಯಿದೆ. ಎಲ್ಲಿಯೂ ಅಭಾಸವೆಸದ ಅಪರೂಪದ ಸಂಭಾಷಣೆಯಿದೆ. ಒಟ್ಟಾರೆ ಹೇಳುವುದಾದರೆ ಇದು ಕೆಟ್ಟ ಚಿತ್ರವಂತೂ ಅಲ್ಲ.
ಹೀಗೆನ್ನಲು ಕೆಲವು ಕಾರಣಗಳಿವೆ. ಗಣೇಶ್ ಎಂದಾಗ ನೆನಪಾಗುವುದು: ಗಾಳಿಯ ವೇಗ ಮೀರಿಸುವ ಪಟಪಟ ಮಾತುಗಾರಿಕೆ. ಅಲ್ಲಿ ಕಾಮಿಡಿಯ ಲೇಪನ. ಜತೆಗೆ ಅಂತರಾಳದ ನೋವನ್ನು ಅನುಕರಿಸುವ, ಅಭಿವ್ಯಕ್ತಿಸುವ ಚಾಕಚಕ್ಯತೆ. ಅದನ್ನೇ ಬಂಡವಾಳವಾಗಿಸಿ ಪ್ರೇಕ್ಷಕರನ್ನು ಕಟ್ಟಿ ಕೂರಿಸುವ ತಾಕತ್ತು ಗಣೇಶ್‌ಗಿದೆ!
ಹಾಗಂತ ಊಟಕ್ಕೆ ಉಪ್ಪಿನಕಾಯಿಯೇ ಅನ್ನವಾದರೆ? ಊಹೂಂ... ಅದು ಉಣ್ಣಲಲ್ಲ, ಸಹಿಸಲೂ ಅಸಾಧ್ಯ.
ಅದರ ಬದಲು ಗಣೇಶ ಹೊಸ ಆಯಾಮ ಹುಡಕಬೇಕು.ಎಲ್ಲಕ್ಕಿಂತ ಭಿನ್ನವಾದ, ಹಿಂದೆಂದೂ ಮಾಡದ ಪಾತ್ರ ಮಾಡಬೇಕು. ಯೋಗ್ಯ ಕತೆ ಆರಿಸಬೇಕು. ಎಲ್ಲಿಯೂ 'ಗಣೇಷಿಸಂ' ರಿಪೀಟ್ ಆಗದಂತೆ ನೋಡಿ ಕೊಳ್ಳಬೇಕು. ಒಟ್ಟರೆ ಹೇಳುವುದಾದರೆ ಆ ಎಲ್ಲ ಹ್ಯಾಂಗೋವರ್‌ನಿಂದ ಗಣೇಶ್ ಹೊರಬರಬೇಕು. ಆಗ ಮಾತ್ರ ಅಲ್ಲಿ ಏನಾದರೂ ಹೊಸತನ್ನು ಕಾಣಬಹುದು.
ಅರಮನೆ ಚಿತ್ರದಲ್ಲಿ ಈ ಎಲ್ಲ ಬದಲಾವಣೆಗಳು ಅಪ್‌ಡೇಟ್ ಆಗಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಕೊಂಚ ಕತೆಯ ಕಡೆ ಹೊರಳಿಕೊಳ್ಳಬೇಕು.
-ಅರುಣ್, ವೃತ್ತಿಯಲ್ಲಿ ಫೋಟೊಗ್ರಾಫರ್. ಪಾದರಸದಂತ ಮಾತುಗಾರಿಕೆ ಅವನ ಬಂಡವಾಳ. ಕೈನಲ್ಲಿ ಕಾಸಿಲ್ಲ. ಆದರೆ ಪ್ರೀತಿ, ಸ್ನೇಹಕ್ಕೆ ಮೋಸವಿಲ್ಲ. ಯಾರೊಬ್ಬರ ನೋವಿಗೂ ನಲುಗುವ ಜೀವ. ಅದು ಸಾಧ್ಯವಾಗಲು ಅವ ಎಂಥ ತ್ಯಾಗಕ್ಕೂ ಸಿದ್ಧ. ಒಂದು ದಿನ ರಾಜಶೇಖರ್ ಅರಸ್ ಎಂಬಶ್ರೀಮಂತನ ಮನೆಗೆ ಬರುತ್ತಾನೆ. ಆತ ತನ್ನೆಲ್ಲ ಬಂಧುಬಳಗದಿಂದ ದೂರವಿತುತ್ತಾನೆ. ಆ ಕಾರಣಕ್ಕೆಸ್'ಬಾಟಲ್'ನ ಬಾಯಿಯನ್ನು ತನ್ನ ಬಾಯಿಗಿಟ್ಟಿರುತ್ತಾನೆ. ಫೋಟೋ ತೆಗೆಯಲು ಬಂದ ಅರುಣ್ಅವನ ಮನಸ್ಸಿನ ಮೇಲೆ ನಗುವಿನ ಚಿತ್ತಾರ ಬರೆಯುತ್ತಾನೆ. ನೋವಿನ ಕತೆ ಕೇಳುತ್ತಾನೆ. ಕುಟುಂಬವನ್ನು ಮತ್ತೆ ಸೇರಿಸಿ ಫ್ಯಾಮಿಲಿ ಫೋಟೊ ತೆಗೆಯುತ್ತೇನೆ ಎಂದು ಮಾತು ಕೊಡುತ್ತಾನೆ. ಅದಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಅರಸ್ ಮಗಳು ಅಳಿಯನ ವಿವರಕ್ಕಾಗಿ ಒಂದಿಷ್ಟು 'ಕಾಲಹರಣ' ಮಾಡುತ್ತಾನೆ. ಅವರ ಮಕ್ಕಳಾದ ಗೀತಾ, ನೀತಾರನ್ನು ಭೇಟಿಯಾಗುತ್ತಾನೆ. ಗೀತಾಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ, ಆಕೆಗೆ ಇನ್ನೊಂದು ಅಫೇರ್ ಇದೆ ಎಂದು ಗೊತ್ತಾಗಿ ತಲೆ ಮೇಲೆ ಕೈಹೊತ್ತು ಕೂರುತ್ತಾನೆ, ಕುಡಿದು ತೇಲುತ್ತಾನೆ. ಕೊನೆಗೇನು ಮಾಡುತ್ತಾನೆ...?
ಇದು ಕತೆ. ಈ ಕತೆಯಲ್ಲಿ ಇನ್ನೊಂದು ಪಾತ್ರ ಪರಕಾಯ ಪ್ರವೇಶ ಮಾಡಿದೆ. ಅದು ಗಣೇಶ್ ಹಾಗೂ ಅನಂತನಾಗ್ ನಡುವಣ ಭಾವಲಹರಿ. ಏನೂ ಸಂಬಂಧವಿಲ್ಲದ ಇನ್ನೊಂದು ಜೀವಕ್ಕಾಗಿ ತುಡಿಯುವ, ದುಡಿಯುವ ಪಾತ್ರ. ಆ ಎರಡು ಪಾತ್ರಗಳೇ ಇಡೀ ಕತೆಯ ಜೀವಾಳ. ಹೆಚ್ಚು ಮಾತಿಲ್ಲ. ಆದರೂ ಅಲ್ಲಿ ಲವಲವಿಕೆಯಿದೆ. ಪರಸ್ಪರ ಮನುಷ್ಯತ್ವದ ಭಾವನೆಗಳ ಸಂಗ್ರಹವಿದೆ. ಅವು ಕಣ್ಣಿನಲ್ಲೇ ಮಾತನಾಡಿಕೊಳ್ಳುತ್ತವೆ. ಆ ಎರಡು ಪಾತ್ರಗಳೇ ಚಿತ್ರ ಗೆಲ್ಲಿಸಿದರೆ ಆಶ್ಚರ್ಯವೇನಿಲ್ಲ!
ಗಣೇಶ್ ಮಾತುಗಾರಿಕೆಯಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಮನಸ್ಸಿನ ಭಾವನೆಗಳ ಸಂಘರ್ಷಗಳಿಗೆ ಅವರು ಉತ್ತರವಾಗಿದ್ದಾರೆ. ಅವರ ಹಿಂದೆ ನಿಲ್ಲುವವರು ನಾಗಶೇಖರ್. ವಿದೇಶಿಗರಿಬ್ಬರು ಮಗುವಿನ ಕೈಗೆ ಕ್ಯಾಮರಾ ಕೊಟ್ಟು, 'ನೀನೇ ಇಟ್ಟುಕೋ' ಎಂದಾಗ ಆ ಮಗುವಿನ ಹಾವಭಾವದಲ್ಲಿ ನಾಗಶೇಖರ್ ಪ್ರತಿಫಲಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅವರು ಗೆದ್ದಿದ್ದಾರೆ. ಜತೆಗೆ ತುಷಾರ್ ರಂಗನಾಥ್ ಸಂಭಾಷಣೆ ನಾಗಶೇಖರ್ ಕತೆಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಹೇಳುವಲ್ಲಿ ನಾಗಶೇಖರ್ ಸೋತಿದ್ದಾರೆ. ಆದರೆ ಪಾತ್ರ, ದೃಶ್ಯ ಮತ್ತು ನಿರೂಪಣೆಯ ಮಜಲಿನಲ್ಲಿ ಖಂಡಿತ ಗೆದ್ದಿದ್ದಾರೆ. ಅವರು ಸುತಾರಾಂ ಸೋತಿದ್ದು ಸಂಕಲನದಲ್ಲಿ. ಮಧ್ಯೆಮಧ್ಯೆ ಕತೆ ಮುಗ್ಗರಿಸುತ್ತೆ. ಗುರುಕಿರಣ್ ಸಂಗೀತ ಅಬ್ಬಬ್ಬಾ ಎನ್ನುವ ಹಾಗಿಲ್ಲ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಬರೆದ ಸಾಹಿತ್ಯವನ್ನು ತಮ್ಮ ಸಂಗೀತದ ನಾಲಿಗೆಯಿಂದ ನುಂಗಿ, ನೀರು ಕುಡಿಸಿದ್ದಾರೆ. ನಟಿ ರೋಮಾ ಅವರನ್ನು ನಾಯಕಿ ಎನ್ನುವುದಕ್ಕಿಂತ ಪೋಷಕ ನಟಿ ಎನ್ನಬಹುದು.
ಈ ಎಲ್ಲಾ ಅಂಶಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಿದರೆ ಸಿಗುವ ಉತ್ತರ-ಇದು ಖಂಡಿತ ಕೆಟ್ಟ ಚಿತ್ರವಲ್ಲ!
ಹಾಗಾದರೆ ಪಕ್ಕಾ ಒಳ್ಳೆಯ ಚಿತ್ರವಾ? ಉತ್ತರವನ್ನು ಪ್ರೇಕ್ಷಕರು ಹೇಳುತ್ತಾರೆ ಕಣ್ರೀ...!
ಪೂರ್ಣ ವಿ-ರಾಮ / ಕಲಗಾರು